ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 24–8–1967

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸೆ. 1: ರಾಜ್ಯದ ಎಲ್ಲೆಡೆ ಪಾನನಿರೋಧ ರದ್ದು

ಬೆಂಗಳೂರು, ಆ. 23– ಇಡೀ ಬಿದರೆ ಜಿಲ್ಲೆ ಮತ್ತು ಇತರ ಆರು ತಾಲ್ಲೂಕುಗಳ ಹೊರತು ರಾಜ್ಯದ ಎಲ್ಲೆಡೆ ಪಾನ ನಿರೋಧವು 1967ನೇ ಸೆಪ್ಟೆಂಬರ್ 1 ರಿಂದ ರದ್ದಾಗುವುದು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ಮತ್ತು ಅಂಕೋಲಾ; ಬಿಜಾಪುರ ಜಿಲ್ಲೆಯ ಜಮಖಂಡಿ ಮತ್ತು ಮೈಸೂರು ಜಿಲ್ಲೆಯ ಯಳಂದೂರು, ಚಾಮರಾಜನಗರ ತಾಲ್ಲೂಕುಗಳಲ್ಲಿ ಪಾನ ನಿರೋಧ ಮುಂದುವರಿಯುವುದು.

ಪಾಕಿಸ್ತಾನದಿಂದ ಭಾರತದ 3 ಜನ ಅಧಿಕಾರಿಗಳ ಉಚ್ಚಾಟನೆ

ನವದೆಹಲಿ, ಆ. 23– ಇಸ್ಲಾಮಾಬಾದಿನಲ್ಲಿರುವ ಭಾರತ ಹೈ ಕಮಿಷನ್‌ ಕಚೇರಿಯ ಮೂರು ಜನ ಅಧಿಕಾರಿಗಳಿಗೆ 24 ಗಂಟೆಗಳೊಳಗಾಗಿ ಪಾಕಿಸ್ತಾನವನ್ನು ಬಿಟ್ಟು ತೆರಳಬೇಕೆಂದು ಪಾಕಿಸ್ತಾನ ಸರಕಾರ ಆಜ್ಞೆ ಮಾಡಿದೆ.

ರೇಡಿಯೋ ಪಾಕಿಸ್ತಾನದ ವರದಿ ಪ್ರಕಾರ ಈ ಬಗ್ಗೆ ಇಸ್ಲಾಮಾಬಾದಿನಲ್ಲಿರುವ ಭಾರತ ಹೈಕಮಿಷನರ್ ಕಚೇರಿಗೆ ಪಾಕಿಸ್ತಾನ ಸರ್ಕಾರವು ಪತ್ರವೊಂದನ್ನು ಸಲ್ಲಿಸಿತೆಂದು ತಿಳಿದು ಬಂದಿದೆ.

ಅನಿರ್ದಿಷ್ಟ ಕಾಲ ತ್ರಿಭಾಷಾ ಸೂತ್ರ ಇರಲು ಪ್ರಧಾನಿ ಬೆಂಬಲ

ಮದರಾಸ್, ಆ. 23– ರಾಷ್ಟ್ರದಲ್ಲಿ ಅನಿರ್ದಿಷ್ಟ ಕಾಲದವರೆಗೆ ತ್ರಿಭಾಷಾ ಸೂತ್ರ ಜಾರಿಯಲ್ಲಿರಬೇಕೆಂಬುದರ ಪರವಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಕೂಡಲೆ, ಭಾಷಾ ನೀತಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ಕೊಡುತ್ತ, ಈಗಾಗಲೆ ಅನೇಕ ಸಾರಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಾಗಿಯೂ ಭಾರತದ ಐಕ್ಯತೆಯನ್ನು ದುರ್ಬಲಗೊಳಿಸದ ಹಾಗೂ ರಾಷ್ಟ್ರದ ಯಾವ ಭಾಗದಲ್ಲಾದರೂ ಇರಲು ಮತ್ತು ಕೆಲಸ ಮಾಡಲು ಸಮಾನ ಅವಕಾಶ ನೀಡುವಂಥ ಸೂತ್ರವೊಂದನ್ನು ರೂಪಿಸಬೇಕೆಂದು ತಿಳಿಸಿದರು.

‘ಇಂಗ್ಲೀಷ್ ವಿರೋಧಿಯಲ್ಲ’

ತಾವು ಇಂಗ್ಲೀಷ್ ವಿರೋಧಿಯಲ್ಲವೆಂದೂ ಇಂದಿನ ಪ್ರಪಂಚಕ್ಕೆ ಇಂಗ್ಲೀಷ್ ಅಗತ್ಯವೆಂದು ತಾವು ಭಾವಿಸಿರುವುದಾಗಿ ಅವರು ನುಡಿದರು.

ಭಾಷಾ ಪ್ರಶ್ನೆಯನ್ನು ತಜ್ಞರಿಗೆ ಬಿಡಬೇಕೆಂದು ಪಂಡಿತ್

ಬೆಂಗಳೂರು, ಆ. 23– ದೇಶದ ಭಾಷಾ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ತಜ್ಞರಿಗೆ ಬಿಡಬೇಕೇ ವಿನಾ ರಾಜಕಾರಣಿಗಳು ಅದರಲ್ಲಿ ತಲೆ ಹಾಕುವುದು ಸರಿಯಾಗದೆಂದು ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಅವರು ಇಂದು ಇಲ್ಲಿ ನುಡಿದರು.

ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಪ್ರಶ್ನೆಯನ್ನು ಚರ್ಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ‘ಸಮಸ್ಯೆಯ ಎಲ್ಲ ಮುಖಗಳನ್ನೂ ನೋಡುವ ತಜ್ಞರಿಗೆ ಅದನ್ನು ಬಿಡಿ’ ಎಂದು ಎಚ್ಚರಿಕೆ ನೀಡಿದರು.

ದಾವಣಗೆರೆ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಮುಷ್ಕರ ಅಂತ್ಯ

ದಾವಣಗೆರೆ, ಆ. 23– ಐದು ದಿನಗಳಿಂದ ನಡೆಯುತ್ತಿದ್ದ ಸ್ಥಳೀಯ ಜೆ.ಜೆ.ಎಮ್. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮುಷ್ಕರವನ್ನು ಇಂದು ಅಂತ್ಯಗೊಳಿಸಲಾಗಿದೆ.

ವಿದ್ಯಾರ್ಥಿಗಳ ಬೇಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕುಂದುಕೊರತೆಗಳನ್ನು ನಿವಾರಿಸಲಾಗುವುದೆಂದು ಪ್ರಿನ್ಸಿಪಾಲರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ನಂತರ ಮುಷ್ಕರವನ್ನು ಅಂತ್ಯಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT