ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೈಕಿಂಗ್ ಕ್ವೀನ್ಸ್’ಗೆ ಸಂಭ್ರಮದ ಸ್ವಾಗತ

ಕಾರ್ದುಂಗ್ ಲಾ ಪಾಸ್‌ನಲ್ಲಿ ಧ್ವಜಾರೋಹಣ ಮಾಡಿದ 56 ಸದಸ್ಯೆಯರ ತಂಡ
Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜಮ್ಮು: ವಾಹನ ಓಡಾಡಬಹುದಾದ ವಿಶ್ವದ ಅತಿ ಎತ್ತರದ ಕಣಿವೆಗಳಲ್ಲಿ ಒಂದಾದ ಕಾರ್ದುಂಗ್ ಲಾದಲ್ಲಿ ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ ವಾಪಸಾದ ‘ಬೈಕಿಂಗ್ ಕ್ವೀನ್ಸ್’ ತಂಡದ ಸದಸ್ಯೆಯರಿಗೆ ಹಾರ ಹಾಕಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

‘7,583 ಅಡಿ ಎತ್ತರದ ಕಾರ್ದುಂಗ್ ಲಾ ಕಣಿವೆಯಲ್ಲಿ ಆಗಸ್ಟ್ 15ರಂದು ಧ್ವಜಾರೋಹಣ ಮಾಡಿದ್ದು ನಮಗೆ ಕನಸು ನನಸಾದ ಕ್ಷಣ. ಈ ಪ್ರಯತ್ನದೊಂದಿಗೆ ಇಡೀ ದೇಶಕ್ಕೆ ಮಹಿಳಾ ಸಬಲೀಕರಣದ ಸಂದೇಶವನ್ನು ರವಾನಿಸುವುದು ನಮ್ಮ ಆಶಯವಾಗಿತ್ತು’ ಎಂದು ತಂಡದ ನೇತೃತ್ವ ವಹಿಸಿದ್ದ ಸಾರಿಕಾ ಮೆಹ್ತಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಇಂಥದ್ದೊಂದು ಅಭಿಯಾನ ಕೈಗೊಳ್ಳುವುದು ನಮ್ಮ ಪಾಲಿಗೆ ಸವಾಲೇ ಆಗಿತ್ತು. ಆರಂಭದಲ್ಲಿ ನಾವು ಈ ಅಭಿಯಾನವನ್ನು ಪೂರ್ಣಗೊಳಿಸುವ ಬಗ್ಗೆ ಅನುಮಾನವಿತ್ತು. ಇದು ಸಾಧ್ಯವಿಲ್ಲ ಎಂದೂ ಕೆಲವರು ಹೇಳಿದ್ದರು. ಆದರೆ ನಾವು ಎದೆಗುಂದದೆ ಶ್ರಮಿಸಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ’ ಎಂದು ವೃತ್ತಿಯಲ್ಲಿ ವೈದ್ಯೆ ಆಗಿರುವ 41 ವರ್ಷದ ಸಾರಿಕಾ ಹೇಳಿದ್ದಾರೆ.

‘ಈ ಪ್ರಯಾಣದಲ್ಲಿ ನಾವು ಹೆಚ್ಚಾಗಿ ಮಹಿಳೆಯರನ್ನೇ ಭೇಟಿಯಾಗಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಪುಸ್ತಕಗಳು ಹಾಗೂ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಿ
ದ್ದೇವೆ. ಗ್ರಾಮೀಣ ಭಾಗದ ಮಹಿಳೆಯರು ಸಬಲರಾಗಬೇಕಾದರೆ ನಗರ ಪ್ರದೇಶದ ಮಹಿಳೆಯರು ತಮ್ಮ ‘ಕಂಫರ್ಟ್ ಜೋನ್‌’ನಿಂದ ಹೊರಬರಬೇಕು’ ಎಂದು ಅವರು ಹೇಳಿದರು.

‘ಪುರುಷರು ಮಾತ್ರ ಮಾಡಬಲ್ಲಂಥ ಕೆಲಸಗಳನ್ನು, ಅಂದರೆ ಬೈಕ್ ಚಾಲನೆಯನ್ನು ಮಹಿಳೆಯರೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇವೆ. ಅದಕ್ಕಾಗಿ ಮಹಿಳೆಯರು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬಂದು ಕನಸುಗಳ ಬೆನ್ನು ಹತ್ತಬೇಕು’ ಎಂದು ಅವರು ಸೇರಿಸಿದರು.

‘ಗ್ರಾಮೀಣ ಭಾಗದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದತ್ತ ಸರ್ಕಾರವು ಗಂಭೀರವಾಗಿ ಗಮನ ಹರಿಸುವ ಅಗತ್ಯವಿದೆ’ ಎಂದು ತಂಡದ ಮತ್ತೊಬ್ಬ ಸದಸ್ಯೆ ಅಭಿಪ್ರಾಯ ಹಂಚಿಕೊಂಡರು.

ಈ ತಂಡವು ತಮ್ಮ ಗುರಿ ಸಾಧನೆಯ ದಾರಿಯಲ್ಲಿ ಮರುಭೂಮಿ, ಕಣಿವೆ, ಪರ್ವತ ಪ್ರದೇಶ, ನದಿಗಳನ್ನು ದಾಟಿ ಸಾಗಿದೆ. ತಂಡದಲ್ಲಿ ವೃತ್ತಿಪರ ಬೈಕರ್‌
ಗಳು, ವೈದ್ಯೆಯರು, ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರಿದ್ದಾರೆ. ಜುಲೈ 19ರಂದು ಸೂರತ್‌ನಲ್ಲಿ ಹಸಿರು ಬಾವುಟ ತೋರುವ ಮೂಲಕ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ತಂಡಕ್ಕೆ ಚಾಲನೆ ನೀಡಿದ್ದರು.

56 ಸದಸ್ಯೆಯರಿರುವ ‘ಬೈಕಿಂಗ್‌ ಕ್ವೀನ್ಸ್’ ಏಷ್ಯಾದ 10 ರಾಷ್ಟ್ರಗಳು ಮತ್ತು ಭಾರತದ 12 ರಾಜ್ಯಗಳಲ್ಲಿ ಒಟ್ಟು 10,000 ಕಿ.ಮೀ ಸಂಚರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಬೇಟಿ ಬಚಾವೊ, ಬೇಟಿ ಪಢಾವೊ’, ‘ಸ್ವಚ್ಛ ಭಾರತ್ ಮಿಷನ್’, ‘ಸಶಕ್ತ ನಾರಿ, ಸಶಕ್ತ ಭಾರತ’ ಸಂದೇಶವನ್ನು ಸಾರುವುದೂ ಈ ಸಾಹಸದ ಒಂದು ಭಾಗವಾಗಿತ್ತು.

ಸ್ವಾಗತಿಸಿದ ಸಚಿವ: ಕಾರ್ದುಂಗ್ ಲಾ ಪಾಸ್‌ನಲ್ಲಿ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ‘ಕ್ವೀನ್ಸ್’ ತಂಡವನ್ನು ಸ್ವಾಗತಿಸಿ ಅವರ ಶ್ರಮವನ್ನು ಶ್ಲಾಘಿಸಿದ್ದರು.

‘ಈ ಮಹಿಳೆಯರು ಆಧುನಿಕ ದುರ್ಗೆಯರು. ದೇವಿ ದುರ್ಗೆ ಹುಲಿಯನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಳು. ಈ ಮಹಿಳೆಯರು ಹುಲಿಯ ಬದಲಾಗಿ ಬೈಕ್‌ಗಳನ್ನು ಆಯ್ದುಕೊಂಡಿದ್ದಾರೆ. ಮಹಿಳೆಯಾಗಿ ಬೈಕ್ ಚಲಾಯಿಸುವುದೇ ಒಂದು ಪ್ರಬಲ ಸಂದೇಶ. ಅದೇ ಕಾರಣಕ್ಕೆ ಇವರು ಬೈಕನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT