ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಮಗ್ಗಕ್ಕೆ ವಿದೇಶಿ ಬಂಡವಾಳ ಹೂಡಿಕೆಗೆ ಪ್ರಯತ್ನ’

ಮುಜರಾಯಿ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ
Last Updated 24 ಆಗಸ್ಟ್ 2017, 9:01 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದ ಜವಳಿ ಮತ್ತು ಕೈಮಗ್ಗ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲು ಶೀಘ್ರವೇ ರಷ್ಯಾಕ್ಕೆ ಭೇಟಿ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಬುಧವಾರ ನಡೆದ ‘ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಉಚಿತ ಅಡುಗೆ ಅನಿಲ ಸಂಪರ್ಕ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೈಮಗ್ಗ ನೇಕಾರರು ಆಧುನಿಕತೆಗೆ ತಕ್ಕಂತೆ ಬದಲಾಗಬೇಕು. ಸಣ್ಣ ಪ್ರಮಾಣದ ಪವರ್‌ಲೂಮ್ ಯಂತ್ರಗಳನ್ನು ಬಳಸಿ ಹೆಚ್ಚು ಉತ್ಪಾದನೆಗೆ ಮುಂದಾಗಬೇಕು’ ಎಂದರು.

‘ಅಗಡಿ ಗ್ರಾಮದಲ್ಲಿ ₹5 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ ಹಾಗೂ ಪವರ್‌ಲೂಮ್ ಯಂತ್ರಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ. ಆದರೆ, ಸೂಕ್ತ ಸ್ಪಂದನೆ ಇಲ್ಲದ ಕಾರಣ, ಹುಣಸಿಕಟ್ಟೆ ಗ್ರಾಮದಲ್ಲಿ ₹3 ಕೋಟಿ ವೆಚ್ಚದಲ್ಲಿ ‘ಪವರಲೂಮ್ ಸಂಕೀರ್ಣ’ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನೇಕಾರರು ಬಯಸಿದರೆ, ಅಗಡಿಯಲ್ಲೂ ಪವರಲೂಮ್ ಸಂಕೀರ್ಣ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

‘ಡಿ.ದೇವರಾಜ ಅರಸು ವಸತಿ ನಿಲಯ ಅತ್ಯಂತ ಮಾದರಿಯ ಕಟ್ಟಡವಾಗಿದೆ. 50 ಪ್ರವೇಶ ಸಂಖ್ಯೆಯ ಮಿತಿಯನ್ನು ಸಡಿಲಗೊಳಿಸಿ, 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ದೊರಕಿಸಿಕೊಡಲಾಗುವುದು’ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಲವು ಭಾಗ್ಯಗಳನ್ನು ಜಾರಿಗೊಳಿಸಿದೆ. ಭೀಕರ ಬರಗಾಲದಲ್ಲಿ ಹಸಿವು ಹಾಗೂ ಉದ್ಯೋಗ ಅರಸಿ ಗುಳೆ ಹೋಗುವುದನ್ನು ‘ಅನ್ನಭಾಗ್ಯ’ ಯೋಜನೆ ಸಮರ್ಥವಾಗಿ ತಡೆದಿದೆ ಎಂದರು.

‘ಇಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವುದನ್ನುಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.  ಅದಕ್ಕಾಗಿ ಸ್ವಾಧೀನಪಡಿಕೊಂಡಿದ್ದ ಜಮೀನನ್ನು ರೈತರಿಗೆ ಹಿಂದಿರುಗಿಸಲು ಸಚಿವ ಸಂಪುಟದಲ್ಲಿ  ನಿರ್ಣಯ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಬಳಿಕ, ನಾಲ್ಕೇ ವರ್ಷದಲ್ಲಿ ಅಗಡಿ ಗ್ರಾಮದಲ್ಲೇ ಸುಮಾರು ₹ 18 ಕೋಟಿಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮತಾಜಬಿ ಎಂ.ತಡಸ, ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ ಬನ್ನಿಕೋಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗವ್ವ ಬಂಕಾಪುರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ನಿರ್ವಾಣಿಮಠ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಕಲಾವತಿ ಜಿ.ಪಾಟೀಲ, ಹನುಮಂತಪ್ಪ ಶಿವಣ್ಣನವರ, ಕರಿಯಪ್ಪ ಹುಚ್ಚಣ್ಣನವರ, ಎ.ಪಿ.ಎಂ.ಸಿ.ಸದಸ್ಯೆ ಸಿದ್ದವ್ವ ಮುದಿಗೌಡ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ನಾಗರಾಜ ಹಾಗೂ ಶಂಭಣ್ಣ ಬಸೇಗಣ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT