ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಮಾರುಕಟ್ಟೆ ಚೇತರಿಕೆ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೋಟು ರದ್ದತಿ, ರೇರಾದಂತಹ ಸುಧಾರಣಾ ಕ್ರಮಗಳು ರಿಯಲ್ ಎಸ್ಟೇಟ್‌ ವಲಯಕ್ಕೆ ಹೊಸ ಆಯಾಮ ನೀಡಲಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ, ಕಳೆದ ಮೂರು ವರ್ಷಗಳಿಂದ ಬೇಡಿಕೆ ಕಳೆದುಕೊಂಡಿದ್ದ ವಸತಿ ಮಾರುಕಟ್ಟೆ ಇದೀಗ ಚೇತರಿಕೆ ಹಾದಿಗೆ ಮರಳುತ್ತಿದೆ. ಹಾಗೆಂದ ಮಾತ್ರಕ್ಕೆ ಬೆಲೆಗಳೇನೂ ಇಳಿಕೆ ಕಾಣುತ್ತಿಲ್ಲ. ಸುಧಾರಣಾ ಕ್ರಮಗಳ ಸರಿಯಾದ ಪರಿಣಾಮ ಗೋಚರಿಸಲು ಕನಿಷ್ಠ ಒಂದು ವರ್ಷವಾದರೂ ಕಾಯಬೇಕು ಎನ್ನುವುದು ತಜ್ಞರ ಅಭಿಮತ.

ಸರ್ಕಾರದ ಸುಧಾರಣಾ ಕ್ರಮಗಳಿಂದ ಕಳೆದ ಕೆಲವು ವರ್ಷಗಳಿಂದ ನಷ್ಟದಲ್ಲಿದ್ದ ವಸತಿ ಮಾರುಕಟ್ಟೆ ಇದೀಗ ಚೇತರಿಕೆ ಹಾದಿಗೆ ಮರಳುತ್ತಿದೆ. ಬೆಂಗಳೂರನ್ನೂ ಒಳಗೊಂಡು ಪ್ರಮುಖ 8 ನಗರಗಳಲ್ಲಿ ಈ ಮಾರುಕಟ್ಟೆ ನಿಧಾನಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ.

ಕೈಗೆಟುಕುವ ಬೆಲೆಯ ವಸತಿ ಯೋಜನೆಗಳಿಗೆ ಬಡ್ಡಿ ರಿಯಾಯ್ತಿ, ಗೃಹ ಸಾಲದ ಬಡ್ಡಿದರ ಇಳಿಕೆ, ಕಪ್ಪುಹಣದ ಒಳಹರಿವು ತಡೆಯಲು ಬೇನಾಮಿ ಕಾಯ್ದೆ, ಉದ್ಯಮ ಮತ್ತು ಗ್ರಾಹಕರ ಹಿತ ಕಾಯುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯಂತಪ ಸುಧಾರಣಾ ಕ್ರಮಗಳು ವಸತಿ ಮಾರುಕಟ್ಟೆಗೆ ಬಲ ನೀಡಿವೆ ಎನ್ನುತ್ತವೆ ಆಸ್ತಿ ಸಲಹೆ ಮತ್ತು ಸಂಶೋಧನಾ ಸಂಸ್ಥೆಗಳು.

2017ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ಬೆಂಗಳೂರು, ಅಹಮದಾಬಾದ್‌, ಚೆನ್ನೈ, ಹೈದರಾಬಾದ್‌, ಕೋಲ್ಕತ, ಮುಂಬೈ, ದೆಹಲಿ ರಾಜಧಾನಿ ಪ್ರದೇಶ, ಪುಣೆ ನಗರಗಳಲ್ಲಿ ವಸತಿ ಮಾರುಕಟ್ಟೆ ಶೇ ಆರರಷ್ಟು ಪ್ರಗತಿ ಕಂಡಿದೆ. ಇದರಿಂದ ನೋಟು ರದ್ದತಿ ಬಳಿಕ ಶೇ 28 ರಷ್ಟು ಪ್ರಗತಿ ಸಾಧಿಸಿದಂತಾಗಿದೆ ಎಂದು ರಿಯಲ್‌ ಎಸ್ಟೇಟ್‌ ರೇಟಿಂಗ್‌ ಮತ್ತು ಸಂಶೋಧನಾ ಸಂಸ್ಥೆ ಲೈಸಸ್‌ ಫೋರಾಸ್‌ ವರದಿ ನೀಡಿದೆ.

ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಸಿದ್ಧತೆಯಿಂದ ಎದುರಾಗಿದ್ದ ಸಮಸ್ಯೆಯ ಹೊರತಾಗಿಯೂ ಮೊದಲ ತ್ರೈಮಾಸಿಕದಲ್ಲಿ ಪ್ರಗತಿ ಪ್ರಮಾಣ ಶೇ 21ರಷ್ಟು ಏರಿಕೆ ಕಂಡಿತ್ತು.

ವಸತಿ ಮಾರುಕಟ್ಟೆಯು ನೋಟು ರದ್ದತಿಯ ಪರಿಣಾಮದಿಂದ ಹೊರಬಂದಿದ್ದು, ಪ್ರಗತಿ ಹಾದಿಗೆ ಮರಳಿದೆ ಎನ್ನುತ್ತದೆ ನೈಟ್‌ ಫ್ರಾಂಕ್ ಇಂಡಿಯಾದ ಈಚಿನ ವರದಿ. ಜೂನ್‌ಗೆ ಕೊನೆಗೊಂಡ ಅರ್ದ ವಾರ್ಷಿಕದಲ್ಲಿ ಪ್ರಗತಿ ಶೇ 11ರಷ್ಟು ಇಳಿಕೆ ಕಂಡಿದೆ. ಆದರೆ ನೋಟು ರದ್ದತಿ ಪ್ರಭಾವಕ್ಕೆ ಒಳಗಾಗಿದ್ದ ಜುಲೈ–ಡಿಸೆಂಬರ್ ಅವಧಿಗೆ ಹೋಲಿಸಿದರೆ ಶೇ 11ರಷ್ಟು ಏರಿಕೆ ಕಂಡಿದೆ.

ಪ್ರಮುಖ ನಿರ್ಧಾರಗಳು: 2017ರ ಕೇಂದ್ರ ಬಜೆಟ್‌ನಲ್ಲಿ ಕೈಗೆಟುಕುವ ವಸತಿ ವಲಯಕ್ಕೆ ಮೂಲಸೌಕರ್ಯದ ಸ್ಥಾನಮಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ 2017ರ ಹೊಸ ವರ್ಷದ ಕೊಡುಗೆಯಾಗಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 12 ಲಕ್ಷದವರೆಗಿನ ಸಾಲಕ್ಕೆ ಶೇ 3 ರಷ್ಟು ಮತ್ತು 9 ಲಕ್ಷದವರೆಗಿನ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿನಾಯ್ತಿ ನೀಡಿದ್ದಾರೆ. ಇದರಿಂದ ಅಗ್ಗದ ಮನೆಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ದೇಶದ ಅತಿದೊಡ್ಡ ಗೃಹ ಸಾಲ ಸಂಸ್ಥೆ ಎಚ್‌ಡಿಎಫ್‌ಸಿ, ಜೂನ್‌ ತ್ರೈಮಾಸಿಕದಲ್ಲಿ ವೈಯಕ್ತಿಕ ಸಾಲ ನೀಡಿಕೆಯಲ್ಲಿ ಶೇ 21 ರಷ್ಟು ಪ್ರಗತಿ ಸಾಧಿಸಿದೆ. ಸರಾಸರಿ ಸಾಲದ ಮೊತ್ತ ₹26.3 ಲಕ್ಷದಷ್ಟಿದೆ. ಇದು ಕೈಗೆಟುಕುವ ಮನೆಗಳ ನಿರ್ಮಾಣಕ್ಕೆ ಇರುವ ಬೇಡಿಕೆಯನ್ನು ಸೂಚಿಸುತ್ತದೆ.

ಬಡ್ಡಿದರ ಕಡಿಮೆ ಮಟ್ಟದಲ್ಲಿದ್ದು, ಆಸ್ತಿಗಳ ಮೌಲ್ಯದಲ್ಲಿ ಏರಿಕೆಯಾಗುತ್ತಿಲ್ಲ. ಇದರ ಜತೆಗೆ  ಕೇಂದ್ರ ಸರ್ಕಾರ ನೀಡಿರುವ ಬಡ್ಡಿ ವಿನಾಯ್ತಿಯಿಂದ ಜನರು ಮನೆ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಎಚ್‌ಡಿಎಫ್‌ಸಿ ಉಪಾಧ್ಯಕ್ಷ ಕೆ. ಮಿಸ್ತ್ರಿ ತಿಳಿಸಿದ್ದಾರೆ.

ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ನ ಸಾಲ ವಿತರಣೆ ಜೂನ್‌ ತ್ರೈಮಾಸಿಕದಲ್ಲಿ ಶೇ 28 ರಿಂದ ಶೇ 39ಕ್ಕೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಿಂದ ಗೃಹ ಸಾಲದ ಬಡ್ಡಿದರ ಶೇ 1 ಕ್ಕಿಂತಲೂ ಹೆಚ್ಚು ಇಳಿಕೆ ಕಂಡಿದೆ. ಮುಂದಿನ 8 ರಿಂದ 10 ತಿಂಗಳವರೆಗೂ ಬೆಲೆಯಲ್ಲಿ ಯಾವುದೇ ಏರಿಕೆ ಕಾಣುವುದಿಲ್ಲ. ಇದರಿಂದ ಮಾರುಕಟ್ಟೆ ಸ್ವಲ್ಪ ಒತ್ತಡಕ್ಕೆ ಒಳಗಾದರೂ ಮಾರಾಟ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದೆ.

ತ್ರೈಮಾಸಿಕದಲ್ಲಿ, 8 ನಗರಗಳಲ್ಲಿ ವಸತಿ ಮಾರುಕಟ್ಟೆಯ ಒಟ್ಟಾರೆ ಪ್ರಗತಿಯಲ್ಲಿ ಕೈಗೆಟುಕುವ ವಸತಿ (₹25 ಲಕ್ಷಕ್ಕಿಂತ ಕಡಿಮೆ ಬೆಲೆಯದ್ದು) ಭಾಗವು ಶೇ 17 ರಷ್ಟು ಕೊಡುಗೆ ನೀಡಿದೆ. ಕಳೆದ ತ್ರೈಮಾಸಿಕದಲ್ಲಿ ಶೇ 16 ರಷ್ಟಿತ್ತು.

ಹೊಸ ಯೋಜನೆಗಳಿಗೆ ಹಿನ್ನಡೆ: ನೋಟು ರದ್ದತಿ ಬಳಿಕ ವಸತಿ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿದ್ದರೂ ರೇರಾ ಮತ್ತು ಜಿಎಸ್‌ಟಿಯಿಂದಾಗಿ ಹೊಸ ಯೋಜನೆಗಳ ಜಾರಿಯಲ್ಲಿ ಇಳಿಕೆ ಕಂಡುಬಂದಿದೆ.

2ನೇ ತ್ರೈಮಾಸಿಕದಲ್ಲಿ ಹೊಸ ವಸತಿ ಯೋಜನೆಗಳ ಜಾರಿಯು 10 ತ್ರೈಮಾಸಿಕಗಳ ಹಿಂದಿನ ಮಟ್ಟಕ್ಕೆ ಕುಸಿತ ಕಂಡಿದೆ ಎಂದು ವಸತಿ ಸಂಶೋಧನಾ ಸಂಸ್ಥೆಯೊಂದು ತಿಳಿಸಿದೆ. ದೇಶದ ಪ್ರಮುಖ ನಗರಗಳಲ್ಲಿ 20,000 ವಸತಿ ಯೋಜನೆಗಳು ಜಾರಿಗೊಂಡಿವೆ. ಮೊದಲ ತ್ರೈಮಾಸಿಕದಲ್ಲಿ 26,000 ಯೋಜನೆಗಳು ಜಾರಿಯಾಗಿದ್ದವು. ಆದರೆ ಕಳೆದ ಆರು ತ್ರೈಮಾಸಿಕಗಳಿಂದಲೂ ಮಾರಾಟದ ಪ್ರಮಾಣ ಏರಿಕೆ ಕಾಣುತ್ತಿದೆ. ಇದು ಮಾರುಕಟ್ಟೆಯ ಬಗ್ಗೆ ಸಕಾರಾತ್ಮಕ ಚಿತ್ರಣ ನೀಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ರೇರಾ ವ್ಯಾಪ್ತಿಗೆ ಬರುವ ಸಲುವಾಗಿ ಬಿಲ್ಡರ್‌ಗಳು ಈಗಾಗಲೇ ನಿರ್ಮಾಣವಾಗಿರುವ ಯೋಜನೆಗಳನ್ನು ಮಾರಾಟ ಮಾಡುವುದಕ್ಕೆ ಹೆಚ್ಚು ಗಮನ ನೀಡಿದ್ದಾರೆ. ಇದರಿಂದ ಹೊಸ ಯೋಜನೆಗಳು ಜಾರಿಯಾಗುತ್ತಿಲ್ಲ.

ಬೇಡಿಕೆ ಕಾಯ್ದುಕೊಂಡ ಬೆಂಗಳೂರು: ಹೊಸ ವಸತಿ ಯೋಜನೆಗಳ ಜಾರಿಯಲ್ಲಿ ಬೆಂಗಳೂರು ನಗರ ಬೇಡಿಕೆ ಕಾಯ್ದುಕೊಂಡಿದೆ. 2017ರ ಮೊದಲ ಆರು ತಿಂಗಳಿನಲ್ಲಿ (ಜೂನ್‌ವರೆಗೆ) 13,400 ಹೊಸ ಯೋಜನೆಗಳು ಜಾರಿಯಾಗಿವೆ. ಈ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಮುಂಬೈ ಮೊದಲ ಸ್ಥಾನದಲ್ಲಿದೆ. (14,000).

ಯಲಹಂಕ, ದೇವನಹಳ್ಳಿ, ರಂಚೇನಹಳ್ಳಿ ಮತ್ತು ಕೋಗಿಲು ಪ್ರದೇಶಗಳಲ್ಲಿ ವಸತಿ ಮಾರುಕಟ್ಟೆ ಅತಿ ಹೆಚ್ಚಿನ ಯೋಜನೆಗಳು ಜಾರಿಯಾಗಿವೆ. ನಗರದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರಿಂದ ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಕಾಲಿಯರ್ಸ್‌ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ವಿಮಾನ ನಿಲ್ದಾಣ ರಸ್ತೆ, ವೈಟ್‌ಫೀಲ್ಡ್‌ ಮತ್ತು ಯಲಹಂಕದಲ್ಲಿ ಬಂಡವಾಳ ಮೌಲ್ಯ ಶೇ 3 ರಿಂದ ಶೇ 6 ರಷ್ಟು ಇಳಿಕೆ ಕಂಡಿದೆ. ಇದೇ ವೇಳೆ ಜಯನಗರ, ಸದಾಶಿವನಗರ, ಬನ್ನೇರುಘಟ್ಟ ಮತ್ತು ಕೋರಮಂಗಲದಲ್ಲಿ ಶೇ 1 ರಿಂದ ಶೇ 4 ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT