ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ಗಣೇಶ ಮೂರ್ತಿಗಳ ಭರ್ಜರಿ ಮಾರಾಟ

Last Updated 27 ಆಗಸ್ಟ್ 2017, 6:12 IST
ಅಕ್ಷರ ಗಾತ್ರ

ಯಾದಗಿರಿ: ನಿಷೇಧದ ನಡುವೆಯೂ ನಗರದಲ್ಲಿ ಪಿಒಪಿ ಗಣೇಶಮೂರ್ತಿಗಳ ಭರ್ಜರಿ ಮಾರಾಟ ನಡೆಯಿತು. ಗುರುಮಠಕಲ್, ಸೈದಾಪುರ, ವಡಗೇರಾ, ಹತ್ತಿಕುಣಿ ಹೋಬಳಿ ಕೇಂದ್ರಗಳಿಂದ ನೂರಾರು ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನು ತಂದಿದ್ದ ಜನರು ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸಿದರು.

ನಗರದಲ್ಲಿನ ಬಾಲಾಜಿ ಮಾರ್ಬಲ್‌ ಬಳಿ ರಾಜಸ್ತಾನದ ತಂಡ ತಯಾರಿಸಿದ್ದ 70ಕ್ಕೂ ಹೆಚ್ಚು ಪಿಒಪಿ ಗಣೇಶನ ಮೂರ್ತಿಗಳನ್ನು ನಗರಸಭೆ ವಶಪಡಿಸಿಕೊಂಡಿತ್ತು. ಯಾವುದೇ ಕಾರಣಕ್ಕೂ ಅವನ್ನು ಮಾರಾಟ ಮಾಡಕೂಡದು ಎಂದು ಪೌರಾಯುಕ್ತರು ಎಚ್ಚರಿಕೆ ನೀಡಿದ್ದರು. ಆದರೆ, ಅವುಗಳನ್ನು ನಗರಸಭೆ ಬೇರೆಡೆ ಸ್ಥಳಾಂತರಿಸದೇ ಇದ್ದುದ್ದರಿಂದ ರಾಜಸ್ತಾನದ ವ್ಯಾಪಾರಿಗಳು ಅವುಗಳನ್ನೂ ಸಹ ಮಾರಾಟ ಮಾಡಿದರು.

ಕನಿಷ್ಠ ₹2000ದಿಂದ ₹35,000ಕ್ಕೆ ಒಂದು ಗಣೇಶ ಮೂರ್ತಿಯನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ವಹಿವಾಟು ನಡೆಸಿದರು. ಆದರೆ ನಗರಸಭೆ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್‌ ಇಲಾಖೆಯ ಯಾವ ಅಧಿಕಾರಿಯೂ ಪಿಒಪಿ ಗಣೇಶ ಮಾರಾಟಕ್ಕೆ ತಡೆ ಹಾಕದೇ ಇರುವುದರಿಂದ ಜಿಲ್ಲೆಯಾದ್ಯಂತ ಸಾವಿರಾರು ಪಿಒಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ.

‘ಯಾದಗಿರಿ ನಗರವೊಂದರಲ್ಲೇ 80ಕ್ಕೂ ಹೆಚ್ಚು ಬೃಹತ್‌ ಪಿಒಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾಡಳಿತ ಮತ್ತು ನಗರಸಭೆ ಮಣ್ಣಿನ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ತಯಾರಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸದೇ ಇರುವುದರಿಂದ ಜಿಲ್ಲೆಯಲ್ಲಿ ರಾಸಾಯನಿಕ ಲೇಪಿತ ಪಿಒಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲು ಕಾರಣವಾಗಿದೆ’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಜಿ.ಯಾದವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲಮೂಲಗಳಿಗೆ ಧಕ್ಕೆ: ‘ಪ್ರತಿಷ್ಠಾಪನೆಗೊಂಡಿರುವ ರಾಸಾಯನಿಕ ಲೇಪಿತ ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆ, ಬಾವಿ, ಹಳ್ಳಕೊಳ್ಳಗಳಿಗೆ ವಿಸರ್ಜನೆ ಮಾಡುವುದರಿಂದ ಜಲಮೂಲಗಳಿಗೆ ಧಕ್ಕೆ ಒದಗುವ ಸಂಭವ ಹೆಚ್ಚಿದೆ. ನಗರಸಭೆ ಯಾದಗಿರಿ ನಗರದ ಸಮೀಪದ ದೊಡ್ಡ ಕೆರೆ ಬಳಿ ಕೃತಕ ಹೊಂಡ ನಿರ್ಮಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸುವ ಹೊಣೆಯನ್ನು ಗ್ರಾಮ ಪಂಚಾಯಿತಿಗಳು ನಿರ್ಲಕ್ಷಿಸಿರುವ ಪರಿಣಾಮ ಆ ಭಾಗದ ಜಲಮೂಲಗಳಿಗೆ ಹೆಚ್ಚಿನ ಧಕ್ಕೆ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT