ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಮೀನು, ಮೊಸಳೆಗೆ ಪೂಜೆ!

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

*ಶಶಿಧರ ಹಾಲಾಡಿ

‘ಇದು ಮೀನು, ಇದು ನೆಗಳ, ಇದು ಕೂಮ’ ಎಂದು ವಿವರಿಸಿದರು, ಆ ದೇವಾಲಯದಲ್ಲಿದ್ದ ಪೂಜಾ ಸಹಾಯಕರು. ಉಡುಪಿ ಜಿಲ್ಲೆಯ ಮರವಂತೆ ಸನಿಹದ ಮಾರಸ್ವಾಮಿ ದೇವಾಲಯಲ್ಲಿರುವ ಮೂರು ಪುಟ್ಟ ಪುಟ್ಟ ಗರ್ಭಗೃಹದ ಎದುರು ನಾವು ನಿಂತು ಅಲ್ಲಿನ ವಿವರಗಳನ್ನು ಕೇಳಿದ್ದಕ್ಕೆ ಅವರು ಉತ್ತರಿಸಿದ್ದು ಹೀಗೆ.

‘ನೆಗಳ ಅಂದರೆ ಎಂತ?’
‘ನೆಗಳ ಅಂದರೆ ಮೊಸಳೆ, ನಮ್ಮ ದೇವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಉಂಟು’
‘ಕೂಮ ಅಂದರೆ ಎಂತ?’

‘ಕೂಮ ಅಂದರೆ ಕೂರ್ಮ’ ಎನ್ನುತ್ತಾ ಪೂಜಾ ಸಹಾಯಕ್ಕಾಗಿ ಹೊರಟು ಹೋದರು. ಇಷ್ಟಕ್ಕೂ ಮಾರಸ್ವಾಮಿ ದೇವಾಲಯದ ಪ್ರಮುಖ ದೇವರು ವರಾಹ ಸ್ವಾಮಿ (ಅಥವಾ ಕಾಡು ಹಂದಿ). ಪ್ರಮುಖ ದೇವತೆಯಾಗಿ ವರಾಹ ಮತ್ತು ಉಪದೇವತೆಗಳಾಗಿ ಜಲಚರಗಳಿಗೆ ಪೂಜಾಗೃಹದಲ್ಲಿ ಸ್ಥಾನ ದೊರೆತಿರುವುದು ರಾಜ್ಯದಲ್ಲಿ ಬೇರಾವ ಸ್ಥಳದಲ್ಲೂ ಇರಲಿಕ್ಕಿಲ್ಲ. ಗರ್ಭಗೃಹದ ಎದುರು, ನೆಲದ ಮೇಲೆ ಕೆಲವು ಅಡಿಗಳ ಅಂತರದಲ್ಲಿ ಆಮೆ, ಮೊಸಳೆ, ಮೀನಿನ ಉಬ್ಬು ಶಿಲ್ಪಗಳಿರುವುದು ವಿಶೇಷ. ಮಾರಸ್ವಾಮಿ ದೇವಾಲಯದಲ್ಲಿ ಪ್ರಮುಖವಾಗಿ ಮೂರು ದೇವತೆಗಳು ಪೂಜೆಗೆ ಒಳಪಡುತ್ತಿವೆ. ಅವುಗಳೆಂದರೆ, ವರಾಹ, ವಿಷ್ಣು ಮತ್ತು ನರಸಿಂಹ. ಈ ಮೂರು ದೇವತೆಗಳಿಗೂ ಮೂರು ಪುಟ್ಟ ಪುಟ್ಟ ಗರ್ಭಗೃಹಗಳಿವೆ. ಆ ದೇವತೆಗಳಿಗೆ ಎದುರಾಗಿ, ಕ್ರಮವಾಗಿ ಆಮೆ, ಮೀನು ಮತ್ತು ಮೊಸಳೆಗಳ ಶಿಲಾ ಶಿಲ್ಪಗಳು ನೆಲದ ಮೇಲೆ ಇರುವುದೇ ಇಲ್ಲಿನ ವಿಶೇಷ.

ವಿಷ್ಣುವಿನ ಅವತಾರಗಳಾದ ಮೀನು ಮತ್ತು ಆಮೆಗಳನ್ನು ಪೂಜಿಸಲಾಗುತ್ತದೆ ಎಂದರು ಇಲ್ಲಿನ ಅರ್ಚಕವೃಂದದವರು. ಆದರೆ, ವರಾಹ ದೇವತೆಗೂ ಆಮೆಗೂ ಇರುವ ಸಂಬಂಧವನ್ನು ವಿವರಿಸಲು ಅವರಿಂದಾಗಲಿಲ್ಲ. ಜೊತೆಗೆ ಮೊಸಳೆಯ ಪೂಜೆ ಸಹ ಅಪರೂಪದ್ದು. ಒಂದು ಕಡೆ ಸಮುದ್ರ, ಇನ್ನೊಂದು ಕಡೆ ಹೊಳೆ ಇರುವ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಈ ದೇಗುಲಕ್ಕೆ ಬರುವ ಹೆಚ್ಚಿನ ಭಕ್ತರು ಸ್ಥಳೀಯ ಮೀನುಗಾರರ ಕುಟುಂಬ ವರ್ಗದವರು.

ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವಾಗ, ಮಾರಿಬಲೆಯಲ್ಲಿ ಹೆಚ್ಚಿನ ಮೀನು ದೊರೆತಾಗ ಮಾರಸ್ವಾಮಿಯ ದೇಗುಲಕ್ಕೆ ವಿಶೇಷ ಪೂಜೆ ನಡೆಯುವುದುಂಟು. ದೇವಾಲಯದ ಪಕ್ಕದಲ್ಲಿರುವ ಸೌಪರ್ಣಿಕಾ ನದಿಯಲ್ಲಿ ವಾಸಿಸುತ್ತಿದೆ ಎನ್ನಲಾಗಿರುವ ಮೊಸಳೆ ಅಥವಾ ನೆಗಳಕ್ಕೆ, ದೇವಾಲಯದ ಒಳಗೆ ನೆಲದ ಮೇಲೆ ಸ್ಥಾನ ದೊರೆತಿರುವುದರ ಜೊತೆಗೆ, ವರ್ಷಕ್ಕೆ ಒಂದು ದಿನ ನಡೆಯುವ ‘ಅಭಾರಿ’ ಎಂಬ ವಿಶೇಷ ಪೂಜೆ ಮಾಡಿ, ಅನ್ನವನ್ನು ಅರ್ಪಣೆ ಮಾಡಲಾಗುತ್ತದೆ.

ನದಿ ಮತ್ತು ಸಮುದ್ರ ಅಕ್ಕಪಕ್ಕದಲ್ಲಿದ್ದು, ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮರವಂತೆಯ ಬೀಚ್ ಹತ್ತಿರವೇ ಇರುವ ಈ ಮಾರಸ್ವಾಮಿ ದೇಗುಲವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದ್ದು, ಇಲ್ಲಿಂದ ಕಾಣುವ ನದಿಯ ತಿರುವು, ಕೊಡಚಾದ್ರಿ ನೋಟ, ಸನಿಹದ ದ್ವೀಪಗಳಲ್ಲಿರುವ ತೆಂಗಿನ ಮರಗಳ ಸಾಲು ಎಲ್ಲವೂ ಸುಂದರ.
⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT