ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಗೆ ಬಂದಿವೆ 20 ಸಾವಿರ ಅರ್ಜಿ!

Last Updated 29 ಆಗಸ್ಟ್ 2017, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶೌಚಾಲಯ ಇಲ್ಲದವರಿಗೆ ಸ್ವಚ್ಛ ಭಾರತ ಅಭಿಯಾನದಡಿ ಉಚಿತವಾಗಿ ಶೌಚಾಲಯ ಕಟ್ಟಿಸಿಕೊಡುವ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇಲ್ಲಿಯವರೆಗೆ ಮಹಾನಗರ ಪಾಲಿಕೆಗೆ 20,497 ಅರ್ಜಿಗಳು ಬಂದಿವೆ.

ಅರ್ಜಿ ಸ್ವೀಕರಿಸಿದ ತಕ್ಷಣ ಪ್ರಾಥಮಿಕ ಪರಿಶೀಲನೆ ನಡೆಸುವ ಪಾಲಿಕೆ ಅಧಿಕಾರಿಗಳು ಅರ್ಜಿಗೆ ಅನುಮೋದನೆ ನೀಡಿ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ. ಇದರ ಪರಿಣಾಮ ಜೂನ್‌ವರೆಗೆ 11,063 ಫಲಾನುಭವಿಗಳು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. 3389 ಕುಟುಂಬಗಳಿಗೆ ಮಂಜೂರಾದ ಶೌಚಾಲಯಗಳನ್ನು ಕಟ್ಟುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಅವಳಿ ನಗರದ ಬಹುತೇಕ ಕೊಳೆಗೇರಿ ಪ್ರದೇಶಗಳಲ್ಲಿನ ಜನರು ಶೌಚಾಲಯ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎನ್ನುತ್ತಾರೆ ಪಾಲಿಕೆಯ ಪರಿಸರ ಅಧಿಕಾರಿ ನಯನಾ ಕೆ.ಎಸ್‌.

ಒಳಚರಂಡಿ ಲೈನ್‌ ಇರುವ ಬಡಾವಣೆಗಳಲ್ಲಿನ ಕುಟುಂಬಗಳು ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ₹ 10 ಸಾವಿರ ಹಣಕಾಸು ನೆರವು ದೊರೆಯಲಿದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಬಡಾವಣೆಗಳಲ್ಲಿ ಸೆಪ್ಟಿಕ್‌ ಟ್ಯಾಂಕ್‌ ಕಟ್ಟಿಸಿಕೊಳ್ಳುವುದಕ್ಕಾಗಿ ಹೆಚ್ಚುವರಿ ₹ 5 ಸಾವಿರ ಸೇರಿದಂತೆ ಒಟ್ಟು ₹ 15 ಸಾವಿರ ಹಣ ನೀಡಲಾಗುತ್ತದೆ.

ರಾಜ್ಯ ಹಾಗೂ ಕೇಂದ್ರದ ಅನುದಾನ:  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ₹ 5,333 ನಗದು ನೀಡಿದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ತೆಗೆದಿರಿಸಲಾದ ಹಣದಲ್ಲಿ ₹ 9,667 ಹಣವನ್ನು ಶೌಚಾಲಯ ಕಟ್ಟಿಸಿಕೊಳ್ಳಲು ಪ್ರತಿ ಕುಟುಂಬಕ್ಕೆ ಬಿಡುಗಡೆ ಮಾಡಲಾಗುತ್ತದೆ.

ಫಲಾನುಭವಿಗಳು ಮನೆ ಮಾಲೀಕತ್ವದ ಪುರಾವೆಗಳು, ಆಧಾರ್‌ ಕಾರ್ಡ್‌, ಆದಾಯ ಹಾಗೂ ಜಾತಿ ಪ್ರಮಾಣಪತ್ರ ಹಾಗೂ ಎರಡು ಇತ್ತೀಚಿನ ಭಾವಚಿತ್ರಗಳೊಂದಿಗೆ ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ‘ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆಗಬೇಕಿದೆಯಾದರೂ ಬಹುತೇಕ ಫಲಾನುಭವಿಗಳು ನಿರಕ್ಷರಿಗಳು. ಹೀಗಾಗಿ ಅವರಿಂದ ಆಫ್‌ಲೈನ್‌ನಲ್ಲಿ ಅರ್ಜಿ ಪಡೆದುಕೊಂಡು ನಂತರ ನಾವೇ ಆನ್‌ಲೈನ್‌ನಲ್ಲಿ ಪ್ರಕ್ರಿಯೆಗಳನ್ನು ಪೂರೈಸುತ್ತೇವೆ’ ಎಂದು ನಯನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆಯಿಂದ ಜಾಗೃತಿ ಕಾರ್ಯಾಗಾರ: ಅವಳಿ ನಗರವನ್ನು ಬಯಲು ಶೌಚಮುಕ್ತವಾಗಿಸುವ ಗುರಿ ಹೊಂದಿರುವ ಮಹಾನಗರ ಪಾಲಿಕೆಯು ಶೌಚಾಲಯ ಕಟ್ಟಿಸಿಕೊಂಡವರಿಗೆ ಹಣಕಾಸು ನೆರವು ನೀಡುವ ಕುರಿತು ಜಾಗೃತಿ ಮೂಡಿಸಲು ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಜಾಗೃತಿ ಕಾರ್ಯಾಗಾರವನ್ನೂ ಆಯೋಜಿಸಿತ್ತು.

ಅಂಕಿ–ಅಂಶ
11,000 ಇಲ್ಲಿಯವರೆಗೆ ನಿರ್ಮಾಣವಾದ ಶೌಚಾಲಯಗಳು

3,389 ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿ

₹15,000 ಪ್ರತಿ ಶೌಚಾಲಯಕ್ಕೆ ಮಂಜೂರಾಗುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT