ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ ಬಂದ್ ಯಶಸ್ವಿ

Last Updated 29 ಆಗಸ್ಟ್ 2017, 6:48 IST
ಅಕ್ಷರ ಗಾತ್ರ

ಕನಕಗಿರಿ: ನಿಯೋಜಿತ ಕನಕಗಿರಿ ತಾಲ್ಲೂಕಿನಲ್ಲಿ ನವಲಿಯ ರೈಸ್‌ಟೆಕ್‌ ಪಾರ್ಕ್‌ ಉಳಿಸುವಂತೆ ಒತ್ತಾಯಿಸಿ ಕನಕಗಿರಿ ನೂತನ ತಾಲ್ಲೂಕು ಕ್ರಿಯಾ ಸಮಿತಿ ಹಾಗೂ ವಿವಿಧ ಪಕ್ಷದ ಮುಖಂಡರು, ಸಂಘ–ಸಂಸ್ಥೆಗಳು ಸೋಮವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಸುವರ್ಣಗಿರಿ ಸಂಸ್ಥಾನ ಕಲ್ಮಠದಿಂದ ಆರಂಭವಾದ ಮೆರವಣಿಗೆ ರಾಜಬೀದಿ, ಹಳೆಯ ಪೊಲೀಸ್ ಠಾಣೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಇಂದಿರಾನಗರ, ವಾಲ್ಮೀಕಿ ವೃತ್ತದಿಂದ ಎಪಿಎಂಸಿ ಮಳಿಗೆ ಮಾರ್ಗವಾಗಿ ಕನಕಾಚಲಪತಿ ದೇವಸ್ಥಾನದ ಆವರಣ ತಲುಪಿತು.

ಪ್ರತಿಭಟನೆಗೆ ಚಾಲನೆ ನೀಡಿ ಕಲ್ಮಠದ ಡಾ.ಚನ್ನಮಲ್ಲಸ್ವಾಮಿ ಮಾತನಾಡಿ, ಒಣಬೇಸಾಯ ಪ್ರದೇಶದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಾಪಿಸಿರುವ ನವಲಿ ರೈಸ್‌ಟೆಕ್ ಪಾರ್ಕ್‌ನ್ನು ಕಾರಟಗಿಗೆ ಸೇರಿಸಿದರೆ ಮುಂದೆ ಆಗುವ ಅನಾಹುತ, ಸಾರ್ವಜನಿಕ ಆಸ್ತಿ ನಷ್ಟಕ್ಕೆ ಕ್ಷೇತ್ರದ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನೇರವಾಗಿ ಹೊಣೆಯಾಗಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಶಾಸಕ ತಂಗಡಗಿ, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಕನಕಗಿರಿ ನೂತನ ತಾಲ್ಲೂಕು ಕ್ರಿಯಾಸಮಿತಿ ಅಧ್ಯಕ್ಷ ಬಿ. ಕನಕಪ್ಪ ಮಾತನಾಡಿ, ನವಲಿಯ ರೈಸ್‌ಟೆಕ್ ಪಾರ್ಕ್‌ ನಿಯೋಜಿತ ಕಾರಟಗಿ ತಾಲ್ಲೂಕಿಗೆ ಸೇರಿಸುವ ಹುನ್ನಾರ ನಡೆಸಲಾಗಿದೆ. ಸ್ಥಳೀಯ ಕೆಲ ಜನಪ್ರತಿನಿಧಿಗಳು ಹಾಗೂ ಸ್ವಯಂ ಘೋಷಿತ ನಾಯಕರು ಹೋರಾಟ ಹತ್ತಿಕ್ಕಲು ಯತ್ನಿಸಿರುವುದು ನಾಚಿಕೆಗೇಡು ಎಂದರು.

ಮುಖಂಡ ದುರ್ಗಾದಾಸ ಯಾದವ ಮಾತನಾಡಿ, ಶಾಸಕ ಶಿವರಾಜ ತಂಗಡಗಿ ಅವರು ಪೂರ್ವಭಾವಿ ಸಭೆಯಲ್ಲಿ ಆಡಿದ ಮಾತಿಗೆ ತಕ್ಕಂತೆ ನಡೆಯಬೇಕು. ಕಾರಟಗಿ ಮತ್ತು ಕನಕಗಿರಿ ಮಧ್ಯೆ ತಾರತಮ್ಯ ನೀತಿ ಅನುಸರಿಸುವುದು ಕೈ ಬಿಡಬೇಕು ಎದು ಒತ್ತಾಯಿಸಿದರು.

ಎಪಿಎಂಸಿ ನಿರ್ದೇಶಕ ದೇವಪ್ಪ ತೋಳದ, ಪಿಕಾರ್ಡ್‌ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಮಾಜಿ ಅಧ್ಯಕ್ಷ ಡಾ. ಅರವಟಗಿಮಠ, ನಿರ್ದೇಶಕ ವಾಗೀಶ ಹಿರೇಮಠ, ಕನಕಗಿರಿ ನೂತನ ತಾಲ್ಲೂಕು ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸಜ್ಜನ್,  ರೈತ ಸಂಘಟನೆಯ ಬಸನಗೌಡ ಮಾತನಾಡಿದರು.

ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಶರಣಪ್ಪ ಭತ್ತದ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ ಸುಭಾಸ, ಮಂಜುನಾಥ ಮಾದಿನಾಳ, ಮುಖಂಡರಾದ ವಿರೂಪಾಕ್ಷಪ್ಪ ಭತ್ತದ, ಸಣ್ಣ ಕನಕಪ್ಪ, ಪ್ರಕಾಶ ಹಾದಿಮನಿ, ಗ್ಯಾನಪ್ಪ ಗಾಣದಾಳ, ವೀರೇಶ ಕಡಿ, ನಾಗೇಶ ಬಡಿಗೇರ, ಬಿ.ವಿ. ಜೋಶಿ ಇದ್ದರು.

ಹಿಂದಕ್ಕೆ ಸರಿದ ಕಾಂಗ್ರೆಸಿಗರು: ಶಾಸಕ ಶಿವರಾಜ ತಂಗಡಗಿ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೀರಲೂಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಉಪಾಧ್ಯಕ್ಷ ಮಂಜುನಾಥ ಗಡಾದ ಸೇರಿದಂತೆ ತಂಗಡಗಿ ಬೆಂಬಲಿಗರು, ಕಾಂಗ್ರೆಸ್ ಜನಪ್ರತಿನಿಧಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.

ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶಾಲಾ–ಕಾಲೇಜುಗಳು, ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿತ್ತು. ಪಟ್ಟಣದ ವರ್ತಕರು, ಅಂಗಡಿ–ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಾಹನಗಳ ಓಡಾಟ ಸ್ಥಗಿತವಾಗಿತ್ತು. ವಾರದ ಸಂತೆ ನಡೆಯಲಿಲ್ಲ. ಬಸ್ ನಿಲ್ದಾಣ, ವಿವಿಧ ವೃತ್ತಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಪ್ರತಿಭಟನೆಗೆ ಮಳೆರಾಯ ಬೆನ್ನತ್ತಿದ್ದರೂ ಜನಸಂದಣಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂತು.ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕ ದೀಪಕ ಭೂಸರೆಡ್ಡಿ , ಪಿಎಸ್ಐ ವೀರಭದ್ರಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋ ಬಸ್ತ್‌ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT