ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ, ದಾಖಲೆಗಳ ಸ್ಕ್ಯಾನಿಂಗ್‌ಗೆ ಹೊಸ ಆ್ಯಪ್‌ಗಳು

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಾಖಲೆ ಪತ್ರಗಳನ್ನು ಕಡತಗಳಲ್ಲಿ ಪೋಣಿಸಿಟ್ಟು ಆ ಕಡತಗಳನ್ನು ಸಾಲಾಗಿ ಅಥವಾ ಒಂದರ ಮೇಲೊಂದು ಪೇರಿಸಿ ಇಡುವ ಕಾಲ ಒಂದಿತ್ತು. ಈಗಲೂ ಕೆಲವು ಕಚೇರಿಗಳಲ್ಲಿ ಈ ರೀತಿಯ ಕಡತ ದಾಸ್ತಾನು ಕಾಣಬಹುದು. ಆದರೆ, ಕಂಪ್ಯೂಟರ್‌ ಕಾಲದಲ್ಲಿ ದಾಖಲೆಗಳನ್ನು ಕಾಗದದಲ್ಲಿ ಸಂಗ್ರಹಿಸಿಡುವ ಪರಿಪಾಠ ಸಾಕಷ್ಟು ಕಡಿಮೆಯಾಗಿದೆ. ಅದರಲ್ಲೂ ದಾಖಲೆಗಳ ಡಿಜಿಟಲೀಕರಣ ರೂಢಿಯಾಗಿರುವ ಕಚೇರಿಗಳಲ್ಲಿ ಕಡತಗಳು ಕರಗುತ್ತಿವೆ!

ದಾಖಲೆ ಪತ್ರ ಅಥವಾ ಫೋಟೊಗಳನ್ನು ಸ್ಕ್ಯಾನಿಂಗ್‌ ಮಾಡಲು ಸ್ಕ್ಯಾನರ್‌ ಬಳಸುವುದು ಹಿಂದೆಲ್ಲಾ ಸಾಮಾನ್ಯವಾಗಿತ್ತು. ಆದರೆ, ಹೀಗೆ ಸ್ಕ್ಯಾನ್‌ ಮಾಡಲು ಈಗ ಸ್ಕ್ಯಾನರ್‌ಗಳೇ ಬೇಕೆಂದೇನಿಲ್ಲ. ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ನಿಮ್ಮ ಸ್ಮಾರ್ಟ್‌ಫೋನ್‌ ಸ್ಕ್ಯಾನರ್‌ ನ ಕೆಲಸ ಮಾಡಬಲ್ಲದು. ಸ್ಕ್ಯಾನಿಂಗ್‌ಗಾಗಿಯೇ ಸಾಕಷ್ಟು ಆ್ಯಪ್‌ಗಳು ಈಗ ಲಭ್ಯವಿವೆ.

ಈ ಆ್ಯಪ್‌ಗಳು ಸ್ಕ್ಯಾನರ್‌ನಷ್ಟು ಗುಣಮಟ್ಟದಲ್ಲಿಸ್ಕ್ಯಾನ್‌ ಮಾಡದಿದ್ದರೂ ಇವುಗಳಿಂದಾಗುವ ಪ್ರಯೋಜನ ಕಳಪೆಯೇನೂ ಅಲ್ಲ.ದಾಖಲೆ ಅಥವಾ ಹಾರ್ಡ್‌ಕಾಪಿಯಲ್ಲಿರುವ ಫೋಟೊಗಳನ್ನು ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿ ಅವನ್ನು ಇಮೇಜ್‌ ಫಾರ್ಮಾಟ್‌ನಲ್ಲಿ ಉಳಿಸಿಕೊಳ್ಳುವುದು ಹಳೆಯ ವಿಧಾನ. ಈಗ ಸ್ಕ್ಯಾನಿಂಗ್‌ ಆ್ಯಪ್‌ಗಳಲ್ಲಿ ಸುಧಾರಣೆಯಾಗಿರುವುದರಿಂದ ಈ ಆ್ಯಪ್‌ಗಳು ನಿಮ್ಮ ಕೆಲಸವನ್ನು ಸಾಕಷ್ಟು ಸಲೀಸು ಮಾಡುತ್ತವೆ.

ದಾಖಲೆಗಳನ್ನು ಸ್ಕ್ಯಾನ್‌ ಮಾಡುವ ವೇಳೆ ಅವುಗಳ ತುದಿಯ ಅಳತೆಗೆ ಅನುಗುಣವಾಗಿ ಆಟೊ ಕ್ರಾಪ್‌ ಮಾಡುವುದು, ಮುದ್ರಣಕ್ಕೆ ಅಗತ್ಯವಾದ ಪುಟ ವಿನ್ಯಾಸದ ದಾಖಲೆಗಳನ್ನು ಎ4 ಅಳತೆಯಲ್ಲಿ ಸ್ಕ್ಯಾನ್‌ ಮಾಡುವುದು, ಮೂಲ ದಾಖಲೆಯಲ್ಲಿನ ಅಕ್ಷರಗಳನ್ನು ಎದ್ದು ಕಾಣುವಂತೆ ಮಾಡುವುದು ಸ್ಕ್ಯಾನಿಂಗ್‌ ಆ್ಯಪ್‌ಗಳ ಮೂಲಕ ಸಾಧ್ಯ. ಪುಟ ವಿನ್ಯಾಸ, ಬಣ್ಣದ ಹೊಂದಾಣಿಕೆ (ಕಲರ್‌ ಕರೆಕ್ಷನ್‌), ಬ್ರೈಟ್‌ ನೆಸ್‌ –ಇವುಗಳನ್ನು ಆಟೊ ಆಗಿ ತೆಗೆದುಕೊಳ್ಳುವಷ್ಟು ಈ ಆ್ಯಪ್‌ಗಳು ಮುಂದುವರಿದಿವೆ.

ಉಚಿತವಾಗಿ ಲಭ್ಯವಿರುವ ಸ್ಕ್ಯಾನಿಂಗ್‌ ಆ್ಯಪ್‌ಗಳ ಪೈಕಿ ‘ಗೂಗಲ್‌ ಫೋಟೊಸ್ಕ್ಯಾನ್‌’ ಆ್ಯಪ್‌ ಸಾಕಷ್ಟು ಸುಧಾರಿಸಿರುವಂಥದ್ದು. ಆಂಡ್ರಾಯ್ಡ್‌ ಮತ್ತು ಐಒಎಸ್‌ ಗ್ಯಾಜೆಟ್‌ಗಳಿಗೆ ಪ್ರತ್ಯೇಕವಾಗಿ ಈ ಆ್ಯಪ್‌ ಸಿದ್ಧಪಡಿಸಲಾಗಿದೆ. ಮೂಲ ದಾಖಲೆ, ಫೋಟೊಗಳ ಕೆಲವು ಅಂಕುಡೊಂಕುಗಳನ್ನು ಈ ಆ್ಯಪ್‌ ತಿದ್ದುತ್ತದೆ. ಸ್ಕ್ಯಾನ್‌ ಆಗುವಾಗ ಮೂಲ ದಾಖಲೆ ಅಥವಾ ಫೋಟೊದಲ್ಲಿರುವ ಮಬ್ಬು, ಮಸುಕು ಬಣ್ಣ – ಇವನ್ನೆಲ್ಲಾ ಈ ಆ್ಯಪ್‌ ಸುಧಾರಿಸುತ್ತದೆ.

ಈ ಆ್ಯಪ್‌ ಮೂಲಕ ಸ್ಕ್ಯಾನ್‌ ಮಾಡಿದ ದಾಖಲೆ/ ಫೋಟೊಗಳನ್ನು ಗೂಗಲ್‌ ಫೋಟೊಸ್‌ಗೆ ಸೇವ್‌ ಮಾಡಿಕೊಳ್ಳುವುದು ಸುಲಭ. ಹೆಚ್ಚು ಜನ ಬಳಸುತ್ತಿರುವ ಮತ್ತೊಂದು ಸ್ಕ್ಯಾನಿಂಗ್‌ ಆ್ಯಪ್‌ ‘ಕ್ಯಾಮ್‌ ಸ್ಕ್ಯಾನರ್’‌. ಈ ಆ್ಯಪ್‌ ಕೂಡಾ ಸಾಕಷ್ಟು ಸುಧಾರಿತ ಲಕ್ಷಣಗಳನ್ನು ಹೊಂದಿದೆ. ಈ ಆ್ಯಪ್‌ ದಾಖಲೆಗಳ ಸ್ಕ್ಯಾನ್‌ಗೆ ಹೇಳಿ ಮಾಡಿಸಿದಂತಿದೆ. ‘ಫೋಟೊಮೈನ್‌’ ಆ್ಯಪ್‌ ನ ಉಚಿತ ವರ್ಷನ್‌ನಲ್ಲಿ ಸಾಕಷ್ಟು ಮಿತಿಗಳಿವೆ. ಆದರೆ, ಇದರ ಪ್ರೀಮಿಯಂ ವರ್ಷನ್‌ನಲ್ಲಿ ಒಂದೇ ಬಾರಿಗೆ ಹಲವು ದಾಖಲೆಗಳನ್ನು ಸ್ಕ್ಯಾನ್‌ ಮಾಡುವ ಆಯ್ಕೆ ಇದೆ. ಹಲವು ದಾಖಲೆಗಳ ಪುಟಗಳನ್ನು ಪ್ರತ್ಯೇಕಿಸುವ ಆಯ್ಕೆ ಈ ಆ್ಯಪ್‌ನಲ್ಲಿ ಉತ್ತಮವಾಗಿದೆ.

ನಿಮ್ಮಲ್ಲಿರುವ ಹಳೆಯ ದಾಖಲೆ ಪತ್ರಗಳು, ಹಳೆಯ ಆಲ್ಬಮ್‌ ನಲ್ಲಿರುವ ಫೋಟೊಗಳನ್ನು ಈ ಆ್ಯಪ್‌ಗಳನ್ನು ಬಳಸಿ ಸ್ಕ್ಯಾನ್‌ ಮಾಡಿ ಅವುಗಳಿಗೆ ಡಿಜಿಟಲ್‌ ರೂಪ ನೀಡಬಹುದು. ಈ ಆ್ಯಪ್‌ಗಳ ಮೂಲಕ ದಾಖಲೆ/ ಫೋಟೊಗಳನ್ನು ಇಮೇಜ್‌ ಫಾರ್ಮಾಟ್‌ ಅಥವಾ ಪಿಡಿಎಫ್‌ ಫಾರ್ಮಾಟ್‌ ನಲ್ಲಿ ಸೇವ್‌ ಮಾಡಿಕೊಳ್ಳಬಹುದು. ಹೀಗೆ ಸ್ಕ್ಯಾನ್‌ ಮಾಡಿದ ದಾಖಲೆ/ ಫೋಟೊಗಳನ್ನು ನಿಮ್ಮ ಡಿವೈಸ್ ನಲ್ಲಿ ಇಲ್ಲವೇ ಕ್ಲೌಡ್‌ ಡ್ರೈವ್‌ ನಲ್ಲಿ ಸೇವ್‌ ಮಾಡಿಕೊಳ್ಳಬಹುದು. ಹೀಗೆ ಡಿಜಿಟಲ್‌ ರೂಪ ಪಡೆದ ಫೈಲ್‌ಗಳು ಹಾರ್ಡ್‌ ಕಾಪಿಗಳಂತೆ ದಿನದಿಂದ ದಿನಕ್ಕೆ ಹಾಳಾಗುವ ಸಾಧ್ಯತೆಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT