ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಸಿಎಂ ಲಾಜಿಸ್ಟಿಕ್ಸ್‌ನ ಯಶೋಗಾಥೆ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಎಸ್ಸೆಸ್ಸೆಲ್ಸಿವರೆಗಿನ ಓದು ಮುಗಿಯುತ್ತಿದ್ದಂತೆ ಭೂಸೇನಾ ನಿಗಮದಲ್ಲಿ ಆಫೀಸ್‌ ಬಾಯ್‌ ಆಗಿ ಕೆಲಸ ಮಾಡಿದ್ದ, ಬೆಂಗಳೂರಿಗೆ ಸಂಪೂರ್ಣ ಅಪರಿಚಿತನಾಗಿದ್ದ ಕೊಡಗಿನ ಯುವಕನೊಬ್ಬ ಸೂಕ್ತ ಉದ್ಯೋಗ ಸಿಗದೆ ಕ್ಲೀನರ್‌ ಆಗಿ ಬದುಕು ಆರಂಭಿಸಿ ಕ್ರಮೇಣ ಡ್ರೈವರ್‌ನಾಗಿ, ಓಡಿಸುತ್ತಿದ್ದ ವಾಹನದ ಮಾಲೀಕನಾಗಿ ಸರಕು ಸಾಗಣೆ ವಹಿವಾಟಿನಲ್ಲಿ ಕ್ರಮೇಣ ಬೆಳೆಯುತ್ತ, ಎಲ್‌ಸಿಎಂ ಲಾಜಿಸ್ಟಿಕ್ಸ್‌ (LCM Logistics) ಸಂಸ್ಥೆ ಕಟ್ಟಿ ಬೆಳೆಸಿದ ಯಶಸ್ವಿ ಸ್ಟಾರ್ಟ್‌ಅಪ್‌ನ ಯಶೋಗಾಥೆಯ ವಿವರ ಇಲ್ಲಿದೆ.

2004ರಲ್ಲಿ ಅಕ್ಕನ ಒತ್ತಾಯದ ಮೇರೆಗೆ ಬೆಂಗಳೂರಿಗೆ ಬಂದಿದ್ದ ಸುಬ್ರಹ್ಮಣ್ಯ ಬಿ.ಟಿ ಅವರು ಆರು ತಿಂಗಳ ಕಾಲ ಗಾರ್ಮೆಂಟ್ಸ್‌ ಮತ್ತು ಟಯರ್‌ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಸರಿ ಹೋಗದೆ ಲಾರಿ ಕ್ಲೀನರ್‌ನಾಗಿ ಕ್ರಮೇಣ ಡ್ರೈವರ್‌ನಾಗಿ ಬದುಕು ಆರಂಭಿಸುತ್ತಾರೆ. ಒಂದೆರಡು ವರ್ಷಗಳಲ್ಲಿ ಸರಕು ಸಾಗಣೆ ವಹಿವಾಟಿನ ಎಲ್ಲ ಆಳ ಅಗಲವನ್ನು ಕರಗತ ಮಾಡಿಕೊಳ್ಳುತ್ತಾರೆ.

ಸ್ನೇಹಿತ ದಾಮೋದರನ್‌ ಅವರಿಂದ ಹಳೆ ವಾಹನವನ್ನು ಸಾಲ ಸಮೇತ ಖರೀದಿಸಿದ್ದೆ ಇವರ ಬದುಕಿಗೆ ತಿರುವು ಕೊಡುತ್ತದೆ. ಈ ವಹಿವಾಟಿನಲ್ಲಿಯೇ ಬದುಕು ಕಟ್ಟಿಕೊಳ್ಳಲು ದೃಢ ನಿಶ್ಚಯ ಮಾಡುತ್ತಾರೆ. ಕೆಲ ದಿನಗಳ ನಂತರ ಇನ್ನೊಂದು ವಾಹನ ಖರೀದಿಸುತ್ತಾರೆ. ಎರಡು ವಾಹನಗಳಿಂದಲೇ ಸರಕು ಸಾಗಣೆಯನ್ನು ದಕ್ಷತೆಯಿಂದ ನಿರ್ವಹಿಸುತ್ತ ಮುನ್ನಡೆದಿರುತ್ತಾರೆ.

2006ರಲ್ಲಿ ಬಿಗ್‌ ಬಜಾರ್‌ನ ಸರಕುಗಳನ್ನು ಸಾಗಿಸುವುದರ ಮೂಲಕ ಸುಬ್ರಹ್ಮಣ್ಯ ಅವರು ತಮ್ಮ ವಹಿವಾಟಿಗೆ ಚಾಲನೆ ನೀಡುತ್ತಾರೆ. ಆರಂಭದ ದಿನಗಳಲ್ಲಿ ಅಲ್ಲಿನ ಸಿಬ್ಬಂದಿ ನೀಡಿದ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ. ಆರಂಭದ ದಿನಗಳಲ್ಲಿ, ಸ್ವಂತಕ್ಕೆ ವಾಹನ ಓಡಿಸುವುದರ ಜತೆಗೆ ಇತರರ ವಾಹನಗಳಿಗೆ ದಲ್ಲಾಲಿಯಾಗಿ ಕೆಲಸ ಮಾಡುತ್ತ ಯಾರಿಗೆ ಬೇಕಿದ್ದರೂ, ಯಾವ ಹೊತ್ತಿನಲ್ಲಾದರೂ ಸರಕು ಸಾಗಣೆ ವಾಹನಗಳನ್ನು ಬಾಡಿಗೆಗೆ ಕೊಡಿಸುತ್ತಿದ್ದರು.

2006ರಿಂದ 2009ರವರೆಗೆ ವಹಿವಾಟಿನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಮೂರು ವರ್ಷಗಳ ಕಾಲ ದಿನದ ಬಹುತೇಕ ಸಮಯವನ್ನು ಸರಕು ಸಾಗಣೆ ವಹಿವಾಟಿಗೆ ಮೀಸಲಿಟ್ಟಿದ್ದರು. ಸ್ವತಃ ವಾಹನ ಓಡಿಸುವುದರ ಜತೆಗೆ, ಇತರ ಚಾಲಕರಿಗೆ ಸರಕು ಸಾಗಣೆಯ ಕೆಲಸ ಕೊಡಿಸುವ ದಲ್ಲಾಲಿ ಕೆಲಸವನ್ನೂ ಮಾಡುತ್ತಿದ್ದರು. ಪ್ರತಿ ವಾಹನದಿಂದ ರೂ 200 ಲಾಭ ಬರುತ್ತಿತ್ತು.

ವಹಿವಾಟಿನ ಸಂದರ್ಭದಲ್ಲಿ 2008ರಲ್ಲಿ ಇವರಿಗೆ ಐಎಲ್‌ಎಸ್‌ ಲಾಜಿಸ್ಟಿಕ್ಸ್‌ನ ಮ್ಯಾನೇಜರ್‌ ಸುಬ್ಬಯ್ಯ ಅವರು ಸಂಪರ್ಕಕ್ಕೆ ಬರುತ್ತಾರೆ. ಸುಬ್ಬಯ್ಯ ಅವರೂ ಕೊಡಗಿನವರು. ಸುಬ್ಬಯ್ಯ ಅವರು ಇವರನ್ನು ರಿಲಯನ್ಸ್‌ ಸಂಸ್ಥೆಗೆ ಪರಿಚಯಿಸಿ ಸರಕು ಸಾಗಿಸುವ ಗುತ್ತಿಗೆ ಕೊಡಿಸುತ್ತಾರೆ. ಆನಂತರ ಇಬ್ಬರೂ ಸೇರಿಕೊಂಡು ಈ ವಹಿವಾಟನ್ನು ಇನ್ನಷ್ಟು ವಿಸ್ತರಿಸುವ ನಿರ್ಧಾರಕ್ಕೆ ಬರುತ್ತಾರೆ. ಐಎಲ್‌ಎಸ್‌ ಬಾಗಿಲು ಹಾಕಿದ ನಂತರ ಸುಬ್ಬಯ್ಯ ಅವರು ಇವರ ಜತೆ ಪೂರ್ಣ ಪ್ರಮಾಣದಲ್ಲಿ ಜತೆಯಾಗುತ್ತಾರೆ.

ಇಬ್ಬರೂ ಸೇರಿಕೊಂಡು 2009ರಲ್ಲಿ ಲಕ್ಷ್ಮಿ ಕಾರ್ಗೊ ಮೂವರ್ಸ್ ಸಂಸ್ಥೆ ಸ್ಥಾಪಿಸುತ್ತಾರೆ. ವಹಿವಾಟು ಹೆಚ್ಚುತ್ತಿದ್ದಂತೆ ಸಂಸ್ಥೆಯ ಹೆಸರನ್ನು ‘ಎಲ್‌ಸಿಎಂ ಲಾಜಿಸ್ಟಿಕ್ಸ್’ ಎಂದು ಬದಲಿಸಿ ಮುನ್ನಡೆಯುತ್ತಾರೆ. ಇವರಿಬ್ಬರೂ ಆರಂಭದಲ್ಲಿ ರೂ 3.25 ಲಕ್ಷ ಬಂಡವಾಳ ತೊಡಗಿಸಿರುತ್ತಾರೆ.

2009ರಲ್ಲಿ ರಿಲಯನ್ಸ್‌ ಸಂಸ್ಥೆಯ ಗುತ್ತಿಗೆ ಸಿಕ್ಕ ನಂತರ ಇವರಿಬ್ಬರೂ ಸೇರಿಕೊಂಡು 10x10 ಅಳತೆಯ ಪುಟ್ಟ ಕಚೇರಿಯಲ್ಲಿ ಒಂದು ಮೇಜು ಒಂದು ಕಂಪ್ಯೂಟರ್‌ ಇಟ್ಟುಕೊಂಡು ಕೆಲಸ ಆರಂಭಿಸಿದರು. ಸುಬ್ರಹ್ಮಣ್ಯ ಅವರು ಬಿಲ್ಲಿಂಗ್‌ ನೋಡಿಕೊಳ್ಳುತ್ತಿದ್ದರೆ, ಸುಬ್ಬಯ್ಯ ಅವರು ಹಣಕಾಸು ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದರು.
2014ರಲ್ಲಿ ಮಹಾಲಕ್ಷ್ಮಿ ಲೇಔಟ್‌ಗೆ ಕಚೇರಿ ಸ್ಥಳಾಂತರಿಸುತ್ತಾರೆ. ಸಹಾಯಕಿಯೊಬ್ಬಳನ್ನು ನೇಮಿಸಿಕೊಳ್ಳುತ್ತಾರೆ. ಈಗ ಕಚೇರಿ ಸಿಬ್ಬಂದಿ ಸಂಖ್ಯೆ 66ಕ್ಕೆ ಏರಿದೆ. ಚಾಲಕ, ಸರಕು ವಿತರಣೆ ಮತ್ತು ಗೋದಾಮುಗಳ ನಿರ್ವಹಣೆ ಸಿಬ್ಬಂದಿ ಸಂಖ್ಯೆ 380ಕ್ಕೆ ತಲುಪಿದೆ.

ಎಂಆರ್‌ಸಿ ಗ್ರೂಪ್‌ನ ಉಪಾಧ್ಯಕ್ಷರಾಗಿದ್ದ ಎಸ್‌. ಕುಮಾರ್‌ 2015ರಲ್ಲಿ ಇವರ ಜತೆ ಸೇರಿಕೊಂಡಿದ್ದರಿಂದ ದೇಶದ ಇತರ ನಗರಗಳಿಗೂ ವಹಿವಾಟು ವಿಸ್ತರಣೆಯಾಯಿತು. ಉದ್ದಿಮೆ ವಲಯದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಉಮೇದಿನ ಎಸ್‌. ಕುಮಾರ್‌, ಎಲ್‌ಸಿಎಂ ಲಾಜಿಸ್ಟಿಕ್ಸ್‌ನ ನಿರ್ದೇಶಕರಲ್ಲಿ ಒಬ್ಬರಾಗಿ ಸೇರ್ಪಡೆಯಾಗುತ್ತಾರೆ. ಅವರು ಈ ಹಿಂದೆ ಕೆಲಸ ಮಾಡಿದ್ದ ಸಂಸ್ಥೆಯಲ್ಲಿನ ಅನುಭವವು ಸಂಸ್ಥೆಯ ವಹಿವಾಟನ್ನು ಬೆಂಗಳೂರಿನ ಆಚೆಗೂ ವಿಸ್ತರಿಸಲು ನೆರವಾಗುತ್ತದೆ.

ಈ ಎಲ್‌ಸಿಎಂ ಲಾಜಿಸ್ಟಿಕ್ಸ್‌, ಈಗ ಅತ್ಯಂತ ತ್ವರಿತವಾಗಿ ವಹಿವಾಟು ವಿಸ್ತರಿಸುತ್ತಿರುವ ಸರಕು ಸಾಗಣೆ ಸಂಸ್ಥೆಯಾಗಿ ಬೆಳೆಯುತ್ತಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಭಾಗದಲ್ಲಿ ಮನೆ ಮನೆಗೆ ಸರಕು ಪೂರೈಸುವ (Last Mile Delivery–LMD) ಪ್ರಮುಖ ಸಂಸ್ಥೆಯಾಗಿ ಗಮನ ಸೆಳೆಯುತ್ತಿದೆ.

2012 ರಿಂದ ರಿಲಯನ್ಸ್‌ ಡಿಜಿಟಲ್‌ನ ಸರಕುಗಳನ್ನು ಇಡೀ ರಾಜ್ಯಕ್ಕೆ ಇವರೇ ಪೂರೈಸುತ್ತಿದ್ದಾರೆ, ಸದ್ಯಕ್ಕೆ ಸಂಸ್ಥೆಯ ವಹಿವಾಟು ಬೆಂಗಳೂರು ಮತ್ತು ಕರ್ನಾಟಕದ ಆಚೆಗೂ ವಿಸ್ತರಿಸಿದೆ. ಬರೋಡಾ, ಪುಣೆ, ಚೆನ್ನೈ, ಕೊಯಿಮತ್ತೂರುಗಳಲ್ಲಿಯೂ ಸಂಸ್ಥೆಯು ತನ್ನ ಕಚೇರಿಗಳನ್ನು ಆರಂಭಿಸಿದೆ. ಸಂಸ್ಥೆಯ ವಹಿವಾಟಿನಲ್ಲಿ ರಿಲಯನ್ಸ್‌ ಸಂಸ್ಥೆಯ ವಹಿವಾಟು ಶೇ 80ರಷ್ಟಿದೆ.

ಸುಬ್ರಹ್ಮಣ್ಯ ಅವರು 2012ರಲ್ಲಿ ಎರಡು ಹೊಸ ಟಾಟಾ ಏಸ್‌ ವಾಹನಗಳ ಮಾಲೀಕರಾಗುತ್ತಾರೆ. ಅಲ್ಲಿಯವರೆಗೆ ಅವರ ಬಳಿ ಹಳೆಯ ಎರಡು ವಾಹನಗಳು ಮಾತ್ರ ಇದ್ದವು. 2013ರಲ್ಲಿ ಸ್ವಂತ ವಾಹನಗಳ ಸಂಖ್ಯೆ 6ಕ್ಕೆ ಏರುತ್ತದೆ. 2016ರಲ್ಲಿ 68 ವಾಹನಗಳನ್ನು ಖರೀದಿಸಿದ್ದಾರೆ. ಸದ್ಯಕ್ಕೆ ಸಂಸ್ಥೆಯ ಬಳಿ ಇರುವ ಸ್ವಂತ ವಾಹನಗಳ ಸಂಖ್ಯೆ 128. 400ಕ್ಕೂ ಹೆಚ್ಚು ಚಾಲಕ – ಮಾಲೀಕರು ಇವರ ವಹಿವಾಟಿನ ಭಾಗವಾಗಿದ್ದಾರೆ.

ಒಮ್ಮೊಮ್ಮೆ ವಾಹನಕ್ಕೆ ಡೀಸೆಲ್‌ ಹಾಕಲೂ ಇವರ ಬಳಿ ಹಣ ಇರುತ್ತಿರಲಿಲ್ಲ. ಈಗಲೂ ವಹಿವಾಟು ವಿಸ್ತರಣೆಗೆ ವಿಪುಲ ಅವಕಾಶಗಳು ಇವೆ. ಆದರೆ, ಅಗತ್ಯವಾದ ಸಂಪನ್ಮೂಲದ ಕೊರತೆ ಇದೆ. ರೂ 15 ಕೋಟಿಗಳಷ್ಟು ಬ್ಯಾಂಕ್‌ ಸಾಲ ಪಡೆದು ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಹೊರಟಿದ್ದಾರೆ.

‘ವಹಿವಾಟಿಗೆ ಹಾಕಿದ್ದ ದುಡ್ಡಿನ ಜತೆ ಸ್ನೇಹಿತರ ಬಳಿ ಪಡೆದ ಕೈಗಡ ಮತ್ತು ತುರ್ತಾಗಿ ಹಣದ ಕೊರತೆ ಎದುರಾದಾಗ ದುಬಾರಿ ಬಡ್ಡಿಗೆ ಸಾಲ ತಂದ ನಿದರ್ಶನಗಳೂ ಇವೆ’ ಎಂದು ಸುಬ್ರಹ್ಮಣ್ಯ ಹೇಳುತ್ತಾರೆ.

ಸದ್ಯಕ್ಕೆ ರೂ 75 ಕೋಟಿಗಳ ವಹಿವಾಟಿ ಗುರಿ ಹಾಕಿಕೊಂಡು ಮುನ್ನಡೆದಿದ್ದಾರೆ. 2019–20ರಲ್ಲಿ ರೂ 100 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ತಲುಪಬೇಕು ಎನ್ನುವುದು ಇವರ ಮನದಿಂಗಿತವಾಗಿದೆ.

‘ದುಡಿಯುವ ಬಂಡವಾಳ ಕಡಿಮೆ ಇರುವುದರಿಂದ ಕೈಕಟ್ಟಿ ಹಾಕಿದಂತಾಗಿದೆ. ಆದರೂ ಐದು ವರ್ಷಗಳಲ್ಲಿ ವಹಿವಾಟನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು’ ಎಂದು ಹುಮ್ಮಸ್ಸಿನಿಂದ ಹೇಳುತ್ತಾರೆ.

ಉದ್ದಿಮೆ ವಹಿವಾಟಿನ ಪೂರ್ವಾಪರ ಏನೂ ಇಲ್ಲದ, ಬೆಂಗಳೂರು ಮತ್ತು ರಾಜಧಾನಿಗೆ ಬರುವ ದಾರಿಯೂ ಗೊತ್ತಿಲ್ಲದ, ಕೈಯಲ್ಲಿ ಕಾಸೂ ಇಲ್ಲದ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದ ಸುಹ್ರಹ್ಮಣ್ಯ ಅವರು ಕಷ್ಟಪಟ್ಟು ಈ ಎತ್ತರಕ್ಕೆ ತಲುಪಿದ್ದಾರೆ.

ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಬೇಕು. ಸ್ವಂತ ಕಾಲ ಮೇಲೆ ನಿಲ್ಲಬೇಕು. ಇತರರಿಗೆ ಉದ್ಯೋಗ ಕೊಡುವಂತಹ ವಹಿವಾಟನ್ನು ಕಟ್ಟಿ ಬೆಳೆಸಬೇಕು ಎನ್ನುವ ಮಹದಾಸೆಯಿಂದಲೇ ಅವರು ಎಲ್‌ಸಿಎಂ ಲಾಜಿಸ್ಟಿಕ್ಸ್‌ನ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ರಿಲಯನ್ಸ್‌ ಮತ್ತು ಟಾಟಾ ಮೋಟಾರ್ಸ್‌ ಸಂಸ್ಥೆಗಳು ಬೆಂಬಲಕ್ಕೆ ನಿಂತಿರುವುದನ್ನೂ ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

‘ಯಾವುದೇ ಉದ್ದಿಮೆಯ ಯಶಸ್ಸಿಗೆ ಮೂರು ಮೂಲ ಮಂತ್ರಗಳಾದ ದಕ್ಷ ನಿರ್ವಹಣೆ, ಹಣಕಾಸು ಸೌಲಭ್ಯ ಮತ್ತು ಕಾರ್ಯಾಚರಣೆ ಮಹತ್ವದ ಪಾತ್ರ ನಿರ್ವಹಿಸುತ್ತವೆ. ವಹಿವಾಟಿನ ಯಶಸ್ಸನ್ನು ನನಗೆ ಬದುಕೇ ಕಲಿಸಿಕೊಟ್ಟಿದೆ’ ಎಂದು ಸುಬ್ರಹ್ಮಣ್ಯ ಹೇಳುತ್ತಾರೆ.

ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಚಾಲಕರೇ ಈಗ ತಮ್ಮ ವಾಹನಗಳ ಸ್ವಂತ ಮಾಲೀಕರಾಗಿದ್ದಾರೆ. ಸಂಸ್ಥೆಗೆ ಸೇರಿದ ವಾಹನಗಳ ನಿರ್ವಹಣೆ ಮತ್ತು ದುರಸ್ತಿ ಬಗ್ಗೆಯೂ ಸುಬ್ರಹ್ಮಣ್ಯ ಅವರಿಗೆ ಪರಿಣತಿ ಇದೆ. ಹೊಸ ವಾಹನಗಳ ಚಾಲನೆ ಮತ್ತು ನಿರ್ವಹಣೆ ಬಗ್ಗೆ ಟಾಟಾ ಮೋಟಾರ್ಸ್‌ ತರಬೇತಿ ನೀಡುತ್ತದೆ. ಸೂಪರ್‌ವೈಸರ್‌ ಮತ್ತು ಚಾಲಕರಿಗೂ ಇವರು ವಾಹನಗಳ ನಿರ್ವಹಣೆ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ.

2030ರಷ್ಟೊತ್ತಿಗೆ ರೂ 1000 ಕೋಟಿಗಳಷ್ಟು ವಹಿವಾಟು ನಡೆಸಬೇಕು ಎನ್ನುವುದು ಈ ಮೂವರೂ ನಿರ್ದೇಶಕರ ಕನಸಾಗಿದೆ. ಆ ನಿಟ್ಟಿನಲ್ಲಿ ಈ ಮೂವರೂ ನವೋದ್ಯಮಿಗಳು ದೃಢ ಹೆಜ್ಜೆ ಇಡುತ್ತಿದ್ದಾರೆ. ಬಿಸಿನೆಸ್ ವಿಸ್ತರಿಸಲು ಸಾಕಷ್ಟು ಅವಕಾಶ ಇದೆ. ಆದರೆ, ಬಂಡವಾಳದ ಕೊರತೆ ಇದೆ ಎಂದು ಅವರು ಹೇಳುತ್ತಾರೆ.

ಪ್ರಮುಖ ಸಂಸ್ಥೆಗಳ ಗೋದಾಮುಗಳ ನಿರ್ವಹಣೆಯನ್ನೂ ಸಂಸ್ಥೆ ನಿರ್ವಹಿಸುತ್ತಿದೆ. ಗೋದಾಮು ನಿರ್ವಹಣೆಯ ಗುತ್ತಿಗೆ ಪಡೆದುಕೊಂಡು ಸಿಬ್ಬಂದಿಯನ್ನು ಒದಗಿಸುವ ಕೆಲಸವನ್ನೂ ಎಲ್‌ಸಿಎಂ ಲಾಜಿಸ್ಟಿಕ್ಸ್‌ ನಿರ್ವಹಿಸುತ್ತಿದೆ.

ಬರೋಡಾದಲ್ಲಿ ಸಿದ್ಧ ಉಡುಪು ತಯಾರಿಸುವ ಯಂತ್ರೋಪಕರಣಗಳನ್ನು ಜೋಡಿಸುವ, ಪ್ಯಾಕಿಂಗ್‌ ಮಾಡುವ ಗುತ್ತಿಗೆಯನ್ನೂ ಸಂಸ್ಥೆ ಪಡೆದುಕೊಂಡಿದೆ. ಕೆಎಂಎಫ್‌ ಹಾಲಿನ ಪ್ಯಾಕೆಟ್‌ಗಳ ವಿತರಣೆ ಹೊಣೆಯನ್ನೂ ಸಂಸ್ಥೆ ಹೊತ್ತುಕೊಂಡಿದೆ.

ಅಕ್ಷಯ ಪಾತ್ರೆ ಯೋಜನೆಯಲ್ಲಿ ಬಳಕೆಯಾಗುವ ವಾಹನಗಳಿಗೆ, ಡ್ರೈವರ್‌ಗಳನ್ನು ಸಂಸ್ಥೆಯೇ ಪೂರೈಸುತ್ತಿದೆ. ಪಾಲಿಕೆಯ ಸಿಬ್ಬಂದಿಗೆ ಆಹಾರ ಪೂರೈಸುವ ‘ಅಕ್ಷಯ ನಿಧಿ’ಗೂ ಸಂಸ್ಥೆ ವಾಹನಗಳನ್ನು ಒದಗಿಸುತ್ತಿದೆ.

‘ಹೊಸ ವಾಹನಗಳ ಖರೀದಿಗೆ ಟಾಟಾ ಮೋಟಾರ್ಸ್‌ನಿಂದ ತಮ್ಮ ಸಂಸ್ಥೆಗೆ ಹೆಚ್ಚಿನ ಪ್ರಯೋಜನವಾಗಿದೆ’ ಎಂದು ಸುಬ್ರಹ್ಮಣ್ಯ ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ‘ಟಾಟಾ ಫೈನಾನ್ಸ್‌ನಿಂದ ಕೆಲವೊಮ್ಮೆ ಶೇ 100ವರೆಗೆ ಸಾಲ ಸೌಲಭ್ಯ ಸಿಕ್ಕಿದೆ’ ಎಂದೂ ಹೇಳುತ್ತಾರೆ.

‘ವಹಿವಾಟು ವಿಸ್ತರಿಸಲು, ಹೆಚ್ಚೆಚ್ಚು ವಾಹನಗಳನ್ನು ಸೇರ್ಪಡೆ ಮಾಡಲು ಕ್ರಮವಾಗಿ ರಿಲಯನ್ಸ್‌ ಮತ್ತು ಟಾಟಾ ಮೋಟಾರ್ಸ್‌ನಿಂದ ಗರಿಷ್ಠ ಪ್ರಮಾಣದಲ್ಲಿ ನೆರವು ದೊರೆತಿದೆ. ಇ–ಕಾಮರ್ಸ್‌ನಿಂದ ವಹಿವಾಟು ಗಮನಾರ್ಹವಾಗಿ ಬೆಳೆದಿದೆ. ಟಾಟಾ ಏಸ್‌ನಿಂದಾಗಿಯೇ ಮನೆ ಮನೆಗೆ ಸುಲಭವಾಗಿ ಸರಕು ವಿತರಣೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಹೇಳುತ್ತಾರೆ.

ಸುಬ್ರಹ್ಮಣ್ಯ ಮತ್ತು ಸುಬ್ಬಯ್ಯ ಅವರು ವಹಿವಾಟಿನಿಂದ ಬರುತ್ತಿದ್ದ ದುಡ್ಡನ್ನು ವಹಿವಾಟು ವಿಸ್ತರಿಸಲಿಕ್ಕೇನೆ ಮುಡುಪಾಗಿಡುತ್ತಿದ್ದರು. ಇದೇ ಕಾರಣಕ್ಕೆ ವಹಿವಾಟು ಅತ್ಯಲ್ಪ ಅವಧಿಯಲ್ಲಿ ಗಣನೀಯವಾಗಿ ಬೆಳವಣಿಗೆ ಕಂಡಿದೆ.

ಆರಂಭದಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸಕ್ಕೆ ಇದ್ದ ಸುಬ್ಬಯ್ಯ ಅವರು ಐಎಲ್‌ಎಸ್‌ನಲ್ಲಿ ಸೂಪರ್‌ವೈಸರ್ ಆಗಿದ್ದರು ಆನಂತರ ಮ್ಯಾನೇಜರ್‌ ಆಗಿ ಬಡ್ತಿ ಪಡೆದಿದ್ದರು. ಸಂಸ್ಥೆಯು 2009ರಲ್ಲಿ ಬಾಗಿಲು ಹಾಕುವವರೆಗೆ ಅಲ್ಲಿಯೇ ಇದ್ದರು. ಆನಂತರ ಸುಬ್ರಹ್ಮಣ್ಯ ಜತೆ ಸೇರಿಕೊಂಡಿದ್ದರು.

'ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು. ಉದ್ಯಮಿಯಾಗಬೇಕು ಎನ್ನುವ ಹಂಬಲ ಇತ್ತು. ದುಡ್ಡು ಮಾಡಬೇಕು ಎನ್ನುವುದು ನನಗೆ ಮುಖ್ಯವಾಗಿಲ್ಲ. ಉದ್ಯಮ ಕಟ್ಟಿ ಬೆಳೆಸುವ ಕನಸು ನನಸಾಗಿಸುವ ಹಾದಿಯಲ್ಲಿ ಅನೇಕರು ನೆರವಾಗಿದ್ದಾರೆ’ ಎಂದೂ ಸುಬ್ರಹ್ಮಣ್ಯ ಅವರು ತಮಗೆ ನೆರವಾದವರನ್ನು ಸ್ಮರಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT