ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಇಂಟರ್‌ನೆಟ್‌ ಬಳಕೆ: ಪಾಲಕರ ಕೈಯಲ್ಲಿ ರಿಮೋಟ್‌

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಕ್ಕಳು ಎಷ್ಟನೇ ವಯಸ್ಸಿನಿಂದ ಮುಕ್ತವಾಗಿ ಸ್ಮಾರ್ಟ್‌ಫೋನ್‌ ಬಳಸಬಹುದು ಅಥವಾ ಅನಿರ್ಬಂಧಿತವಾಗಿ ಸ್ಮಾರ್ಟ್‌ಫೋನ್‌,ಇಂಟರ್‌ನೆಟ್‌ ಬಳಸಲು ಯಾವ ವಯಸ್ಸು ಸೂಕ್ತ ಎನ್ನುವುದಕ್ಕೆ ಸಂಬಂಧಿಸಿದಂತೆ ಪಾಲಕರಲ್ಲೇ ಭಿನ್ನಾಭಿಪ್ರಾಯಗಳಿವೆ. ಆದರೆ, ಇತ್ತೀಚೆಗೆ ಫ್ಯಾಮಿಲಿ ಲಿಂಕ್‌ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಿರುವ ಗೂಗಲ್‌ ಕಂಪೆನಿಯು, ಮಕ್ಕಳು ಪಾಲಕರ ನಿಗಾ ವ್ಯವಸ್ಥೆಯಲ್ಲಿ 13ನೇ ವಯಸ್ಸಿನಿಂದ ಸ್ವತಂತ್ರವಾಗಿ ಇಂಟರ್‌ನೆಟ್‌ ಬಳಸಬಹುದು ಎಂದಿದೆ.

ಈಗಾಗಲೇ ಮಕ್ಕಳ ಇಂಟರ್‌ನೆಟ್‌ ಬಳಕೆಯ ಮೇಲೆ, ಪಾಲಕರು ನಿಗಾ ವಹಿಸಲು ಹಲವು ಅಪ್ಲಿಕೇಷನ್ಸ್‌ಗಳು ಅಭಿವೃದ್ಧಿಯಾಗಿವೆ. ಫ್ಯಾಮಿಲಿ ಲಿಂಕ್‌ ಸ್ವಲ್ಪ ಸುಧಾರಿತ ತಂತ್ರಜ್ಞಾನ. ಮಕ್ಕಳು ಆಂಡ್ರಾಯ್ಡ್‌ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಯಾವುದೇ ಡಿವೈಸ್‌ಗಳ ಮೂಲಕ ಇಂಟರ್‌ನೆಟ್‌ ಪ್ರವೇಶಿಸುವುದರ ಮೇಲೆ ಇದು ನಿಗಾ ವಹಿಸುತ್ತದೆ. ಅಂದರೆ ಅಂತರ್ಜಾಲದಲ್ಲಿ ಮಕ್ಕಳ ಪ್ರತಿ ಹೆಜ್ಜೆಗುರುತುಗಳೂ ತಂತ್ರಾಂಶದಲ್ಲಿ ದಾಖಲಾಗುತ್ತವೆ. ಮಕ್ಕಳು ಇಂಟರ್‌ನೆಟ್‌ ಬಳಸುವುದನ್ನು ಈ ತಂತ್ರಾಂಶ ತಡೆಯುವುದಿಲ್ಲ. ಬದಲಿಗೆ, ಅವರಿಗೆ ಏನು ಬೇಕು, ಏನು ಬೇಡ ಎನ್ನುವುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಪಾಲಕರಿಗೆ ಕೊಡುತ್ತದೆ. ಮಕ್ಕಳು ಅಂತರ್ಜಾಲದಲ್ಲಿ ಏನು ಮಾಡುತ್ತಿದ್ದಾರೆ, ಏನು ನೋಡುತ್ತಿದ್ದಾರೆ ಎನ್ನುವುದನ್ನು ಪಾಲಕರು ತಮ್ಮ ಮೊಬೈಲ್‌ ಮೂಲಕವೇ, ತಾವಿರುವ ಸ್ಥಳದಿಂದಲೇ ನೋಡಬಹುದು, ತಕ್ಷಣ ಅದನ್ನು ಸ್ಥಗಿತಗೊಳಿಸಬಹುದು.

ಫ್ಯಾಮಿಲಿ ಲಿಂಕ್‌ ತಂತ್ರಾಂಶ ಜಾಲದಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಬೇಕಾದರೆ ಮಕ್ಕಳಿಗೆ ಕನಿಷ್ಠ 13 ವರ್ಷ ಆಗಿರಬೇಕು. ಮಕ್ಕಳ ಆನ್‌ಲೈನ್‌ ಖಾಸಗೀತನ ರಕ್ಷಣೆ ಕಾಯ್ದೆ ಅನುಸಾರ 13 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಅಥವಾ ದತ್ತಾಂಶವನ್ನು ಪಾಲಕರ ಒಪ್ಪಿಗೆ ಇಲ್ಲದೆಯೇ ಸಂಗ್ರಹಿಸುವಂತಿಲ್ಲ. ಹೀಗಾಗಿ 13 ವಯಸ್ಸು ನಿಗದಿಪಡಿಸಿದೆ. ಆದರೆ, ಅಂತರ್ಜಾಲ ತಜ್ಞರ ಪ್ರಕಾರ ಮಕ್ಕಳು ಈ ವಯಸ್ಸಿಗಿಂತ ಮೊದಲೇ ಇಂಟರ್‌ನೆಟ್‌ ಸಂಪರ್ಕಕ್ಕೆ ಅದರಲ್ಲೂ ಸಾಮಾಜಿಕ ಜಾಲ ತಾಣಗಳ ಬಳಕೆ ಪ್ರಾರಂಭಿಸಿರುತ್ತಾರೆ.

‘ಅಶ್ಲೀಲ ತಾಣಗಳ ಗೀಳು ಹತ್ತಿಸಿಕೊಂಡಿರುವ 9 ವಯಸ್ಸಿನ ಬಾಲಕ, ಸಹಪಾಠಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 5ನೇ ತರಗತಿ ವಿದ್ಯಾರ್ಥಿ ಇತ್ಯಾದಿ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ ಹೀಗಾಗಿ ಈ ವಯಸ್ಸಿನ ಮಿತಿಯನ್ನು ಇನ್ನಷ್ಟು ತಗ್ಗಿಸಬೇಕಿತ್ತು’ ಎಂದು ಅಭಿಪ್ರಾಯಪಡುತ್ತಾರೆ ಇಂಟರ್‌ನೆಟ್‌ ಸುರಕ್ಷತಾ ತಜ್ಞೆ ವಿನ್‌ಬರ್ಗರ್‌.

13ನೇ ವಯಸ್ಸಿಗೆ ಅಂದರೆ ಪ್ರೌಢಶಾಲೆ ಹಂತದ ಮಕ್ಕಳು ಇಂಟರ್‌ನೆಟ್‌ ಬಳಕೆಯ ಒಳಿತು–ಕೆಡುಕುಗಳನ್ನು ನಿಧಾನವಾಗಿ ಕಲಿಯಲು ಪ್ರಾರಂಭಿಸುತ್ತಾರೆ ಈ ಹಂತದಲ್ಲೇ ನಿರ್ಬಂಧ, ನಿಯಂತ್ರಣ ಅಗತ್ಯವಿರುವುದು ಎನ್ನುವುದು ಕೆಲವು ಪಾಲಕರ ವಾದ. ಫ್ಯಾಮಿಲಿ ಲಿಂಕ್‌ ತಂತ್ರಾಂಶ ಉಚಿತ. ಪಾಲಕರಿಗೆ ನಿಗಾ ವಹಿಸಲು ಹಲವು ಸೌಲಭ್ಯಗಳನ್ನು ಇದರಲ್ಲಿ ಕಲ್ಪಿಸಲಾಗಿದೆ. ಉದಾಹರಣೆಗೆ ಮಕ್ಕಳು ಮೊಬೈಲ್‌ನಲ್ಲಿ ಆನ್‌ಲೈನ್‌ಗೇಮ್‌ ಆಡುತ್ತಿದ್ದರೆ ನಿಗದಿತ ಸಮಯದ ನಂತರ ಗೇಮ್‌ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಅಥವಾ ಪಾಲಕರೇ ಸ್ಥಗಿತಗೊಳಿಸಬಹುದು. ಮಕ್ಕಳು ಮಲಗುವ, ಮತ್ತು ಅಧ್ಯಯನ ಮಾಡುವ ವೇಳೆಯಲ್ಲಿ ಪಾಲಕರು, ಮಕ್ಕಳ ಬಳಿ ಇರುವ ಸ್ಮಾರ್ಟ್‌ಫೋನ್‌ ಸ್ವಿಚ್‌ಆಫ್‌ ಮಾಡಿ ಇಡಬಹುದು.

ಕಾರ್ಯನಿರ್ವಹಣೆ
ಈ ತಂತ್ರಾಂಶ ಇನ್ನೂ ಅಭಿವೃದ್ಧಿಯ ಹಂತದಲ್ಲೇ ಇದ್ದು, ‘ಆಹ್ವಾನ’ ಆಧಾರಿತ ಬಳಕೆಗೆ ಮಾತ್ರ ಲಭ್ಯವಿದೆ. https://families.google.com/familylink/) ಹೀಗಾಗಿ ತಂತ್ರಾಂಶ ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಸ್ವಲ್ಪ ಕಿರಿಕಿರಿ ಎನಿಸುತ್ತದೆ. ಗೂಗಲ್‌ ವೆಬ್‌ಪೇಜ್‌ನಿಂದ ಇದಕ್ಕೆ ಸಂಬಂಧಿಸಿದ ಇ–ಮೇಲ್‌ ಅಥವಾ ಸ್ಟಾಫ್ಟ್‌ವೇರ್‌ ಲಿಂಕ್‌ ಬಳಕೆದಾರನಿಗೆ ಬರಬೇಕು. ಆ ನಂತರವೇ ಆಂಡ್ರಾಯ್ಡ್‌ ಮತ್ತು ಐಫೋನ್‌ನಲ್ಲಿ ಇದನ್ನು ಅನುಸ್ಥಾಪಿಸಿಕೊಳ್ಳಬಹುದು.

ಈ ಅಪ್ಲಿಕೇಷನ್‌ ತೆರೆದು ಮಕ್ಕಳಿಗಾಗಿ ಗೂಗಲ್‌ ಅಕೌಂಟ್‌ ರಚಿಸಿಕೊಳ್ಳಬೇಕು. ಅಂದರೆ, ಅವರ ಹೆಸರು ಮತ್ತು ಜನ್ಮದಿನಾಂಕ ದಾಖಲಿಸಿ ಖಾತೆ ತೆರೆಯಬೇಕು. ಈ ಖಾತೆಯ ಕೊಂಡಿ ಮಕ್ಕಳ ಇ–ಮೇಲ್‌ಗೂ ರವಾನೆಯಾಗುತ್ತದೆ. ಮಕ್ಕಳು ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಲಾಗಿನ್ ಆದ ಕೂಡಲೇ, ಅದರ ಮಾಹಿತಿ ಪಾಲಕರ ಇ–ಮೇಲ್‌ಗೆ ಬರುತ್ತದೆ. ಒಮ್ಮೆ ಮಕ್ಕಳ ಹೆಸರನ್ನು ಈ ತಂತ್ರಾಂಶ ಜಾಲದಲ್ಲಿ ಸೇರ್ಪಡೆ ಮಾಡಿಕೊಂಡರೆ, ನಂತರ ಪಾಲಕರು ತಮ್ಮ ಬಳಿ ಇರುವ ಯಾವುದೇ ಆಂಡ್ರಾಯ್ಡ್‌ ಡಿವೈಸ್‌ ಮೂಲಕ ಲಾಗಿನ್‌ ಆಗಿ, ಮಗುವಿನ ಪ್ರೊಪೈಲ್‌ ಮೇಲೆ ಕ್ಲಿಕ್‌ ಮಾಡಿದರೆ, ಆತ, ಅಥವಾ ಆಕೆ ಇಂಟರ್‌ನೆಟ್‌ನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಈ ತಂತ್ರಾಂಶದ ಮೂಲಕ ಸದ್ಯ ಮಕ್ಕಳು ಎಲ್ಲಿದ್ದಾರೆ ಎನ್ನುವುದನ್ನೂ (ಲೊಕೇಶನ್‌) ಪತ್ತೆ ಹಚ್ಚಬಹುದು. ಇಂಟರ್‌ನೆಟ್‌ನಿಂದ ಯಾವುದಾದರೂ ಚಿತ್ರ, ವಿಡಿಯೊ ಡೌನ್‌ಲೋಡ್‌ ಮಾಡಲು ಪ್ರಯತ್ನಿಸಿದರೆ ಅದರ ಮಾಹಿತಿಯೂ ಪಾಲಕರ ಮೊಬೈಲ್‌ಗೆ ಬರುತ್ತದೆ. ಅನುಮತಿ ನೀಡಿದೆ ಮಾತ್ರ ಡೌನ್‌ಲೋಡ್‌ ಆಗುತ್ತದೆ.

ಮಕ್ಕಳು ನಿರ್ದಿಷ್ಟ ವೆಬ್‌ಸೈಟ್‌, ಅಪ್ಲಿಕೇಷನ್‌ ಅಥವಾ ಆನ್‌ಲೈನ್‌ ಗೇಮ್‌ನ ಗೀಳು ಹತ್ತಿಸಿಕೊಂಡಿದ್ದರೆ, ಅಂತಹ ವೆಬ್‌ ಸೈಟ್‌ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಆಯ್ಕೆ ಪಾಲಕರಿಗೆ ನೀಡಲಾಗಿದೆ. ಅಷ್ಟೇ ಅಲ್ಲ, ಈ ತಂತ್ರಾಂಶ ಬಳಸುತ್ತಿರುವ ಪಾಲಕರಿಗೆ, ಗೂಗಲ್‌ನಿಂದ ಪ್ರತಿ ವಾರ ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಸಂಬಂಧಿಸಿದ ಸಂಪೂರ್ಣ ವರದಿ ಬರುತ್ತದೆ. ಇದರಲ್ಲಿ ಮಗು ಯಾವ ವೆಬ್‌ಸೈಟ್ ಎಷ್ಟು ಬಾರಿ, ಎಷ್ಟು ಗಂಟೆಗಳ ಕಾಲ ಬಳಸಿದೆ, ಏನೇನು ನೋಡಿದೆ ಎಂಬಿತ್ಯಾದಿ ಮಾಹಿತಿಗಳಿರುತ್ತವೆ. ಈ ವರದಿ ಆಧರಿಸಿ ಮಕ್ಕಳ ಇಂಟರ್‌ನೆಟ್‌ ಬಳಕೆಯನ್ನು ತಾತ್ಕಾಲಿಕವಾಗಿ ತಡೆಯುವ ಅಥವಾ ಮಿತಿಗೊಳಿಸುವ ಆಯ್ಕೆ ಇರುತ್ತದೆ. ಮುಖ್ಯವಾಗಿ ಯಾವುದೇ ವೆಬ್‌ ತಾಣ ಪ್ರವೇಶಿಸುವ ಮುನ್ನ, ಮಕ್ಕಳು ಪಾಲಕರ ಅನುಮತಿ ಪಡೆದುಕೊಳ್ಳುವುದು ಫ್ಯಾಮಿಲಿ ಲಿಂಕ್‌ನಲ್ಲಿ ಕಡ್ಡಾಯ.

ಮಕ್ಕಳು ಮಲಗುವ, ಅಧ್ಯಯನ ಮಾಡುವ, ಶಾಲಾ ಅವಧಿ ಸಮಯವನ್ನು ಈ ಅಪ್ಲಿಕೇಷನ್ಸ್‌ನಲ್ಲಿ ದಾಖಲಿಸಿದರೆ ಆ ಅವಧಿಯಲ್ಲಿ ಇಂಟರ್‌ನೆಟ್‌ ಕಾರ್ಯ
ನಿರ್ವಹಿಸುವುದಿಲ್ಲ. ಉಳಿದಂತೆ ಮೊಬೈಲ್‌ನಲ್ಲಿ ಕರೆ ಮಾಡುವುದು, ಕರೆ ಸ್ವೀಕರಿಸುವುದು,ಎಸ್‌ಎಂಎಸ್‌ ಕಳುಹಿಸುವುದು ಇತ್ಯಾದಿ ಸೌಲಭ್ಯಗಳು ಮಾತ್ರ ಚಾಲನೆ
ಯಲ್ಲಿರುತ್ತವೆ. ‘ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳದ ಹೊರತು ಮಕ್ಕಳು ಸ್ಮಾರ್ಟ್‌ಫೋನ್‌ ಕೆಳಗಿಡುವುದಿಲ್ಲ. ಆರೋಗ್ಯಕರ, ಸುರಕ್ಷಿತ ಇಂಟರ್‌ನೆಟ್‌ ಬಳಕೆ ಕಲಿಸುವುದು ಈ ತಂತ್ರಾಂಶದ ಉದ್ದೇಶ’ ಎನ್ನುತ್ತಾರೆ ಗೂಗಲ್‌ನ ಫ್ಯಾಮಿಲಿ ಲಿಂಕ್‌ ತಂತ್ರಾಂಶದ ಮಾರುಕಟ್ಟೆ ವ್ಯವಸ್ಥಾಪಕ ಸೌರಭ್‌ ಶರ್ಮಾ.
ಪಾಲಕರು ಮಕ್ಕಳಿಗೆ ಇಂಟರ್‌ನೆಟ್‌ ಜಗತ್ತಿನ ಒಳಿತು–ಕೆಡುಕುಗಳನ್ನು ವಿವರಿಸುತ್ತಾ, ಅವರನ್ನು ಆರೋಗ್ಯಕರ ಅಂತರ್ಜಾಲ ಬಳಕೆದಾರರಾಗಿ ರೂಪಿಸುವುದು ಇದರ ಆಶಯ ಎನ್ನುತ್ತಾರೆ ಅವರು.

ಕಳೆದ ಮಾರ್ಚ್‌ನಲ್ಲೇ ಗೂಗಲ್‌ ಈ ತಂತ್ರಾಂಶವನ್ನು ಸಾರ್ವಜನಿಕರ ಪ್ರಾಯೋಗಿಕ ಬಳಕೆಗೆ ಮುಕ್ತಗೊಳಿಸಿತ್ತು. ಹಾಗೆ ನೋಡಿದರೆ, ಮಕ್ಕಳ ನೆಟ್‌ ಬಳಕೆಯ ಮೇಲೆ ನಿಗಾ ವಹಿಸಲು ಈ ತಂತ್ರಾಂಶಕ್ಕಿಂತಲೂ ಉತ್ತಮವಾದ ಆಂಡ್ರಾಯ್ಡ್‌ ಅಪ್ಲಿಕೇಷನ್ಸ್‌ಗಳು ಈಗಾಗಲೇ ಅಭಿವೃದ್ಧಿಗೊಂಡಿವೆ. ಹೊಸ ಐಫೋನ್‌ ಖರೀದಿಸುತ್ತಿದ್ದರೆ, ಅದರಲ್ಲೇ ಮಕ್ಕಳ ಮುಕ್ತ ಪ್ರವೇಶ ನಿರ್ಬಂಧಿಸುವ ತಂತ್ರಜ್ಞಾನವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT