ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹ: ಮನಸ್ಸಿಗೆ ಹಿಡಿದ ಗ್ರಹಣ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

*ಜೆಸ್ಸಿ. ಪಿ.ವಿ‌. ಪುತ್ತೂರು

ಮನುಷ್ಯರ ಮನಸ್ಸು ಒಬ್ಬರಿಂದ ಒಬ್ಬರಿಗೆ ಸಂಪೂರ್ಣ ಭಿನ್ನ. ಎಲ್ಲದ್ದರಲ್ಲೂ ಒಳ್ಳೆಯದನ್ನು ಕಾಣುವವರು ಮತ್ತು ಎಲ್ಲದ್ದರಲ್ಲೂ ಕೆಟ್ಟದ್ದನ್ನು ಕಾಣುವವರು ಎಂಬ ಎರಡು ಗುಂಪುಗಳಾಗಿ ಜನರನ್ನು ವಿಂಗಡಿಸಬಹುದು. ಕೆಟ್ಟದ್ದನ್ನು ಹುಡುಕುವ ಜನರು ಹೆಚ್ಚಾಗಿ ಪೂರ್ವಗ್ರಹ ಪೀಡಿತರಾಗಿರುತ್ತಾರೆ. ಇವರು ಯಾವುದಾದರೊಂದು ವ್ಯಕ್ತಿ, ವಸ್ತು, ಅಥವಾ ವಿಷಯವನ್ನು ನೋಡುವ ಮೊದಲೇ ಅದಕ್ಕೆ ಬೆಲೆಯನ್ನು ಕಟ್ಟಿ ಬಿಡುತ್ತಾರೆ. 'ಓ, ಅದಾ?’ ‘ಅವನಾ?..’ ಎಂದು ವ್ಯಂಗ್ಯವಾಗಿಯೋ ತಿರಸ್ಕಾರದಿಂದಲೋ ಉದ್ಗರಿಸುತ್ತಾರೆ. ಪೂರ್ವಗ್ರಹಪೀಡಿತರಿಗೆ ಎಲ್ಲದರ ಬಗ್ಗೆಯೂ ತಾತ್ಸಾರ, ಅತೃಪ್ತಿ, ಅಸಮಾಧಾನಗಳಿರುತ್ತವೆ. ಇವರು ಎಲ್ಲೆಡೆಯಲ್ಲೂ ಎಲ್ಲರಲ್ಲೂ ಕೊರತೆಯನ್ನೇ ಕಾಣುತ್ತಾರೆ. ಇಂತಹವರ ಜೀವನವೂ ಅಷ್ಟೇ. ಅತೃಪ್ತಿ, ಅಸಂತೋಷಗಳಿಂದ ತುಂಬಿರುತ್ತವೆ.

ಹೆಚ್ಚಾಗಿ ಒಬ್ಬ ವ್ಯಕ್ತಿ ಇನ್ನೊಬ್ಬರು ಯಾರೋ ಹೇಳಿದ ಉತ್ಪ್ರೇಕ್ಷಾಭರಿತ ಮಾತುಗಳಿಂದ ಒಂದು ವಿಷಯದ ಬಗ್ಗೆ ಪೂರ್ವಗ್ರಹಪೀಡಿತನಾಗುವ ಸಂಭವವೇ ಹೆಚ್ಚು. ಹೊಗಳುಭಟರ ಹೊಗಳಿಕೆಯನ್ನು ಕೇಳಿ ಸಕಾರಾತ್ಮಕ ಪೂರ್ವಗ್ರಹ ಉಂಟಾದರೆ, ಚಾಡಿಕೋರರ ಮಾತುಗಳಿಂದ ನಕಾರಾತ್ಮಕ ಪೂರ್ವಗ್ರಹ ಉಂಟಾಗುತ್ತದೆ. ಕೆಲವು ಮೇಲರಿಮೆ ಮನೋಭಾವದವರಿಗೆ ತಾವು ಸರ್ವಜ್ಞರು, ತಾವು ಮಾಡುವುದೆಲ್ಲಾ ಸರಿ – ಎಂಬ ತಪ್ಪುಕಲ್ಪನೆಯಿರುತ್ತದೆ. ಇವರು ಇತರರನ್ನು ನೋಡುವ ಮೊದಲೇ ಅವರು ಹೀಗೇಕೆ ವರ್ತಿಸುತ್ತಾರೆ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅವರ ಸಾಮರ್ಥ್ಯವನ್ನು ತಿಳಿಯುವ ಮೊದಲೇ ಅವರಿಗೆ ಬೆಲೆ ಕಟ್ಟುತ್ತಾರೆ. ತಮ್ಮ ಪೂರ್ವಗ್ರಹದ ಚೌಕಟ್ಟಿನೊಳಗೆ ಅವರನ್ನು ಬಂಧಿಸಿಬಿಡುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ ನಾವು ಪೂರ್ವಗ್ರಹಪೀಡಿತರಾದರೆ ಆ ವ್ಯಕ್ತಿ ಒಳ್ಳೆಯದನ್ನು ಮಾಡಿದರೂ ನಮಗೆ ಕಾಣುವುದಿಲ್ಲ. ಆದರೆ ಹಲವು ಸಲ ಆ ವ್ಯಕ್ತಿಯ ನಡವಳಿಕೆಗೂ ನಮ್ಮ ಪೂರ್ವಗ್ರಹಕ್ಕೂ ತಾಳೆಯಾಗದೇ ಇದ್ದಾಗ ನಮಗೆ ನಮ್ಮ ಅಭಿಪ್ರಾಯ ತಪ್ಪು ಎಂದು ಮನದಟ್ಟಾಗುತ್ತದೆ. ಆದರೆ ಅಷ್ಟರೊಳಗೆ ಆ ವ್ಯಕ್ತಿಯೊಂದಿಗಿನ ನಮ್ಮ ವರ್ತನೆ, ಅವನು ಹಾಗೂ ನಮ್ಮ ನಡುವಿನ ಸಂಬಂಧವನ್ನು ಶಿಥಿಲಗೊಳಿಸಿರುತ್ತದೆ.

ನಾವು ಯಾರ ಬಗ್ಗೆಯೂ ಇನ್ನೊಬ್ಬರ ಮಾತು ಕೇಳಿ ಅಥವಾ ಆ ವ್ಯಕ್ತಿಯ ಒಂದು ಸಂದರ್ಭದಲ್ಲಿನ ನಡವಳಿಕೆ ನೋಡಿ ಅಭಿಪ್ರಾಯ ಮೂಡಿಸಿಕೊಳ್ಳಬಾರದು. ಆ ವ್ಯಕ್ತಿಯ ನಡೆನುಡಿಗಳನ್ನು ವಿವಿಧ ಸಂದರ್ಭಗಳಲ್ಲಿ ತೂಗಿನೋಡಿದ ನಂತರ ಮೂಡಿಸಿಕೊಳ್ಳುವ ಅಭಿಪ್ರಾಯ ಸರಿಯಾದದ್ದು. ಅವರಿವರ ಚಾಡಿಮಾತುಗಳನ್ನಾಗಲೀ ಹೊಗಳಿಕೆಯನ್ನಾಗಲೀ ಮುಖಬೆಲೆಗೆ ತೆಗೆದುಕೊಳ್ಳಬಾರದು. ನಮ್ಮ ಮನಸ್ಸಿಗಿಂತ ಉತ್ತಮ ಮಾರ್ಗದರ್ಶಕ, ಸಲಹೆಗಾರ ಬೇರಿಲ್ಲ.

‘ಕಾವಲು ಗೋಪುರದ ಮೇಲಿನಿಂದ ವೀಕ್ಷಿಸುವ ಏಳು ಮಂದಿ ಕಾವಲುಗಾರರಿಗಿಂತ ನಮ್ಮ ಮನಸ್ಸು ಸರಿಯಾದ ಮಾಹಿತಿಯನ್ನು ಕೊಡುತ್ತದೆ’ ಎಂದು ಬೈಬಲ್ ಹೇಳುತ್ತದೆ. ಇತರರ ಮಾತುಗಳು ಅಸೂಯೆಯ ಫಲವಿರಬಹುದು, ವೈಯಕ್ತಿಕ ದ್ವೇಷದಿಂದ ಹುಟ್ಟಿರಬಹುದು, ದುಷ್ಟತನ ಅಥವಾ ಚಾಡಿಕೋರತನದ ಪ್ರತಿಫಲನವಾಗಿರಬಹುದು, ಕಟ್ಟುಕತೆಯಾಗಿರಬಹುದು, ಸ್ವಜನ ಪಕ್ಷಪಾತದ ಫಲವಾಗಿರಬಹುದು, ಅತಿ ಪ್ರೀತಿ–ಅಭಿಮಾನ–ವ್ಯಾಮೋಹಗಳ ಫಲವಾಗಿರಬಹುದು. ಆ ಇನ್ನೊಬ್ಬ ಹೇಳುವುದು ಅವನ ಅಭಿಪ್ರಾಯ. ವಿವೇಚನಾರಹಿತವಾಗಿ ಅದನ್ನು ನಮ್ಮದಾಗಿಸಿಕೊಳ್ಳಬೇಕಾಗಿಲ್ಲ. ಸ್ವತಂತ್ರ ವ್ಯಕ್ತಿತ್ವವಿರುವ ನಮಗೆ ನಿರೀಕ್ಷಣಾ ಸಾಮರ್ಥ್ಯವಿದೆ, ಆಲೋಚನಾ ಶಕ್ತಿಯಿದೆ. ಶಿಫಾರಸುಗಳನ್ನೂ ಚಾಡಿಮಾತುಗಳನ್ನೂ ಬದಿಗೊತ್ತಿ ನಮ್ಮ ಮನಸ್ಸಾಕ್ಷಿಗನುಗುಣವಾದ ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳಬೇಕು.

ಮನುಷ್ಯನ ಮನಸ್ಸಿನ ಆಳವನ್ನು ತಿಳಿದವರಿಲ್ಲ. ಸ್ವತಃ ನಮಗೇ ನಮ್ಮ ಬಗ್ಗೆ ಸಂಪೂರ್ಣ ತಿಳಿದಿರುವುದಿಲ್ಲ. ಹಾಗಿರುವಾಗ ಇನ್ನೊಬ್ಬರ ವರ್ತನೆಗೆ, ಸ್ವಭಾವಕ್ಕೆ ಬೆಲೆಕಟ್ಟುವ ನಮ್ಮ ಕೆಲಸ ಶತಮೂರ್ಖತನವಷ್ಟೆ. ನಮ್ಮನ್ನು ಪೂರ್ವಗ್ರಹಪೀಡಿತರಾಗಲು ಪ್ರಚೋದಿಸುವವರ ಬಗ್ಗೆ ನಾವು ಮೊದಲು ಜಾಗರೂಕರಾಗಿರಬೇಕು. ಅವರು ಅತ್ಯಂತ ಅಪಾಯಕಾರಿ ವ್ಯಕ್ತಿತ್ವದವರು. ಅವರ ಈ ವರ್ತನೆಯ ಹಿಂದೆ ಸ್ವಾರ್ಥ ಅಥವಾ ದುರುದ್ದೇಶ ಇರುತ್ತದೆ. ಆದುದರಿಂದ ಯಾರನ್ನೇ ಆಗಲಿ, ಏನನ್ನೇ ಆಗಲಿ, ನಮ್ಮ ಪೂರ್ವಗ್ರಹದ ಚೌಕಟ್ಟಿನೊಳಗೆ ಬಂಧಿಸದಿರೋಣ. ಇತರರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವಾಗ ಸಕಾರಾತ್ಮಕ ಚಿಂತನೆಗೆ ಆದ್ಯತೆಯನ್ನು ಕೊಡೋಣ. ವಿಶಾಲಮನಸ್ಕರಾಗೋಣ. ನಮ್ಮನ್ನೂ ಒಳಗೊಂಡಂತೆ ಯಾರೂ ಪರಿಪೂರ್ಣರಲ್ಲ ಎಂಬುದನ್ನು ನೆನಪಲ್ಲಿಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT