ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಗಣೇಶನಿಗೆ ಭಕ್ತಿ–ಸಂಭ್ರಮದ ವಿದಾಯ

Last Updated 30 ಆಗಸ್ಟ್ 2017, 5:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನವಾದ ಮಂಗಳವಾರ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು, ಸಡಗರ–ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.

ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಕೊಂಡೊಯ್ಯಲಾಯಿತು. ಯುವಕರು, ಮಹಿಳೆಯರು–ಮಕ್ಕಳು ಸಂಗೀತಕ್ಕೆ ಕುಣಿದು–ಕುಪ್ಪಳಿಸಿದರು.

ರಸ್ತೆ ಉದ್ದಕ್ಕೂ ಪಟಾಕಿಗಳನ್ನು ಸಿಡಿಸಿ, ಗುಲಾಲ್‌ ಎರಚಿಕೊಂಡು ಯುವಕರು ಸಂಭ್ರಮಿಸಿದರು. ಓಣಿಗೆ ಬಂದ ಗಣೇಶ ಮೂರ್ತಿಗೆ ಮಹಿಳೆಯರು ಆರತಿ ಬೆಳಗಿ, ನೈವೇದ್ಯ ಅರ್ಪಿಸುತ್ತಿದ್ದ ದೃಶ್ಯ ದಾರಿಯುದ್ದಕ್ಕೂ ಕಂಡುಬಂತು. ‘ಗಣಪತಿ ಮಹಾರಾಜಕೀ..., ಗಣಪತಿ ಬಪ್ಪ ಮೋರೆಯಾ...’ ಎಂಬಿತ್ಯಾದಿ ಜೈಕಾರಗಳು ಮೆರವಣಿಗೆ ಉದ್ದಕ್ಕೂ ಮೊಳಗಿದವು.

ಬ್ಯಾಂಡ್‌, ಸಂಬಾಳ, ವಿವಿಧ ಕಲಾ ತಂಡಗಳು, ಗೊಂಬೆ ಕುಣಿತ, ವೀರಗಾಸೆ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಗಣೇಶ ಮೆರವಣಿಗೆಯು ದುರ್ಗದ ಬೈಲ್‌, ಬ್ರಾಡ್‌ ವೇ, ದಾಬಿಬಾನಪೇಟೆ, ಮೇದಾರ ಓಣಿ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವ ವನ ಹಾದು ಇಂದಿರಾ ಗಾಜಿನ ಮನೆ ಪಕ್ಕದಲ್ಲಿರುವ ಪಾಲಿಕೆ ವಲಯ ಕಚೇರಿ ಆವರಣದ ಬಾವಿಯತ್ತ ತಲುಪಿದವು. ಗಣೇಶನಿಗೆ ಪೂಜೆ ಸಲ್ಲಿಸಿ ಭಕ್ತಿಯೊಂದಿಗೆ ಬಾವಿಯಲ್ಲಿ ವಿಸರ್ಜಿಸಲಾಯಿತು. 

ಬಿಗಿ ಬಂದೋಬಸ್ತ್‌; ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಚನ್ನಮ್ಮ ವೃತ್ತ, ಇಂದಿರಾ ಗಾಜಿನ ಮನೆ, ಹೊಸೂರು ಬಾವಿ ಬಳಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಡಿಸಿಪಿ ರೇಣುಕಾ ಸುಕುಮಾರ್‌ ಗಸ್ತು ತಿರುಗಿ ಬಂದೋಬಸ್ತ್‌ ಅವಲೋಕಿಸಿದರು.

ಗಣೇಶ ಮೂರ್ತಿ ವಿಸರ್ಜನೆ
ಧಾರವಾಡ: ಗಣೇಶೋತ್ಸವದ ಐದನೇ ದಿನವಾದ ಮಂಗಳವಾರ ನಗರದಲ್ಲಿ ಡಿಜೆ ಅಬ್ಬರ ಹಾಗೂ ವಾದ್ಯಗಳ ಮೇಳದ ನಡುವೆ 44 ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು. ಡಿಜೆ ಅಬ್ಬರ, ಪಟಾಕಿಗಳ ಸದ್ದು ಜೋರಾಗಿತ್ತು. ವಿವಿಧ ಗಣೇಶ ಮಂಡಳಿಗಳ ಯುವಕರು ಹೊಸಯಲ್ಲಾಪುರದ ನುಚ್ಚಂಬಲಿ ಬಾವಿವರೆಗೆ ಸಾಂಪ್ರದಾಯಿಕ ಭಜನೆ, ಹಾಡು, ನೃತ್ಯದ ಮೂಲಕ ಮೆರವಣಿಗೆ ನಡೆಸಿ ಗಣಪತಿ ಮೂರ್ತಿ ವಿಸರ್ಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT