ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೂ ಶಿಕ್ಷಕನಾದೆ!

Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ಜಗನ್ನಾಥ ಬಿಸರಳ್ಳಿ

ನೆಯಲ್ಲಿ ಶೇಖರಿಸಿಟ್ಟ ಶೇಂಗಾ ಚೀಲಕ್ಕೆ ತೂತು ಮಾಡಿ ದಿನಂಪ್ರತಿ ತಿನ್ನುವುದು, ಗೆಳೆಯರ ಗುಂಪಿನೊಂದಿಗೆ ಊರಿನ ಪಕ್ಕದ ಹಳ್ಳದಲ್ಲಿ ಕರಬೂಜ ಹಣ್ಣು ಕದಿಯುವುದು, ಬೋರೆ ಹಣ್ಣು ಕೀಳುವುದು, ಜೇನು ಬಿಡಿಸಲಿಕ್ಕೆ ಉದ್ದನೆಯ ಕೋಲಿಗೊಂದು ಬೆಂಕಿ ಹಚ್ಚಿಕೊಂಡು ಪಂಜಿನ ದಾಳಿ ಮಾಡುವುದು... ಒಂದೇ, ಎರಡೇ? ನನ್ನ ಬಾಲ್ಯದ ಇಂತಹ ಪುಂಡಾಟಗಳಿಗೆ ಮಿತಿಯೇ ಇಲ್ಲ.

‘ಶಾಲೆಗೆ ಹೋಗುತ್ತೇನೆ’ ಎಂದರೆ ನಮ್ಮ ತಂದೆಯ ಮನಸ್ಸು ಧಗ ಧಗ ಉರಿಯುತ್ತಿತ್ತು. ನಾನು ಶಾಲೆಗೆ ಹೋಗಬೇಕು ಎನ್ನುವವನು. ಅವ್ವನೂ ನನ್ನ ಬೆನ್ನಿಗೆ ನಿಂತಿದ್ದಳು. ಮನೆಯಲ್ಲಿ ಒಟ್ಟು ಮೂರು ಜನ ಶಾಲೆಗೆ ಹೊರಟು ನಿಂತಿದ್ದೆವು. ‘ಇಲ್ಲ, ಎಲ್ಲರನ್ನೂ ಓದಿಸೋದು ಆಗಲ್ಲ’ ಎಂದಿದ್ದ ಅಪ್ಪ! ನನ್ನನ್ನು ಹೊರತುಪಡಿಸಿ ಉಳಿದವರು ಶಾಲೆಯನ್ನು ಬಿಟ್ಟುಬಿಟ್ಟರು.

‘ಶಾಲೆಗೆ ಹೋಗುವ ಮುಂಚೆ ಮತ್ತು ವಾಪಸ್‌ ಬಂದ ಬಳಿಕ ಕುರಿ ಕಾಯೋದಕ್ಕೆ ಬಂದರೆ ಮಾತ್ರ ನೀನು ಶಾಲೆಗೆ ಹೋಗಬಹುದು’ ಎಂಬುದು ಅಪ್ಪನ ಕಟ್ಟಪ್ಪಣೆ. ನಾನು ಆಯ್ತು ಎಂದೆ. ಶಾಲೆ ಮತ್ತು ಗೆಳೆಯರು ನನ್ನನ್ನು ಬಿಡಲಿಲ್ಲ. ನನ್ನ ಶಿಕ್ಷಣ ಮುಂದುವರಿಯಿತು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕುರಿಸಾಕಣೆ ನಮ್ಮ ಕುಲಕಸುಬು. ಕುರಿ ಸಾಯುವುದು, ಅಪ್ಪ ವಾರಗಟ್ಟಲೇ ಊಟ ಮಾಡದೆ ತಲೆಯ ಮೇಲೆ ಕೈಹೊತ್ತು ಕೂಡುವುದು, ವಯಸ್ಸಿಗೆ ಬಂದ ಮೂವರು ಅಕ್ಕಂದಿರ ಮದುವೆ ಮಾಡುವ ಕುರಿತು ಚಿಂತಿಸುವುದು... ಚಿಕ್ಕ ವಯಸ್ಸಿನ ನನ್ನನ್ನೂ ಮನೆಯ ಸಂಕಟಗಳು ಅಷ್ಟಿಷ್ಟು ಕಾಡುತ್ತಿದ್ದವು.

ನನ್ನ ಅಣ್ಣನು ಸಹ ಅಪ್ಪನೊಂದಿಗೆ ಕುರಿ ಕಾಯೋದಕ್ಕೆ ಹೋಗುತ್ತಿದ್ದ. ಮಧ್ಯದಲ್ಲಿ ಅಣ್ಣ ಮತ್ತು ಅಕ್ಕನಿಗೆ ನಿರಂತರ ಕಾಯಿಲೆ. ಅಪ್ಪನು ಬೋಳೆ ಮನುಷ್ಯ. ಖರ್ಚು ಮಾಡುವಲ್ಲಿ ಹಿಡಿತ ಇರಲಿಲ್ಲ. ಯಾವುದೇ ಜವಾಬ್ದಾರಿಯನ್ನು ಸಂಪೂರ್ಣ ನಿಭಾಯಿಸಲಿಲ್ಲ. ಎಲ್ಲದಕ್ಕೂ ಅವ್ವನೇ ಬರಬೇಕಿತ್ತು. ಆಗ ನಮ್ಮ ಮನೆಯ ಅಕ್ಕ ಪಕ್ಕ, ಹಿಂದೆ ಮುಂದೆ ಮಹಡಿ ಮೇಲೆ, ಎಲ್ಲಲ್ಲೂ ನನಗೆ ಶಿಕ್ಷಕರೇ ಕಾಣಿಸುತ್ತಿದ್ದರು. ನನಗೂ ಶಿಕ್ಷಕನಾಗಬೇಕು ಎನಿಸಿತು. ಆದರೆ ನನ್ನನ್ನು ಪ್ರೋತ್ಸಾಹಿಸುವವರು ಇರಲಿಲ್ಲ. ನಾನು ಮಾತ್ರ ಕನಸು ಕಾಣುತ್ತಲೇ ದಿನ ದೂಡುತ್ತಿದ್ದೆ. ಅವ್ವ ಅವರಿವರು ಉಟ್ಟ ಬಟ್ಟೆ ತರುತ್ತಿದ್ದಳು. ನಾನು ಅವರಿವರು ಓದಿದ ಪುಸ್ತಕ (ಮುಂದಿನ ತರಗತಿಗೆ) ಶೇಖರಿಸಿ ಇಟ್ಟುಕೊಳ್ಳುತ್ತಿದ್ದೆ. ನನಗೆ ಅರವಿಂದ ಪಾಟೀಲ ಬಹಳ ಸಹಾಯ ಮಾಡಿದರು. ನಮ್ಮ ವಿಠಲ್‌ ಸರ್‌ ನನಗೆ ಯಾವತ್ತೂ ‘ಟ್ಯೂಷನ್‌ ಫೀ’ ಕೇಳಲಿಲ್ಲ. ಅವರ ಋಣಭಾರ ನನ್ನ ಮೇಲೆ ಈಗಲೂ ಇದೆ. ಹೀಗೆ ಅವರಿವರು ಓದಿದ ಪುಸ್ತಕ, ಉಟ್ಟ ಬಟ್ಟೆ, ಋಣಭಾರ ಎಲ್ಲವೂ ಒಗ್ಗೂಡಿ ನಾನೂ ಶಿಕ್ಷಿತನಾದೆ.

ಒಂದು ಘಟನೆ. ನಾನಿನ್ನೂ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಇತ್ತ ಶಾಲೆಗೆ ಹೋಗಲಿಕ್ಕೆ ಆಗಲಿಲ್ಲ. ಅತ್ತ ಕುರಿ ಕಾಯುವುದಕ್ಕೂ ಆಗಲಿಲ್ಲ. ಎರಡನ್ನೂ ನಿಭಾಯಿಸುವುದು ಕಷ್ಟವಾಗಿ ಕೊನೆಗೆ ‘ಮೀನು’ ಹಿಡಿಯುವ ಅಂತ ನಾನು, ನನ್ನ ಒಬ್ಬ ಗೆಳೆಯ ಹೇಳದೇ ಕೇಳದೆ ಗೋವಾಕ್ಕೆ ಹೋದೆವು. ಅಲ್ಲಿ ಹೊಟ್ಟೆ ಹೊರೆಯಲು ಹೋಟೆಲ್‌ ಸೇರಿದೆವು. ಅಲ್ಲಿಂದ ನನ್ನ ಗೆಳೆಯ ವಾಚ್‌ ಕದ್ದು ನನ್ನನ್ನು ಬಿಟ್ಟು ಮನೆಗೆ ವಾಪಸ್‌ ಹೋದ. ನಾನು ಹೋಟೆಲ್‌ ಮಾಲೀಕನಿಂದ ಒದೆ ತಿಂದು ಅಲ್ಲೇ ಇದ್ದೆ. ಆ ಹೋಟೆಲ್‌ಗೆ ಬರೋ ಗಿರಾಕಿಗಳ ಸಹಾಯದಿಂದ ಮೀನು ಹಿಡಿಯುವ ಬೋಟ್‌ ಸೇರಿದೆ. ಇತ್ತ ನನ್ನ ಮನೆ ಸ್ಮಶಾನವಾಗಿತ್ತು.

ಎಲ್ಲರ ಕಣ್ಣಲ್ಲಿ ನೀರು ಬತ್ತಿ ಹೋಗಿದ್ದವು. ನನ್ನ ಶಾಲೆಯ ಗುಮಾಸ್ತರಾಗಿದ್ದ ದ್ಯಾಮಣ್ಣ ಕರಡಿ ಸುಮಾರು ತಿಂಗಳುಗಳಾದ ಮೇಲೆ ನನ್ನನ್ನು ಪತ್ತೆಹಚ್ಚಿ ಊರಿಗೆ ಕರೆತಂದರು. ಮತ್ತೆ ಶಾಲೆ ನನ್ನ ಕೈಬೀಸಿ ಕರೆಯಿತು. ಹೀಗೆ ಒಂದೇ ಎರಡೇ ನನ್ನ ಅನುಭವಗಳು. ಬಿಚ್ಚುತ್ತಾ ಹೋದಂತೆ ರೇಷ್ಮೆ ನೂಲಿನ ಥರ ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ.

ನಮ್ಮ ಮನೆಗೆ ಹತ್ತಿರದಲ್ಲೇ ಜೇನಮ್ಮನ ಶಾಲೆ. ದಢೂತಿ ದೇಹದ ಜೇನಮ್ಮ ನಮ್ಮ ಮೊದಲ ಶಾಲಾ ಶಿಕ್ಷಕಿ. ನಂತರ ಮಲ್ಲನಗೌಡ, ವಸಂತರಾವ್‌, ಮುದುಕಪ್ಪ, ವಿಷ್ಣು ಸರ್‌, ರುದ್ರಪ್ಪ ಮೇಷ್ಟ್ರು... ಹೀಗೆ ಆದರ್ಶ ಶಿಕ್ಷಕರ ದೊಡ್ಡ ಬಳಗವೇ ನಮ್ಮ ಮಾರ್ಗದರ್ಶನಕ್ಕಿತ್ತು. ಅವರು ತೋರಿದ ಬೆಳಕಲ್ಲಿ ನಡೆಯುತ್ತಾ ನಾನೂ ಶಿಕ್ಷಕನಾದೆ. ನಮ್ಮ ಊರಿನಲ್ಲಿ ಅಷ್ಟೊಂದು ಜನ ಶಿಕ್ಷಕರಾಗಿರಲು ಅಲ್ಲಿನ ಆದರ್ಶ ಶಿಕ್ಷಕರೇ ಕಾರಣ.

ಬಾಲ್ಯದಲ್ಲಿ ನನಗೆ ಸಿಕ್ಕ ಒಬ್ಬೊಬ್ಬ ಶಿಕ್ಷಕರಿಂದಲೂ ಒಂದೊಂದು ಆದರ್ಶ ಮೈಗೂಡಿಸಿಕೊಂಡು ಪಾಠ ಮಾಡಲು ಆರಂಭಿಸಿದೆ. ಕೊಪ್ಪಳ ತಾಲ್ಲೂಕಿನ ಬೋಚನಹಳ್ಳಿ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಹೋದಾಗ ನನ್ನ ಗುರುಗಳಾಗಿದ್ದ ಸಿದ್ದಯ್ಯ ಅವರು ಹೆಡ್‌ ಮಾಸ್ಟರ್‌ ಆಗಿದ್ದರು. ಹೌದು, ಅಲ್ಲಿ ಗುರು ಹೆಡ್‌ ಮಾಸ್ಟರ್‌ ಆದರೆ, ಶಿಷ್ಯ ಶಿಕ್ಷಕನಾಗಿದ್ದ.

ವಿದ್ಯಾರ್ಥಿಯಾಗಿ ನಾನು ಕಲಿತದ್ದನ್ನು ಈಗ ಶಿಕ್ಷಕನಾಗಿ ಧಾರೆ ಎರೆಯುತ್ತಿದ್ದೇನೆ. ಈ ವೃತ್ತಿ ಒದಗಿಸುವ ಆತ್ಮತೃಪ್ತಿ ಬೇರೆಲ್ಲೂ ಸಿಗಲಿಕ್ಕಿಲ್ಲ ಎನ್ನುವ ನಂಬಿಕೆ ನನ್ನದು. ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ಇರುವ ವಿದ್ಯೆಯ ದಾಹ ಅಪರಿಮಿತ. ತಂತ್ರಜ್ಞಾನ ಇಷ್ಟೊಂದು ಮುಂದುವರಿದ ಈ ವಾತಾವರಣದಲ್ಲೂ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಬೇಕಾದ ಪರಿಪೂರ್ಣ ವಾತಾವರಣ ಸೃಷ್ಟಿಯಾಗಿಲ್ಲ. ಕೊರತೆಗಳು ಇವೆ. ಆದರೆ, ಅವುಗಳನ್ನೆಲ್ಲ ಮೆಟ್ಟಿ ಶೈಕ್ಷಣಿಕ ಸಾಧನೆ ಮೆರೆಯಲು ಯುವ ಪ್ರತಿಭೆಗಳ ಸಂಗಮವೇ ಅಲ್ಲಿ ನೆರೆದಿದೆ. ಅವರ ಕಣ್ಣುಗಳಲ್ಲಿ ಅರಿವಿನ ಬೆಳಕು ಹೊಳೆಯುವಾಗ ನಮ್ಮ ಕಣ್ಣುಗಳು ತುಂಬಿಕೊಳ್ಳುತ್ತವೆ. ಧನ್ಯತಾ ಭಾವದಿಂದ ಹೃದಯ ಬೆಚ್ಚಗಾಗುತ್ತದೆ. ಶಾಲೆಗೆ ಹೋಗುವ ಕನಸಿಗೆ ನೀರೆರೆದ ಅವ್ವ, ಕೊನೆಗೂ ಓದಲು ಬಿಟ್ಟ ಅಪ್ಪನಿಗೆ ಮನಸ್ಸು ಸಾವಿರ, ಸಾವಿರ ನಮಸ್ಕಾರ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT