ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ಕಲಬುರ್ಗಿ ಹಂತಕರು: ಕಳವಳಕಾರಿ ವಿದ್ಯಮಾನ

Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಎರಡು ವರ್ಷಗಳು ಕಳೆದರೂ ಹಂತಕರು ಪತ್ತೆಯಾಗದಿರುವುದು ಕಳವಳಕಾರಿ. ಈ ಕಳವಳಕ್ಕೆ ಧ್ವನಿಯಾಗಿ ‘ನ್ಯಾಯಕ್ಕಾಗಿ ಎಚ್ಚರಿಕೆ’ ಜಾಥಾಗೆ ಚಾಲನೆ ನೀಡಲಾಗಿದೆ. ರಾಜ್ಯದ ಅನೇಕ ಕಡೆ ಪ್ರತಿಭಟನಾ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಈ ಹತ್ಯೆಯ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ ಈವರೆಗೆ ಏನೇನೂ ಪ್ರಗತಿಯಾಗಿಲ್ಲ ಎಂಬುದು ವಿಷಾದನೀಯ. ಆಮೆಯ ವೇಗದಲ್ಲಿ ತನಿಖೆ ನಡೆಯುತ್ತಿರುವುದನ್ನು ಪ್ರಶ್ನಿಸಿ ‘ಉತ್ತರ ನೀಡಿ’ ಎಂಬಂತಹ ಅಭಿಯಾನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ದಿನಗಳಿಂದ ನಡೆಸಲಾಗುತ್ತಿದೆ.

ತನಿಖೆಯ ವೇಗದ ಬಗ್ಗೆ ಸಾಮಾಜಿಕ ಕಾರ್ಯಕರ್ತರು, ನಾಗರಿಕರು ಹಾಗೂ ವಿಚಾರವಾದಿಗಳು ಆತಂಕ ವ್ಯಕ್ತಪಡಿಸಿದ ನಂತರ ಮುಖ್ಯಮಂತ್ರಿಗಳು ಸ್ಪಂದಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಸಮಾಜ ಸುಧಾರಕರು ಹಾಗೂ ಚಿಂತಕರ ದೊಡ್ಡ ಪರಂಪರೆಯೇ ಕರ್ನಾಟಕದಲ್ಲಿದೆ. ಶಾಂತಿಯ ಬೀಡೆಂಬ ಕೀರ್ತಿಯೂ ರಾಜ್ಯದ್ದಾಗಿದೆ. ಬಹುತ್ವದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯದಲ್ಲಿ ಯಾವುದೇ ಬಗೆಯ ಅಸಹನೆ ಪಸರಿಸಲು ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ, ತನಿಖೆ ಅಂತಿಮ ಘಟ್ಟದಲ್ಲಿದೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಈ ಮಾತುಗಳು, ಡಾ. ಕಲಬುರ್ಗಿ, ದಾಭೋಲ್ಕರ್ ಹಾಗೂ ಪಾನ್ಸರೆ ಹತ್ಯೆಗಳನ್ನು ಖಂಡಿಸಿ ಹೋರಾಟ ನಡೆಸುತ್ತಿರುವವರಿಗೆ ಸಮಾಧಾನವನ್ನೇನೂ ತಂದಿಲ್ಲ. ‘ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಏನೂ ಹೊಸತಿಲ್ಲ. ಹೋರಾಟವನ್ನು ತಣ್ಣಗೆ ಮಾಡುವ ತಂತ್ರ ಮಾತ್ರ ಅದರಲ್ಲಡಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮಿಗಳು ನೇರವಾಗಿಯೇ ಟೀಕಿಸಿದ್ದಾರೆ.

ಕೇವಲ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲಿ ಮೂವರು ವಿಚಾರವಾದಿಗಳ ಹತ್ಯೆ ನಡೆದದ್ದು ಆಘಾತಕಾರಿಯಾದುದು. 2013ರ ಆಗಸ್ಟ್ 20ರಂದು ಪುಣೆಯಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯಾಯಿತು. ನಂತರ 2015ರ ಫೆಬ್ರುವರಿ 20ರಂದು ಕೊಲ್ಹಾಪುರದಲ್ಲಿ ಗೋವಿಂದ ಪಾನ್ಸರೆ ಅವರ ಹತ್ಯೆಯಾಯಿತು. ಮತ್ತೆ ಅದೇ ವರ್ಷ ಆಗಸ್ಟ್ 30ರಂದು ಕಲಬುರ್ಗಿ ಅವರ ಹತ್ಯೆಯಾಯಿತು. ಆದರೆ ಈ ಸರಣಿ ಹತ್ಯೆಗಳ ತನಿಖೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದು ವಿಪರ್ಯಾಸ. ಶಿಕ್ಷಾ ಭಯವೇ ಇಲ್ಲದೆ  ಹತ್ಯೆಗಳನ್ನು ನಡೆಸಿ  ಹಂತಕರು ಪಾರಾಗಬಹುದು  ಎಂಬುದು ನಮ್ಮ ತನಿಖಾ ವ್ಯವಸ್ಥೆಯ ಲೋಪಗಳಿಗೆ ಹಿಡಿದ ಕನ್ನಡಿ. ಈ ಮೂವರೂ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಬಳಕೆಯಾಗಿರುವ ದೇಶಿ ಪಿಸ್ತೂಲು ಒಂದೇ ಬಗೆಯದು ಎಂಬುದನ್ನು ತನಿಖಾ ವರದಿಗಳು ಹೇಳಿದ್ದವು. ಧಾರ್ಮಿಕ ಮೂಲಭೂತವಾದಿ ಗುಂಪುಗಳು ಹಾಗೂ ಸಂಘಟನೆಗಳು ಈ ಹತ್ಯೆಯಲ್ಲಿ ಒಳಗೊಂಡಿವೆ ಎಂಬಂತಹ ಪ್ರತಿಪಾದನೆಗಳೂ ಕೇಳಿ ಬಂದಿವೆ. ಆದರೆ ಈ ನಿಟ್ಟಿನಲ್ಲಿ ತನಿಖೆ ಪ್ರಗತಿ ಕಾಣುತ್ತಿಲ್ಲ.

ದಾಭೋಲ್ಕರ್ ಹಾಗೂ ಪಾನ್ಸರೆ ಹತ್ಯೆಗಳಿಗೆ ಬಳಕೆಯಾದಂತಹ ಮೋಟಾರ್ ಸೈಕಲ್‌ ಅನ್ನೇ ಕಲಬುರ್ಗಿ ಹತ್ಯೆಯಲ್ಲಿ ಬಳಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಪೊಲೀಸರು ಮಾಹಿತಿ ಸಲ್ಲಿಸಿದ್ದರು. ತನಿಖಾಧಿಕಾರಿಗಳ ಕಾರ್ಯನಿರ್ವಹಣೆಗೆ ಬಾಂಬೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ನಂತರವಷ್ಟೇ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ್ ಸಂಸ್ಥೆಯ ವೀರೇಂದ್ರ ತಾವಡೆಯನ್ನು ಬಂಧಿಸಲಾಯಿತು ಎಂಬುದನ್ನೂ ಗಮನಿಸಬೇಕು.

ಕಲಬುರ್ಗಿ ಹತ್ಯೆಯ ನಂತರ ಸಾಹಿತಿಗಳು, ವಿಜ್ಞಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸರ್ಕಾರದ ಪ್ರಶಸ್ತಿಗಳನ್ನು ಹಿಂತಿರುಗಿಸುವುದಕ್ಕೆ ಪ್ರೇರಣೆಯಾಗಿ ಈ ವಿದ್ಯಮಾನ ಆಂದೋಲನದ ರೂಪ ತಾಳಿದ್ದನ್ನು ಮರೆಯುವಂತಿಲ್ಲ. ನಂತರ ದನದ ಮಾಂಸಭಕ್ಷಣೆ, ಗೋರಕ್ಷಣೆ, ದೇಶಭಕ್ತಿ ಇತ್ಯಾದಿ ಹಲವು ವಿಚಾರಗಳಿಗೆ ಸಂಬಂಧಿಸಿದ ವಿವಾದಗಳು ರಾಷ್ಟ್ರದಲ್ಲಿ ಸೃಷ್ಟಿಯಾಗುತ್ತಲೇ ಇವೆ. ವಿಮರ್ಶೆಗಳಿಗೆ ತೆರೆದುಕೊಳ್ಳದಂತಹ ಅಸಹನೆ ಬೆಳೆಯುತ್ತಿರುವುದು ಸಾಮಾಜಿಕ ಆರೋಗ್ಯಕ್ಕೆ ಸಲ್ಲದು. ಸಂಸ್ಕೃತಿಯ ಹುಸಿ ಶ್ರೇಷ್ಠತೆಯ ಪ್ರತಿಪಾದನೆ, ಭಾರತದ ಮೂಲಧಾತುವಾದ ಬಹುಸಂಸ್ಕೃತಿಯ ಸಂಕೀರ್ಣತೆಗಳನ್ನು ನಿರಾಕರಿಸುವಂತಹದ್ದು ಎಂಬುದನ್ನು ನೆನಪಿಡಬೇಕು. ನಾವು ಅಂಗೀಕರಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯಗಳಿಗೆ ಇದು ಧಕ್ಕೆ ತರುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT