ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’

Last Updated 31 ಆಗಸ್ಟ್ 2017, 5:56 IST
ಅಕ್ಷರ ಗಾತ್ರ

ಕನಕಗಿರಿ: ‘ತಾಲ್ಲೂಕು ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎಂ.ಬಿ. ಪ್ರಕಾಶ ವರದಿಯಂತೆ ನವಲಿ ಹೋಬಳಿ ಮತ್ತು ನವಲಿ ರೈಸ್‌ಟೆಕ್‌ ಪಾರ್ಕ್‌ ನಿಯೋಜಿತ ಕನಕಗಿರಿ ತಾಲ್ಲೂಕಿಗೆ ಸೇರಿದೆ. ಈ ಸತ್ಯವನ್ನು ಮರೆಮಾಚಿಸಲು ಕಾರಟಗಿ ಹೋರಾಟ ಸಮಿತಿಯವರು ರೈಸ್‌ಟೆಕ್ ಪಾರ್ಕ್ ವಿಚಾರದಲ್ಲಿ ಕನಕಗಿರಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸುವುದು ಸರಿಯಲ್ಲ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ದೊಡ್ಡಯ್ಯಸ್ವಾಮಿ ಅರವಟಗಿಮಠ ಹೇಳಿದರು.

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕು ಅನುಷ್ಠಾನದ ಸಭೆಯಲ್ಲಿ ಶಾಸಕ ಶಿವರಾಜ ತಂಗಡಗಿ ಅವರು ನವಲಿ ಹೋಬಳಿಯು ನಿಯೋಜಿತ ಕನಕಗಿರಿ ತಾಲ್ಲೂಕಿಗೆ ಸೇರಿದೆಯೆಂದು ಹೇಳಿ ಈಗ ಬೆಂಬಲಿಗರ ಮೂಲಕ ಕನಕಗಿರಿ ಜನರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಈ ಆಟ ಬಹಳ ದಿನ ನಡೆಯುವುದಿಲ್ಲ’ ಎಂದರು.

ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ ಮಾತನಾಡಿ, ‘ಕೆರೆಗೆ ನೀರು ತುಂಬಿಸುವ ಯೋಜನೆ ನೆಪ ಮಾತ್ರಕ್ಕೆ ಇದೆ. ಎರಡು ವರ್ಷವಾದರೂ ಯೋಜನೆಯ ಸೌಲಭ್ಯ ಜನರಿಗೆ ಸಿಕ್ಕಿಲ್ಲ’ ಎಂದರು.

ತಾಲ್ಲೂಕು ಕ್ರಿಯಾ ಸಮಿತಿ ಅಧ್ಯಕ್ಷ ಬಿ. ಕನಕಪ್ಪ ಮಾತನಾಡಿ, ‘ಶಾಸಕ ತಂಗಡಗಿ ಅವರಿಂದ ಸಾಕಷ್ಟು ಲಾಭ ಪಡೆದ ಸ್ಥಳೀಯ ಕೆಲ ಮುಖಂಡರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಹೋರಾಟದಲ್ಲಿ ಯಾರೂ ಸಹ ತಂಗಡಗಿ ವಿರುದ್ದ ಧಿಕ್ಕಾರ ಕೂಗಿಲ್ಲ. ಜನರ ಹೋರಾಟ ಹತ್ತಿಕ್ಕಲು ನಡೆಸಿದ ಈ ಮುಖಂಡರ ಕುತಂತ್ರ ನಡೆಯುವುದಿಲ್ಲ. ಊರಿನ ಹಿತಾಸಕ್ತಿಗೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿದು ಸರಿಯಲ್ಲ’ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ರವೀಂದ್ರ ಸಜ್ಜನ್, ಸುಭಾಸ, ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸಜ್ಜನ್, ಮುಖಂಡರಾದ ಸಗರಪ್ಪ ಕಂಪ್ಲಿ, ದೇಸಾಯಿಗೌಡ, ವಾಗೀಶ ಹಿರೇಮಠ, ಚಂದ್ರೇಗೌಡ ಪಾಟೀಲ, ಟಿ.ಜೆ.ರಾಜಶೇಖರ, ಚೆನ್ನಪ್ಪ ತೆಗ್ಗಿನಮನಿ, ಅಯ್ಯನಗೌಡ, ಮಧುಸೂದನ ರಡ್ಡಿ, ಕನಕಪ್ಪ ಮಳಗಾವಿ, ಮಲಕೇಶ ಕೋಟಿ, ಹನುಮಂತಪ್ಪ ಹುನಗುಂದ, ದೊಡ್ಡಪ್ಪ ಭತ್ತದ, ರಾಮಣ್ಣ ನಾಯಕ, ಚನ್ನಪ್ಪ ಟಿ ಮಾತನಾಡಿದರು.

ಎಪಿಎಂಸಿ ಮಾಜಿ ನಿರ್ದೇಶಕ ಇಮಾಸಾಬ್‌ ಎಲಿಗಾರ, ಪ್ರಮುಖರಾದ ಸಂಗಪ್ಪ ಮಿಟ್ಲಕೋಡ, ರುದ್ರಮುನಿಯಪ್ಪ ಪ್ರಭುಶೆಟ್ಟರ್, ಡಾ. ದೇವರಾಜ, ಪ್ರಕಾಶ ಹಾದಿಮನಿ, ಸಂಗಪ್ಪ ಸಜ್ಜನ್, ವೀರೇಶ ಕಡಿ, ನಿಂಗಪ್ಪ ಪೂಜಾರ, ರಸೂಲಸಾಬ್‌, ರಂಗಪ್ಪ ಕೊರಗಟಗಿ, ಲಕ್ಷ್ಮೀಕಾಂತ ಬೋಂದಾಡೆ, ಹನುಮೇಶ ಯಲಬುರ್ಗಿ, ಶರಣಪ್ಪ ಭಾವಿಕಟ್ಟಿ, ಅಜಮೀರಸಾಬ್‌ ಕ್ವಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT