ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲೂ ತಪ್ಪದ ನೀರಿನ ಬವಣೆ

Last Updated 1 ಸೆಪ್ಟೆಂಬರ್ 2017, 6:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಅನೇಕ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಐದು ದಿನಕ್ಕೊಮ್ಮೆ ಪೂರೈಕೆಯಾಗುವ ನೀರು ಸಂಗ್ರಹಿಸಿಕೊಳ್ಳಲು ಗ್ರಾಮಸ್ಥರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋಬಳಿ ಕೇಂದ್ರವಾದ ಇಟ್ಟಿಗಿ ಗ್ರಾಮವು ತಾಲ್ಲೂಕಿನ ದೊಡ್ಡ ಗ್ರಾಮ ಗಳಲ್ಲಿ ಒಂದು. ಅಂತರ್ಜಲ ಕುಸಿತದಿಂದ ಗ್ರಾಮದ ಬಹುತೇಕ ಕೊಳವೆಬಾವಿಗಳು ಒಣಗಿವೆ. ನಾಲ್ಕು ಕೊಳವೆಬಾವಿಗಳು ಸುಸ್ಥಿತಿಯಲ್ಲಿದ್ದರೂ ನೀರಿನ ಪ್ರಮಾಣ ಕಡಿಮೆ ಇದೆ. 7 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಬಹುದಿನಗಳಿಂದಲೂ ನೀರಿನ ಅಭಾವ ಇದೆ. ಸಂಬಂಧಪಟ್ಟವರು ಪರ್ಯಾಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಈ ಮುಂಚೆ ಗ್ರಾಮಕ್ಕೆ ಒಟ್ಟು 13 ಕೊಳವೆಬಾವಿಗಳಿಂದ ಸಮರ್ಪಕ ನೀರು ಪೂರೈಕೆ ಮಾಡಲಾಗುತಿತ್ತು. ಒಂದೂ ವರೆ ವರ್ಷದ ಅವಧಿಯಲ್ಲಿ ಒಂಬತ್ತು ಕೊಳವೆಬಾವಿಗಳು ನೀರಿಲ್ಲದೇ ಸ್ಥಗಿತಗೊಂಡಿವೆ. ಪರ್ಯಾಯ ಯೋಜನೆ ರೂಪಿಸದೇ, ಇದ್ದುದರಲ್ಲೇ ನಿರ್ವಹಣೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.

ಬೇಸಿಗೆಯನ್ನು ಹೇಗೋ ನಿಭಾಯಿ ಸಿದ್ದ ಜನರು, ಮಳೆಗಾಲ ಆರಂಭ ವಾದರೂ ನೀರಿನ ಸಮಸ್ಯೆ ಬಗೆಹರಿಯದ ಕಾರಣ ಬೇಸತ್ತಿದ್ದಾರೆ. ಗ್ರಾಮದಲ್ಲಿ ನಿರ್ದಿಷ್ಟ ದಿನ, ಸಮಯಕ್ಕೆ ನೀರು ಪೂರೈಕೆ ಆಗದಿರುವುದರಿಂದ ಹೊಲ, ಗದ್ದೆಗಳ ಕೆಲಸಕ್ಕೆ ಹೋಗುವ ರೈತರು, ಕಾರ್ಮಿಕರು ಕುಡಿಯುವ ನೀರು ಹಿಡಿದಿಟ್ಟುಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ.

‘ನಮ್ಮಲ್ಲಿ ಐದು ದಿನಕ್ಕೊಮ್ಮೆ ಅರ್ಧ ಗಂಟೆ ಮಾತ್ರ ನೀರು ಬಿಡ್ತಾರ. ಮ್ಯಾಲಿನವರು ಮೋಟ್ರ ಹಚ್ಚಿದ್ರ ನಮಗ ನೀರು ಸಿಗಂಗಿಲ್ಲ. ಮನೆಯಲ್ಲಿನ ಪಾತ್ರೆ, ಪಗಡ ಎಲ್ಲಾ ನೀರು ತುಂಬಿಸಿಟ್ಟರೂ ಬರೀ ಕುಡಿಯಾಕ ಸಾಲುವಲ್ದು. ದನಕರುಗಳನ್ನು ಹಿಡಿಯಾದು ಬಾಳಾ ತೊಂದ್ರೆ ಆಗೇತಿ. ತಾಯಮ್ಮನ ಗುಡಿ, ಬಸವಣ್ಣನ ಗುಡಿಯಿಂದ ಕೊಡ ದಲ್ಲಿ ನೀರು ಹೊತ್ತು ಹೊತ್ತು ಸಾಕಾಗಿ ಹೋಗ್ಯಾತಿ’ ಎಂದು 7ನೇ ವಾರ್ಡ್ ನಿವಾಸಿಗಳಾದ ಲಕ್ಷ್ಮಮ್ಮ, ನಾಗಮ್ಮ ಅಳಲು ತೋಡಿಕೊಂಡರು.

ಕೈ ಕೊಡುವ ಬಹುಗ್ರಾಮ ಯೋಜನೆ
ಹೊಳಗುಂದಿ ಹಾಗೂ ಇತರೆ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈ ಸಲು ರೂಪಿಸಿರುವ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಯಲ್ಲಿ ಇಟ್ಟಿಗಿ ಗ್ರಾಮವೂ ಸೇರಿದೆ. ಆದರೆ, ಈ ಯೋಜನೆಯಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದರಿಂದ ಕೊನೆ ಭಾಗದ ಹಳ್ಳಿಗಳಿಗೆ ನದಿ ನೀರು ತಲು ಪುತ್ತಿಲ್ಲ. ಪೈಪ್‌ಲೈನ್‌, ವಾಲ್ವ್‌ಗಳ ಸೋರಿಕೆಯಿಂದ ನೀರು ಪೋಲಾಗುತ್ತಿದೆ. ನದಿ ತುಂಬಿ ಹರಿಯುವ ದಿನಗಳಲ್ಲೂ ಸಮರ್ಪಕ ನೀರು ಪೂರೈಕೆಯಾಗದೇ ಜನರ ಪಾಲಿಗೆ ಈ ಯೋಜನೆ ಇದ್ದೂ ಇಲ್ಲದಂತಾಗಿದೆ. ಸಂಬಂಧಪಟ್ಟವರು ಗಮನಹರಿಸಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

* * 

ಲಭ್ಯ ನೀರಿನಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಹೊಸ ಕೊಳವೆಬಾವಿ ಕೊರೆಯಲು ಪ್ರಸ್ತಾವ ಸಲ್ಲಿಸಿದ್ದೇವೆ. ಕೋಟೆ ಪ್ರದೇಶಕ್ಕೆ ನದಿ ನೀರು ಪೂರೈಕೆ ಮಾಡಲು ಪೈಪ್‌ಲೈನ್‌ ಹಾಕಬೇಕಿದೆ
ಶಶಿಕಲಾ ಕೊಪ್ಪದ, ಇಟ್ಟಿಗಿ ಪಿಡಿಒ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT