ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿಪಾರು ಆದೇಶ ಹಿಂಪಡೆಯಿರಿ’

Last Updated 1 ಸೆಪ್ಟೆಂಬರ್ 2017, 6:22 IST
ಅಕ್ಷರ ಗಾತ್ರ

ಮುಧೋಳ (ಬಾಗಲಕೋಟೆ): ‘ಹಿಂದೂಗಳು ಹಬ್ಬ ಆಚರಣೆ ವೇಳೆ ಅನಗತ್ಯ ಷರತ್ತುಗಳ ವಿಧಿಸಿ ತೊಂದರೆ ನೀಡುತ್ತಿರುವ ರಾಜ್ಯ ಸರ್ಕಾರ, ಬ್ರಿಟಿಷಗಿಂತ ಕೆಟ್ಟದಾಗಿ ವರ್ತಿಸುತ್ತಿದೆ’ ಎಂದು ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ 9 ಮಂದಿಯನ್ನು ಪೊಲೀಸರು ಗಡಿಪಾರು ಮಾಡಿರುವುದನ್ನು ವಿರೋಧಿಸಿ ಮುಧೋಳದಲ್ಲಿ  ಗುರುವಾರ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು  ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಹಿಂದೂಗಳ ಹಬ್ಬ–ಉತ್ಸವ ಎಂದರೆ ಬ್ರಿಟಿಷರು ತೊಂದರೆ ಕೊಡುತ್ತಿರಲಿಲ್ಲ. ಆದರೆ ಈ ಸರ್ಕಾರ ಅವರಿಗಿಂತ ಗತಿಗೆಟ್ಟ ಆಡಳಿತ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದರು.

‘2015ರಲ್ಲಿ ಮುಧೋಳದಲ್ಲಿ ನಡೆದ ಗಲಭೆಯ ನೆಪದಲ್ಲಿ 9 ಕಾರ್ಯಕರ್ತರನ್ನು ಗಡಿಪಾರು ಮಾಡಿ ಹೊರಡಿಸಿರುವ ಆದೇಶ ಹಿಂಪಡೆಯದೇ ಇದ್ದಲ್ಲಿ ಅವರು ವಾಪಸ್ ಬರುವವರೆಗೂ ಗಣೇಶ ವಿಸರ್ಜನೆ ಮಾಡದಿರುವ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ‘ಮುಧೋಳ ತಾಲ್ಲೂಕಿನಲ್ಲಿ ಹಿಂದೂ– ಮುಸ್ಲಿಮರು ಅಣ್ಣ, ತಮ್ಮಂದಿರಂತೆ ಇದ್ದಾರೆ. ಗಣೇಶ ಹಬ್ಬದಲ್ಲಿ ಅವರೂ ಪಾಲ್ಗೊಂಡು ಸಹಕಾರ ನೀಡಿದ್ದಾರೆ. ಹಾಗಿದ್ದರೂ ಗಡೀಪಾರು ಮಾಡಲಾಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ’ ಎಂದು ಆರೋಪಿಸಿದರು.

‘ಗಡಿಪಾರು ಆದೇಶ ಹಿಂದಕ್ಕೆ ಪಡೆಯುವಂತೆ ಬಿಜೆಪಿ ಮುಖಂಡರು ಮಾಡಿದ ಮನವಿಗೆ ಐಜಿಪಿ ಡಾ.ರಾಮಚಂದ್ರರಾವ್ ಸ್ಪಂದಿಸಿದ್ದರೆ ಈ ಹೋರಾಟವೇ ನಡೆಯುತ್ತಿರಲಿಲ್ಲ. 2015ರಲ್ಲಿ ನಡೆದ ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದರು.

‘ರಾಜ್ಯದಲ್ಲಿ ನಡೆದಿರುವ 23 ಮಂದಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಗಳ ಹೊಣೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ಹೊತ್ತುಕೊಳ್ಳಬೇಕಿದೆ’ ಎಂದು ಹೇಳಿದ ಕಾರಜೋಳ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಕೋಮುಗಲಭೆ ಇಲ್ಲವೇ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿಲ್ಲ’ ಎಂದರು.

ಹಿಂದೂ ಜಾಗರಣಾ ವೇದಿಕೆ ರಾಜ್ಯ ಸಂಚಾಲಕ ಜಗದೀಶ ಕಾರಂತ ಮಾತನಾಡಿ ‘ಹಿಂದೂ ಚಳವಳಿಯನ್ನು ರಾಜಕೀಯಕರಣಗೊಳಿಸುವ ಉದ್ದೇಶ ನಮಗಿಲ್ಲ. ಮುಧೋಳ ಚಲೋ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರನ್ನೂ ಆಹ್ವಾನಿಸಿದ್ದೆವು. ಆದರೆ ಬಿಜೆಪಿಯವರು ಮಾತ್ರ ಬೆಂಬಲ ನೀಡಿದ್ದಾರೆ. ಎಲ್ಲರ ಬೆಂಬಲ ಪಡೆದು ಹಿಂದೂ ಸಮಾಜವನ್ನು ಮತ್ತಷ್ಟು ಸಂಘಟಿಸುವ ಉದ್ದೇಶವಿದೆ’ ಎಂದರು.

‘ಗಡಿಪಾರು ಆದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಜಿಲ್ಲೆಯಾದ್ಯಂತ ಹಮ್ಮಿ ಕೊಳ್ಳಲಾಗುವುದು. ಬಾಗಲಕೋಟೆ ಸ್ತಬ್ಧ ಚಳವಳಿ ನಡೆಸಲಾಗುವುದು’ ಎಂದು ಹೇಳಿದರು.

ಸಾನಿಧ್ಯವನ್ನು ಕಲಾದಗಿ ಹಿರೇಮಠದ ಗಂಗಾಧರ ಸ್ವಾಮೀಜಿ ಹಾಗೂ ಬೆಳಗಲ್‌ನ ಸಿದ್ದರಾಮಯ್ಯ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಂಗಣ್ಣ ಕುಪ್ಪಸ್ತ, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಕಿರಣ್ ಪವಾಡಶೆಟ್ಟರ, ಸಹ ಸಂಘಟಕ ಅಯ್ಯನಗೌಡ, ವಿಭಾಗೀಯ ಸಂಚಾಲಕ ಶ್ರೀಶೈಲಗೌಡ ಪಾಟೀಲ ಹಾಜರಿದ್ದರು.

ನ್ಯಾಯಾಲಯದಿಂದ  ತಡೆಯಾಜ್ಞೆ
ಪೊಲೀಸರು 9 ಮಂದಿಯನ್ನು ಗಡಿಪಾರು ಮಾಡಿದ್ದರೂ ಅದರಲ್ಲಿ ಶಿವಾನಂದ ಬಡಿಗೇರ ಸೇರಿದಂತೆ ಮೂರು ಮಂದಿ ವಿರುದ್ಧದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಮಾರಂಭದ ನಡುವೆಯೇ ಜಗದೀಶ ಕಾರಂತ ಘೋಷಿಸಿದರು. ಕೆಲ ಹೊತ್ತಿನ ನಂತರ ಶಿವಾನಂದ ಬಡಿಗೇರ ಹಾಗೂ ಶಂಕರಗೌಡ ಪಾಟೀಲ ವೇದಿಕೆಗೆ ಬಂದರು. ಆಗ ಕಾರ್ಯಕರ್ತರು ಹರ್ಷೋದ್ಗಾರದಿಂದ ಸ್ವಾಗತಿಸಿದರು. ಈ ವೇಳೆ ಶಿವಾನಂದ ಬಡಿಗೇರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT