ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಂದು ನಗರಕ್ಕೆ ಮುಖ್ಯಮಂತ್ರಿ ಭೇಟಿ

Last Updated 2 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯ ಸರ್ಕಾರ ನಾಲ್ಕೂವರೆ ವರ್ಷ ಪೂರೈಸಿರುವ ಪ್ರಯುಕ್ತ ಸೆ. 22ರಂದು ನಗರದಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

’ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಂದು ಶಂಕುಸ್ಥಾಪನೆ, ಹಲವು ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 20 ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದು ಅವರು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹೇಳಿದರು.

‘ಜನಮನ ಮಾದರಿಯಲ್ಲೇ ಕಾರ್ಯಕ್ರಮ ನಡೆಯಲಿದೆ. ಜನರ ಅಭಿಪ್ರಾಯ ಮಂಡನೆ, ಸಂವಾದ, ಸರ್ಕಾರದ ಯೋಜನೆಗಳ ಬಗ್ಗೆ ರೂಪಕ ಪ್ರದರ್ಶನ ನಡೆಯಲಿದೆ. ಸುಮಾರು 1 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಇಂತಹ ಬೃಹತ್ ಕಾರ್ಯಕ್ರಮವನ್ನು ಮುಂದೆ ಆಯೋಜಿಸಲಾಗುವುದು. ಅದಕ್ಕೂ ಮುನ್ನ, ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಫಲಾನುಭವಿಗಳ ಸಮಾವೇಶ ನಡೆಸಲಾಗುತ್ತಿದೆ. ಒಟ್ಟಾರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಬೇಕು’ ಎಂದು ಹೇಳಿದರು.

ಚಾಲನೆಗೊಳ್ಳಲಿರುವ ಕಾಮಗಾರಿಗಳು: ಯಲಬುರ್ಗಾ ತಾಲ್ಲೂಕು ತಳಕಲ್‍ನಲ್ಲಿ ₹108 ಕೋಟಿ ವೆಚ್ಚದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಹಾಗೂ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ಶಂಕುಸ್ಥಾಪನೆ, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಗೆ ₹ 760 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಅಡಿ ₹ 110 ಕೋಟಿ ವೆಚ್ಚದಲ್ಲಿ ಆಲೂರು-ಬನ್ನಿಕೊಪ್ಪ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ, ಯಲಬುರ್ಗಾ ಮತ್ತು ಕೊಪ್ಪಳ ತಾಲ್ಲೂಕುಗಳ ಆಯ್ದ ಕೆರೆಗಳನ್ನು ₹ 300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ. ಕೊಪ್ಪಳದಲ್ಲಿ ₹ 150 ಕೋಟಿ ವೆಚ್ಚದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡದ ಉದ್ಘಾಟನೆ.

ಕಡೆಬಾಗಿಲು ಬಳಿ ₹ 32 ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿರುವ ಆನೆಗುಂದಿ ಸೇತುವೆಯ ಉದ್ಘಾಟನೆ, ಗಂಗಾವತಿಯಲ್ಲಿ ₹ 25 ಕೋಟಿ ವೆಚ್ಚದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಉದ್ಘಾಟನೆ. ಗಂಗಾವತಿ ತಾಲೂಕು ಚಿಕ್ಕಬೆಣಕಲ್‍ನಲ್ಲಿ ₹ 10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಿಸಿಎಂ ಹಾಸ್ಟೆಲ್ ಉದ್ಘಾಟನೆ.

ಹಿರೇಹಳ್ಳ ಯೋಜನೆ ಮುದ್ಲಾಪುರ ಗ್ರಾಮದ ₹ 10 ಕೋಟಿ ವೆಚ್ಚದ ಸೇತುವೆ ಉದ್ಘಾಟನೆ, ಕುಕನೂರಿನಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನೆ ನಡೆಯಲಿವೆ.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT