ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕೈಚಳಕದಲ್ಲಿ ‘ಅರಳಿದ ಕಲೆ’!

Last Updated 2 ಸೆಪ್ಟೆಂಬರ್ 2017, 7:24 IST
ಅಕ್ಷರ ಗಾತ್ರ

ವಿರಾಜಪೇಟೆ: ಸಾಲು ಸಾಲು ಸುಂದರ ಕಲಾಕೃತಿಗಳು.... ಅವುಗಳ ಸೊಬಗು, ಕಲಾತ್ಮಕತೆ ಹಾಗೂ ಸೃಜನಶೀಲತೆಯಲ್ಲೂ ಒಂದಕ್ಕಿಂತ ಮತ್ತೊಂದು ಮಿಗಿಲು... ಮಕ್ಕಳಲ್ಲಿ ಸೃಜನಾತ್ಮಕತೆಯ ಸುಪ್ತವಾದ ಪ್ರತಿಭೆಗೆ ಸಾಕ್ಷಿಯಾಗಿ ರೂಪುಗೊಂಡಿರುವ ಕಲಾಕೃತಿಗಳು...

ಇವೆಲ್ಲಾ ಸೇಂಟ್‌ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ‘ಸ್ಟುಡೆಂಟ್ ಆಕ್ಟಿವಿಟಿ ಕ್ಲಬ್‌’ ವತಿಯಿಂದ ಈಚೆಗೆ ಆಯೋಜಿಸಿದ್ದ ಕರಕುಶಲ ಸ್ಪರ್ಧೆಯಲ್ಲಿ ಜೀವತಳೆದ ಕಲಾಕೃತಿಗಳು.
ನಿತ್ಯಬಳಸಿ ತ್ಯಾಜ್ಯವೆಂದು ಬಿಸಾಡುವ ಹಾಗೂ ನಮ್ಮ ಸುತ್ತಮುತ್ತಲು ದೊರೆಯುವ ವಸ್ತುಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಹಾಗೂ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ದೃಷ್ಟಿಯಿಂದ ಕರಕುಶಲ ಸ್ಪರ್ಧೆಯನ್ನು ಕಾಲೇಜಿನ ‘ಸ್ಟುಡೆಂಟ್ ಆಕ್ಟಿವಿಟಿ ಕ್ಲಬ್‌’ನ ಸದಸ್ಯರಿಗೆ ಆಯೋಜಿಸಲಾಗಿತ್ತು.

ಬಹುತೇಕ ತ್ಯಾಜ್ಯಗಳನ್ನೇ ವಿದ್ಯಾರ್ಥಿಗಳು ಬಳಿಸಿದ್ದರು. ವಿದ್ಯಾರ್ಥಿಗಳ ಕೈಚಳಕದಿಂದ ಗುಡಿಗೋಪುರಗಳು, ಹೂಕುಂಡಗಳು, ಪೆನ್‌ ಸ್ಟ್ಯಾಂಡ್, ಬಗೆಬಗೆಯ ಹೂಗಳು, ಕೋಳಿ ಮರಿ, ಪ್ರಾಣಿ–ಪಕ್ಷಿ, ಐಫೆಲ್ ಟವರ್, ಬಗೆಬಗೆಯ ಗೊಂಬೆ, ನೂಲಿನಿಂದ ತಯಾರಾದ ರೇಖಾಚಿತ್ರಗಳು, ಕೃತಕ ಹೂಮಾಲೆಗಳು, ಮಂಟಪ, ಬಾಟಲ್‌ ಪೇಂಟಿಂಗ್‌, ತರಕಾರಿಗಳಿಂದ ಸೃಷ್ಟಿಯಾದ ಹೂವಿನ ಗಿಡ... ಹೀಗೆ ಹಲವು ಬಗೆಯ ಕಲಾಕೃತಿಗಳು ಮೂಡಿಬಂದವು.

ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಸೇಂಟ್‌ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್, ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆಯಿದ್ದು, ಅದನ್ನು ಅನಾವರಣಗೊಳಿಸುವ ಕಾರ್ಯ ಶಾಲಾ–ಕಾಲೇಜುಗಳಲ್ಲಿ ಆಗಬೇಕು. ಸ್ಪರ್ಧೆಯಲ್ಲಿ ಬಹುಮಾನ ಗಳಿಸುವುದಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ. ಬದುಕಿನಲ್ಲಿ ಸಮತೋಲನವನ್ನು ಸಾಧಿಸುವ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದರು.

ತಲಾ ಐದು ವಿದ್ಯಾರ್ಥಿಗಳ 24 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸುಮಾರು 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಆಸಕ್ತಿ ಹಾಗೂ ಉತ್ಸಾಹದಿಂದ ಭಾಗವಹಿಸಿ ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಿದರು.

ವಿಶೇಷವೆಂದರೆ ಕರಕುಶಲ ವಸ್ತುಗಳ ನಿರ್ಮಾಣದಲ್ಲಿ ಬಾಲಕಿಯರಿಗಿಂತ ತಾವೇನು ಕಡಿಮೆಯಿಲ್ಲ ಎಂಬಂತೆ ಬಾಲಕರು ಕೂಡ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಹಲವು ಕಲಾಕೃತಿಗಳನ್ನು ಸೃಷ್ಟಿಸಿದರು.

ಸ್ಪರ್ಧೆಯಲ್ಲಿ ಪ್ರಜ್ಞಾ ಹಾಗೂ ತಂಡ ಪ್ರಥಮ ಬಹುಮಾನ ಪಡೆದರೆ, ನಿಹಾರಿಕ ಹಾಗೂ ತಂಡ ದ್ವಿತೀಯ ಬಹುಮಾನ ಮತ್ತು ಪೊನ್ನಮ್ಮ ಹಾಗೂ ತಂಡ ತೃತೀಯ ಬಹುಮಾನ ಪಡೆಯಿತು. ಉಪನ್ಯಾಸಕಿಯರಾದ ರಶ್ಮಿ ಕಾಳಯ್ಯ, ಕವಿತಾ, ರಮ್ಯಾ ಹಾಗೂ ರೂಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭ ಉಪನ್ಯಾಸಕರಾದ ಹೇಮಂತ್, ವಿವೇಕ್, ಶರತ್, ಜೋಮೊನ್, ರಶ್ಮಿ, ಕ್ರಿಸ್ಟಿನಾ, ರೆನ್ನಿ ಉಪಸ್ಥಿರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT