ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹ್! ವಾಲ್‌ಪರೈ

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಷ್ಣು ಕೆ ಕಿನ್ನಾಳ

ತ್ತಲೂ ಹಸಿರು ಬೆಟ್ಟಗುಡ್ಡಗಳ ಉತ್ತುಂಗ ಸಾಲುಗಳು. ಆ ಬೆಟ್ಟಗುಡ್ಡಗಳಲ್ಲಿ ಅಡಗಿರತಕ್ಕ ಕಾಫಿ, ಟೀ ಎಸ್ಟೇಟ್‌ಗಳು. ನಡುವೆ ಕಿರುದಾರಿಗಳು. ಆ ದಾರಿಗಳೋ ಕಚ್ಚಾ ರಸ್ತೆಗಳು. ಅಲ್ಲಲ್ಲಿ ಟಾರ್‌ರಸ್ತೆಗಳೂ ಉಂಟು. ಆ ರಸ್ತೆಗಳ ಮೇಲೆ ಆವಾಗವಾಗ ಓಡಾಡುವ ವಾಹನಗಳು. ಇವೆಲ್ಲವೂ ಒಂಥರ ನೋಡುಗರ ಕಣ್ಮನಗಳಿಗೆ ಮುದ ನೀಡುತ್ತವೆ. ಇನ್ನು ವಾಲ್‌ಪರೈ ಊರಿನ ಬಗ್ಗೆ ಹೇಳುವುದಾದರೆ ಅದೊಂದು ಪುಟ್ಟ ನಗರ. ನಗರ ಎಂದಾಕ್ಷಣ ಮನೆ, ಅಂಗಡಿ ಮುಂಗಟ್ಟು, ಸಾರಿಗೆ ಬಸ್, ಆಟೋ, ಕಾರು, ಬೈಕ್ ಇತ್ಯಾದಿಗಳೆಲ್ಲವೂ ಇಲ್ಲಿವೆ. ಇಲ್ಲಿ ನೇಚರೂ ಉಂಟು, ಸಿಟಿಯೂ ಉಂಟು. ಊರ ಹೊರಗಡೆ ಹೊಳೆಯೋಪಾದಿ ಹರಿವ ಸಣ್ಣ ನದಿಯೂ ಇರುವುದನ್ನು ಕಂಡು ನೀರು ತುಂಬಿದ್ದಾಗ ಅದರ ಹತ್ತಿರ ಕೇವಲ ಹೋಗಿಬರಬಹುದಷ್ಟೆ. ನೀರಿಲ್ಲದಿದ್ದಾಗ ಹೊಳೆಯ ಮಧ್ಯೆ ಇರತಕ್ಕಂತಹ ಕಲ್ಲುಗಳ ಮೇಲೆ ಕುಳಿತು ಕಾಲನ್ನು ನೀರಲ್ಲಿ ಇಳಿಬಿಟ್ಟುಕೊಂಡು ಕೈಯನ್ನು ನೀರಲ್ಲಿ ಇರಿಸುತ್ತ, ಮೀಯುವಾಸೆ ಹೆಚ್ಚಾಗಿ ನೀರಿನಲ್ಲಿ ಇಳಿದರೆ ಮೊದಮೊದಲು ಚಳಿಯು ಉಂಟಾಗಿ, ಬಳಿಕದಲ್ಲಿ ನೀರು ಬೆಚ್ಚನೆಯಾದ ಅನುಭವ ನೀಡುತ್ತದೆ. ಈಜಾಡಬಹುದು ಅಥವಾ ಪೂರ್ತಿ ನೀರೊಳಗೆ ಮುಳುಗುತ್ತ ಆನಂದಿಸಬಹುದು. ಇಂಥ ನೀರು ಹರಿವ ಪುಳಕವನ್ನು ಕಂಡಾಗ ಖುಷಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಪೊಲ್ಲಾಚಿ

ಇದೂ ಸುಮಾರಾಗಿ ಬೆಳೆದಂತಹ ಸುಂದರ ನಗರ. ಇಲ್ಲಿಂದ ಸರಿಸುಮಾರು 7-8 ಕಿ.ಮೀ ಸಾಗಿದರೆ ಅಳೆಯಾರ್ ಎಂಬ ಸ್ವಪ್ನಲೋಕಕ್ಕೆ ಬಂದಿರುತ್ತೀರಿ. ಇಲ್ಲಿ ಬೃಹತ್ ನದಿಯು ಉದ್ದಗಲ ವ್ಯಾಪಿತ ಮೈಚಾಚಿಕೊಂಡು ಪವಡಿಸಿದಂತಿದೆ. ನದಿಯಾಚೆಗಿನ ಬದಿಯಲ್ಲಿ ಉತ್ತಮೋತ್ತಮ ಬೆಟ್ಟಗುಡ್ಡಗಳ ಸಾಲು ಸಾಲುಗಳು ನೋಡುಗರಿಗೆ ಮುದನೀಡುತ್ತವೆ. ಒಂದೆಡೆಯಲ್ಲಿ ನದಿಗುಂಟಕ್ಕೂ ನೆಲೆಸಿಹ ರಸ್ತೆಗಳು, ಆ ರಸ್ತೆಗಳ ಇಕ್ಕೆಲಗಳಲ್ಲಿ ಎಲೆಕ್ಟ್ರಿಕ್ ದೀಪಗಳು ಇದ್ದರೆ ಇನ್ನೊಂದೆಡೆಯಲ್ಲಿ ಬೆಟ್ಟದುದ್ದಕ್ಕೂ ಅಡಿಯಿಂದ ಮುಡಿಯವರೆಗೆ ಹಾವಿನೋಪಾದಿ ಕಂಡುಬರುವ ಬೆಟ್ಟದ ಏರುರಸ್ತೆಗಳು. ಈ ರಸ್ತೆಯನ್ನನುಸರಿಸಿ ಅನತಿ ದೂರ ಹೋದಂತೆ ಒಂದು ಜಲಪಾತ ಕಣ್ಣಿಗೆ ರಾಚುತ್ತದೆ.

ಮಂಕಿ ಜಲಪಾತ

‘ಮಂಕಿ ಫಾಲ್ಸ್’ ಎಂದಾಕ್ಷಣ ಮಂಕಿ ಅಥವಾ ಕೋತಿಗಳು ಇಲ್ಲಿ ಇರುವುದು ಸಹಜವೇ. ಆದ್ದರಿಂದ ಇದಕ್ಕೆ ಈ ಹೆಸರು ಅನ್ವರ್ಥಕ. ಅದೇ ಥರ ಇಲ್ಲಿರುವಂತಹ ಸಣ್ಣಪುಟ್ಟ ಮಂಕಿಗಳು ಹೋದವರಿಗೆ ಉಪಟಳ ನೀಡದೆ ಇರವು. ಧಡೂತಿ, ದಾಂಡಿಗ ಮಂಗಗಳು ನೋಡಲಿಕ್ಕೆ ಭಯ ಹುಟ್ಟಿಸುತ್ತವೆ. ಸುಮಾರು 50 ಅಡಿಗಳ ಬೆಟ್ಟದೆತ್ತರದಿಂದ ಅಲ್ಲಲ್ಲಿ ಜಿಗಿಜಿಗಿಯುತ್ತ ಕಲ್ಬೆಟ್ಟದಿಂದ ಧುಮ್ಮಿಕ್ಕುವ ಈ ಮಂಕಿ ಜಲಪಾತದ ಆರ್ಭಟ ಹೇಳತೀರದಷ್ಟು ಮಳೆಗಾಲದಲ್ಲಿ. ಶಬ್ದ ಹೊರಸೂಸುತ್ತ ಧುತ್ತನೆ ಬಿದ್ದು ರಸ್ತೆಯೊಳಗಿನ ಕಿರುಸೇತುವೆಯ ಮೂಲಕ ಬಲಪಕ್ಕ ಸೇರಿ ಅಲ್ಲೂ ಚಿಕ್ಕಪುಟ್ಟ ಜಲಪಾತಗಳಾಗಿ ತುಸು ದೂರ ಹರಿದು ಕಟ್ಟಕಡೆಯಲ್ಲಿ ಅಳೆಯಾರ್ ನದಿ ಸೇರುವುದು. ಜಲಪಾತದಲ್ಲಿ ನೀರಿಲ್ಲದಿದ್ದಾಗ ಸ್ನಾನ ಮಾಡಲೋಸುಗ ಜಲಪಾತದಡಿ ಬೆನ್ನೊಡ್ಡಿ ಕುಳಿತರೆ ಧುತ್ತನೆ ಬೀಳುವ ನೀರ ರಭಸ ತೋರಿ ದಾಂಡಿಗನೊಬ್ಬನು ಬೆನ್ನ ಮೇಲೆ ಗುದ್ದಿದಂತಾಗಿ ಬೆನ್ನು ನೋವಿದ್ದಲ್ಲಿ ಶಮನವಾದಂತೆ ತೋರುತ್ತದೆ. ಇನ್ನು ಮುಖವನ್ನು ನೀರಿಗೆ ವಿರುದ್ಧವಾಗಿ ಮೇಲೆತ್ತಿ ಕುಳಿತಾಗ ಮುಖದ ಮೇಲೆ ಬೀಳುವ ನೀರು ಕಣ್ಣೊಳಗೆ, ಬಾಯೊಳಗೆ ಸೇರಿ ಕಣ್ಣನ್ನು ಸ್ವಚ್ಛಗೊಳಿಸುವುದಲ್ಲದೆ ಮೂಗು, ಬಾಯಲ್ಲೆಲ್ಲಾ ನೀರು ಸೇರಿ ಅದನ್ನು ತಿಕ್ಕುತ್ತಾ ಶುಚಿಗೊಳಿಸಬಹುದು.

ಹೇರ್ ಪಿನ್ ತಿರುವುಗಳು

ಪೊಲ್ಲಾಚಿ ತೊರೆದು 7-8 ಕಿ.ಮೀ ಸಾಗಿದೊಡನೆ ಮೈನವಿರೇಳಿಸುವ ಗಿರಿಶೃಂಗಗಳು ಗಮನ ಸೆಳೆಯುವವು. ಆ ಬೆಟ್ಟಗಳ ಮೇಲೋ ಅಥವಾ ಪಕ್ಕದಲ್ಲೋ ಅಥವಾ ಅದನ್ನ ಸುತ್ತುವರಿದೋ ಸಾಗುವ ಸುಮಾರು 30 ಹೆರ್ ಪಿನ್ ರಸ್ತೆಗುಂಟ ಸರಿವುದು ಸುಲಭದ ಮಾತಲ್ಲ. ಇಂಥ ಕಡೆಯಲ್ಲೆಲ್ಲಾ ಸಾಗಲು ಅತಿ ಮುಖ್ಯವಾಗಿ ಜಾಗರೂಕತೆ, ಬಲು ಚಾಣಾಕ್ಷತನದಿಂದ ವಾಹನ ಓಡಿಸುವುದು ಒಳ್ಳೆಯದು. ಮಂಜು ಮುಸುಕಿದ ವಾತಾವರಣವೂ ಆಗಾಗ್ಗೆ ಕಾಣಸಿಗುವುದುಂಟು. ದಟ್ಟೈಸಿದ ಬೆಳ್ಮೋಡಗಳು ಅಲ್ಲಿರುವ ಬೆಟ್ಟಗಳನ್ನು ತನ್ನೊಡಲಲ್ಲಿ ಮುಚ್ಚಿಟ್ಟು ಮೋಡಗಳು ಹಿಂಸರಿದಾಗ ಬೆಟ್ಟದಾಕೃತಿಗಳು ಬಲು ಮೋಹಕವಾಗಿ ತೋರುತ್ತವೆ. ಗುಂಪು ಗುಂಪಾಗಿ ಬೆಳೆದಿರುವ ಮರಗಳ ನಡುವಿನ ಅಂಕುಡೊಂಕಾದ, ನಯವಾದ ಡಾಂಬರು ರಸ್ತೆ, ರಸ್ತೆಯ ಅಕ್ಕಪಕ್ಕದ ಬದಿಗಳಲ್ಲಿ, ರಸ್ತೆಯುದ್ದಕ್ಕೂ ಪಸರಿಸಿಹ ಬಿಳಿಪಟ್ಟೆಗಳು. ಇಂಥಾ ಕಡೆಗಳಲ್ಲಿ ನಮ್ಮದೇ ಆದ ಕಾರು/ವ್ಯಾನ್‌ನಲ್ಲಿ ಬಲು ವೇಗವಾಗಿ ಓಡಿಸುತ್ತಿದ್ದೇವೆ ಎಂದರೆ ಅದರಷ್ಟು ಖುಷಿ ಬೇರೆಲ್ಲೂ ಸಿಗದು. ಹೋದಷ್ಟೂ ದೂರ ವಿವಿಧಾಕೃತಿಗಳ ಬೃಹದಾಕಾರದ ಕಲ್ಲುಬೆಟ್ಟಗಳೋ ಬೆಟ್ಟಗಳು. ಆ ಬೆಟ್ಟದಿಂದ ಬೆಟ್ಟದೆತ್ತರಕ್ಕೆ ಹೋಗುತ್ತಾ, ಅಲ್ಲಲ್ಲಿ ತುಸು ಸಮತಟ್ಟು ರಸ್ತೆಯಲ್ಲೂ ಸವೆಯುತ್ತಾ ಸುಮಾರು ಒಂದೂವರೆ ಗಂಟೆಗಳಷ್ಟು ಪಯಣಿಸಿದರೆ ವಾಲ್‌ಪರೈ ತಲುಪಬಹುದು.

ವಾಲ್‌ಪರೈ ಚಿಕ್ಕ ನಗರದಲ್ಲಿ ಲಾಡ್ಜ್‌ಗಳು, ಹೋಮ್‌ ಸ್ಟೇಗಳು, ಹೋಟೆಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಎಷ್ಟು ದಿನ ಬೇಕಾದರೂ ಅಲ್ಲಿ ತಂಗಬಹುದು. ಆದರೆ ಸಾಕಷ್ಟು ಹಣ, ವೇಳೆ, ಆಸಕ್ತಿ, ಜನರ ಗುಂಪು ಇರಬೇಕಷ್ಟೆ. ನಗರದ ಮಧ್ಯೆ ಒಂದು ಸಣ್ಣ ಮೆಸ್ ಇದ್ದು ಕಾಫಿ, ಟೀ, ಉಪಾಹಾರ, ಊಟ ಎಂದು ಹೋದವರಿಗೆ ಇಲ್ಲಿನವರು ಮೃಷ್ಟಾನ್ನದ ಸವಿರುಚಿ ಉಣಬಡಿಸುತ್ತಾರೆ. ಮೃದು ಮಾತಿನಿಂದ, ಒಳ್ಳೆಯ ಮಾತುಗಳನ್ನಾಡುತ್ತ ಆಹಾರ ನೀಡುತ್ತಾರೆ. ಅವರಾಡುವ ತಮಿಳು ಮಾತಂತೂ ಎಂಥ ಕನ್ನಡಿಗರಿಗೂ ಬಲು ಸುಲಭದಲ್ಲಿ ಅರ್ಥವಾಗುವಂತೆ ಇರುತ್ತದೆ.

ಇಲ್ಲಿ ಸುತ್ತಮುತ್ತಲಲ್ಲಿ ನೋಡಿ ನಲಿಯಬಹುದಾದ ತಾಣಗಳೆಂದರೆ ನಿರಾರ್ ಡ್ಯಾಂ, ಶೋಲಯಾರ್ ಡ್ಯಾಂ ಮತ್ತು ಅತಿರಪಳ್ಳಿ ಫಾಲ್ಸ್‌ಗಳು. ಮುನ್ನಾರ್ ಇಲ್ಲಿಗೆ ಸಮೀಪವಿರುವ ಇನ್ನೊಂದು ಮನಮೋಹಕ ತಾಣ.

ನಿರಾರ್ ಅಣೆಕಟ್ಟು

ವಾಲ್‌ಪರೈಯಿಂದ ಟೀ ಎಸ್ಟೇಟ್‌ನ್ನು ಭೇದಿಸಿಕೊಂಡು, ಅಂಕುಡೊಂಕಾದ ಡಾಂಬರು ರಸ್ತೆಗುಂಟ 10–12 ಕಿ.ಮೀ ಸಾಗಿದರೆ ನಿರಾರ್ ಡ್ಯಾಂ ಇದಿರಾಗುತ್ತದೆ. ಆ ಡ್ಯಾಂನ ಎಡಪಾರ್ಶ್ವದಲ್ಲಿ ನದಿಯ ನೀರು ಉದ್ದಗಲ ವ್ಯಾಪಿತದಲ್ಲಿ ನೆಲೆಸಿದ್ದರೆ, ಅದರ ಮಧ್ಯೆ ಭಾಗದಲ್ಲಿ ಅಣೆಕಟ್ಟೆಯಿದ್ದು, ನೀರು ಬೀಳುವುದಕ್ಕೆ ಹಾಗೂ ನೀರು ಬೀಳದಿರಲಿ ಎಂಬಂತೆ 4 ಕಬ್ಬಿಣದ ಗೇಟ್‌ಗಳು ಇವೆ. ನೀರು ಭರ್ತಿಯಾದಾಗ ಗೇಟ್ ಮೂಲಕ ಬಿದ್ದ ನೀರು ಬಲಭಾಗದಲ್ಲಿ ಹರಿಯುತ್ತಾ ಆತಹಲ್‌ನ ಕಾಡು ಸೇರುತ್ತದೆ. ನೀರು ಬೀಳುತ್ತಿರುವಾಗಲಂತೂ ನೋಡಬೇಕು ಅದರ ಅಂದವ ಚೆಂದವ. ಆ ನಾಲ್ಕೂ ಗೇಟ್‌ಗಳಿಂದ ಹೊರಬಿದ್ದ ನೀರು ಇಳಿಜಾರು ಜಾಗದಲ್ಲಿ ಬಲು ರಭಸದಿಂದ ಧುಮುಕುವುದನ್ನು ನೋಡುತ್ತಿದ್ದಂತೆಯೇ ಮನಸ್ಸು ಪ್ರಫುಲ್ಲವಾಗುತ್ತದೆ.

ಶೋಲಯಾರ್ ಅಣೆಕಟ್ಟು

ವಾಲ್‌ಪರೈನಿಂದ ಹೊರಟ ಕೊಂಚ ದೂರದಲ್ಲಿಯೇ ಈ ಅಣೆಕಟ್ಟು ಕಂಡುಬರುತ್ತದೆ. ಸುತ್ತಲೂ ಹಸಿರು ದಿಬ್ಬ-ಗುಡ್ಡಗಳು, ನಡುವೆ ಭರ್ತಿಯಾದ ನೀರು, ಒಂದೆಡೆ ಅಣೆಕಟ್ಟೆ, ಇನ್ನೊಂದೆಡೆ ನೀರು ಅಣೆಕಟ್ಟಿಯಿಂದ ಹೊರಬಿದ್ದು ನದಿಯೋಪಾದಿ ಮುಂದೆ ಸಾಗುತ್ತದೆ.

ಅತಿರಪಳ್ಳಿ ಜಲಪಾತ

ವಾಲ್‌ಪರೈನಿಂದ ಪಶ್ಚಿಮ ದಿಕ್ಕಿನತ್ತ 85 ಕಿ.ಮೀ ದೂರ ಸಂಚರಿಸಿದರೆ ಈ ಜಲಪಾತ ಕಣ್ಣಿಗೆ ಬೀಳುತ್ತದೆ.

ವಾಲ್‌ಪರೈ ತೊರೆದು ಸುಮಾರು 35 ಕಿ.ಮೀ ಪಯಣಿಸಿದಾಗ ದಟ್ಟವಾದ ಕಾಡೊಂದರೊಳಕ್ಕೆ ಪ್ರವೇಶಿಸುತ್ತೇವೆ. ಅಕಸ್ಮಾತ್ ಕಾರನ್ನು ಕೊಂಡೊಯ್ದಿದ್ದರೆ ನಯವಾದ ಡಾಂಬರು ರಸ್ತೆಯಲ್ಲಿ ಭಯಂಕರ ಕಾಡಿನಲ್ಲಿ ಸಾಗುವಾಗ ಮಂಗಗಳು, ಜಿಂಕೆಗಳು, ಕೆಲವು ಸಾರಿ ಆನೆಗಳ ಹಿಂಡು ಹಿಂಡುಗಳು ಅಥವಾ ಒಂಟಿ ಆನೆಗಳು ಕಾಣಸಿಗುತ್ತವೆ. ಆದರೆ ಇಂಥ ಕಡೆಗಳಲ್ಲಿ ತುಂಬಾ ಹುಷಾರಾಗಿರಬೇಕು. ಇಲ್ಲವಾದಲ್ಲಿ ನಾವೇನಾದರೂ ಕೀಟಲೆ ಮಾಡಿದರೆ ಆನೆ ಅಟ್ಟಿಸಿಕೊಂಡು ಬರುವುದಂತೂ ದಿಟ. ಆನೆಗಳ ಹಿಂಡೇನಾದರೂ ಕಂಡುಬಂದಲ್ಲಿ ವಾಹನವನ್ನು ತುಸು ದೂರ ನಿಲ್ಲಿಸಿಕೊಂಡು ಅದು ಕಾಡೊಳಕ್ಕೆ ಹೋದ ನಂತರ ಪ್ರಯಾಣ ಮುಂದುವರಿಸಬಹುದು.

ಜಲಪಾತ ನೋಡಲಿಕ್ಕೆ ಪ್ರವೇಶ ಶುಲ್ಕ ತೆತ್ತು ಒಳಹೋಗಬೇಕು. ಮೆಟ್ಟಿಲುಗಳನ್ನೇರುತ್ತ ಮುಂದುವರಿದರೆ ಎದುರಲ್ಲಿ ಬಲು ರಭಸದಿಂದ ಹರಿವ ನದಿಯು ಕಾಣಸಿಗುವುದು. ಮುಂದೆ ಇದೇ ನದಿಯು ಸುಮಾರು 80 ಅಡಿಗಳ ಎತ್ತರ, ಬಲು ಅಗಲವಾದ ಕಲ್ಬೆಟ್ಟದಿಂದ ಕೆಳ ಧುಮ್ಮಿಕ್ಕುವುದು. ಮಳೆಗಾಲದಲ್ಲಂತೂ ಇದರ ಭೋರ್ಗರೆತ ಹೇಳತೀರದು.  ಕಿವಿಗಡಗಿಚಿಕ್ಕುವ ಹಾಗೆ ಧುಮುಕಿ ನಯನ ಮನೋಹರವಾದ ನೋಟವನ್ನು ಬೀರುತ್ತದೆ. ಕೆಳಬಿದ್ದ ನೀರು ಅದೇ ನದಿಯು ವೈಯ್ಯಾರದಿಂದ ತುಳುಕುತ್ತ, ಬಳುಕುತ್ತ ಬಲು ವೇಗದಿಂದ ಮುನ್ನುಗ್ಗಿ ಆ ತಹಲ್‌ನ ಕಾಡನ್ನು ಸೇರುವುದು.

ಬಹುಶಃ ನೀವು ವಿಷ್ಣುವರ್ಧನ್ ನಟಿಸಿರುವ ಸೂರ‍್ಯವಂಶ ಎಂಬ ಕನ್ನಡ ಚಲನಚಿತ್ರವನ್ನು ನೋಡಿರಬಹುದು. ಆ ಚಿತ್ರವನ್ನು ಗಮನವಿಟ್ಟು ನೋಡುತ್ತಿರುವಾಗ ಮೋಹಕ ತಾಣಗಳಾದ ಅಳೆಯಾರ್ ಅಣೆಕಟ್ಟು ಮತ್ತು ಅತಿರಪಳ್ಳಿ ಜಲಪಾತಗಳಲ್ಲಿ ಷೂಟಿಂಗ್ ನಡೆದಿರುವುದನ್ನು ಗುರುತಿಸಬಹುದು.

ವಾಲ್‌ಪರೈ ಸುತ್ತಲಲ್ಲಿ ಬಾಲಾಜಿ ದೇವಾಲಯ, ವೆಲ್ಲಮಲೈ ಟನಲ್, ಗ್ರಾಸ್ ಹಿಲ್ಸ್ (ಅಕ್ಕಮಲೈ), ಚಿನ್ನಕಲ್ಲಾರ್ ಡ್ಯಾಂ, ವಿನಾಯಗರ್ ದೇವಳಂ, ನಲ್ಲಮುಡಿ ವ್ಯೂ ಪಾಯಿಂಟ್, ಕೂಳಂಗಳ್ ನದಿ ಇತ್ಯಾದಿಗಳು ಇರುವುದನ್ನು ನೋಡಬಹುದು.

ಇನ್ನೂ ವೇಳೆಯಿದ್ದಲ್ಲಿ ವಾಲ್‌ಪರೈನಿಂದ ಮುನ್ನಾರ್, ಚಾಲುಕ್ಕುಡಿ, ಟಾಪ್‌ಸ್ಲಿಪ್‌ಗಳತ್ತ ಪಯಣ ಬೆಳೆಸಬಹುದು.

ಇಂಥ ಕಡೆಗಳಲ್ಲಿ ಭೇಟಿ ನೀಡಲು ಸೂಕ್ತ ಸಮಯವೆಂದರೆ ಜೂನ್‌ನಿಂದ ಡಿಸೆಂಬರ್.

ಏನೇ ಇರಲಿ ಈ ಪ್ರಶಸ್ತವಾದ ತಾಣಗಳಿಗೆ ಒಮ್ಮೆಯಾದರೂ ಭೇಟಿ ನೀಡಿ. ಇಂಥ ಅದಮ್ಯ ಸ್ಥಳವನ್ನು ಕ್ಷಣಕಾಲ ನೋಡಿದಷ್ಟು ಸಾರ್ಥಕವೆನಿಸುತ್ತದೆ. ಕಣ್ಮನಗಳು ಇವುಗಳನ್ನು ನೋಡಿ ತಣಿಯುತ್ತವೆ. ಸರಿ, ಇನ್ನು ಅತ್ತ ಕಡೆ ಹೊರಡಲು ಯೋಜಿಸಿ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT