ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದರದಲ್ಲಿ ಸ್ವಲ್ಪ ಏರಿಕೆ

Last Updated 3 ಸೆಪ್ಟೆಂಬರ್ 2017, 6:18 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ಎಪಿಎಂಸಿ ಉಪ ಪ್ರಾಂಗಣದಲ್ಲಿ ಶನಿವಾರ ರೈತರು ತಂದ ಈರುಳ್ಳಿಯ ಬೆಲೆ ಕಳೆದ ವಾರಕ್ಕಿಂತ ಈ ವಾರ ಸ್ವಲ್ಪ ಏರಿಕೆ ಕಂಡಿದೆ. ‘ಸತತ ಮೂರು ನಾಲ್ಕು ವರ್ಷಗಳಿಂದ ಬರಗಾಲ ಆವರಿಸಿಕೊಂಡಿದ್ದರಿಂದ ಅಲ್ಪ ಸ್ವಲ್ಪ ಬೋರ್‌ವೆಲ್‌ ಮತ್ತು ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ನೀರನ್ನು ಹಾಯಿಸಿ ಈರುಳ್ಳಿ ಬಿತ್ತನೆ ಮಾಡಿದ್ದೇವೆ. ಕಳೆದ ವರ್ಷ ಈರುಳ್ಳಿ ಬೆಲೆ ಕುಸಿತದಿಂದಾಗಿ ಈರುಳ್ಳಿ ಕೀಳಲೇ ಇಲ್ಲ. ಪೂರ್ತಿ ಹಾನಿಯಾಗಿದ್ದರಿಂದ ಈ ಬಾರಿ ಬಿತ್ತನೆ ಕಡಿಮೆಯಾಗಿದೆ’ ಎನ್ನುತ್ತಾರೆ ಮೆಡ್ಲೇರಿ ರೈತ ನಾಗಪ್ಪ ಯಲಿಗಾರ.

ಸಾಲ ಮಾಡಿ ಗೊಬ್ಬರ, ಬೀಜ ತಂದು ಬಿತ್ತನೆ ಮಾಡಿ ಈರುಳ್ಳಿ ಬೆಳೆದರೂ ಕಳೆದ ವಾರ ಬೆಲೆ ಕುಸಿದಿತ್ತು. ಈ ವಾರ ಸ್ವಲ್ಪ ಚೇತರಿಸಿಕೊಂಡಿದೆ.  ನಾಸಿಕ್‌್ ಮಾಲು ಒಣಗಿದ್ದು, ದಪ್ಪ ಕ್ವಾಲಿಟಿ ಈರುಳ್ಳಿ ಮಾರುಕಟ್ಟೆ ತುಂಬ ಆವರಿಸಿಕೊಂಡಿದೆ.

‘ಶನಿವಾರ ರೈತರು ತಂದ ಈರುಳ್ಳಿ ಮಾಲು ಹಸಿಯಾಗಿದ್ದು, ಹೊರ ರಾಜ್ಯಗಳಿಗೆ ಕಳಿಸಲು ತೊಂದರೆಯಾಗುತ್ತದೆ. ಖರ್ಚು ಹೆಚ್ಚಿಗೆ ಬರುತ್ತದೆ. ಲಾರಿ ಮೂಲಕ ಹೊರ ರಾಜ್ಯ ಮುಟ್ಟಲು ಮೂರು ನಾಲ್ಕು ದಿನಗಳು ಬೇಕು. ಅಷ್ಟರಲ್ಲಿ ಮೊಳಕೆ ಬಂದು ಈರುಳ್ಳಿ ವಾಸನೆ ಬರುತ್ತದೆ. ಅದಕ್ಕಾಗಿ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುವುದಿಲ್ಲ. ಸ್ಥಳೀಯ ಹಾಗೂ ಚಿಲ್ಲರೆ ವ್ಯಾಪಾರಸ್ಥರಷ್ಟೇ ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಸ್ಥ ಸುರೇಶ ಜ್ಯೋತಿ ಬಣ್ಣದ, ನಿಂಗನಗೌಡ ಮುದಿಗೌಡ್ರ.

ಶನಿವಾರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಅತಿ ಸಣ್ಣದು ₹ 600 ರಿಂದ ₹800 ವರಗೆ, ಮಧ್ಯಮ ಗಾತ್ರದ ಈರುಳ್ಳಿ ₹ 1300 ದಿಂದ ₹ 1400, ದಪ್ಪ ₹ 1800 ರಿಂದ 2100 ರೂ ವರೆಗೆ ಮತ್ತು ಚಕ್ಕಳೆ (ಹಕ್ಕಳೆಯಾಗಿದ್ದು) ಈರುಳ್ಳಿ ₹ 200 ರಿಂದ ₹ 400 ದರವಿತ್ತು. 

‘ಈ ವರ್ಷ ಮಳೆ ಕೊರತೆಯಾಗಿದ್ದರಿಂದ 3 ಎಕರೆ ಮಾತ್ರ ಈರುಳ್ಳಿ ಬಿತ್ತನೆ ಮಾಡಿದ್ದೇವೆ. 3 ಎಕರೆಗೆ 300 ರಿಂದ 450 ಚೀಲ ಈರುಳ್ಳಿ ಉತ್ಪನ್ನ ಬರುತ್ತದೆ. ಈಗಾಗಲೇ ಎರಡು ಬಾರಿ ಈರುಳ್ಳಿ ಕಿತ್ತು ಮಾರಾಟಕ್ಕೆ ತಂದಿದ್ದೇವೆ.

ಕಳೆದ ವಾರ ದರ ಕಡಿಮೆಯಾಗಿತ್ತು. ಈ ವಾರ ಸ್ವಲ್ಪ ಹೆಚ್ಚಾಗಿದೆ. ಇಂದು 32 ಚೀಲ ಈರುಳ್ಳಿ ತಂದಿದ್ದೇನೆ. ದಪ್ಪ ಈರುಳ್ಳಿ ₹ 2100 ವರೆಗೆ ಮಾರಾಟವಾಗಿದೆ. ಬೀಜ, ಗೊಬ್ಬರ, ಬಿತ್ತನೆ ಖರ್ಚು, ಗಾಡಿ ಬಾಡಿಗೆ, ಕಿತ್ತಿದ್ದು, ಹೆಚ್ಚಿ ಚೀಲದ ಬಾಡಿಗೆ ಕೂಡ ಮೈಮೇಲೆ ಬರುತ್ತದೆ’ ಎನ್ನುತ್ತಾರೆ ಹಾವೇರಿ ತಾಲ್ಲೂಕಿನ ಗುತ್ತಲ ಗ್ರಾಮದ ರೈತ ಬಸಪ್ಪ ನೆಗಳೂರು.

ಹಾವೇರಿ ತಾಲ್ಲೂಕಿನ ಗುತ್ತಲ, ನೆಗಳೂರು, ಕೂರಗುಂದ, ಯಲಗಚ್ಚ, ಹಾವನೂರ, ಬೆಳವಿಗಿ, ಕನವಳ್ಳಿ, ಹನುಮಾಪುರ, ಭರಡಿ, ಬಸಾಪುರ. ಹಡಗಲಿ ತಾಲ್ಲೂಕಿನ ಶಾಖಾರ, ಹಾಂಸಿ, ಹ್ಯಾರಡ, ಹಿರೇಹಡಗಲಿ ಮತ್ತು ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರ, ಅಂತರವಳ್ಳಿ, ಅಸುಂಡಿ, ಕಾಕೋಳ, ಹುಲಿಹಳ್ಳಿ, ಯರೇಕುಪ್ಪಿ, ಉಕ್ಕುಂದ, ಸರ್ವಂದ, ಹೊನ್ನತ್ತಿ, ಕರೆಮಲ್ಲಾಪುರ, ಯತ್ತಿನಹಳ್ಳಿ, ಮೈದೂರ, ಗುಡಗೂರ, ಗಂಗಾಪುರ, ಕುದರಿಹಾಳ, ಚಳಗೇರಿ, ಕರೂರ, ರಾವುತನಕಟ್ಟಿ, ಯಕ್ಲಾಸಪುರ, ಹಿರೇಬಿದರಿ, ಮೇಡ್ಲೇರಿ, ಆರೆಮಲ್ಲಾಪುರ, ತೆರೆದಹಳ್ಳಿ, ಇಟಗಿ, ಮಣಕೂರ, ಮಷ್ಟೂರು ಭಾಗದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ 3 ಸಾವಿರ ಹೆಕ್ಟೇರ್‌ ಈರುಳ್ಳಿ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ಒಂದು ತಿಂಗಳು ಬಿತ್ತನೆ ತಡವಾಗಿದೆ. ಕಾಲುವೆಗೆ ನೀರು ಬಿಟ್ಟಿದ್ದರಿಂದ ಈರುಳ್ಳಿ ಬೆಳೆ ಉತ್ತಮವಾಗಿದ್ದು, ಇನ್ನೊಂದು ತಿಂಗಳಿಗೆ ಕೀಳಲು ಬರುತ್ತದೆ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ನಿರ್ದೇಶಕ ನೂರ್‌ ಅಹ್ಮದ್‌ ಹಲಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT