ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯ ಸಾಧಕ ರಮೇಶ ಬಸಪ್ಪ

Last Updated 3 ಸೆಪ್ಟೆಂಬರ್ 2017, 6:23 IST
ಅಕ್ಷರ ಗಾತ್ರ

ಹಿರೇಕೆರೂರ ತಾಲ್ಲೂಕಿನ ಬುರಡೀಕಟ್ಟಿ ಗ್ರಾಮದ ಸಮೀಪ ಹೊಲದಲ್ಲಿ ಕೊಟ್ಟಿಗೆ ನಿರ್ಮಿಸಿಕೊಂಡು ಮಿಶ್ರತಳಿ ಹಸುಗಳನ್ನು ಸಾಕಿ, ಹೈನುಗಾರಿಕೆಯಲ್ಲಿ ತೊಡಗಿರುವ ರಮೇಶ ಬಸಪ್ಪ ತೋರಣಗಟ್ಟಿ ಅಪಾರ ಕನಸುಗಳನ್ನು ಹೊಂದಿರುವ ಉತ್ಸಾಹಿ ಯುವಕ.

ಶ್ರೀಧರಸ್ವಾಮಿ ಡೇರಿ ಫಾರ್ಮ್‌ ಹೆಸರಿನಲ್ಲಿ 8 ಎಚ್‌.ಎಫ್‌. ಮಿಶ್ರತಳಿ ಹಸುಗಳನ್ನು ಸಾಕಣೆ ಮಾಡಿದ್ದಾರೆ. ಪ್ರತಿ ನಿತ್ಯ 100 ಲೀಟರ್‌ಗಿಂತ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ರಮೇಶ ತೋರಣಗಟ್ಟಿ ಬಿ.ಎ., ಬಿ.ಇಡಿ ಪದವೀಧರ! ಹಿರೇಕೆರೂರ ಪಟ್ಟಣದ ನಿವಾಸಿ.

ವೈಜ್ಞಾನಿಕ ನಿರ್ವಹಣೆ ಮೂಲಕ ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಅರಿತು, ಹೈನುಗಾರಿಕೆಗೆ ಅಗತ್ಯವಿರುವ ತರಬೇತಿ ಪಡೆದರು. ಒಂದೂವರೆ ವರ್ಷದ ಹಿಂದೆ ಡೇರಿ ಫಾರ್ಮ್ ಆರಂಭಿಸಿರುವ ಅವರು ಹಾಲನ್ನು ಲೀಟರ್‌ಗೆ ₹35ರಂತೆ ಹಿರೇಕೆರೂರಿನಲ್ಲಿ ಹೋಟೆಲ್‌ಗಳಿಗೆ, ಆಯ್ದ ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯದಲ್ಲಿ ಇನ್ನೂ 10 ಹಸುಗಳನ್ನು ಖರೀದಿಸಿ, ಹಾಲು ಉತ್ಪಾದನೆಯನ್ನು 200 ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಿದ್ದಾರೆ. ಇಬ್ಬರು ಕೆಲಸಗಾರರೊಂದಿಗೆ ಅಗತ್ಯವಿರುವಾಗಿ ಸ್ವತಃ ಕೆಲಸ ಮಾಡುತ್ತಾರೆ.

‘ಹೈನುಗಾರಿಕೆಗೆ ಸುಮಾರು ₹25 ಲಕ್ಷ ಬಂಡವಾಳ ಹೂಡಿದ್ದೇನೆ. ಕೆನರಾ ಬ್ಯಾಂಕ್‌ನಲ್ಲಿ ₹6 ಲಕ್ಷ ಸಾಲವನ್ನು ಪಡೆದಿದ್ದು, ನಬಾರ್ಡ್‌ನಿಂದ ₹2 ಲಕ್ಷ ಸಹಾಯಧನ ದೊರಕಿದೆ. ನಿತ್ಯದ ಹಾಲು ಉತ್ಪಾದನೆಯಲ್ಲಿ ವೆಚ್ಚ ಕಳೆದು ತಿಂಗಳಿಗೆ ಸುಮಾರು ₹30–35 ಸಾವಿರ ಉಳಿತಾಯವಾಗುತ್ತದೆ’ ಎಂದು ರಮೇಶ ತೋರಣಗಟ್ಟಿ ತಿಳಿಸಿದರು.

‘ಗೋವಿನ ಜೋಳ, ಚಿನ್ನಿಕಡಿ, ಗೋಧಿ ಬೂಸಾ, ಅಕ್ಕಿ ತೌಡು, ಶೆಂಗಾ ಹಿಂಡಿ, ಉಪ್ಪು ಹಾಗೂ ಲವಣ ಮಿಶ್ರಣ ಸೇರಿಸಿ ಸ್ವತಃ ಪಶು ಆಹಾರ ತಯಾರಿಸಿಕೊಳ್ಳುತ್ತೇವೆ. 1 ಎಕರೆಯಲ್ಲಿ ಹಸಿರು ಮೇವು ಬೆಳಿದಿದ್ದು, ಹಾಲು ಉತ್ಪಾದನೆಯ ಪ್ರಮಾಣಕ್ಕೆ ಅನುಸಾರವಾಗಿ ಪಶುವೈದ್ಯರ ಮಾರ್ಗದರ್ಶನದಂತೆ ಪಶು ಆಹಾರ, ಹಸಿ ಮೇವು ಹಾಗೂ ಒಣ ಮೇವು ನೀಡುತ್ತಿದ್ದೇವೆ. ಹಾಗಾಗಿ ವೆಚ್ಚದ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಹಿರೇಕೆರೂರ ತಾಲ್ಲೂಕಿನಲ್ಲಿಯೇ ಅತ್ಯಂತ ವೈಜ್ಞಾನಿಕ ವಿಧಾನ ಹೊಂದಿದ ಮಾದರಿ ಡೇರಿ ಫಾರ್ಮ್‌ ಅನ್ನು ಮಾಡುವ ಉದ್ದೇಶವಿದೆ. ತಾಲ್ಲೂಕಿನ ರೈತರು, ಹೈನುಗಾರರು ಇಲ್ಲಿ ಬಂದು ಅಗತ್ಯ ಸಲಹೆ ಪಡೆದುಕೊಂಡು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಕನಸಿದೆ’ ಎಂದು ಭವಿಷ್ಯದ ಯೋಜನೆಯನ್ನು ರಮೇಶ  ಹಂಚಿಕೊಂಡರು.
ಹೈನುಗಾರಿಕೆಯ ಜೊತೆಗೆ ರಾಜಕೀಯದಲ್ಲಿಯೂ ಸಕ್ರಿಯವಾಗಿರುವ ಅವರು, ಹಿರೇಕೆರೂರ ಪಟ್ಟಣ ಪಂಚಾಯ್ತಿಯ ಸದಸ್ಯ. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಕಾಂಗ್ರೆಸ್ ಸೇರಿರುವ ಅವರು ಮಾಜಿ ಶಾಸಕ ಬಿ.ಸಿ.ಪಾಟೀಲರ ಆಪ್ತರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT