ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ: ಹೂವಿನ ವ್ಯಾಪಾರ ಜೋರು

Last Updated 3 ಸೆಪ್ಟೆಂಬರ್ 2017, 8:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನೆರೆಯ ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮವಿರುವುದರಿಂದ ಪಟ್ಟಣದ ಹೂವಿನ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ.
ಇದೇ 4ರಂದು (ಸೋಮವಾರ) ನಡೆಯಲಿರುವ ಓಣಂ ಹಬ್ಬಕ್ಕಾಗಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಈ ಹಬ್ಬದ ಸಂದರ್ಭದಲ್ಲಿ ಕೇರಳಿಗರು ಹತ್ತು ದಿನಗಳವರೆಗೆ ಮನೆಯಲ್ಲಿ ಹೂವಿನ ರಂಗೋಲಿ ಬಿಡಿಸಿ ಅಲಂಕರಿಸುತ್ತಾರೆ (ಇದನ್ನು ಮಲಯಾಳಿ ಭಾಷೆಯಲ್ಲಿ ಪೂಕಲಂ ಎಂದು ಕರೆಯುತ್ತಾರೆ). ಮೊದಲ ದಿನ ಹೂವಿನಿಂದ ಅಲಂಕಾರ ಮಾಡಿದರೆ ನಂತರ ಹತ್ತು ದಿನ ಸಹ ವಿವಿಧ ಬಣ್ಣದ ಹೂವಿನಿಂದ ರಂಗೋಲಿಯನ್ನು ಬಿಡಿಸುವುದು ಸಂಪ್ರದಾಯ.

ಹಾಗಾಗಿ, ಬಣ್ಣದ ಹೂವುಗಳಾದ ಚೆಂಡುಮಲ್ಲಿಗೆ, ಕಾಕಡ, ಸೇವಂತಿ, ಮಲ್ಲಿಗೆ ಸೇರಿದಂತೆ ಬಿಡಿ ಹೂಗಳಿಗೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ತಾಲ್ಲೂಕಿನ ರೈತರು ಮೇ ತಿಂಗಳ ಕೊನೆಯಲ್ಲಿ ನಾಟಿ ಮಾಡುತ್ತಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಹೂವುಗಳನ್ನು ಕಟಾವು ಮಾಡಿ ಕೇರಳಿಗರಿಗೆ ಕ್ವಿಂಟಲ್‌ಗಟ್ಟಲೆ ಮಾರಾಟ ಮಾಡುತ್ತಾರೆ.

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಕ್ಕೆಲಗಳಲ್ಲಿ ಗೂಡಂಗಡಿಗಳನ್ನು ಮಾಡಿ ಹೂವುಗಳ ಮಾರಾಟಕ್ಕೆ ತೊಡಗುತ್ತಾರೆ. ಕೇರಳದಲ್ಲಿ ಬಿಡಿ ಹೂಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಚೆಂಡುಮಲ್ಲಿಗೆ ₹ 100 ರಿಂದ 150, ಸೇವಂತಿಗೆ ₹ 300, ಕಾನಕಾಂಬರ ₹ 400, ಮಲ್ಲಿಗೆ ₹ 300 ಧಾರಣೆಯಿದೆ.

‘ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಇಲ್ಲಿನ ರೈತರಿಂದ ನೇರವಾಗಿ ಹೂವುಗಳನ್ನು ಖರೀದಿ ಮಾಡಿ ಕೇರಳಕ್ಕೆ ಕೊಂಡೊಯ್ಯುತ್ತೇವೆ. ಈ ಸಮಯದಲ್ಲಿ ಅಲ್ಲಿ ಉತ್ತಮವಾಗಿ ವ್ಯಾಪಾರವಾಗುತ್ತದೆ. ಖರ್ಚುಗಳೆಲ್ಲವನ್ನು ಒಳ್ಳೆಯ ಲಾಭವೂ ಗಿಟ್ಟುತ್ತದೆ’ ಎಂದು ಹೂವಿನ ವ್ಯಾಪಾರಿ ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ನಮ್ಮ ಸಂಪ್ರದಾಯ. ಓಣಂ ದೀಪಾವಳಿ ಹಬ್ಬದ ಮುನ್ಸೂಚನೆಯ ಹಬ್ಬವಾಗಿದ್ದು, ಬಲಿ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ರಂಗೋಲಿಯನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಹೂವಿನ ಬೆಲೆ ಹೆಚ್ಚಾದರೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಕೆಲವೊಮ್ಮೆ ಮೈಸೂರು ಭಾಗದಿಂದ ಹೂವನ್ನು ತೆಗೆದುಕೊಂಡು ಹೋಗುತ್ತೇವೆ’ ಎನ್ನುತ್ತಾರೆ ಕೇರಳದ ವ್ಯಾಪಾರಿ ಸಂಜಯ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT