ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಎಂದರೆ ಕಾಮಗಾರಿಗಳ ಸುಗ್ಗಿ

Last Updated 3 ಸೆಪ್ಟೆಂಬರ್ 2017, 8:50 IST
ಅಕ್ಷರ ಗಾತ್ರ

ಮೈಸೂರು: ದಸರಾ ಎಂದರೆ ಕೇವಲ ಜಂಬೂಸವಾರಿಯಷ್ಟೇ ಅಲ್ಲ. ನಗರದ ಪಾಲಿಗೆ ಕಾಮಗಾರಿಗಳ ಸುಗ್ಗಿಯೂ ಹೌದು. ವಿವಿಧ ಕಾಮಗಾರಿಗಳು ದಸರಾ ವೇಳೆ ನಡೆಯುತ್ತಲೇ ಇರುತ್ತವೆ. ಅದರಲ್ಲಿ ರಸ್ತೆ ರಿಪೇರಿ ಕೆಲವರಿಗೆ ‘ಬಹಳ ಮಹತ್ವದ್ದು’ ಆಗಿರುತ್ತದೆ.

ಪ್ರತಿ ವರ್ಷ ಕನಿಷ್ಠ ಎಂದರೂ ಪಾಲಿಕೆಗೆ ಸರ್ಕಾರದಿಂದ ರಸ್ತೆ ರಿಪೇ ರಿಗೆಂದೇ ₹ 5 ಕೋಟಿ ನೀಡಲಾಗುತ್ತದೆ. ಈ ಹಣ ಪಡೆದು ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತದೆ. ಮತ್ತೊಂದು ದಸರಾ ಬಂದಾಗ ಮತ್ತಷ್ಟು ಕೋಟಿಗೆ ರಸ್ತೆ ರಿಪೇರಿ ಮಾಡಲಾಗುತ್ತದೆ.‌ 2014ರಲ್ಲಿ ಈ ಹಣದ ಜತೆಗೆ ಪ್ರತಿ ವಾರ್ಡಿಗೂ ₹ 2.5 ಲಕ್ಷ ಹಣವನ್ನು ಗುಂಡಿ ಮುಚ್ಚುವುದಕ್ಕೆಂದೇ ಬಿಡುಗಡೆ ಯಾಗುತ್ತು. ಆದರೂ ಪ್ರತಿ ವರ್ಷ ರಸ್ತೆ ಗುಂಡಿ ಬೀಳುತ್ತಲೇ ಇರುತ್ತದೆ.

ಏಕೆ ಹೀಗೆ?: ಪಾಲಿಕೆ ಸದಸ್ಯರನ್ನು ಕೇಳಿದರೆ ವಿವಿಧ ಕಾರಣಗಳಿಗಾಗಿ ರಸ್ತೆ ಅಗೆಯಲಾಗುತ್ತದೆ. ಕೇಬಲ್ ಸಂಪರ್ಕ, ನೀರು ಹಾಗೂ ವಿದ್ಯುತ್ ಸಂಪರ್ಕಗಳಿಗಾಗಿ ರಸ್ತೆ ಅಗೆಯುವುದು ಅನಿವಾರ್ಯ. ಇದರಿಂದ ಗುಂಡಿ ಬೀಳುವುದು ಸಾಮಾನ್ಯ. ಹಾಗಾಗಿ, ಗುಂಡಿ ಮುಚ್ಚಲೇಬೇಕು ಎನ್ನುತ್ತಾರೆ.

‘ಏನು ಮಾಡುವುದು. ಎಲ್ಲರಿಗೂ ನೀರು, ವಿದ್ಯುತ್, ಇಂಟರ್‌ನೆಟ್ ಕೊಡಬೇಕು. ಆಗ ರಸ್ತೆ ಅಗೆಯಲೇಬೇಕು. ಇದರಿಂದ ಗುಂಡಿ ಅನಿವಾರ್ಯ’ ಎಂದು ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಹೇಳುತ್ತಾರೆ. ವಾಸ್ತವವೇ ಬೇರೆ: ವಾಸ್ತವ ಸಂಗತಿ ಮಾತ್ರ ಬೇರೆಯಾಗಿದೆ. ರಸ್ತೆ ಅಗೆಯಲು ಪಾಲಿಕೆ ಅನುಮತಿ ಕಡ್ಡಾಯ.

ಅದಕ್ಕೆ ಸೂಕ್ತ ಶುಲ್ಕವೂ ಇದೆ. ಅದರಲ್ಲಿ ಅಗೆದಿರುವ ರಸ್ತೆಯ ದುರಸ್ತಿ ಶುಲ್ಕವೂ ಸೇರಿದೆ. ರಸ್ತೆ ಅಗೆದು ಕೆಲಸ ಮುಗಿದ ಬಳಿಕ ಅದನ್ನು ಸಂಬಂಧಪಟ್ಟವರು ಇಲ್ಲವೇ ಪಾಲಿಕೆ ತಕ್ಷಣ ಮುಚ್ಚಿ, ಮೊದಲಿನ ಸ್ವರೂಪಕ್ಕೆ ತರಬೇಕು. ಆದರೆ, ಈ ಕೆಲಸ ನಗರದಲ್ಲಿ ಆಗುತ್ತಿಲ್ಲ. ಅಗೆದವರು ತಮ್ಮ ಕೆಲಸ ಮುಗಿಸಿ ಹೋಗುತ್ತಾರೆ.

ಇದರಿಂದ ಗುಂಡಿ ಮತ್ತಷ್ಟು ದೊಡ್ಡದಾಗಿ ಹಲವು ಅಪಘಾತಗಳಿಗೆ ಕಾರಣವೂ ಆಗುತ್ತದೆ. ಜತೆಗೆ, ನುಣುಪಾದ ರಸ್ತೆ ಮಾಡಿದ ನಂತರ ಒಂದೆರಡು ತಿಂಗಳಲ್ಲಿ ಮತ್ತೆ ಪಾಲಿಕೆಯೇ ಒಳಚರಂಡಿಗಾಗಿಯೋ ಅಥವಾ ಮತ್ತೊಂದಕ್ಕೋ ಅಗೆಯುತ್ತದೆ. ಆಗ ಗುಂಡಿ ಬಿದ್ದ ರಸ್ತೆಯನ್ನು ಸರಿಪಡಿಸಲು ದಸರೆಯನ್ನು ಕಾಯಲಾಗುತ್ತದೆ.

ರಾಮಾನುಜ ರಸ್ತೆ ದುಸ್ಥಿತಿ: ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಎಂದರೆ ರಾಮಾನುಜ ರಸ್ತೆ. ಈ ರಸ್ತೆಯನ್ನು ಕೇವಲ ಆರು ತಿಂಗಳ ಹಿಂದಷ್ಟೇ ಹೊಸದಾಗಿ ನಿರ್ಮಾಣ ಮಾಡಲಾಯಿತು. ಡಾಂಬರೀಕರಣ, ರಸ್ತೆ ಮಧ್ಯೆ ವಿಭಜಕಗಳಿಗೆ, ವಾಹನ ನಿಲುಗಡೆಗೆ ಬಿಳಿ ಬಣ್ಣ ಬಳಿಯಲಾಯಿತು. ಹದಗೆಟ್ಟಿದ್ದ ರಸ್ತೆ ಸರಿ ಹೋಯಿತು ಎನ್ನುವಷ್ಟರಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳನ್ನು ರಸ್ತೆ ಮಧ್ಯೆದಲ್ಲಿ ಸರಿಯಾಗಿ ಮುಚ್ಚದೇ ಹಾಗೆಯೇ ಬಿಡಲಾಯಿತು. ವಾಹನಗಳ ಸಂಚಾರದಿಂದ ರಸ್ತೆ ಗುಂಡಿ ಬೀಳಲಾರಂಭಿಸಿದೆ. ಈಗ ಮತ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ.

ಇದೇ ರೀತಿ ಡಿ.ಸುಬ್ಬಯ್ಯ ರಸ್ತೆಯಲ್ಲೂ ಒಳಚರಂಡಿ ಕಾಮಗಾರಿಗಾಗಿ ಅಂದದ ರಸ್ತೆಯನ್ನು ಉದ್ದಕ್ಕೂ ಸೀಳಲಾಯಿತು. ಕಾಮಗಾರಿ ಮುಗಿದ ಬಳಿಕ ನೆಪಮಾತ್ರಕ್ಕೆ ದುರಸ್ತಿಯೂ ಆಯಿತು. ಒಂದಿಷ್ಟು ಡಾಂಬರು ಬಳಿದು ಸರಿಪಡಿಸುವ ಕೆಲಸ ಮುಗಿಯಿತು. ಇದಾದ ಒಂದೇ ತಿಂಗಳಿಗೆ ಇಡೀ ರಸ್ತೆ ಮತ್ತೆ ಗುಂಡಿ ಬಿದ್ದಿದೆ. ರಸ್ತೆಯಲ್ಲಿ ವಾಹನ ಸವಾರರಿರಲಿ ಪಾದಚಾರಿಗಳೂ ಸಂಚರಿಸುವುದಕ್ಕೆ ಅಪಾಯಕಾರಿ ಎನಿಸಿದೆ.

ರಸ್ತೆ ಗುಂಡಿ ಬಿದ್ದಷ್ಟೂ ಲಾಭ: ರಸ್ತೆ ಗುಂಡಿ ಬಿದ್ದಷ್ಟೂ ‘ಲಾಭ’ ಎನ್ನುವ ಮಾತು ಸುಳ್ಳಲ್ಲ. ಇದರಿಂದಾಗಿಯೇ ದೀರ್ಘಕಾಲ ಬಾಳಿಕೆ ಬರುವಂತಹ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವುದಿಲ್ಲ. ಮತ್ತೆ ಮತ್ತೆ ರಸ್ತೆ ಗುಂಡಿ ಬೀಳುತ್ತಿರಬೇಕು. ಕಾಮಗಾರಿ ನಡೆಯುತ್ತಿರಬೇಕು ಎಂಬ ಬಯಕೆ ಇರುತ್ತದೆ ಎಂದು ನಾಗರಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT