ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪಡೆಗೆ ಆಸ್ಟ್ರೇಲಿಯಾ ಸವಾಲು

ಭಾರತ–ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಸರಣಿ
Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದೆಡೆ ವಿಜಯದ ನಾಗಾಲೋಟ ಮುಂದುವರಿಸಿರುವ ಕೊಹ್ಲಿ ಬಳಗ, ಮತ್ತೊಂದೆಡೆ ಕ್ರಿಕೆಟ್‌ ಶಿಶು ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಸೋತು ಮಾನಸಿಕವಾಗಿ ಜರ್ಜರಿತಗೊಂಡಿರುವ ಆಸ್ಟ್ರೇಲಿಯಾ!

ಹೀಗಾಗಿಯೇ, ಕ್ರಿಕೆಟ್‌ ಲೋಕದ ಬಲಿಷ್ಠ ತಂಡಗಳ ನಡುವಿನ ‍ಪೈಪೋಟಿ ಮತ್ತೆ ಕುತೂಹಲ ಮೂಡಿಸಿದೆ. ಏಕದಿನ ಕ್ರಿಕೆಟ್‌ ಸರಣಿ ಆಡಲು ಭಾರತ ಪ್ರವಾಸ ಕೈಗೊಳ್ಳುತ್ತಿರುವ ಕಾಂಗರೂ ಬಳಗವು ಕೊಹ್ಲಿ ಪಡೆಗೆ ಸರಿಸಾಟಿಯಾಗಿ ನಿಲ್ಲುವುದೇ ಎಂಬ ಪ್ರಶ್ನೆ ಕ್ರಿಕೆಟ್‌ ಪ್ರಿಯರನ್ನು ಕಾಡುತ್ತಿದೆ.

ಇದಕ್ಕೆ ಕಾರಣವಿದೆ. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಹೊಂದಿದ್ದ ಆಧಿಪತ್ಯವನ್ನು ಇಂದು ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಸಾಧಿಸಿದೆ. ಸದ್ಯ ಏಕದಿನ, ಟ್ವೆಂಟಿ–20 ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಪಾರಮ್ಯ ಮೆರೆಯುತ್ತಿದೆ.

ನಿಜ, ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವೆಂದರೆ ಎದುರಾಳಿಗೆ ಸದಾ ಭಯ. ಅವರ ತಂತ್ರಗಾರಿಕೆ, ಆವೇಶ,ಆಕ್ರಮಣಕಾರಿ ಆಟ, ಕಣ್ಣಿನಲ್ಲೇ ಎದುರಿಸುವ ರೀತಿ, ಮಾತಿನ ವರಸೆ, ವೇಗಿಗಳ ಆರ್ಭಟ, ಸಣ್ಣ ತಪ್ಪುಗಳನ್ನು ದೊಡ್ಡ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಅವರ ಛಲ ಅದ್ಭುತ.

ಅದೀಗ ಇತಿಹಾಸ. ರಿಕಿ ಪಾಂಟಿಂಗ್‌ ನಿವೃತ್ತರಾಗುತ್ತಿದ್ದಂತೆ ಕಾಂಗರೂ ಪಡೆಯ ಗತ್ತು ಕೂಡ ಮರೆಯಾಗಿದೆ.ಆಸ್ಟ್ರೇಲಿಯಾ ತಂಡವೆಂದರೆ ಭಯಪಡುವ ಕಾಲ ಇಲ್ಲ. ಆದರಲ್ಲೂ ಈಚೆಗೆ ಬಾಂಗ್ಲಾದೇಶ ಎದುರು ಟೆಸ್ಟ್‌ ಪಂದ್ಯದಲ್ಲಿ ಸೋತಿರುವುದು ಈ ತಂಡದ ಆಟಗಾರರ ಆತ್ಮಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸಿದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆದ್ದು ಭಾರತ ಎದುರು ಏಕದಿನ ಸರಣಿಗೆ ಸಜ್ಜಾಗುವ ಸ್ಟೀವನ್‌ ಸ್ಮಿತ್‌ ಪಡೆಯ ತಂತ್ರ ಕೈಕೊಟ್ಟಿದೆ.ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಉಪಖಂಡದಲ್ಲಿ ಈ ತಂಡದ ಪ್ರದರ್ಶನ ಅಷ್ಟಕಷ್ಟೆ. ಈ ಹಿಂದಿನ 23ಟೆಸ್ಟ್‌ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡರಲ್ಲಿ.

ಸೆಪ್ಟೆಂಬರ್‌ 17ರಂದು ಭಾರತ–ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಆ ಬಳಿಕ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ನಡೆಯಲಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ ಹಾಗೂ ಏಕದಿನ ಸರಣಿಯಲ್ಲಿ ಗೆದ್ದಿರುವ ಭಾರತದ ಯುವಪಡೆ ಹುಮ್ಮಸ್ಸಿನಲ್ಲಿದೆ.

ನಾಯಕ ಕೊಹ್ಲಿ, ರೋಹಿತ್ ಶರ್ಮ, ಶಿಖರ್‌ ಧವನ್‌, ಹಾರ್ದಿಕ್‌ ಪಾಂಡ್ಯ,ಮಾಜಿ ನಾಯಕ ಎಂ.ಎಸ್‌.ದೋನಿ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಸೊಗಸಾದ ಪ್ರದರ್ಶನ ನೀಡುತ್ತಿದ್ದಾರೆ.

ಆಸ್ಟ್ರೇಲಿಯಾದ ಶಕ್ತಿಯೇ ವೇಗಿಗಳು. ಆದರೆ, ಈ ತಂಡದಲ್ಲಿ ಈಗ ಹೇಳಿಕೊಳ್ಳುವಂಥ ಬೌಲರ್‌ಗಳೇ ಇಲ್ಲ. ಜೋಶ್‌ ಹೆಜೆಲ್‌ವುಡ್‌ ಗಾಯಗೊಂಡು ಹೊರಬಿದ್ದಿದ್ದಾರೆ. ಮಿಷೆಲ್‌ ಸ್ಟಾರ್ಕ್‌ ಕೂಡ ಗಾಯಗೊಂಡಿದ್ದಾರೆ. ಇದು ಕಾಂಗರೂ ಪಡೆಗೆ ದೊಡ್ಡ ಹೊಡೆತ ನೀಡಿದೆ.

ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ನಾಯಕ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಫಾರ್ಮ್‌ನಲ್ಲಿ ಇದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮೇಲೆ ಭರವಸೆ ಇಡಬಹುದು. ಆದರೆ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದು ತಂಡದ ಪ್ರಮುಖ ದೌರ್ಬಲ್ಯ. ಈ ತಂಡದಲ್ಲಿರುವಹೆಚ್ಚಿನ ಆಟಗಾರರು ಆಲ್‌ರೌಂಡರ್‌ಗಳು ಎಂಬುದು ಸಕಾರಾತ್ಮಕ ಅಂಶ. ನಾಯಕ ಸ್ಮಿತ್‌ ಅವರ ಈ ಅಂಶವನ್ನೇ ನೆಚ್ಚಿಕೊಂಡು ಭಾರತಕ್ಕೆ ಬರುತ್ತಿದ್ದಾರೆ.

ಅಂದಹಾಗೆ, ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್‌ ಚಾಂಪಿಯನ್‌ ಕೂಡ. ಹೀಗಾಗಿ, ಯಾವುದೇ ಕಾರಣಕ್ಕೆ ನಿರ್ಲಕ್ಷಿಸುವಂತಿಲ್ಲ. ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ನಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ದ್ವಿತೀಯ ಸ್ಥಾನ ಹೊಂದಿದ್ದಾರೆ. ಇವರನ್ನು ಬಿಟ್ಟರೆ ಉಭಯ ದೇಶಗಳ ಉಳಿದ ಆಟಗಾರರು ಅಗ್ರ 10ರ ಪಟ್ಟಿಯಲ್ಲಿ ಇಲ್ಲ.

2013ರಲ್ಲಿ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿದ್ದ ಕಾಂಗರೂ ಪಡೆ ಸೋಲು ಕಂಡಿತ್ತು. ಆದರೆ, 2016ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದವರು ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿದ್ದರು.ಐದು ಪಂದ್ಯಗಳ ಸರಣಿಯಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದರು. ಹೀಗಾಗಿ, ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಕೊಹ್ಲಿ ಬಳಗಕ್ಕೆ ಈಗೊಂದು ಅವಕಾಶ ಲಭಿಸಿದೆ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೊಹ್ಲಿ ಬಳಗಕ್ಕೆ ಈ ಸರಣಿ ಪ್ರಮುಖವಾಗಿದೆ. ಏಕೆಂದರೆ ಮುಂದೆ ಭಾರತದ ಎದುರು ದೊಡ್ಡ ಸವಾಲು  ಇದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೆ ಸಿದ್ಧರಾಗಲು ಸ್ವದೇಶದಲ್ಲಿ ನಡೆಯಲಿರುವ ಸರಣಿಗಳು ಉತ್ತಮ ವೇದಿಕೆ ಕೂಡ.

4 ತಿಂಗಳಲ್ಲಿ 23 ಪಂದ್ಯ
ಮುಂದಿನ ನಾಲ್ಕು ತಿಂಗಳಲ್ಲಿ ಕೊಹ್ಲಿ ಬಳಗ 23 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ವಿಶೇಷವೆಂದರೆ ಈ ಎಲ್ಲಾ ಪಂದ್ಯಗಳು ಸ್ವದೇಶದಲ್ಲಿಯೇ ನಡೆಯಲಿವೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ 5 ಏಕದಿನ, 3 ಟ್ವೆಂಟಿ–20,ನ್ಯೂಜಿಲೆಂಡ್‌ ವಿರುದ್ಧ 3 ಏಕದಿನ, 3 ಟ್ವೆಂಟಿ–20, ಶ್ರೀಲಂಕಾ ವಿರುದ್ಧ 3 ಟೆಸ್ಟ್‌, 3 ಏಕದಿನ ಹಾಗೂ 3 ಟ್ವೆಂಟಿ–20ಕ್ರಿಕೆಟ್‌ ಪಂದ್ಯಗಳನ್ನು ಆಡಲು ಕಣಕ್ಕಿಳಿಯಲಿದೆ.

ರೋಹಿತ್‌ ಮೇಲೆ ಕಣ್ಣು: ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ರೋಹಿತ್ ಶರ್ಮಾ. ಕಾಂಗರೂ ಪಡೆ ಎದುರು ಒಟ್ಟು 23 ಪಂದ್ಯ ಆಡಿರುವ ಅವರು 68.26 ಸರಾಸರಿಯಲ್ಲಿ 1,297 ರನ್‌ ಗಳಿಸಿದ್ದಾರೆ. ಉಭಯ ದೇಶಗಳ ನಡುವಿನ ಏಕದಿನ ಕ್ರಿಕೆಟ್‌ ಸರಣಿಗಳನ್ನು ಮಾತ್ರ ಪರಿಗಣಿಸಿದರೆ 12 ಪಂದ್ಯಗಳಲ್ಲಿ 103.67 ಸರಾಸರಿಯಲ್ಲಿ 933 ರನ್‌ ಕಲೆಹಾಕಿದ್ದಾರೆ. ವಿಶೇಷವೆಂದರೆ 104 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಈ ತಂಡದ ವಿರುದ್ಧ ದ್ವಿಶತಕ ಕೂಡ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಮೂಡಿಬಂದ ಆ ವೈಭವವನ್ನು ಮರೆಯಲು ಸಾಧ್ಯವೇ? ಒಟ್ಟು ಐದು ಶತಕ ಬಾರಿಸಿದ್ದಾರೆ. ಕಾಂಗರೂ ಬಳಗ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದಾಗ ರೋಹಿತ್‌ 5 ಪಂದ್ಯಗಳಿಂದ 441 ರನ್‌ ಗಳಿಸಿದ್ದರು. ಈಗ ಮತ್ತೆ ಆಸೀಸ್‌ ಬಳಗವನ್ನುಎದುರಿಸಲು ಅವರು ಸಜ್ಜಾಗುತ್ತಿದ್ದಾರೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT