ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲಿ ಬಂದ ಸಮೃದ್ಧ ಸಜ್ಜೆ ಬೆಳೆ

Last Updated 4 ಸೆಪ್ಟೆಂಬರ್ 2017, 6:39 IST
ಅಕ್ಷರ ಗಾತ್ರ

ಹನುಮಸಾಗರ: ಮಳೆ ಹಿನ್ನಡೆಯಿಂದ ಬೆಳೆಗಳೆಲ್ಲ ಬಾಡಿ ನಿಂತಿವೆ. ಆದರೆ, ಸಮೀಪದ ಗುಡದೂರಕಲ್‌ ಗ್ರಾಮದ ರೈತ ರಾಜಪ್ಪ ವಣಗೇರಿ ಹಾಗೂ ಪರಶುರಾಮ ವಣಗೇರಿ ಸಹೋದರರು ಬೆಳೆದಿರುವ ಸಜ್ಜೆ ಬೆಳೆ ಮಾತ್ರ ನೀರಾವರಿ ಪ್ರದೇಶದ ಬೆಳೆಯಂತೆ ಬೆಳೆದಿದ್ದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

ಸುಮಾರು ಆರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಹೈಬ್ರಿಡ್‌ ಸಜ್ಜೆ ಜಮೀನಿನ ನಾಲ್ಕೂ ಮೂಲೆಯಿಂದಲೂ ತೆನೆಗಳಲ್ಲಿ ಸಮಾನತೆ ಕಾಯ್ದುಕೊಂಡಿದೆ. ದೊಡ್ಡಗಾತ್ರದ ತೆನೆ, ಗುಣಮಟ್ಟದ ಕಾಳು, ಬಲಿಷ್ಠ ಕಾಂಡ ಬೆರಗು ಮೂಡಿಸುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರೂ ಆಗಿರುವ ಈ ಸಹೋದರರು, ಈ ಬಾರಿ ಮಳೆಯ ಮೇಲೆ ವಿಶ್ವಾಸ ಕಳೆದುಕೊಂಡು ರಾಸಾಯನಿಕ ಗೊಬ್ಬರ ಹಾಕಿ ಅಧಿಕ ಖರ್ಚು ಮಾಡುವುದರ ಬದಲು ತಿಪ್ಪೆಗೊಬ್ಬರ ಹಾಕಿ ಜಮೀನಿಗೆ ಮಳೆ ನೀರು ಉಣಿಸಿದರಾಯಿತು ಎಂದು ತೀರ್ಮಾನಿಸಿದ್ದರು.

ಬೇಸಿಗೆಯ ಅವಧಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ವ್ಯವಸಾಯ ಮಾಡಿದ್ದರು. ನಂತರ ಸುರಿದ ಒಂದೆರಡೆ ಮಳೆಯ ನೀರು ಜಮೀನಿನಿಂದ ಹೊರ ಹೋಗದಂತೆ ಎಚ್ಚರವಹಿಸಿದ್ದರು. ಇದರ ಪರಿಣಾಮ ಮಣ್ಣಿನಲ್ಲಿ ಅಧಿಕ ತೇವಾಂಶ ಹೊಂದಿ ಭರಪೂರ ಫಸಲು ಬರಲು ಕಾರಣವಾಗಿದೆ ಎಂದು ರಾಜಪ್ಪ ಹೇಳುತ್ತಾರೆ.

ವಣಗೇರಿ ಸಹೋದರರು 'ಸಜ್ಜೆ ಬೆಳೆಗಿಂತ ಮೊದಲು ತೊಗರಿ ಬೆಳೆ ಹಾಕಿರಿಂದ ಈ ಪ್ರಮಾಣದಲ್ಲಿ ಸಜ್ಜೆ ಬೆಳೆ ಗುಣಮಟ್ಟದಲ್ಲಿ ಬರಲು ಕಾರಣ' ಎಂದು ಕೃಷಿ ವಿಜ್ಞಾನಿ ಪ್ರದೀಪ ಹೇಳುತ್ತಾರೆ.

'ದ್ವಿದಳ ಧಾನ್ಯಗಳ ಗಿಡದ ಬೇರಿನಲ್ಲಿ ಸಾರಜನಕ ಬ್ಯಾಂಕ್ ಇದೆ. ಇದು ಬೆಳೆಗಳಿಗೆ ಬೇಕಾದ ಪ್ರಧಾನ ಪೋಷಕಾಂಶ. ತೊಗರಿ, ಹೆಸರು, ಉದ್ದು, ಅಲಸಂದೆ, ಶೇಂಗಾ, ಹುರುಳಿ ಬೆಳೆಗಳು ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣಗೊಳಸಲು ಯೋಗ್ಯವಾದ ಬೆಳೆಗಳಾಗಿವೆ. ಬೇರಿನಲ್ಲಿ ರೈಜೋಬಿಯಂ ಬ್ಯಾಕ್ಟೀರಿಯಾ ಇದ್ದು, ವಾತಾವರಣದಲ್ಲಿರುವ ಸಾರಜನಕ ಹೀರಿಕೊಂಡು ಬೇರಿನಲ್ಲಿ ಗಂಟುಗಳ ರೂಪದಲ್ಲಿ ಸಂಗ್ರಹಿಸುತ್ತವೆ.

ಇದೊಂದು ನೈಸರ್ಗಿಕ ಕ್ರಿಯೆ. ಬೇರಿನಲ್ಲಿ ಸಂಗ್ರಹವಾಗುವ ಸಾರಜನಕ ಮುಂದಿನ ಬೆಳೆಗೂ ಲಭಿಸುತ್ತದೆ. ದ್ವಿದಳ ಧಾನ್ಯ ಬೆಳೆಗಳು ಸಾಮಾನ್ಯವಾಗಿ ಒಂದು ಹೆಕ್ಟೇರಿಗೆ 150 ಕೆ.ಜಿ ಸಾರಜನಕ ಸ್ಥಿರೀಕರಣಗೊಳುತ್ತದೆ. ಈ ಸಜ್ಜೆ ಬೆಳೆಯಲ್ಲಿ ಅಡಗಿರುವ ಸತ್ಯ ಇದೇ ಆಗಿದೆ ಎಂದು ಅವರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT