ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ವಸತಿ ರಹಿತರಿಗೆ ಆಶ್ರಯ ತಾಣ

Last Updated 4 ಸೆಪ್ಟೆಂಬರ್ 2017, 7:10 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ವಸತಿ ರಹಿತರಿಗೆ ಆಶ್ರಯ ತಾಣ ತೆರೆಯಲಾಗುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸುವ ಕಾರ್ಯ ಪೂರ್ಣಗೊಂಡಿದೆ. ಸದ್ಯ ಹಳೆ ಮುನ್ಸಿಪಲ್‌ ರಸ್ತೆಯಲ್ಲಿರುವ ನಗರಸಭೆ ಕಟ್ಟಡವನ್ನೇ ತಾತ್ಕಾಲಿಕವಾಗಿ ನಗರ ವಸತಿ ರಹಿತರ ಆಶ್ರಯ ಕೇಂದ್ರವಾಗಿ ಮಾಡಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಸ ಕೇಂದ್ರ ಆರಂಭಗೊಳ್ಳಲಿದೆ.

‘ರಾಜ್ಯ ಸರ್ಕಾರ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಕಟ್ಟಡ, ಕೊಠಡಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಕೇಂದ್ರದ ನಿರ್ವಹಣೆಯ ಜವಾಬ್ದಾರಿಯನ್ನು ಆಸಕ್ತ ಸಂಘ, ಸಂಸ್ಥೆಗಳಿಗೆ ವಹಿಸಲು ನಗರಸಭೆ ಚಿಂತನೆ ನಡೆಸಿದೆ. ಆಶ್ರಯ ಕೇಂದ್ರದಲ್ಲಿ ವಾಸ್ತವ್ಯ ಹೂಡುವವರಿಗೆಲ್ಲ ಆಹಾರದ ವ್ಯವಸ್ಥೆ ಮಾಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುದಾನ ನಿಗದಿ ಪಡಿಸಲಾಗಿದೆ. ನಿರಾಶ್ರಿತರಿಗೆ ಹಾಸಿಗೆ, ಶೌಚಗೃಹ, ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌ ತಿಳಿಸಿದರು.

ರಾಜ್ಯದಲ್ಲಿ ಭಿಕ್ಷಾಟನಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಇಷ್ಟಾದರೂ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ. ವಸತಿ ಹಾಗೂ ಆಹಾರ ಇಲ್ಲದೆ ಪರದಾಡುತ್ತಿರುವ ನಿರಾಶ್ರಿತರೆಲ್ಲರಿಗೂ ಆಶ್ರಯ ಕಲ್ಪಿಸಲು ನಗರಸಭೆ ನಿರ್ಧರಿಸಿದೆ. ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 65 ಭಿಕ್ಷುಕರು, ನಿರಾಶ್ರಿತರು ಪತ್ತೆಯಾಗಿದ್ದಾರೆ. ಪ್ರಸ್ತುತ ವಸತಿಗೆ ಮಾತ್ರ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೌಟುಂಬಿಕ ಸಮಸ್ಯೆ ಹಾಗೂ ಇತರ ಕಾರಣಗಳಿಂದ ಬೀದಿಗೆ ಬಿದ್ದಿರುವ ವಸತಿ ರಹಿತರು ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ. ಅಂತಹವರನ್ನು ಗುರುತಿಸಿ ವಸತಿ ವ್ಯವಸ್ಥೆ ಕಲ್ಲಿಸಲಾಗುತ್ತಿದೆ. ಭಿಕ್ಷಕರು ಮಾತ್ರವಲ್ಲದೆ, ಬೆಳಿಗ್ಗೆಯಿಂದ ಸಂಜೆಯವರೆಗೂ ಯಾವುದಾದರೂ ಉದ್ಯೋಗದಲ್ಲಿ ತೊಡಗಿಕೊಳ್ಳುವ ನಿರ್ವಸತಿಗರೂ ಆಶ್ರಯ ಕೇಂದ್ರದಲ್ಲಿ ವಾಸ್ತವ್ಯ ಹೂಡಬಹುದು.

‘ನಿರಾಶ್ರಿತರ ಕೇಂದ್ರದ ನಿರ್ವಹಣೆ ಜವಾಬ್ದಾರಿಗೆ ಕರೆದಿರುವ ಟೆಂಡರ್‌ ಪ್ರಕ್ರಿಯೆಯಲ್ಲಿ ಇದುವರೆಗೂ ಯಾರೂ ಭಾಗವಹಿಸಿಲ್ಲ. ಸಾಮಾಜಿಕ ಕಾರ್ಯಗಳ ಜವಾಬ್ದಾರಿ ನಿರ್ವಹಿಸಿರುವ ಅನುಭವಿಗಳಿಗೆ ಕೆಂದ್ರ ಗುತ್ತಿಗೆ ನೀಡಲಾಗುವುದು. ಈಗಾಗಲೇ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾದರೆ 65 ನಿರಾಶ್ರಿತರಿಗೂ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅನಿಲ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT