ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣದೇವನ ಪ್ರಕೋಪ: ನಗರವಾಸಿಗಳು ಹೈರಾಣ

Last Updated 4 ಸೆಪ್ಟೆಂಬರ್ 2017, 8:50 IST
ಅಕ್ಷರ ಗಾತ್ರ

ಕೋಲಾರ: ಮನೆಯೊಳಗೆ ಮೊಣ ಕಾಲುದ್ದ ನೀರು... ತುಂಬಿ ಹರಿಯುತ್ತಿರುವ ಚರಂಡಿಗಳು... ನೀರಿನಲ್ಲಿ ಮುಳುಗಿರುವ ದಿನಸಿ ಪದಾರ್ಥಗಳು... ಹಾವು ಕಪ್ಪೆಗಳ ಗೃಹಪ್ರವೇಶ... ನಗರದ ತಗ್ಗು ಪ್ರದೇಶದ ಬಡಾವಣೆಗಳ ಚಿತ್ರಣವಿದು.

ನಗರದಲ್ಲಿ ಶನಿವಾರ ಧಾರಾಕಾರ ಸುರಿದ ಮಳೆಯು ತಗ್ಗು ಪ್ರದೇಶದ ಜನರ ಬದುಕು ನೀರು ಪಾಲು ಮಾಡಿದೆ. ಬರದ ಬೇಗೆಯಿಂದ ಬಸವಳಿದಿದ್ದ ರೈತರಿಗೆ ವರುಣದೇವ ಖುಷಿ ಕೊಟ್ಟಿದ್ದರೆ ನಗರವಾಸಿಗಳಿಗೆ ಕಣ್ಣೀರು ತರಿಸಿದ್ದಾನೆ. ಆಕಾಶಕ್ಕೆ ತೂತು ಬಿದ್ದಂತೆ ಮೂರ್ನಾಲ್ಕು ತಾಸು ಎಡಬಿಡದೆ ಸುರಿದ ಮಳೆರಾಯ ಸೃಷ್ಟಿಸಿದ ಅವಾಂತರ ಒಂದೆರಡಲ್ಲ.

ಕಾರಂಜಿಕಟ್ಟೆ, ಶಾಂತಿನಗರ, ರಹಮತ್‌ನಗರ ಹಾಗೂ ರಾಜಾನಗರದಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ನೀರೆತ್ತುವ ಮೋಟರ್‌ನಂತಹ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗಿವೆ.

ಶಾಂತಿನಗರ ನಿವಾಸಿಯೊಬ್ಬರು ಮನೆ ಮುಂದೆ ಕಟ್ಟಿದ್ದ ಎರಡು ಕುರಿಗಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿವೆ. ಅಂಗಡಿ ಮುಂಗಟ್ಟುಗಳಲ್ಲಿನ ವಸ್ತುಗಳು ನೀರು ಪಾಲಾಗಿವೆ. ರಾತ್ರಿಯಿಡೀ ಜಾಗರಣೆ ಮಾಡಿದ್ದ ನಿವಾಸಿಗಳಿಗೆ ಭಾನುವಾರ ಮಳೆ ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸವಾಯಿತು. ಮಳೆ ನೀರಿನಿಂದ ಒದ್ದೆಯಾಗಿರುವ ದಿನಸಿ ಪದಾರ್ಥ, ಬಟ್ಟೆ ಹಾಗೂ ಹಾಸಿಗೆಗಳನ್ನು ಮನೆಯ ಮುಂದೆ ಒಣಗಲು ಇಟ್ಟಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಹಾವು ಚೇಳು ಕಾಟ: ಕಾರಂಜಿಕಟ್ಟೆ ಎರಡನೇ ಅಡ್ಡರಸ್ತೆ ಹಾಗೂ ಶಾಂತಿನಗರ ಬಳಿ ರಾಜಕಾಲುವೆ ಕಟ್ಟಿಕೊಂಡಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ನೀರು ಕಾಲುವೆಯಲ್ಲಿ ಹಿಮ್ಮುಖವಾಗಿ ಹರಿಯುತ್ತಿದ್ದು, ನೀರಿನ ಜತೆ ಹಾವು, ಕಪ್ಪೆ, ಚೇಳುಗಳು ಅಕ್ಕಪಕ್ಕದ ಮನೆಗಳಿಗೆ ನುಗ್ಗಿವೆ. ಇದರಿಂದ ಭಯಭೀತರಾಗಿರುವ ನಿವಾಸಿಗಳು ಸ್ವಂತ ಮನೆ ತೊರೆದು ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ರಾಡಿಯಾದ ರಸ್ತೆಗಳು: ಮಹಾ ಮಳೆಗೆ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಹಮತ್‌ನಗರ ಹಿಂದೂ ರುದ್ರಭೂಮಿ ಪಕ್ಕದ ರಸ್ತೆ, ಪಾಲಸಂದ್ರ ಲೇಔಟ್‌, ರಾಜಾನಗರ, ಕೇಶವನಗರ, ಶಾಂತಿನಗರದಲ್ಲಿನ ರಸ್ತೆಗಳು ಗುಂಡಿ ಬಿದ್ದಿವೆ. ಈ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ರಸ್ತೆಗಳು ರಾಡಿಯಾಗಿವೆ. ಇನ್ನು ಉದ್ಯಾನಗಳು ಕೆಸರು ಗದ್ದೆಯಂತಾಗಿವೆ.

ಕುವೆಂಪು ಉದ್ಯಾನದ ಕಾರಂಜಿ ತೊಟ್ಟಿಯಲ್ಲಿ ನೀರು ತುಂಬಿಕೊಂಡಿದ್ದು, ಮಕ್ಕಳು ಮಧ್ಯಾಹ್ನ ತೊಟ್ಟಿಗಿಳಿದು ಈಜಾಡಿ ಸಂಭ್ರಮಿಸಿದರು. ಮಳೆ ನೀರಿನಲ್ಲಿ ಮುಳುಗಿದ ಬೈಕ್‌, ಕಾರುಗಳು ಕೆಟ್ಟು ರಿಪೇರಿಗೆ ಗ್ಯಾರೇಜ್‌ ಸೇರಿವೆ. ಚನ್ನಯ್ಯ ಸಂತೆ ಮೈದಾನ, ನಗರದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನೀರು ಕೆರೆಯಂತೆ ನಿಂತಿದೆ.

ಸಂಪರ್ಕ ಕಡಿತ: ಖಾದ್ರಿಪುರ ರೈಲ್ವೆ ಕೆಳ ಸೇತುವೆ ಮಳೆ ನೀರಿನಿಂದ ಸಂಪೂರ್ಣ ಭರ್ತಿಯಾಗಿದ್ದು, ಅಕ್ಕಪಕ್ಕದ ಕೇಶವನಗರ, ಕೀಲುಕೋಟೆ, ಹೊಸ ಬಡಾವಣೆಗೆ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ನಿವಾಸಿಗಳು ಸೇತುವೆ ಮೇಲಿನ ಹಳಿ ದಾಟಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಸಂಜೆ ಸಹ ವರುಣದೇವ ತನ್ನ ಪ್ರಕೋಪ ತೋರಿದ್ದು, ನಗರವಾಸಿಗಳು ಹೈರಾಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT