ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಶಾಸಕರ ವಿರುದ್ಧ ರಾಜ್ಯಪಾಲರಿಗೆ ವರದಿ

Last Updated 4 ಸೆಪ್ಟೆಂಬರ್ 2017, 9:13 IST
ಅಕ್ಷರ ಗಾತ್ರ

ಮಂಗಳೂರು: 2016–17ನೇ ವರ್ಷದಲ್ಲಿ ನಿಗದಿತ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸದ ವಿಧಾನ ಪರಿಷತ್‌ನ ಮೂವರು ಸದಸ್ಯರು ಮತ್ತು ವಿಧಾನಸಭೆಯ ಒಬ್ಬ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು.
ನಗರದಲ್ಲಿ ಭಾನುವಾರ ಈ ಕುರಿತು ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡ ಅವರು, ‘ಕಳೆದ ವರ್ಷ ಮೊದಲ ಗಡುವಿನ ಅವಧಿಯೊಳಗೆ ಹಲವು ಶಾಸಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ. ನೋಟಿಸ್‌ ಜಾರಿ ಮಾಡಿದ ಬಳಿಕ ಬಹುತೇಕರು ಆಸ್ತಿ ವಿವರ ಸಲ್ಲಿಸಿದರು. ಮಾಹಿತಿ ನೀಡಲು ವಿಫಲರಾದ ನಾಲ್ವರು ಶಾಸಕರ ಹೆಸರನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಆ ಬಳಿಕವೂ ಅವರು ಮಾಹಿತಿ ನೀಡಿಲ್ಲ’ ಎಂದರು.

ಲೋಕಾಯುಕ್ತ ಕಾಯ್ದೆಯ ಪ್ರಕಾರ ಪ್ರತಿ ವರ್ಷವೂ ಜೂನ್‌ ಅಂತ್ಯದೊಳಗೆ ಶಾಸಕರು ಆಸ್ತಿ ವಿವರ ಸಲ್ಲಿಸಬೇಕು. ನಂತರ 60 ದಿನಗಳ ಗಡುವಿನಲ್ಲಿ ವಿಳಂಬಕ್ಕೆ ಕಾರಣಸಹಿತ ಮಾಹಿತಿ ನೀಡಬಹುದು. ನಾಲ್ವರು ಶಾಸಕರು ಈ ಅವಧಿಯಲ್ಲೂ ಮಾಹಿತಿ ನೀಡದೇ ಲೋಪ ಎಸಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ ಎಂದು ತಿಳಿಸಿದರು. ಈ ವರ್ಷ 25 ಶಾಸಕರು ಮೊದಲ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸಿಲ್ಲ. ಅವರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧಿಕಾರಿಗಳ ನೇಮಕಕ್ಕೆ ಮನವಿ: ‘ಲೋಕಾಯುಕ್ತ ಸಂಸ್ಥೆಯು ಸರ್ಕಾರದ ಅಧಿಕಾರಿಗಳ ವಿರುದ್ಧದ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುತ್ತಿದೆ. ಈಗ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ 11 ವಿಚಾರಣಾ ಅಧಿಕಾರಿಗಳಿದ್ದಾರೆ. ಇನ್ನೂ 10 ಮಂದಿ ವಿಚಾರಣಾ ಅಧಿಕಾರಿಗಳನ್ನು ನೇಮಿಸುವಂತೆ ಕೋರಲಾಗಿದೆ. ಶೀಘ್ರದಲ್ಲಿಯೇ ಈ ಅಧಿಕಾರಿಗಳನ್ನು ಒದಗಿಸುವ ವಿಶ್ವಾಸವಿದೆ’ ಎಂದರು.

ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಸಂಖ್ಯೆಯ ದೂರುಗಳು ಬರುತ್ತಿವೆ. ಕೆಲವು ದೂರುಗಳ ಬಗ್ಗೆ ಲೋಕಾಯುಕ್ತ ಪೊಲೀಸರು ರಹಸ್ಯ ವಿಚಾರಣೆ ನಡೆಸಿ ವರದಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT