ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ವಿಗ್ನ ಸ್ಥಿತಿ, ಬಂದೋಬಸ್ತ್ ಮಧ್ಯೆ ಮೆರವಣಿಗೆ

Last Updated 4 ಸೆಪ್ಟೆಂಬರ್ 2017, 9:46 IST
ಅಕ್ಷರ ಗಾತ್ರ

ಶಿವಮೊಗ್ಗ: ಹಿಂದೂ ಮಹಾಸಭಾದ ಅಂಗಸಂಸ್ಥೆ ಸಂಘಟನಾ ಮಹಾ ಮಂಡಳ ಪ್ರತಿಷ್ಠಾಪಿಸಿರುವ 73ನೇ ವಿನಾಯಕ ಸ್ವಾಮಿ ವಿಗ್ರಹದ ವಿಸರ್ಜನಾಪೂರ್ವ ಮೆರವಣಿಗೆ ಸೆ. 5ರಂದು ನಡೆಯಲಿದೆ. ಮೆರವಣಿಗೆ ಸಾಗುವ ಬೀದಿಗಳೂ ಸೇರಿದಂತೆ ಶಿವಮೊಗ್ಗ ನಗರ ಬಹುತೇಕ ಭಾಗಗಳು ಸಂಪೂರ್ಣ ಕೇಸರಿಮಯವಾಗಿವೆ. ಪ್ರಮುಖ ವೃತ್ತಗಳು, ಕಟ್ಟಡ
ಗಳು, ರಸ್ತೆಗಳು ಕೇಸರಿ ಬಾವುಟ, ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿವೆ.

ಬಸ್ ನಿಲ್ದಾಣ, ನೆಹರೂ ರಸ್ತೆ, ಬಿ.ಎಚ್.ರಸ್ತೆ, ಗಾಂಧಿ ಬಜಾರ್, ಗೋಪಿ ವೃತ್ತ, ದುರ್ಗಿಗುಡಿ, ಕುವೆಂಪು ರಸ್ತೆ, ಬಾಲರಾಜ್ ಅರಸ್ ರಸ್ತೆ, ಕೋಟೆ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಡೆ ಕೇಸರಿ ಧ್ವಜಗಳು, ರಾಷ್ಟ್ರ ನಾಯಕರ ಭಾವಚಿತ್ರಗಳು ಕಾಣಿಸುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮ: ಗಣೇಶ ವಿಗ್ರಹ ಸ್ಥಾಪಿಸಿರುವ ಕೋಟೆ ರಸ್ತೆಯಲ್ಲಿ ಆ. 25ರಿಂದಲೇ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹರಿಕಥೆ, ಯಕ್ಷಗಾನ, ಸುಗಮ ಸಂಗೀತ, ಹಾಸ್ಯ ನಾಟಕ, ಯಕ್ಷಿಣಿ ಪ್ರದರ್ಶನ ಸೇರಿದಂತೆ ಮನರಂಜನೆಯ ಕಾರ್ಯಕ್ರಮಗಳು ನಡೆದಿದ್ದವು. ಸೆ. 4ರಂದು ಸಂಜೆ 6.30ಕ್ಕೆ ವೀರ ಶಿವಮೂರ್ತಿ ಅವರ ಪುಣ್ಯ ಸ್ಮರಣೆ, ಮಹಾಮಂಗಳಾರತಿ ನಡೆಯಲಿದೆ. ಸೆ.5 ರಂದು ಬೆಳಿಗ್ಗೆ 10ಕ್ಕೆ ಕೋಟೆ ಭೀಮೇಶ್ವರ ಸನ್ನಿಧಾನದಿಂದ ಮೆರವಣಿಗೆ ಸಾಗಲಿದೆ.

ವಿವಿಧ ಸಂಘ, ಸಂಸ್ಥೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೀರು, ದಾಸೋಹ, ಲಡ್ಡು, ಮಜ್ಜಿಗೆ, ಪಾನಕ ವಿತರಣೆಗೆ ಸಿದ್ಧತೆಯಲ್ಲಿ ತೊಡಗಿವೆ. ಹಲ್ಲೆ ಪ್ರಕರಣದ ನಂತರ ಭಾರಿ ಬಂದೋಬಸ್ತ್‌: ಗಣಪತಿ ವಿಸರ್ಜನೆಗೂ ಎರಡು ದಿನ ಮೊದಲು ಶ್ರೀರಾಮನಗರ, ಹಳೇ ತೀರ್ಥಹಳ್ಳಿ ರಸ್ತೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಂತೆ 20 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐವರನ್ನು ಬಂಧಿಸಲಾಗಿದೆ.

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಭಾನುವಾರ ಸಂಜೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು, ಡಿಎಆರ್‌, ಗೃಹರಕ್ಷಕ ದಳದ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಇಡೀ ರಾತ್ರಿ ನಗರದ ಎಲ್ಲೆಡೆ ಪೊಲೀಸ್‌ ವಾಹನಗಳು ಗಸ್ತು ತಿರುಗಿದವು. ಚಿತ್ರದುರ್ಗ, ಹಾವೇರಿ, ದಾವಣಗೆರೆಯಿಂದಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ, ಜಿಲ್ಲಾ ಸಶಸ್ತ್ರಮೀಸಲು ಪಡೆ ಕರೆಸಿಕೊಳ್ಳಲಾಗಿದೆ. ಸಂಪೂರ್ಣ ಮೆರವಣಿಗೆಯ ವಿಡಿಯೊ ಚಿತ್ರೀಕರಣಕ್ಕೆ 100ಕ್ಕೂ ಹೆಚ್ಚು ಕ್ಯಾಮೆರಾ ಒದಗಿಸಲಾಗಿದೆ. ಈಗಾಗಲೇ ಅಳವಡಿಸಿರುವ ಭಾರಿ ಪ್ರಮಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಸತತ ವೀಕ್ಷಣೆ ಮಾಡಲಾಗುತ್ತಿದೆ.

ಮಹಿಳೆಯರ ಪ್ರತಿಭಟನೆ: ನಗರದ ಒ.ಟಿ. ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸಿದ್ದಪ್ಪ ಅವರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಆ ಭಾಗದ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಆರೋಪಿಗಳು ಸ್ಥಳೀಯರಲ್ಲ. ಇಲ್ಲಿನ ಮುಸ್ಲಿಮರ ಜತೆ ಸೌಹಾರ್ದ ಜೀವನ ಸಾಗಿಸುತ್ತಿದ್ದೇವೆ. ಹೊರಗಿನಿಂದ ಬಂದ ಕೆಲಸವರು ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರ ಕಾರ್ಯಾಚರಣೆ: ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊರಗಿನಿಂದ ಬಂದ ಹಲವು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT