ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಬಲೀಕರಣ: ನಾಗೂರ (ಎಂ) ಮಾದರಿ

Last Updated 5 ಸೆಪ್ಟೆಂಬರ್ 2017, 6:30 IST
ಅಕ್ಷರ ಗಾತ್ರ

ಔರಾದ್: ಮಳೆ ಕೊರತೆ ನಡುವೆಯೂ ತಾಲ್ಲೂಕಿನ ನಾಗೂರ (ಎಂ) ರೈತರು ಉತ್ತಮ ಇಳುವರಿ ಪಡೆದಿದ್ದಾರೆ. ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿ ಮುಂಗಾರು ಬೆಳೆ ಕೈಕೊಟ್ಟಿದೆ. ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದರೆ, ನಾಗೂರ (ಎಂ) ಗ್ರಾಮಸ್ಥರು ಮಾತ್ರ ಎಕರೆಗೆ 6ರಿಂದ 8 ಕ್ವಿಂಟಲ್ ಉದ್ದು–ಹೆಸರು ಇಳುವರಿ ಪಡೆದಿದ್ದಾರೆ. ತೆರೆದ ಬಾವಿಗಳಲ್ಲಿ ಸಾಕಷ್ಟು ನೀರಿದೆ. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ.

ರಿಲಯನ್ಸ್ ಕಂಪೆನಿ ಸಹಕಾರದಿಂದ ಗ್ರಾಮದಲ್ಲಿ ರೈತರ ಸಬಲೀಕರಣಕ್ಕಾಗಿ ಸುಮಾರು ₹ 1 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 30ಕ್ಕೂ ಹೆಚ್ಚು ವೈಯಕ್ತಿಕ ತೆರೆದ ಬಾವಿ ಕೊರೆಸಲಾಗಿದೆ. ಊರಿನ ಪಕ್ಕದ ದೊಡ್ಡ ಕಾಲುವೆಯ 4 ಕಿ.ಮೀ ವ್ಯಾಪ್ತಿಯಲ್ಲಿ ಹೂಳು ತೆಗೆಯಲಾಗಿದೆ. ಪಾಳು ಬಿದ್ದ 200 ಎಕರೆ ಜಮೀನು ಹದ ಮಾಡಿ ಬೆಳೆ ಬೆಳೆಯಲಾಗಿದೆ.

ಮೂರು ವರ್ಷಗಳಲ್ಲಿ 18 ಸಾವಿರ ಸಸಿ ನೆಡಲಾಗಿದೆ. ಊರಲ್ಲಿ ಸೋಲಾರ್‌ ಬೀದಿ ದೀಪ ಹಾಕಲಾಗಿದೆ. ಜನರಿಗೆ 24 ಗಂಟೆ ಕುಡಿಯುವ ನೀರು ಸಿಗುವ ವ್ಯವಸ್ಥೆ ಮಾಡಲಾಗಿದೆ. ಊರಿನ ಎಲ್ಲ 140 ಕುಟುಂಬಗಳು ಗೋಬರ್ ಗ್ಯಾಸ್ ಬಳಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ರೈತರು ತಮ್ಮ ಹೊಲದಲ್ಲಿ ಎರೆಹುಳು ಗೊಬ್ಬರ ಘಟಕ ತಯಾರಿಸಿಕೊಂಡಿದ್ದಾರೆ. ಹೀಗೆ ಇಡೀ ಗ್ರಾಮ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಹಾಕಿದೆ.

‘ಗ್ರಾಮಸ್ಥರು ಒಟ್ಟಾಗಿ ಬಸವೇಶ್ವರ ರೈತ ಸಂಘ ಹುಟ್ಟು ಹಾಕಿದ್ದೇವೆ. ಗ್ರಾಮದ ಪ್ರತಿ ಕುಟುಂಬದ ಒಬ್ಬರು ಅದರ ಸದಸ್ಯರು. ಒಬ್ಬರು ಮಹಿಳೆ ಸೇರಿದಂತೆ ನಾಲ್ವರ ಮೇಲ್ವಿಚಾರಣಾ ಸಮಿತಿ ಇದೆ. ಊರಲ್ಲಿ ಯಾವುದೇ ಕೆಲಸ ಮಾಡಬೇಕಾದರೆ ಎಲ್ಲ 140 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ.

ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ಈಗ ಅಂತಹ ಯಾವುದೇ ಗೊಂದಲ ಇಲ್ಲ. ಸಂಘದ ಹೆಸರಿನ ಖಾತೆಯಲ್ಲಿ ಈಗಲೂ ₹ 3 ಲಕ್ಷ ಇದೆ. ನಿವೇಶನ ಖರೀದಿಸಿ ಸಂಘದ ಕಟ್ಟಡ ಕಟ್ಟುವ ಯೋಜನೆ ಇದೆ’ ಎಂದು ಹೇಳುತ್ತಾರೆ ಸಂಘದ ವ್ಯವಸ್ಥಾಪಕ ಬಾಲಾಜಿ ಮೇತ್ರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT