ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ ನಿರ್ಮಾಣ: ಲಭಿಸದ ಸಹಾಯಧನ

Last Updated 5 ಸೆಪ್ಟೆಂಬರ್ 2017, 6:38 IST
ಅಕ್ಷರ ಗಾತ್ರ

ವಾಡಿ: ಅಂತರ್ಜಲ ಮಟ್ಟ ಸುಧಾರಣೆ ಉದ್ದೇಶದಿಂದ ಸರ್ಕಾರ ರೈತರಿಗೆ ಕೃಷಿಹೊಂಡ ನಿರ್ಮಿಸಲು ಉತ್ತೇಜನ ನೀಡುತ್ತದೆ. ಸರ್ಕಾರದ ಈ ಯೋಚನೆ ಮತ್ತು ಯೋಜನೆ ಒಳ್ಳೆಯದು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡ ಹಲವು ರೈತರು, ಸರ್ಕಾರದಿಂದ ಸಿಗುವ ಸಬ್ಸಿಡಿ ಹಣ ಮಾತ್ರ ಸಿಗದೇ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.

ಸರ್ಕಾರದ ಯೋಜನೆಗಳಿಂದ ತಮಗೊಂದಿಷ್ಟು ಅನುಕೂಲವಾಗಬಹುದು ಎನ್ನುವ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ಹಣ ಸುರಿದು ಕೃಷಿ ಹೊಂಡ ಮತ್ತು ಬದು ನಿರ್ಮಾಣ ಮಾಡಿಕೊಂಡ ರೈತರಲ್ಲಿ ನಾಲವಾರ ಸಮೀಪದ ಮಾರಡಗಿಯ ಬಸವರಾಜ ಹಳಿಮನಿ ಒಬ್ಬರು.

ರೈತ ಹಳಿಮನಿ ಅವರು, ಕಳೆದ ವರ್ಷ ಸರ್ಕಾರದ ಸಹಾಯಧನ ಸಿಗುವ ಭರವಸೆಯಿಂದ ತಮ್ಮ ಜಮೀನಿನಲ್ಲಿ 60*60 ಸುತ್ತಳತೆ ಹಾಗೂ 17 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. 1,000 ಅಡಿಗೂ ಅಧಿಕ ಬದು ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ಲಕ್ಷಾಂತರ ಹಣ ಸುರಿದಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ಸಿಗಬೇಕಾದ ಹಣ ಮಾತ್ರ ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಾನು ಕೃಷಿ ಹೊಂಡ ಮತ್ತು ಬದು ನಿರ್ಮಾಣಕ್ಕಾಗಿ ಖರ್ಚು ಮಾಡಿದ ಹಣ ಕೊಡಿ ಎಂದು ಕಚೇರಿ ಅಲೆದು ಸಾಕಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಹಣ ಮಂಜೂರು ಮಾಡುತ್ತೇವೆ ಎನ್ನುವ ಅಧಿಕಾರಿಗಳು, ಒಂದೂವರೆ ವರ್ಷ ಕಳೆದರೂ ಇತ್ತ ಮುಖ ಮಾಡಿಲ್ಲ. ಬದು ನಿರ್ಮಾಣದಿಂದಾಗಿ ನನ್ನ 3 ಎಕರೆ ಜಮೀನು ಪ್ರವಾಹಕ್ಕೆ ಸಿಲುಕಿ ಬೆಳೆ ಹಾಳಾಗಿದೆ’ ಎನ್ನುತ್ತಾರೆ ಹಳಿಮನಿ.

ಇದೇ ರೀತಿ ಗ್ರಾಮದಲ್ಲಿ ಹಲವರು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಅವರಿಗೂ ಹಣ ದೊರಕಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು, ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ಹೊಂಡವನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುವಂತಾಗಿದೆ ಎಂದು ಹಲವು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT