ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಕೇಂದ್ರಿತ ಹೋರಾಟ ಆಗಲಿ

ಮೌಢ್ಯದ ವಿರುದ್ಧದ ಹೋರಾಟವೆಂದರೆ ಅದು ಸರ್ಕಾರಗಳ ಮೂಲಕ ಆಗುವ ಮಾತು ಖಂಡಿತ ಅಲ್ಲ...
Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ಜಿ.ಕೆ. ಗೋವಿಂದರಾವ್‌

‘ಮೌಢ್ಯಮುಕ್ತ ಕರ್ನಾಟಕದತ್ತ ಮುನ್ನಡೆಯೋಣ’ ಹೆಸರಿನಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆಯು ಬೆಂಗಳೂರಿನಲ್ಲಿ ಧರಣಿ ನಡೆಸಿರುವುದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ನನಗೆ ತೋರಿದ ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.

ವೈಯಕ್ತಿಕ ನೆಲೆಯಲ್ಲಿ ಯಾರೂ ಏನು ಬೇಕಾದರೂ ನಂಬಬಹುದು. ಅದಕ್ಕೆ ಅವರು ಸ್ವತಂತ್ರರು. ಆದರೆ ತಮ್ಮ ನಂಬಿಕೆಗಳನ್ನು ಬೇರೆಯವರ ಮೇಲೆ ಹೇರಿದಾಗ, ತಮ್ಮ ನಂಬಿಕೆಗಳೇ ಸರ್ವಶ್ರೇಷ್ಠ ಹಾಗೂ ಸರ್ವಹಿತಸಾಧಕ ಎಂದು ಹೊರಿಸಲು ಯತ್ನಿಸಿದಾಗ ಅದು ಅಪಾಯದ ನಂಬಿಕೆಯಾಗುತ್ತದೆ.

ಸಾವಿರಾರು ವರ್ಷಗಳಿಂದ ಒಂದು ಪದ್ಧತಿ ಜಾರಿಯಲ್ಲಿದೆ ಅಂದಾಕ್ಷಣ ಅದು ಶ್ರೇಷ್ಠವಾಗುವುದಿಲ್ಲ. ಸತಿಪದ್ಧತಿ ಕೂಡ ಎಷ್ಟು ಶತಮಾನಗಳು ಜಾರಿಯಲ್ಲಿದ್ದಿತೋ ಯಾರಿಗೆ ಗೊತ್ತು? ಹಾಗೆಯೇ ಅಸ್ಪೃಶ್ಯತೆ ಕೂಡ. ಇಂದು ಇವುಗಳು ಶಿಕ್ಷಾರ್ಹ. ಈಗ ಆಚರಣೆಯಲ್ಲಿರುವ ನೂರಾರು ಪದ್ಧತಿಗಳು, ಸಂಪ್ರದಾಯಗಳು ಎಲ್ಲವೂ ಶತಮಾನಗಳ ಆಯಸ್ಸಿನಿಂದಾಗಿ ಮಾನ್ಯವಾಗಿವೆ ಅಷ್ಟೆ. ಇವೆಲ್ಲಕ್ಕೂ ಮೂಲದಲ್ಲಿ ಭಯವೇ ಕಾರಣ ಎಂದು ಯಾರಿಗಾದರೂ ಸ್ಪಷ್ಟವಾಗಿರಲೇಬೇಕು.

ಸ್ವಾತಂತ್ರ್ಯಾನಂತರ ಸಂವಿಧಾನದ ಬುನಾದಿಯ ಮೇಲೆ ರೂಪುಗೊಳ್ಳುತ್ತಿರುವ ನಮ್ಮ ಸಮಾಜ ಹೊಸ ದಿಕ್ಕುಗಳನ್ನು, ಹೊಸ ಆಯಾಮಗಳನ್ನು ಶೋಧಿಸುವುದರಲ್ಲಿ ತೊಡಗಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವಗಳು ನಮ್ಮ ಸಂವಿಧಾನದ ಮೂಲ ಮೌಲ್ಯಗಳು.

ಇವು ಯಾವುವೂ ಸಂಪ್ರದಾಯಸ್ಥ ಮನಸ್ಸುಗಳಿಗೆ ಸ್ವೀಕಾರಾರ್ಹವಾಗಿಲ್ಲ. ದಶಕಗಳ ಕಾಲ ಒಳಗೊಳಗೇ ಅಸಮಾಧಾನದಲ್ಲಿ ಕುದಿಯುತ್ತಿದ್ದ ಶಕ್ತಿಗಳು, ಈಗ ಸುಮಾರು ಎರಡು– ಮೂರು ದಶಕಗಳಲ್ಲಿ ತಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಹಿಂಬಾಗಿಲಿನಿಂದ ಪ್ರವೇಶಿಸಿ ದಾಳಿ ನಡೆಸುವ ಯತ್ನ ಮಾಡುತ್ತಿವೆ. ಮನುವಾದಿ ಶಕ್ತಿಗಳು ಅಂಬೇಡ್ಕರ್‌ವಾದವನ್ನು ಮತ್ತು ಅವರು ರೂಪುಗೊಳಿಸಿದ ಪ್ರಜಾತಂತ್ರದ ಧರ್ಮಗ್ರಂಥ ಎಂದೇ ಕರೆಯಬಹುದಾದ ಸಂವಿಧಾನವನ್ನು ನಿಷ್ಕ್ರಿಯಗೊಳಿಸಲು ವ್ಯವಸ್ಥಿತ ಸಂಚು ನಡೆಸುತ್ತಿವೆ.

ನಮ್ಮ ದೃಶ್ಯ ಮಾಧ್ಯಮಗಳು ಇವಕ್ಕೆ ಬೆಂಬಲ ನೀಡುತ್ತಿವೆ– ತಮ್ಮದೇ ಟಿ.ಆರ್.ಪಿ. ಕಾರಣಗಳಿಗಾಗಿ. ಭವಿಷ್ಯ, ಪೂಜೆ, ಪಾಪ– ಪುಣ್ಯ, ಪುನರ್ಜನ್ಮ, ವಾಸ್ತು ಎಂಬ ಎಲ್ಲ ಭಯೋತ್ಪಾದಕ ವಿಷಯಗಳನ್ನು ಮುಂಜಾನೆಯಿಂದ ಬೆಳಗಿನ ಹತ್ತರವರೆಗೆ, ನಂತರವೂ ಪುಂಖಾನುಪುಂಖವಾಗಿ ಅಮಾಯಕ ಕಿವಿಗಳಲ್ಲಿ ತುಂಬಿ, ಮನಸ್ಸುಗಳನ್ನು ಕದಡಿ ಜನಸಾಮಾನ್ಯರನ್ನು ಭಯಂಕರ ರೀತಿ ಶೋಷಣೆ ಮಾಡುತ್ತಿವೆ. ಮೂಢನಂಬಿಕೆಯ ವಿರುದ್ಧದ ಹೋರಾಟ ಪ್ರಥಮವಾಗಿ ಈ ಶೋಷಣೆಯ ವಿರುದ್ಧ ನಡೆಯಬೇಕು.

ವೈಜ್ಞಾನಿಕ ಮನೋಭಾವ ಕುರಿತು ನಮ್ಮ ಸರ್ಕಾರಗಳು, ರಾಜಕಾರಣಿಗಳು ಎಷ್ಟರಮಟ್ಟಿಗೆ ಆಸಕ್ತರಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಜನರ ನಂಬಿಕೆಗಳನ್ನು, ಅವು ಎಷ್ಟೇ ಅವೈಜ್ಞಾನಿಕವಾಗಿರಲಿ ಅವನ್ನು ಪರೋಕ್ಷವಾಗಿ ಬೆಂಬಲಿಸುತ್ತ ಹಾಗೂ ಒಂದು ಬಗೆಯಲ್ಲಿ ಪೋಷಿಸುತ್ತಿದ್ದಾರೆ ನಮ್ಮ ಅಧಿಕಾರ ವರ್ಗದವರು ಹಾಗೂ ರಾಜಕಾರಣಿಗಳು.

ವಿಧಾನ ಸೌಧವೂ ವಾಸ್ತುವಿನ ಕೆಂಗಣ್ಣಿಗೆ ಎಂದು ಬಲಿಯಾಗುತ್ತದೋ ತಿಳಿಯದು. ನಮ್ಮ ಪ್ರಧಾನಿಗಳೇ ಒಂದು ಬೃಹತ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ, ‘ನಮ್ಮ ಪೂರ್ವಜರು ಪ್ಲಾಸ್ಟಿಕ್ ಸರ್ಜರಿ (ಗಣೇಶ) ಹಾಗೂ ಜೆನೆಟಿಕ್ ವಿಜ್ಞಾನಗಳಲ್ಲಿ (ಕರ್ಣ) ನಿಷ್ಣಾತರಾಗಿದ್ದರು’ ಎಂದು ಘೋಷಿಸಿದ ಮೇಲೆ ನಮ್ಮಂಥ ಪಾಮರರ ಗತಿಯೇನು?

ಮೌಢ್ಯದ ಹಿಂಬಾಗಿಲ ಪ್ರವೇಶದ ಉದ್ದೇಶವೇ ಶತಮಾನಗಳ ಹಿಂದಿನ ಸಾಮಾಜಿಕ ವ್ಯವಸ್ಥೆಯನ್ನು ಪುನರ್‌ ನಿರ್ಮಾಣ ಮಾಡಿ ಹೆಣ್ಣುಮಕ್ಕಳು, ಶೂದ್ರರು, ದೀನ– ದಲಿತ ವರ್ಗಗಳನ್ನು ಸಂಪೂರ್ಣ ನಿಸ್ಸತ್ವಗೊಳಿಸುವುದೇ ಆಗಿದೆ.

ಈಗ ಸರ್ಕಾರದ ಮೊರೆ ಹೊಕ್ಕು ಕಾನೂನು ಮಾಡಿಬಿಟ್ಟರೆ ಏನೂ ಸಾಧಿಸಿದಂತೆ ಆಗುವುದಿಲ್ಲ. ಕಾನೂನಿನ ಪಾಡಿಗೆ ಅದು ಇರುತ್ತದೆ. ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಶೇಕಡ 5ರಷ್ಟು ರಾಜಕಾರಣಿಗಳಿಗೂ ಇರುವುದಿಲ್ಲ. ಇಂದು ಬಿಜೆಪಿ ಆಡಳಿತದ ಉತ್ತರ ಭಾರತದ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ನಾವು ಕಾಣುತ್ತಲೇ ಇದ್ದೇವೆ. ಸದ್ಯದ ಸಂದರ್ಭದಲ್ಲಿ ವೈಚಾರಿಕ ಚಿಂತನೆ ಎಂದರೆ ದೇಶದ್ರೋಹ ಎನಿಸಿಬಿಟ್ಟಿದೆ. ಆದಕಾರಣ ಮೌಢ್ಯದ ವಿರುದ್ಧದ ಹೋರಾಟವೆಂದರೆ ಅದು ಸರ್ಕಾರಗಳ ಮೂಲಕ ಆಗುವ ಮಾತು ಖಂಡಿತ ಅಲ್ಲ ಎಂದೇ ನನ್ನ ನಂಬಿಕೆ. ಅದರಲ್ಲೂ ಚುನಾವಣೆಯ ವರ್ಷ ಸಮೀಪಿಸುತ್ತಿರುವುದರಿಂದ ನಾವು ನಿರೀಕ್ಷಿಸುತ್ತಿರುವ ಕಾನೂನು ಗಾವುದ ದೂರ ಹಿಂದೆ ಸರಿಯುವುದರಲ್ಲಿ ಅಚ್ಚರಿಯಿಲ್ಲ.

ನಾವುಗಳೆಲ್ಲ ಆಶಿಸುತ್ತಿರುವ ಮೌಢ್ಯಾಚರಣೆಯ ವಿರುದ್ಧದ ಹೋರಾಟ ಸಂಪೂರ್ಣವಾಗಿ ಜನಕೇಂದ್ರಿತವಾಗಬೇಕು. ಬೆತ್ತಲೆ ಸೇವೆಯ ವಿರುದ್ಧದ ಹೋರಾಟ ನೂರಕ್ಕೆ ನೂರರಷ್ಟು ಜನಸಾಮಾನ್ಯರಿಂದ ಆದ ಯಶಸ್ಸು. ಈಗಲೂ  ಜನರನ್ನು ಎಚ್ಚರಿಸಬೇಕಾದರೆ ಭವಿಷ್ಯದ ಕುರಿತಾದ ಕಳಕಳಿಗಳನ್ನು ಉದ್ದೀಪನಗೊಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

***

ಕೊನೆಗೊಂದು ಅಡಿಟಿಪ್ಪಣಿ: ಧರಣಿಗೆ ಸಂಬಂಧಿಸಿದಂತೆ ನಿಡುಮಾಮಿಡಿ ಸ್ವಾಮಿಗಳು ಕಳಿಸಿದ ಕರಪತ್ರದಲ್ಲಿ ಗಾಂಧೀಜಿ ಚಿತ್ರ ಯಾಕೆ ಇಲ್ಲ  ಎಂಬುದು ಅರ್ಥವಾ
ಗಲಿಲ್ಲ. ಬಹುಶಃ ಕಣ್ತಪ್ಪಿ ಆಗಿರಬಹುದು ಎಂದು ಮೊದಲು ಅಂದುಕೊಂಡೆ. ನಂತರ ಕಾರ್ಯಕ್ರಮದ ವಿವರಣೆಯ ಪತ್ರವೂ ತಲುಪಿತು. ಅಲ್ಲಿಯೂ ಗಾಂಧೀಜಿ ನಾಪತ್ತೆಯಾಗಿರುವುದು ಕಂಡು ಆಶ್ಚರ್ಯವಾಯಿತು.

‘ಚಾತುರ್ವರ್ಣ್ಯಂ ಮಯಾ ಸೃಷ್ಟಂ’ ಎಂದು ಘೋಷಿಸಿದ ಶ್ರೀಕೃಷ್ಣನ ಚಿತ್ರವೂ ಇದೆ; ಆದರೆ ಹಿಂದೂ ಧರ್ಮದ ಟೊಳ್ಳುಗಳನ್ನೆಲ್ಲ ನಿರಾಕರಿಸುತ್ತ, ಅದನ್ನು ಮನುಷ್ಯ ಧರ್ಮವಾಗಿಸಲು ಯತ್ನಿಸುತ್ತ, ಕೊನೆಗೆ ಅದೇ ಕಾರಣಕ್ಕಾಗಿಯೇ ತಮ್ಮ ಜೀವವನ್ನೇ ಬಲಿ ಅರ್ಪಿಸಿದ ಗಾಂಧಿ ಅವರನ್ನು ನಿಡುಮಾಮಿಡಿ ಶ್ರೀಗಳು ಹೇಗೆ ಮರೆಯಲು ಸಾಧ್ಯವಾಯಿತು? ಗಾಂಧೀಜಿ ಜೊತೆ ನಮ್ಮ ನೂರು ಜಗಳಗಳಿರಬಹುದು, ಇವೆ; ನೂರು ಭಿನ್ನಾಭಿಪ್ರಾಯಗಳಿರಬಹುದು, ಇವೆ. ಆದರೆ ಇಂಥ ಕ್ರಿಯಾಶೀಲ, ಸೃಜನಾತ್ಮಕ ಜಗಳಗಳನ್ನು ಆಡಬಹುದಾದ ವ್ಯಕ್ತಿಯನ್ನು ನಾವು ಮರೆಯುವುದಕ್ಕೆ ಹೇಗೆ ಸಾಧ್ಯ?

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌– ಈ ನಾಲ್ವರು ಮಹಾನ್‌ ಪುರುಷರು ಇಂದಿಗೂ ನಮ್ಮ ದೇಶಕ್ಕೆ ಮಹಾನ್‌ ಶಕ್ತಿಗಳು ಎಂದೇ ನನ್ನ ನಂಬಿಕೆ. ಇವರಲ್ಲಿ ಯಾರೊಬ್ಬರ ಬಗ್ಗೆ ಮಾತನಾಡುವಾಗಲೂ ಮತ್ತೊಬ್ಬರನ್ನು ಮರೆಯಲು ಸಾಧ್ಯವೇ ಇಲ್ಲ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT