ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗಾಗಿ ನಿತ್ಯ ನದಿ ದಾಟುವ ಕಸರತ್ತು!

Last Updated 6 ಸೆಪ್ಟೆಂಬರ್ 2017, 6:10 IST
ಅಕ್ಷರ ಗಾತ್ರ

ಯಾದಗಿರಿ: ಕನಿಷ್ಠ ಮೂಲ ಸೌಲಭ್ಯ ಗಳಿಂದ ನರಳುತ್ತಿರುವ ಸುರಪುರ ತಾಲ್ಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ಈಗ ಮೆದುಳು ಜ್ವರ. ಮಲೇರಿಯಾ, ಡೆಂಗಿ ಜ್ವರ ಬಾಧೆಯಿಂದ ಬಳಲುತ್ತಿದೆ.

ಕೃಷ್ಣಾ ನದಿಗೆ ನೀರು ಬಿಟ್ಟಾಗಲೆಲ್ಲಾ ನೀಲಕಂಠರಾಯನಗಡ್ಡೆ ಗ್ರಾಮ ಜಲಾವೃತ ಸ್ಥಿತಿ ಎದುರಿಸುತ್ತದೆ. ನದಿಯ ನಡುಗಡ್ಡೆಯ ಭೂಪ್ರದೇಶವೇ ಗ್ರಾಮ ಆಗಿದ್ದು, ನದಿಯಲ್ಲಿ ಎಷ್ಟೇ ಪ್ರಮಾಣದಲ್ಲಿ ನೀರು ಬಿಟ್ಟರೂ ಗ್ರಾಮದಲ್ಲಿ ಅನಾರೋಗ್ಯಕಾರಿ ವಾತಾವರಣ ನಿರ್ಮಾಣವಾಗುತ್ತದೆ. ಮಲೇರಿಯಾ, ಡೆಂಗಿ, ವಿಷಮಶೀತ ಜ್ವರ ಸಾಮಾನ್ಯವಾಗಿ ಕಾಡುತ್ತವೆ.

ಆದರೆ, ಚಿಕಿತ್ಸೆ ಪಡೆಯಲು ಜನರು ನದಿ ಪ್ರವಾಹ ಎದುರಿಸಿ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಬೇಕು. ಇಲ್ಲವೇ ಗೆದ್ದಲಮರಿ ಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ಹೋಗಬೇಕು.  ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ  7 ಕಿಲೋ ಮೀಟರ್ ದೂರದಲ್ಲಿರುವುದರಿಂದ ನಡುಗಡ್ಡೆಯ ಗ್ರಾಮಸ್ಥರು ಹೆಚ್ಚಾಗಿ ಅವಲಂಬಿಸಿದ್ದಾರೆ.

‘ಜನರು ಅನಾರೋಗ್ಯಕ್ಕೆ ಪ್ರತಿಬಾರಿ ಚಿಕಿತ್ಸೆ ಪಡೆಯಲು ನದಿ ದಾಟುವ ಕಸರತ್ತು ಮಾಡಲೇಬೇಕು. ನದಿಪ್ರವಾಹ ಹೆಚ್ಚಿದರೆ ಚಿಕಿತ್ಸೆ ಮರೀಚಿಕೆಯಾಗುತ್ತದೆ. ಈ ಸಂರ್ಭದಲ್ಲಿ ಆನಾರೋಗ್ಯ ಜನರ ಜೀವಹಿಂಡುತ್ತದೆ’ ಎಂದು ಗ್ರಾಮಸ್ಥ ದುರ್ಗಪ್ಪ ತಿಳಿಸಿದರು.

‘ನದಿಯಲ್ಲಿ ಈಗ ಹರಿವು ಕಡಿಮೆಯಾಗಿದ್ದರೂ, ಮಕ್ಕಳನ್ನು ದಡ ದಾಟಿಸುವುದು ಕಷ್ಟಸಾಧ್ಯ. ಹೀಗಾಗಿ ಮೆದುಳು ಜ್ವರ, ಮಲೇರಿಯಾ ಬಾಧಿಸುತ್ತಿರುವ ಮಕ್ಕಳನ್ನು ನಿತ್ಯ ನದಿ ದಾಟಿಸಿಕೊಂಡೇ ಸಂಚರಿಸಬೇಕಾದ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ವಿವರಿಸಿದರು.

12 ಶಂಕಿತ ಮಲೇರಿಯಾ ಪ್ರಕರಣಗಳು ಪತ್ತೆ: ‘ನೀಲಕಂಠರಾಯನಗಡ್ಡಿಯಲ್ಲಿ ಒಟ್ಟು 32 ಕಟುಂಬಗಳು ನೆಲೆಸಿವೆ. 225 ಜನಸಂಖ್ಯೆ ಹೊಂದಿದ್ದು, 109 ಪರುಷರು, 116 ಮಹಿಳೆಯರಿದ್ದಾರೆ. 5ವರ್ಷದೊಳಗಿನ ಒಟ್ಟು 55 ಮಕ್ಕಳು ಇದ್ದಾರೆ. ನಾಲ್ವರು ಗರ್ಭಿಣಿಯರಿದ್ದಾರೆ. ಅವರಲ್ಲಿ 5 ಪುರುಷರಿಗೆ, 7  ಮಹಿಳೆಯರು ಸೇರಿ ಒಟ್ಟು 12 ಒಟ್ಟು ಜನರಲ್ಲಿ ಶಂಕಿತ ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಅವರಿಗೆ ನಿತ್ಯ ಆರೋಗ್ಯ ತಪಾಸಣೆ ಅನಿವಾರ್ಯ. ಆದರೆ, ಸಣ್ಣ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿದರೂ ಇಲ್ಲಿನ ಜನರಿಗೆ ಆರೋಗ್ಯ ಸುಧಾರಣೆ ದೊಡ್ಡ ಸವಾಲು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀಲಮ್ಮ ಹೇಳುತ್ತಾರೆ.

‘ಹಿಂದೊಮ್ಮೆ ನದಿಯಲ್ಲಿ ಪ್ರವಾಹ ಉಂಟಾದಾಗ ನಡುಗಡ್ಡೆಯ ಗರ್ಭಿಣಿ ಯಲ್ಲಮ್ಮ ನದಿಯಲ್ಲಿ ಈಜ, ಲಿಂಗಸಗೂರು ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಇದೇ ಸ್ಥಿತಿ ಈಗಲೂ ಇಲ್ಲಿನ ನಾಲ್ವರು ಗರ್ಭಿಣಿಯರು  ಬಾರದಂತೆ ತಡೆಯಲು ಜಿಲ್ಲಾ ಆರೋಗ್ಯ ಇಲಾಖೆಯು ಗ್ರಾಮದಲ್ಲೇ ಮೊಬೈಲ್ ಆರೋಗ್ಯ ಘಟಕ ತೆರೆದಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT