ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅನಾಹುತ; ಮುಂಜಾಗೃತೆ ಅಗತ್ಯ

Last Updated 6 ಸೆಪ್ಟೆಂಬರ್ 2017, 6:53 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಸರ್ಕಾರಿ ಬಾಲಕರ ಪ್ರಥಮದರ್ಜೆ ಕಾಲೇಜಿನಲ್ಲಿ ಅಗ್ನಿ ಶಾಮಕ ದಳವು, ಕಾಲೇಜಿನ ಯುವ ರೆಡ್‌ ಕ್ರಾಸ್‌ ಘಟಕದ ಸಹಯೋಗದೊಂದಿಗೆ ಅಗ್ನಿಶಾಮಕ ದಳದ ಕಾರ್ಯವೈಖರಿ ಕುರಿತು ಮಾಹಿತಿ ಮತ್ತು ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮಗಳ ಅರಿವು ಮೂಡಿಸಲು ಮಂಗಳವಾರ ಪ್ರಾತ್ಯಕ್ಷಿಕೆ ಆಯೋಜಿಸಿತ್ತು.

ನಗರದ ಅಗ್ನಿಶಾಮಕ ದಳದ ಠಾಣಾಧಿಕಾರಿ ಸೋಮಶೇಖರ್‌ ಮತ್ತು ಸಿಬ್ಬಂದಿ ಅಪಘಾತ ಮತ್ತು ತುರ್ತು ಸಂದರ್ಭಗಳಲ್ಲಿ ಅಗ್ನಿ ಶಮನ ಮಾಡುವ ವಿವಿಧ ವಿಧಾನಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಸಿ.ಸೋಮಶೇಖರ್‌ ಮಾತನಾಡಿ, ವಿದ್ಯಾರ್ಥಿಗಳು ಅಗ್ನಿಶಾಮಕ ದಳದ ಕರ್ತವ್ಯಗಳ ಕುರಿತು ಜಾಗೃತಿ ಪಡೆದಿರಬೇಕು. ಅಗ್ನಿ ಅನಾಹುತಗಳು, ನೀರಿನಲ್ಲಿ ಮುಳುಗುವುದು, ಅಪಘಾತಗಳು ನಡೆದಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಪ್ರಾಥಮಿಕ ಕಾರ್ಯಗಳ ಅರಿವನ್ನು ಪಡೆದಿರಬೇಕು ಎಂದು ಹೇಳಿದರು.

ಇಂದಿನ ಮುಂದುವರಿದ ಯುಗದಲ್ಲಿ ಅಗ್ನಿಶಾಮಕ ದಳ ಅತ್ಯಂತ ಅಗತ್ಯ ಸೇವೆಯಾಗಿದೆ. ದಳದ ಸಿಬ್ಬಂದಿ ತುರ್ತು ಸಂದರ್ಭಗಳಲ್ಲಿ ಪ್ರಾಣವನ್ನು ಒತ್ತೆ ಇಟ್ಟು ಅನಾಹುತಗಳನ್ನು ತಡೆಗಟ್ಟಲು, ವಸ್ತು ಹಾಗೂ ಪ್ರಾಣ ನಷ್ಟವನ್ನು ಕಡಿಮೆ ಮಾಡಲು ಹೋರಾಟ ನಡೆಸುತ್ತಾರೆ ಎಂದರು.

ವಿದ್ಯಾರ್ಥಿಗಳು ಅಗ್ನಿ ಅನಾಹುತಗಳು ಮತ್ತು ಅಪಘಾತಗಳ ಬಗ್ಗೆ ಅರಿವು ಮತ್ತು ಜಾಗೃತಿ ಹೊಂದಬೇಕು. ಜತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ಅರಿವನ್ನು ಮೂಡಿಸಬೇಕು. ಇದು ಸಹ ಸಮಾಜ ಸೇವೆಯಾಗಿದ್ದು ಇಲಾಖೆಯೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ವೆಂಕಟಶಿವಾರೆಡ್ಡಿ, ಉಮೇಶ್‌, ಗಿರೀಶ್‌, ಶಂಕರ್‌ ಮತ್ತು ಶ್ರೀನಿವಾಸ್‌ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮಾಧಿಕಾರಿ ಪಿ.ಆರ್‌.ನರಸಪ್ಪ, ಉಪನ್ಯಾಸಕರಾದ ನವೀನ್‌ಕುಮಾರ್‌, ನಟೇಶ್‌, ಆರ್‌.ಎಸ್‌. ಅಶೋಕ್‌, ಅರ್ಚನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT