ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭದ್ರಾಪುರ: ಹಕ್ಕುಪತ್ರ ವಿತರಣೆ ಶೀಘ್ರ’

Last Updated 6 ಸೆಪ್ಟೆಂಬರ್ 2017, 8:59 IST
ಅಕ್ಷರ ಗಾತ್ರ

ಬಿಡದಿ: ‘ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 169 ಕುಟುಂಬಗಳಿಗೆ ಶೀಘ್ರದಲ್ಲಿ ಹಕ್ಕಪತ್ರ ವಿತರಿಸಲಾಗುವುದು’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು. ಇಲ್ಲಿನ ಭದ್ರಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ 40 ವರ್ಷಗಳಿಂದ ಈ ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರಗಳನ್ನು ಕೊಟ್ಟಿಲ್ಲ. ಅರಣ್ಯ ಭೂಮಿಯಲ್ಲಿ ನಿವೇಶನ ಹಂಚಿಕೆ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಇರುವುದರಿಂದ ಈ ಸಮಸ್ಯೆ ಬಗೆಹರಿದಿಲ್ಲ, ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಕುಂಬಳಗೂಡು ಅರಣ್ಯ ಪ್ರದೇಶ ವ್ಯಾಪ್ತಿಯ ಭದ್ರಾಪುರದಲ್ಲಿ ಸರ್ವೆ ನಂಬರ್ 1 ರಲ್ಲಿ ಅರಣ್ಯ ವಾಸಿಗಳು ವಾಸಿಸುತ್ತಿರುವ ಪ್ರದೇಶಗಳ ಅಳತೆ ಮಾಡಿಸಿ ಹೊಸದಾಗಿ ಭದ್ರಾಪುರ ಗ್ರಾಮವನ್ನು ರಚಿಸಲಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಈಗಾಗಲೆ ಜಂಟಿ ಸರ್ವೆ ಕಾರ್ಯ ಮುಗಿದಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಗೆ 65 ಕ್ಕೂ ಹೆಚ್ಚು ಪಲಾನುಭವಿಗಳು ನಿವೇಶನ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ 2013 ರಲ್ಲಿ 169 ಪಲಾನುಭವಿಗಳಿಗೆ ನಿವೇಶನ ನೀಡುವ ಬಗ್ಗೆ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸಭಾನಡವಳಿಯಲ್ಲಿ ದಾಖಲು ಮಾಡಲಾಗಿದೆ. ಇದರಂತೆ ಕ್ರಮ ವಹಿಸಿ ಅವರಿಗೆ ನ್ಯಾಯ ದೊರಕಿಸಲಾಗುವುದು’ ಎಂದರು.

ತಹಶೀಲ್ದಾರ್ ಬಿ.ವಿ. ಮಾರುತಿಪ್ರಸನ್ನ ಮಾತನಾಡಿ ‘ಅರಣ್ಯ ಭೂಮಿಯಲ್ಲಿನ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆ ಅನ್ವಯ ಇವರು ವಾಸವಿರುವ ಪ್ರದೇಶವನ್ನು ಸರ್ವೆ ಮಾಡಿ, ನಿವೇಶನಕ್ಕೆ ಸಂಭಂದಿಸಿದ ಜಾಗವನ್ನು ಗುರುತಿಸಲಾಗುವುದು. ಇಲಾಖೆಗಳ ಕಾನೂನುಗಳ ಅನ್ವಯ ನಿವೇಶನವನ್ನು ಜಿಪಿಎಸ್ ಮೂಲಕ ಗುರುತಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ ವೆಂಕಟೇಶ್, ಸದಸ್ಯ ಗುರುವಯ್ಯ, ಮುಖಂಡ ಪುಟ್ಟಯ್ಯ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಯು. ನರಸಿಂಹಯ್ಯ, ಎಪಿಎಂಸಿ ನಿರ್ದೇಶಕ ರಮೇಶ್, ಪಂಚಾಯಿತಿ ಕಾರ್ಯದರ್ಶಿ ಶಂಕರ್‌, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT