ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಮಾಡೆಲ್ ಅಲ್ಲ, ‘ರೋಲ್‌ ಮಾಡೆಲ್’

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಆಗಲ್ಲ’ –ಈ ಪದ ಅದೆಷ್ಟು ಬಾರಿ ಶಾಹೋಲಿ ಕಿವಿ ಮೇಲೆ ಬಿದ್ದಿತ್ತೋ ಲೆಕ್ಕವೇ ಇಲ್ಲ. ಶಾಲೆಗೆ ಹೋದಾಗ, ಕಾಲೇಜಿಗೆ ಬಂದಾಗ, ಆಟಕ್ಕೆ ಇಳಿದಾಗ, ಅಷ್ಟೇ ಏಕೆ, ಹೊರಗೆ ಸುಮ್ಮನೆ ಹೋದಾಗಲೂ ಈ ಒಂದು ಪದ ಎಷ್ಟು ಜನರಿಂದ ಮುತ್ತಿಗೆ ಹಾಕಿತ್ತೊ...

ಆದರೆ ಎದೆಯೊಳಗೆ ಮಾತ್ರ ಮೆಲ್ಲಗೆ ‘ಆಗೇ ಆಗುತ್ತದೆ’ ಎಂಬ ಸ್ವರ ಉಸುರುತ್ತಿತ್ತು. ‘ನೀನು ಮಾಡೆಲ್ ಆಗಲು ಸಾಧ್ಯವೇ ಇಲ್ಲ’ ಎಂಬ ಮಾತಿಗೆ ಉತ್ತರವೆಂಬಂತೆ ಈಗ ಟಾಪ್ ಮಾಡೆಲ್ ಆಗಿ ಮಿಂಚುತ್ತಿದ್ದಾರೆ ಶಾಹೋಲಿ.

ಹವಾಯ್‌ನ ಶಾಹೋಲಿ ಅಯೆರ್ಸ್ ಬಲ ಮುಂಗೈಯಿಲ್ಲದೇ ಹುಟ್ಟಿದವರು. ಅದೇ ಕಾರಣಕ್ಕೇ ಚಿಕ್ಕಂದಿನಿಂದಲೇ ತಾರತಮ್ಯಕ್ಕೆ ಒಳಗಾದರು. ಕ್ರೀಡೆಯಲ್ಲಿ ಬಹು ಆಸಕ್ತಿಯಿದ್ದ ಈಕೆ ಆಸೆಗಣ್ಣುಗಳಿಂದ ಅಂಗಳಕ್ಕೆ ಕಾಲಿಟ್ಟರೆ, ಕೈಯೇ ಇಲ್ಲದೆ ಹೇಗೆ ಆಡುತ್ತಿ ಎಂದು ತಣ್ಣೀರೆರೆಚಿದವರೇ. ಅಂಗವಿಕಲೆ ಎಂಬ ಒಂದೇ ಕಾರಣ ಎಲ್ಲಾ ಅವಕಾಶಗಳೂ ದೂರವೇ ಉಳಿದಂತಾಯ್ತು.

ಸಮಯ ಸರಿದಂತೆ ಮಾಡೆಲಿಂಗ್ ಸೆಳೆಯಿತು. ಹಾಗೆಂದು ಮಾಡೆಲಿಂಗ್‌ ಏಜೆನ್ಸಿಗಳಿಗೆ ಅಡಿ ಇಟ್ಟಾಗಲೂ ಇದೇ ಉತ್ತರವೇ. ಆದರೆ ಬಿಡಲಿಲ್ಲ. ಇದು ತಮ್ಮಿಂದಲೇ ಆಗಬೇಕಾದ ಬದಲಾವಣೆ ಎಂಬುದನ್ನು ಕಂಡುಕೊಂಡ ಶಾಹೋಲಿ ತಾವೇ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಮುಂದಡಿ ಇಟ್ಟರು.

ಸಮಾಜ ಹೀಗೇಕೆ? ಅಂಗವೈಕಲ್ಯವನ್ನು ಸಮಾಜ ಹೀಗೆ ನೋಡುವುದೇಕೆ? ಇದೇ ಪ್ರಶ್ನೆ ಪದೇ ಪದೇ ಶಾಹೋಲಿಯನ್ನು ಕಾಡಿದ್ದು. ಇದನ್ನು ಕೆದಕಿ ಹೋದಾಗಲೇ ಆಕೆಗೆ ಹೊಸ ದಾರಿ ತೆರೆದುಕೊಂಡಿದ್ದು.

‘ಅಂಗವಿಕಲತೆಯ ವ್ಯಾಖ್ಯಾನವನ್ನು ಬದಲಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಸಮಾಜ ಯಾವುದನ್ನು ಕೊರತೆ ಎಂದು ಭಾವಿಸಿರುತ್ತದೋ ಅದನ್ನೇ ನಮ್ಮ ಪ್ಲಸ್‌ ಪಾಯಿಂಟ್ ಮಾಡಿಕೊಳ್ಳಬೇಕು, ಆ ಕೊರತೆಯೇ ಜೀವನಕ್ಕೆ ಇಂಧನವಾಗಬೇಕು. ನಿರಾಕರಣೆಗಳೇ ನನ್ನ ಚರ್ಮವನ್ನು ಗಟ್ಟಿ ಮಾಡಿರುವುದು’ ಎಂದು ಛಲದಿಂದ ಹೇಳಿಕೊಂಡಿದ್ದಾರೆ ಶಾಹೋಲಿ.

ಕೃತಕ ಕೈ ಅಳವಡಿಸಿಕೊಂಡರೂ ಕೈಯಿಲ್ಲದೇ ರ್‍ಯಾಂಪ್‌ ಮೇಲೆ ಜನರನ್ನು ಸೆಳೆದದ್ದೇ ಹೆಚ್ಚು. ನಾವು ನಾವಾಗಿರಲು ಅಂಜಿಕೆಯೇಕೆ ಎಂಬುದು ಅವರ ವಾದ. ನಾರ್ಡ್‌ಸ್ಟ್ರಾಮ್‌ ಸೇರಿದಂತೆ ಹಲವು ನಿಯತಕಾಲಿಕೆಗಳ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ಶಾಹೋಲಿ. ಕೆಲ ಬ್ರ್ಯಾಂಡ್‌ಗಳಿಗೆ ರಾಯಭಾರಿ ಕೂಡ ಆಗಿದ್ದಾರೆ.

‘ನಮ್ಮನ್ನು ಯಾವುದು ಭಿನ್ನವೆನಿಸುವುದೋ ಅದೇ ನಮ್ಮನ್ನು ಸುಂದರವಾಗಿಯೂ ಬಿಂಬಿಸುತ್ತದೆ ಎಂಬುದೇ ನನ್ನ ನಂಬಿಕೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT