ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕ್ಕೆ ಸಾವಿಲ್ಲ: ಪ್ರತಿರೋಧದ ದನಿ ಅಡಗಿಸುವ ಹತ್ಯೆ ಖಂಡನೀಯ

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆ ಆಘಾತಕಾರಿ. ಕೋಮುವಾದಿ ರಾಜಕಾರಣ, ಜಾತಿ ವ್ಯವಸ್ಥೆ ಹಾಗೂ ಪ್ರಭುತ್ವದ ವಿರುದ್ಧದ ನಿರ್ಭೀತ ದನಿಯಾಗಿದ್ದರು ಗೌರಿ ಲಂಕೇಶ್. ಬಲಪಂಥೀಯ ವಿಚಾರಧಾರೆಗಳ ತೀವ್ರ ವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಸಕ್ರಿಯವಾಗಿ ದುಡಿದಿದ್ದರು.

ದಿಟ್ಟವಾಗಿ, ಬಹಿರಂಗವಾಗಿ ತಮ್ಮ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದ ಅವರಿಗೆ ಇದೇ  ಕಾರಣಕ್ಕಾಗಿಯೇ ಸೈದ್ಧಾಂತಿಕ ವಿರೋಧಿಗಳೂ ಇದ್ದರು. ಆದರೆ ಈ ವಿಚಾರಧಾರೆಗಳು ಅವರ ಜೀವಕ್ಕೇ ಮುಳುವಾದದ್ದು ಅರಗಿಸಿಕೊಳ್ಳಲು ಅಸಾಧ್ಯವಾದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಾಗಿ ಬಳಕೆಯಾಗುವ ಇಂತಹ ನೀಚ ಮಾರ್ಗಗಳು ತೀವ್ರ ಮಾತುಗಳಲ್ಲಿ ಖಂಡನಾರ್ಹ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾವನ್ನು ಸಂಭ್ರಮಿಸಿದ ವಿದ್ಯಮಾನ ನಡೆದಿದ್ದಂತೂ ನಾಚಿಕೆಗೇಡು. ಇದು ಸಂವಿಧಾನಬದ್ಧವಾದ ಕಾನೂನು ಸುವ್ಯವಸ್ಥೆಯನ್ನೇ ಅಣಕಿಸುವಂತಹದ್ದು. ಇಂತಹ ಬೆಳವಣಿಗೆಗಳನ್ನು ಮೊಳಕೆಯಲ್ಲೇ ಚಿವುಟಬೇಕು.

ಸಮೀಕ್ಷೆಯೊಂದರ ಪ್ರಕಾರ, ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 192 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 136ರಲ್ಲಿದೆ ಎಂಬುದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ಪತ್ರಕರ್ತರ ಧ್ವನಿಗಳನ್ನು ಹತ್ತಿಕ್ಕುವ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕ. ಭಾರತದಲ್ಲಿ 1992ರಿಂದ 40 ಪತ್ರಕರ್ತರು ಹತ್ಯೆಯಾಗಿದ್ದಾರೆ.

ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ ಅಥವಾ ಅಪರಾಧಿಗಳು ಪತ್ತೆಯಾಗಿಲ್ಲ. ಶಿಕ್ಷಾಭಯವಿಲ್ಲದ ಈ ಸ್ಥಿತಿ ಅಭದ್ರತೆಯನ್ನು ಮೂಡಿಸುವಂತಹದ್ದು. ಇದು ತಪ್ಪಬೇಕು. ತನಿಖಾ ವರದಿಗಾರಿಕೆಗೆ ಇಳಿಯುವ ಪತ್ರಕರ್ತರು ಹಲ್ಲೆಗೊಳಗಾಗುವುದು ಮುಂದುವರಿದಿದೆ. ಇಂತಹ ಪ್ರತಿ ಹಲ್ಲೆ ಪ್ರಕರಣದ ಹಿಂದೆ ಸ್ಪಷ್ಟವಾದ ರೂಪುರೇಷೆ ಇದೆ. ಈ ಬೆಳವಣಿಗೆ ಅಪಾಯಕಾರಿ.

ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮವೇ ಆಕ್ರಮಣಗಳಿಗೆ ತುತ್ತಾಗುವುದು ನಾಗರಿಕ ಸಮಾಜಕ್ಕೆ ಮಾರಕ. ಇದಕ್ಕೆ ಸರ್ವಥಾ ಅವಕಾಶ ಕೊಡಬಾರದು. ವಿಮರ್ಶೆ,ಭಿನ್ನಾಭಿಪ್ರಾಯ ಹಾಗೂ ಬಹು ವಿಧದ ಅಭಿಪ್ರಾಯಗಳು ಪ್ರಜಾಪ್ರಭುತ್ವದ ಮೂಲ ಧಾತು ಎಂಬುದನ್ನು ನಾವು ಹೇಗೆ ಮರೆಯುವುದು ಸಾಧ್ಯ? ಇಂತಹದೊಂದು ಸಾಮಾಜಿಕ ಸ್ವರೂಪ ನಾಶವಾದಲ್ಲಿ ಅದು ಆರೋಗ್ಯಕರ ಸಮಾಜವಾಗಿ ಹೇಗೆ ಉಳಿಯುತ್ತದೆ ಎಂಬಂತಹ ಪ್ರಶ್ನೆಗಳನ್ನು ನಾಗರಿಕರು ಕೇಳಿಕೊಳ್ಳಬೇಕು. ಈವರೆಗೆ ಬೆಳೆದುಕೊಂಡು ಬಂದ ನಾಗರಿಕತೆ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗುವ ಅಂಶಗಳಿವು ಎಂಬುದು ನಮಗೆ ನೆನಪಿರಬೇಕು.

ಗೌರಿ ಲಂಕೇಶ್ ಅವರ ಹತ್ಯೆ ವಿರೋಧಿಸಿ ರಾಷ್ಟ್ರದ ವಿವಿಧ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ. ವಿದೇಶಿ ಮಾಧ್ಯಮಗಳೂ ಗೌರಿ ಲಂಕೇಶ್ ಹತ್ಯೆಯ ವರದಿಗಳನ್ನು ಪ್ರಮುಖವಾಗಿ ಪ್ರಕಟಿಸಿವೆ. ಅವರ ಹತ್ಯೆಗೆ ಕಾರಣ ಏನೆಂಬುದು ಎಲ್ಲಾ ಮಗ್ಗುಲುಗಳಲ್ಲೂ ತನಿಖೆಯಾಗಲಿ. ಆದರೆ ಈಗಾಗಲೇ ರಾಷ್ಟ್ರದಲ್ಲಿ ನಡೆದಿರುವ ಮೂವರು ವಿಚಾರವಾದಿಗಳ ಸರಣಿ ಹತ್ಯೆಗಳಿಗೂ ಗೌರಿ ಹತ್ಯೆಗೂ ಸಾಮ್ಯತೆ ಇದೆ ಎಂಬುದು ಆತಂಕಕಾರಿ. ಈ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಸಂಶೋಧಕ ಎಂ. ಎಂ. ಕಲಬುರ್ಗಿಯವರ ಹತ್ಯೆಯಾಗಿ ಈಗಾಗಲೇ ಎರಡು ವರ್ಷಗಳು ಕಳೆದಿದ್ದರೂ ಹಂತಕರನ್ನು ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆಗಳು ಸೋತಿವೆ. ತನಿಖಾ ಸಂಸ್ಥೆಗಳ ಈ ವೈಫಲ್ಯದ ನಡುವೆಯೇ ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಸಂದೇಶ ನೀಡುವ ರೀತಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಗೂಢಚರ್ಯೆ ವಿಭಾಗದ ವೈಫಲ್ಯವನ್ನೂ ಇದು ಸೂಚಿಸುತ್ತದೆ. ನಮ್ಮಲ್ಲಿ ತಂತ್ರಜ್ಞಾನ ಇದೆ. ಪರಿಣತರೂ ಇದ್ದಾರೆ. ಹೀಗಿದ್ದೂ ಅಪರಾಧಿಗಳು ಪತ್ತೆಯಾಗುತ್ತಿಲ್ಲ ಏಕೆ ಎಂಬುದರ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ‘ಯಾವುದೇ ಗಡುವು ನಿಗದಿ ಮಾಡಿಲ್ಲ. ಬೇಗನೇ ಹಂತಕರನ್ನು ಪತ್ತೆ ಹಚ್ಚುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಇವು ಬಾಯಿ ಮಾತಿನ ಉಪಚಾರದ ಮಾತುಗಳಾಗಬಾರದು. ರಾಜಕಾರಣಿಗಳು ನೀಡುವಂತಹ ತಕ್ಷಣದ ಪೊಳ್ಳು ಭರವಸೆಯಾಗದಿರಲಿ ಈ ಮಾತುಗಳು.

ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಶಕ್ತಿಗಳು ದೊಡ್ಡದಾಗಿ ಬೆಳೆಯದಂತೆ ಮಟ್ಟ ಹಾಕುವ ಹೊಣೆಗಾರಿಕೆ ಸರ್ಕಾರದ್ದು. ಈ ವಿಚಾರದಲ್ಲಿ ಪೊಲೀಸ್ ತನಿಖಾ ವ್ಯವಸ್ಥೆ ಬಲಗೊಳ್ಳಬೇಕು. ನೂತನ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದೆ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳನ್ನು ಭೇದಿಸುವ ಸವಾಲಿದೆ. ಮುಂದೆ ಇಂತಹ ಹತ್ಯೆಗಳು ನಡೆಯದಿರುವಂತಹ ಶಿಕ್ಷಾ ಭಯ ಇರುವ ವಾತಾವರಣ ಸೃಷ್ಟಿಸುವುದೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT