ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆ

ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ; ರಾಜ್ಯ ಸರ್ಕಾರಕ್ಕೆ ಪತ್ರಕರ್ತರ ಸಂಘದ ಮನವಿ
Last Updated 7 ಸೆಪ್ಟೆಂಬರ್ 2017, 8:49 IST
ಅಕ್ಷರ ಗಾತ್ರ

ಬಾಗಲಕೋಟೆ: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಎಡಪಂಥೀಯ ವಿಚಾರಧಾರೆ ಹೊಂದಿರುವ ಸಾಹಿತಿಗಳು, ಲೇಖಕರು ಹಾಗೂ ಹೋರಾಟಗಾರರ ಸರಣಿ ಹತ್ಯೆ ನಡೆಯುತ್ತಿದೆ. ಸರ್ಕಾರ ಇಂತಹ ಹೇಯ ಕೃತ್ಯ ತಡೆಯುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಎಂ.ಎಂ.ಕಲಬುರ್ಗಿ, ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲಕರ್  ಹತ್ಯೆಯ ಬೆನ್ನಲ್ಲೆ ಗೌರಿ ಲಂಕೇಶ್ ಹತ್ಯೆ ನಡೆದಿರುವುದು ದುರದೃಷ್ಟಕರ ಸಂಗತಿ. ಕೋಮುವಾದಿ ವಿಚಾರಧಾರೆ ಹೊಂದಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ವಿಚಾರವಾದಿಗಳಿಗೆ  ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನಿನಡಿ ಸರಿಯಾದ ಶಿಕ್ಷೆ ವಿಧಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಎಲ್.ಗೋಗಿ, ಎಂ.ಆರ್.ನಾಯ್ಕರ್, ಭೀಮಣ್ಣ ಭಜನ್ನವರ, ಜಿ.ಎಚ್.ಚಲವಾದಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೌನ ಪ್ರತಿಭಟನೆ
ಬಾಗಲಕೋಟೆ:
 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಜಿಲ್ಲಾಡಳಿತ ಭವನದ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.

ಪತ್ರಕರ್ತೆ ಗೌರಿ ಲಂಕೇಶ್ ಅವರು ಹಲವಾರು ನಕ್ಸಲ್‌ ಮುಖಂಡರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಮಾದರಿಯಲ್ಲಿಯೇ ಅವರ ಹತ್ಯೆ ನಡೆದಿದೆ ಎಂದು ದೂರಿದರು.

ಪತ್ರಕರ್ತರು ಸಮಾಜದಲ್ಲಿ ಭಯದಿಂದ ಕಾರ್ಯನಿರ್ವಹಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಹಿರಿಯ ಪತ್ರಕರ್ತರಾದ ಮುತ್ತು ನಾಯ್ಕರ, ರಾಮ ಮನಗೂಳಿ ಮಾತನಾಡಿದರು. ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಉಮೇಶ ಪೂಜಾರ, ಜಗದೀಶ ಗಾಣಿಗೇರ, ರವಿ ಹಳ್ಳೂರ, ರವಿ ಮೂಕಿ, ರವಿರಾಜ ಗಲಗಲಿ, ಅಶೋಕ ಶೆಟ್ಟರ್, ಎಚ್‌.ಅಶೋಕ್, ಆನಂದ ದಲಬಂಜನ, ಮಹಾಂತೇಶ ಮಸಾಲಿ, ಶಿವುಗಾಣಿಗೇರ, ಜಯಶಂಕರ ಕಲ್ಯಾಣಿ, ಸೋಮಶೇಖರ ಪೂಜಾರ, ಶಂಕರಲಿಂಗ ದೇಸಾಯಿ ಮತ್ತಿತರರು ಇದ್ದರು.

ಆರೋಪಿಗಳ ಬಂಧನಕ್ಕೆ ಒತ್ತಾಯ
ಬಾದಾಮಿ:
ತಾಲ್ಲೂಕು ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಎಸ್‌. ರವಿಚಂದ್ರ ಅವರಿಗೆ ಮನವಿ ಸಲ್ಲಿಸಿದರು.

‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ’ ಎಂದು ಕಾನಿಪ ಸಂಘದ ಅಧ್ಯಕ್ಷ ಅಡವೇಂದ್ರ ಇನಾಂದಾರ ಹೇಳಿದರು. ಪತ್ರಕರ್ತರ ಭವನದಲ್ಲಿ  ಮೌನಾಚರಣೆ ನಡೆಯಿತು. ಪತ್ರಕರ್ತರಾದ ಪ್ರಕಾಶ ಶಿರೂರ, ಲಿಂಗರಾಜ ಚಿನಿವಾಲರ, ಶಶಿ ವಸ್ತ್ರದ, ಶಂಕರ್‌ ಕುದರಿಮನಿ, ಎಚ್‌.ಆರ್‌. ಕಡಿವಾಲ, ವೈ.ಆರ್‌.ಪಾಟೀಲ, ಬಸವರಾಜ ಉಳ್ಳಾಗಡ್ಡಿ, ಎಸ್‌.ಎಂ. ಹಿರೇಮಠ ಇದ್ದರು.

ಹತ್ಯೆ ಖಂಡಿಸಿ ಕಾನಿಪ ಮನವಿ
ಜಮಖಂಡಿ: 
ಹತ್ಯೆಕೋರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ‘ಹತ್ಯೆ ಘಟನೆ ಸರ್ವರಲ್ಲೂ ದಿಗ್ಬ್ರಮೆ ಹುಟ್ಟಿಸಿದೆ. ಇದೊಂದು ಹೀನ ಮತ್ತು ಕರಾಳ ಘಟನೆ. ಈ ಘಟನೆಯಿಂದ ರಾಜ್ಯದಾದ್ಯಂತ ಭಯಾನಕ ಸ್ಥಿತಿ ನಿರ್ಮಾಣ ಆಗಿದೆ’ ಎಂದರು.

ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ಎಂ.ಸಿ. ಗೊಂದಿ, ಬಸವರಾಜ ಬಹಿರಶೆಟ್ಟಿ, ಸಂಘದ ಅಧ್ಯಕ್ಷ ಶಿವಾನಂದ ಕೊಣ್ಣೂರ, ಉಪಾಧ್ಯಕ್ಷ ಪೀರ ಕೊಡತಿ, ಕಾರ್ಯದರ್ಶಿ ಎಂ.ಎನ್. ನದಾಫ, ಖಜಾಂಚಿ ಡಾ.ಮಲ್ಲಿಕಾರ್ಜುನ ಮಠ, ಮೋಹನ ಸಾವಂತ, ಜಿ.ಆರ್‌. ವಾಳ್ವೇಕರ, ಮಲ್ಲೇಶ ಆಳಗಿ, ವಿಷ್ಣು ಕುಲಕರ್ಣಿ, ಪೀರ ಕೊಡತಿ, ನಾಗೇಶ ಜತ್ತಿ, ಅಪ್ಪು ಪೋತರಾಜ, ಶಿವಾಜಿ ಘೋರ್ಪಡೆ, ಮಲ್ಲು ಬ್ಯಾಕೋಡ, ಗೋಪಾಲ ಪಾಟೀಲ, ಡಾ.ಟಿ.ಪಿ. ಗಿರಡ್ಡಿ ಮನವಿ ಸಲ್ಲಿಸಿದರು.

ವಕೀಲರ ಪ್ರತಿಭಟನೆ: ಜಮಖಂಡಿ ವಕೀಲರ ಸಂಘ  ಕೋರ್ಟ್‌ ಕಲಾಪದಿಂದ ಹೊರಗುಳಿದರು. ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್‌–2 ತಹಶೀಲ್ದಾರ್‌ ಎಸ್‌.ಎಸ್‌. ನಾಯ್ಕಲಮಠ ಅವರ ಮೂಲಕ  ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಸ್‌. ವಿ.ಪಾಟೀಲ, ಉಪಾಧ್ಯಕ್ಷ ಆರ್‌. ಎಂ. ಡಾಂಗೆ, ಎಸ್‌.ಪಿ. ಪಾರಶೆಟ್ಟಿ, ರಮೇಶ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT