ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ ಮೇಲೆ ಹೊಡೀತಾರೆ ಎಚ್ಚರ!

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕುತಂತ್ರಗಳನ್ನು ನಡೆಸುತ್ತಾ ಕಲಾವಿದರ ಹೊಟ್ಟೆ ಮೇಲೆ ಹೊಡೆಯುವ ಷಡ್ಯಂತ್ರಿಗಳು ಕನ್ನಡ ಚಿತ್ರರಂಗದಲ್ಲಿ ಆಳವಾಗಿ ಬೇರು ಬಿಟ್ಟಿದ್ದಾರೆ...’

* ನಿತ್ಯ ನಗುಮೊಗದ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರ ಈ ಮಾತುಗಳಲ್ಲಿ ಒಂದು ಬಗೆಯ ಅಸಹನೆ ಎದ್ದು ಕಾಣುತ್ತಿತ್ತು. ‘ಇವರೇನಾ ಅವರು’ ಅನಿಸುತ್ತಿತ್ತು. ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರು ಹಾಗೂ ಹಿರಿಯ ಕಲಾವಿದರ ಬಗ್ಗೆ ಚಿತ್ರರಂಗ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು ಕೃಷ್ಣ.

‘ವ್ಯವಸ್ಥಿತವಾದ ಷಡ್ಯಂತ್ರಕ್ಕೆ ಹಿರಿಯ ನಟರಾದ ಅಶ್ವತ್ಥ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ವಜ್ರಮುನಿ, ಸುಂದರಕೃಷ್ಣ ಅರಸ್ ಸೇರಿದಂತೆ ಅಭಿನಯ ಬಿಟ್ಟು ಬೇರೇನೂ ಗೊತ್ತಿಲ್ಲದ್ದ ಅನೇಕ ಕಲಾವಿದರು ಬಲಿಯಾದರು. ಇಂದಿಗೂ ಡಿಂಗ್ರಿ ನಾಗರಾಜ್, ಬಿರಾದಾರ, ರೇಖಾ ದಾಸ್, ಅಪೂರ್ವ, ಆಶಾರಾಣಿ ಸೇರಿದಂತೆ ಎಷ್ಟೊ ಹಾಸ್ಯ ನಟರು ಹಾಗೂ ಪೋಷಕ ನಟರು ಕೆಲಸವಿಲ್ಲದೆ ಕುಳಿತಿರುವುದಕ್ಕೆ ಈ ಷಡ್ಯಂತ್ರ ನಡೆಸುವ ಗುಂಪೇ ಕಾರಣ’ ಎಂದು ಅವಕಾಶ ಕಸಿದುಕೊಳ್ಳುವವರ ವಿರುದ್ಧ ಗುಡುಗಿದರು.

ಅವಕಾಶಗಳ ವಿಷಯದಲ್ಲಿ ತಮಿಳು ಮತ್ತು ತೆಲುಗು ಚಿತ್ರರಂಗಗಳನ್ನು ನಿದರ್ಶನವಾಗಿ ನೀಡುವ ಅವರು, ಅಲ್ಲಿರುವ ಒಗ್ಗಟ್ಟು ಮತ್ತು ಹಿರಿಯ ಕಲಾವಿದರನ್ನು ಕಾಣುವ ಪರಿ ಕುರಿತು ಗಮನ ಸೆಳೆಯುತ್ತಾರೆ.

‘ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಮ್ಮಂತಿಲ್ಲ. ಅಲ್ಲಿ ಎಷ್ಟೇ ಹೊಸಬರು ಬಂದರೂ, ಹಿರಿಯ ಕಲಾವಿದರ ಕಿಮ್ಮತ್ತು ಕಡಿಮೆಯಾಗಿಲ್ಲ. ಎಲ್ಲರಿಗೂ ಅವಕಾಶಗಳ ಬಾಗಿಲು ಮುಕ್ತವಾಗಿರುತ್ತದೆ. ಅದಕ್ಕಾಗಿಯೇ ತೆಲುಗಿನಲ್ಲಿ ಇಂದಿಗೂ ಬ್ರಹ್ಮಾನಂದಂ ಅವರಂತಹ ಹಾಸ್ಯನಟ ನಂಬರ್ ವನ್ ಆಗಿದ್ದಾರೆ. ತಮಿಳು ಚಿತ್ರರಂಗವೂ ಅಷ್ಟೆ. ಅಲ್ಲಿ ಯಾರೂ ಕಡೆಗಣನೆಯಾಗಿಲ್ಲ. ನಮ್ಮವರು ಅಲ್ಲಿಯವರನ್ನು ನೋಡಿ ಕಲಿಯುವುದು ಬಹಳ ಇದೆ’ ಎಂದ ಅವರು ಷಡ್ಯಂತ್ರ ನಡೆಸುವವರ ಹೆಸರು ಹೇಳಲು ಬಯಸಲಿಲ್ಲ.

* ಆ್ಯಕ್ಷನ್‌ ಕಟ್‌ಗೆ ತಯಾರಿ

35 ವರ್ಷಗಳ ಹಾಸ್ಯ ಪಯಣದಲ್ಲಿ ಟೆನ್ನಿಸ್ ಕೃಷ್ಣ ಅವರೀಗ ವೃತ್ತಿ ಜೀವನದ ಹೊಸದೊಂದು ಮಗ್ಗುಲಿಗೆ ಹೊರಳಿದಿದ್ದಾರೆ. ಅವರೀಗ ‘ಮತ್ತೆ ಮತ್ತೆ’ ಎಂಬ ಕಾಮಿಡಿ ಥ್ರಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

‘ಅರುಣ್ ಹೊಸಕೊಪ್ಪ ಎಂಬುವವರು ಹೆಣೆದಿರುವ ಕಾಮಿಡಿ ಮತ್ತು ಥ್ರಿಲ್ಲರ್ ಕಥೆಯನ್ನು ನಿರ್ದೇಶಿಸಲು ಸಿದ್ಧತೆ ನಡೆಸಿದ್ದೇನೆ. ಅಚ್ಯುತ್ ಗೌಡ ಎಂಬುವವರು ಬಂಡವಾಳ ಹಾಕುತ್ತಿದ್ದಾರೆ. ಹಳೆ ಬೇರು, ಹೊಸ ಚಿಗುರಿನಂತೆ ನಮ್ಮ ಚಿತ್ರದಲ್ಲಿ ಹೊಸ ಹಾಗೂ ಹಿರಿಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರದ ಮುಹೂರ್ತ ನಡೆಸುವ ಆಲೋಚನೆ ಇದೆ’ ಎಂದು ತಮ್ಮ ನಿರ್ದೇಶನದ ಗುಟ್ಟು ಬಿಟ್ಟುಕೊಟ್ಟರು.

‘ನಿರ್ದೇಶನದ ಕನಸು ಹಳೆಯದು. ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದವನು ನಾನು. ತೆರೆ ಮೇಲೆ ಬರುವುದಕ್ಕೂ ಮುಂಚೆ ಸಹಾಯಕ ನಿರ್ದೇಶಕನಾಗಿ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. 1979ರಲ್ಲಿ ‘ಅಪರೂಪದ ಕಥೆ’ ಚಿತ್ರಕ್ಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ‘ತುಳಸೀದಳ’, ‘ತರ್ಕ’, ‘ಹೃದಯ ಪಲ್ಲವಿ’ ಸೇರಿದಂತೆ ಕೆಲ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದೇನೆ. ವೇಮಗಲ್ ಜಗನ್ನಾಥರಾವ್ ಮತ್ತು ಸುನೀಲ್ ಕುಮಾರ್ ದೇಸಾಯಿ ಅವರಂತಹ ನಿರ್ದೇಶಕರ ಜತೆ ಪಳಗಿದ್ದೆ. ಆದರೆ, ಆ ಮಧ್ಯೆ ಆರಂಭವಾದ ನಟನೆಯಿಂದಾಗಿ, ನಿರ್ದೇಶನದತ್ತ ಮತ್ತೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗ ಸ್ವತಂತ್ರವಾಗಿ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳುವ ಕಾಲ ಕೂಡಿ ಬಂದಿದೆ’ ಎಂದು ಅವರು ತಮ್ಮ ನಿರ್ದೇಶನದ ಕನಸಿನ ಬಗ್ಗೆ ಹೇಳುತ್ತಾರೆ.

* ಕೈಯಲ್ಲಿವೆ ನಾಲ್ಕು ಚಿತ್ರಗಳು

ಸದ್ಯ ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಮತ್ತು ‘ಗೌಡ್ರು ಹೋಟೆಲ್’ ಚಿತ್ರಗಳ ಶೂಟಿಂಗ್ ಮುಗಿದಿದೆ. ಉಳಿದಂತೆ ಐದಾರು ಚಿತ್ರಗಳು ಬಿಡುಗಡೆಯಾಗಬೇಕಿವೆ. ಶೀರ್ಷಿಕೆ ಅಂತಿಮಗೊಳ್ಳದ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಇದುವರೆಗೆ ಸುಮಾರು 600 ಚಿತ್ರಗಳಲ್ಲಿ ನಟಿಸಿರುವ ನನಗೆ, ಕಲಾತ್ಮಕ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇದೆ. ಈ ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ಮೂರು ವರ್ಷಗಳ ಹಿಂದೆ ಮಾತನಾಡಿದ್ದರು. ಆ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳುವ ಆಲೋಚನೆ ಇದೆ. ಆ ಚಿತ್ರದಲ್ಲಿ ನಗಿಸುವ ಟೆನ್ನಿಸ್ ಕೃಷ್ಣನ ಬದಲಿಗೆ, ಗಂಭೀರ ಕೃಷ್ಣನನ್ನು ನೋಡಬಹುದು.

**

* ತಿರುವು ಕೊಟ್ಟ ‘ಕಂಡಕ್ಟರ್ ಕರಿಯಪ್ಪ’

‘ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಕಂಡಕ್ಟರ್ ಕರಿಯಪ್ಪ’ ಎಂಬ ಧಾರವಾಹಿಯ ಒಂದು ಎಪಿಸೋಡ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅದರಲ್ಲಿದ್ದ ‘ನಮಸ್ಕಾರ ಕಣಣ್ಣೊ. ನಾನು ಹನುಮಂತ ಅಲ್ಲ, ಆಂಜನೇಯ ಕಣಣ್ಣೊ’ ಎಂಬ ಡೈಲಾಗ್ ಜನಪ್ರಿಯವಾಯಿತು. ಜನ ಹಾಸ್ಯನಟನಾಗಿ ನನ್ನ ಇಷ್ಟಪಟ್ಟರು. ಇದನ್ನು ಗಮನಿಸಿದ ಧಾರಾವಾಹಿಯ ನಿರ್ದೇಶಕರು, ನನ್ನ ಪಾತ್ರವನ್ನು ವಿಸ್ತರಿಸಿದರು. ಮುಂದೆ, ರಾಜ್‌ಕಿಶೋರ್ ಅವರು ‘ತ್ರಿನೇತ್ರ’ ಸಿನಿಮಾ ಮಾಡಿದಾಗ ಅದೇ ಡೈಲಾಗ್ ಅನ್ನು ‘ನಮಸ್ಕಾರ ಕಣಣ್ಣೊ. ನಾನು ನಂಜಪ್ಪನ ಮಗ ಗುಂಜಪ್ಪ’ ಎಂದು ಬದಲಾಯಿಸಿ ನನ್ನ ಹೆಸರಿನ ಜತೆಗೆ ಆ ಡೈಲಾಗ್ ಸದಾ ತಳುಕು ಹಾಕಿಕೊಳ್ಳುವಂತೆ ಮಾಡಿದರು’ ಎಂದು ಟೆನ್ನಿಸ್ ಕೃಷ್ಣ ತಮ್ಮ ಬದುಕಿಗೆ ತಿರುವು ಕೊಟ್ಟ ಡೈಲಾಗ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT