ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಮನೆಗೆ ಶುಕ್ರದೆಸೆ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ರಿಯಾಲ್ಟಿ ಉದ್ಯಮ ಆರ್ಥಿಕ ಹಾಗೂ ಕಾನೂನಾತ್ಮಕ ಗೊಂದಲಗಳಿಂದ ಈಗಷ್ಟೇ ಆಚೆ ಬಂದು ನೆಲೆ ಕಂಡುಕೊಳ್ಳುತ್ತಿದೆ. ನೋಟು ರದ್ದತಿಯ ಆಘಾತದಿಂದ ಹೊರಬಂದ ವಲಯ, ಜಿಎಸ್‌ಟಿ ಹಾಗೂ ರೇರಾ ಕಾಯ್ದೆಯೊಂದಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದೆ.

ಈ ವಲಯದಲ್ಲಿನ ಅಸ್ಪಷ್ಟತೆಗಳು ನಿಚ್ಚಳವಾಗುತ್ತಿದ್ದಂತೆ ಗ್ರಾಹಕರ ಮನೆಯ ಕನಸುಗಳೂ ಮತ್ತೆ ಚಿಗುರೊಡೆಯುತ್ತಿವೆ. ಅದರಲ್ಲೂ ಐಷಾರಾಮಿ ಮನೆಗಳ ಬೇಡಿಕೆಯಲ್ಲಿ ಏರಿಕೆ ಕಂಡು ಬರುತ್ತಿದೆ.

ಅಪಾರ್ಟ್‌ಮೆಂಟ್‌ಗಳು, ಪೆಂಟ್‌ಹೌಸ್‌ಗಳು, ವಿಲ್ಲಾಗಳು ಮತ್ತು ಬಂಗಲೆಗಳು ಐಷಾರಾಮಿ ಯೋಜನೆಗಳ ಸಾಲಿಗೆ ಸೇರುತ್ತವೆ. ಸಾಮಾನ್ಯವಾಗಿ ‘ಐಷಾರಾಮಿ’ ಎಂದರೆ ಪ್ರಮುಖ ಸ್ಥಳ ಮತ್ತು ಉತ್ತಮ ಸಾಮಾಜಿಕ ಸೌಕರ್ಯ ಮತ್ತು ಸೌಲಭ್ಯಗಳು ಎನ್ನುವ ವ್ಯಾಖ್ಯಾನವಿತ್ತು. ಆದರೆ ಈಗ ಬಿಲ್ಡರ್‌ಗಳು ಮಾರುಕಟ್ಟೆಯಲ್ಲಿ ಗೆಲ್ಲುವ ಸಲುವಾಗಿ, ಐಷಾರಾಮಿ ಯೋಜನೆಗಳಿಗೆ ಹೊಸ ತಂತ್ರಜ್ಞಾನಗಳನ್ನು, ಆಕರ್ಷಕ ವಿನ್ಯಾಸಗಳನ್ನು ಮತ್ತು ಇತ್ತೀಚಿನ ವಾಸ್ತುಶಿಲ್ಪ ಪರಿಕಲ್ಪನೆಗಳನ್ನು ಪರಿಚಯಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರು ಬೆಂಗಳೂರಿನಲ್ಲೂ ತಮ್ಮ ಕೈಚಳಕ ತೋರುವಂತಾಗಿದೆ. ಪರಿಣಾಮ ಐಷಾರಾಮಿ ಮನೆಗಳ ವಿನ್ಯಾಸ ಹಾಗೂ ಸ್ವರೂಪದಲ್ಲಿ ಹೊಸ ಹೊಸ ಟ್ರೆಂಡ್‌ಗಳು ಕಾಣಿಸಿಕೊಳ್ಳುತ್ತಿವೆ.

ಆಕರ್ಷಣೆ ಹೆಚ್ಚಲು ಕಾರಣ: ಐಟಿ/ಬಿಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಐಷಾರಾಮಿ ಮನೆಗಳತ್ತ ಜನ ಹೆಚ್ಚಿನ ಆಸಕ್ತಿ ತೋರಲು ಕಾರಣಗಳಿವೆ. ದೆಹಲಿ ಮತ್ತು ಮುಂಬೈಗೆ ಹೋಲಿಸಿದರೆ ಇಲ್ಲಿನ ಐಷಾರಾಮಿ ಮನೆಗಳ ಬೆಲೆ ಕಡಿಮೆ ಎನ್ನುವುದೂ ಅವುಗಳಲ್ಲೊಂದು. ಸರ್ಕಾರದ ಯೋಜನೆಗಳು ನ್ಯಾಯವಾಗಿ ಮನೆ ಕೊಳ್ಳುವವರ ಪರವಾಗಿವೆ ಎನ್ನುವುದು ಮತ್ತೊಂದು ಕಾರಣ. ಬ್ಯಾಂಕುಗಳಲ್ಲಿ ಸಾಕಷ್ಟು ಹಣ ಬಂದು ಸೇರಿದೆ. ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ತೀರಾ ಕಡಿಮೆಯಾಗಿದ್ದು, ಠೇವಣಿ ಇಡುವುದರಲ್ಲಿ ಯಾವ ಲಾಭವೂ ಇಲ್ಲ. ಹೀಗಾಗಿ ಜನ ತಮ್ಮ ಹಣವನ್ನು ಲಾಭದಾಯಕ ಯೋಜನೆಗಳಲ್ಲಿ ತೊಡಗಿಸಲು ಆಲೋಚಿಸುತ್ತಿದ್ದಾರೆ. ಅಲ್ಲದೇ ಇತ್ತ ಗೃಹಸಾಲದ ಬಡ್ಡಿದರವೂ ಕುಸಿಯುತ್ತಿದೆ. ಇವೆಲ್ಲವೂ ಯುವ ವೃತ್ತಿಪರರು ಇಲ್ಲಿಯೇ ತಮ್ಮ ಕನಸಿನ ಮನೆ ಹೊಂದಲು ಬಯಸುತ್ತಿರುವುದಕ್ಕೆ ಕಾರಣ.

ಬಿಲ್ಡರ್‌ಗಳೂ ಹೊರವಲಯಗಳಲ್ಲಿ ಐಷಾರಾಮಿ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ. ಮೆಟ್ರೊ ರೈಲಿನ ಸಂಪರ್ಕವಿರುವ ಭಾಗಗಳಲ್ಲಿ ಇಂತಹ ಯೋಜನೆಗಳಿಗೆ ಬೇಡಿಕೆ ಅಧಿಕವಾಗಿದೆ.

‘ಇದೀಗ ರಿಯಾಲ್ಟಿ ಮಾರುಕಟ್ಟೆ ಮತ್ತೆ ಚೈತನ್ಯ ತುಂಬಿಕೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಐಷಾರಾಮಿ ವರ್ಗದ ಮನೆಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ’ ಎಂದು ಖಚಿತಪಡಿಸುತ್ತಾರೆ ಆದ್ಯ ರಿಯಲ್‌ ಎಸ್ಟೇಟ್‌ನ ಮಾಲೀಕ ಶರತ್‌ ಹೋಬ್ಳಿದಾರ್‌.

‘30 ವರ್ಷ ಆಸುಪಾಸಿನ ಯುವ, ಉದ್ಯೋಗಿ ದಂಪತಿಗಳು ವಿಲ್ಲಾ, ಸ್ವತಂತ್ರ ಬಂಗಲೆ ಸೇರಿದಂತೆ ಐಷಾರಾಮಿ ಮನೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಸೇವಾವಧಿ ಹಾಗೂ ಸಂಬಳ ಎರಡೂ ಅಧಿಕವಾಗಿರುವ ಕಾರಣ ಈ ವರ್ಗದವರ ಸಾಲದ ಮೊತ್ತವೂ ಹೆಚ್ಚಿರುತ್ತದೆ. ಸಕಲ ಸೌಕರ್ಯಗಳಿರುವ, ಸುಲಭ ಸಂಪರ್ಕ ವ್ಯವಸ್ಥೆ ಇರುವ ಕಾರಣಕ್ಕೂ ಈ ಮನೆಗಳು ಬೇಡಿಕೆ ಪಡೆಯುತ್ತಿವೆ’ ಎನ್ನುವುದು ಅವರ ವಿಶ್ಲೇಷಣೆ.

ಬೆಂಗಳೂರು ಮಾತ್ರವಲ್ಲ, ಮುಂಬೈ ಸಹ ಐಷಾರಾಮಿ ಮನೆಗಳ ಪ್ರಮುಖ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ಬಹುತೇಕ ನಗರಗಳಲ್ಲಿ ಇದೇ ಟ್ರೆಂಡ್ ಇದೆ.

ಕಾದು ನೋಡುವ ಮನಸ್ಥಿತಿ: ‘ರಿಯಾಲ್ಟಿ ಕ್ಷೇತ್ರದ ಹೊಸ ಬೆಳವಣಿಗೆಗಳು ಗ್ರಾಹಕರಲ್ಲೂ, ಉದ್ಯಮಿಗಳಲ್ಲೂ ಏಕಕಾಲದಲ್ಲಿ ಭಯ ಹುಟ್ಟಿಸಿದ್ದು ನಿಜ. ಈವರೆಗೆ ನಿಸ್ತೇಜಗೊಂಡಿದ್ದ ವಹಿವಾಟು ಇದೀಗ ಮತ್ತೆ ಜೀವ ಪಡೆಯುತ್ತಿದೆ. ಹಾಗೆಂದು ಜನರು ಮನೆ ಕೊಳ್ಳಲು ಧುಮುಕುತ್ತಿದ್ದಾರೆ ಎಂದೇನೂ ಅಲ್ಲ. ಮನೆಕೊಳ್ಳಬಹುದೇನೊ ಎಂದು ಆಲೋಚಿಸುತ್ತಿದ್ದಾರಷ್ಟೇ. ಗೃಹಸಾಲದ ಮೇಲಿನ ಬಡ್ಡಿ ದರಗಳು ಇನ್ನೂ ಇಳಿಯಬಹುದು ಎನ್ನುವ ಕಾರಣಕ್ಕೆ ಕಾದು ನೋಡುವ ಮನಸ್ಥಿತಿಯಲ್ಲಿದ್ದಾರೆ’ ಎನ್ನುವುದು ಕಾಂಕಾರ್ಡ್‌ ಸಮೂಹದ ಅಧ್ಯಕ್ಷ ಬಿ.ಎಸ್‌.ಶಿವರಾಮ ಅವರ ಮಾತು.

‘ಜನರು ಈಗ ಐಷಾರಾಮಿ ಮನೆಯಾದರೆ ಉತ್ತಮ ಎನ್ನುವ ಮನೋಭಾವ ಹೊಂದಿದ್ದಾರೆ. ಒಂದು ಕೋಟಿ ರೂಪಾಯಿ ಒಳಗಿನ ಬೆಲೆಯ ಮನೆಗಳ ಬೇಡಿಕೆ ಶೇ 20ರಷ್ಟು ಹೆಚ್ಚಿದೆ. ಎರಡು ಕೋಟಿ ರೂಪಾಯಿಗಿಂತ ಅಧಿಕ ಬೆಲೆಯ ಮನೆಗಳ ವಹಿವಾಟಿನಲ್ಲಿ ಯಾವುದೇ ಆಶಾಭಾವನೆ ಇಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT