ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಮಂಚದ ಮೇಲೆ ಕುಟುಂಬ ಕಥನ

Last Updated 8 ಸೆಪ್ಟೆಂಬರ್ 2017, 15:23 IST
ಅಕ್ಷರ ಗಾತ್ರ

ಸಿನಿಮಾ: ರಾಜಹಂಸ

ನಿರ್ಮಾಣ: ಜನಮನ ಸಿನಿಮಾ

ನಿರ್ದೇಶನ: ಜಡೇಶ್‌ ಕುಮಾರ್‌

ತಾರಾಗಣ: ಗೌರಿಶಿಖರ, ರಂಜನಿ, ರಾಜುತಾಳಿಕೋಟೆ, ಶ್ರೀಧರ್‌, ಬಿ.ಸಿ. ಪಾಟೀಲ, ಯಮುನಾ, ವಿಜಯ್‌ ಚೆಂಡೂರ್
*

ನಾಯಕ ರಾಜ್‌ ಆಗರ್ಭ ಶ್ರೀಮಂತನ ಮಗ. ಅವನಿಗೆ ಇಷ್ಟವಾದವರ ಜತೆ ಕಾಫಿ ಕುಡಿದು ಒಂದು ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸ. ರಸ್ತೆ ಅಪಘಾತವೊಂದರಲ್ಲಿ ಅವನಿಗೆ ಒಂದು ಡೈರಿ ಸಿಗುತ್ತದೆ. ಆ ಡೈರಿಯಲ್ಲಿ ಸಾಲು ಸಾಲು ಕವಿತೆಗಳು ಮತ್ತು ಆ ಕವಿತೆಗೆ ಕಾರಣವಾದ ಚೆಂದುಳ್ಳಿ ಹಂಸಾಕ್ಷಿಯ ಚಿತ್ರ. ಅಷ್ಟೇ ಅಚಾನಕ್ಕಾಗಿ ಆ ಡೈರಿಯಲ್ಲಿನ ಹುಡುಗಿಯೂ ಅವನಿಗೆ ಎದುರಾಗುತ್ತಾಳೆ. ಅವಳೊಂದಿಗೆ ಕಾಫಿ ಕುಡಿಯುವ ಬಯಕೆಯೂ ಹುಟ್ಟುತ್ತದೆ. ಹುಡುಗ ಬೇಡಿಕೆ ಇಟ್ಟಷ್ಟೂ ಅವಳಿಂದ ತಿರಸ್ಕಾರ. ‘ರಾಜಹಂಸ’ ಸಿನಿಮಾ ಆರಂಭವಾಗುವುದು ಹೀಗೆ. ಮೊದಲರ್ಧ ಪೂರ್ತಿ ಕಾಫಿಗಾಗಿ ನಾಯಕ ನಡೆಸುವ ಕಪಿಚೇಷ್ಟೆಗಳಿಗೆ ಮೀಸಲಾಗಿದೆ.

ನಾಯಕ ಒಂದೇ ಉಸಿರಲ್ಲಿ ವಟವಟ ಆಡುವ ಮಾತು, ನಿಂತಲ್ಲಿ ನಿಲ್ಲದ ಅವನ ಕುಣಿತ, ನಿರ್ಭಾವುಕ ಮುಖ ವಿಪರೀತವಾಗಿ ಕಿರಿಕಿರಿ ಹುಟ್ಟುವಾಗಲೇ ಕಥೆ ಮಲೆನಾಡಿನ ಹಳ್ಳಿಯೊಂದಕ್ಕೆ ಸ್ಥಳಾಂತರವಾಗುತ್ತದೆ. ‘ರಾಜಹಂಸ’ದ ನಡಿಗೆಗೆ ಲಯ ಸಿಕ್ಕುವುದೇ ಅಲ್ಲಿ.

ನಾಯಕಿಯ ತಂದೆಗೆ ನಗರದವರೆಲ್ಲರೂ ಕೆಟ್ಟವರೆಂಬ ಪೂರ್ವಗ್ರಹ. ನಾಯಕನ ಕುಟುಂಬಕ್ಕೆ ಹಳ್ಳಿ ನಾಟಕವೆಂದರೆ ತಾತ್ಸಾರ. ಸಮಾಜದಲ್ಲಿ ಇರುವ ಈ ಕಪ್ಪು–  ಬಿಳುಪು ನಂಬಿಕೆಗಳನ್ನು ಮುಖಾಮುಖಿಯಾಗಿಸುತ್ತಾರೆ ನಿರ್ದೇಶಕ ಜಡೇಶ್‌ ಕುಮಾರ್‌. ಈ ಮುಖಾಮುಖಿಯಲ್ಲಿ ಅವರು ಡ್ರಾಮಾ ಮತ್ತು ಮೆಲೋಡ್ರಾಮಾ ಎರಡನ್ನೂ ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ. ಮದುವೆ ಎಂಬುದು ಎರಡು ಮನಸ್ಸುಗಳ ಮಿಲನವಲ್ಲ, ಬದಲಿಗೆ ಎರಡು ಕುಟುಂಬಗಳ ಸಹಯೋಗ ಎನ್ನುವುದನ್ನು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಹೀಗೊಂದು ಕುಟುಂಬ ಕಥನವನ್ನು ಆಯ್ದುಕೊಂಡ ಅವರಿಗೆ ಮೆಚ್ಚುಗೆ ಸಲ್ಲಲೇಬೇಕು.

ದ್ವಿತೀಯಾರ್ಧದಲ್ಲಿ ರಾಜು ತಾಳಿಕೋಟೆ ಅವರೇ ನಾಯಕ. ಅಲ್ಲಿ ನಾಯಕ– ನಾಯಕಿ ಹಿನ್ನೆಲೆಗೆ ಸರಿದು ಕುಟುಂಬ ಕಥನ ಮುನ್ನೆಲೆಗೆ ಬರುತ್ತದೆ. ಸಿನಿಮಾ ಸಹನೀಯ ಅನಿಸುವುದೂ ಅದೇ ಕಾರಣಕ್ಕೆ. ಹಂಸಾಕ್ಷಿಯ ತಂದೆಯನ್ನು ಮೆಚ್ಚಿಸುವ ಸಲುವಾಗಿ ರಾಜ್‌ ಕುಟುಂಬ ರಂಗದ ಮೇಲೆ ನಾಟಕ ಮಾಡಬೇಕಾಗಿ ಬರುತ್ತದೆ. ಆ ನಾಟಕ ಅವರ ಮನಸ್ಸಿನ ಪರಿವರ್ತನೆಯ ಪ್ರಕ್ರಿಯೆಯೂ ಆಗುತ್ತದೆ. ಈ ನಾಟಕದ ಪ್ರಸಂಗ ಒಂದೆರಡು ದೃಶ್ಯದ ಉಲ್ಲೇಖ ಅಥವಾ ಹಾಸ್ಯದ ತುರುಕುವಿಕೆಗಷ್ಟೇ ಮೀಸಲಾಗದೆ ಕಥನದ ಭಾಗವೇ ಆಗಿ ಬೆಳೆಯುತ್ತ ಹೋಗುತ್ತದೆ.

ಜೋಶ್ವಾ ಶ್ರೀಧರ್‌ ಅವರ ಸಂಯೋಜನೆಯ ಹಾಡುಗಳಲ್ಲಿನ ಜೋಶ್‌ಗಿಂತ ಸಿನಿಮಾದೊಳಗಿನ ನಾಟಕಕ್ಕೆ ಧನಂಜಯ್ ದಿಡಿಗ ನೀಡಿದ ರಂಗಸಂಗೀತವೇ ಹೆಚ್ಚು ಹಿತವೆನಿಸುತ್ತದೆ. ಡೈಲಾಗ್‌, ಫೈಟ್‌ಗಳನ್ನು ಸಲೀಸಾಗಿ ನಿರ್ವಹಿಸುವ ಗೌರಿಶಿಖರ ಭಾವಾಭಿವ್ಯಕ್ತಿಯಲ್ಲಿ ಇನ್ನೂ ಪಳಗಬೇಕಿದೆ. ನಾಯಕಿ ರಂಜನಿ ರಾಘವ್‌ ಅವರದು ಅಚ್ಚುಕಟ್ಟು ನಟನೆ.

ತಬಲಾ ನಾಣಿ, ಬುಲ್ಲೆಟ್‌ ಪ್ರಕಾಶ್‌ ಹೀಗೆ ಬಂದು ಹಾಗೆ ಹೋಗುತ್ತಾರೆ. ಬಂದ ಮೇಲೆ ಕೊನೆಯವರೆಗೂ ಉಳಿದುಕೊಳ್ಳುವ ರಾಜು ತಾಳಿಕೋಟೆ ನಗೆಯ ಬುಗ್ಗೆಯನ್ನು ಉಕ್ಕಿಸುತ್ತಾರೆ. ಖಳನಟ ಹರ್ಷಾರ್ಜು ಕಲಾಲ್‌ ಖಡ್ಗ‌ ಡೈಲಾಗ್‌ ಮತ್ತು ಹರಿತ ಕಣ್ಣ ನೋಟದಿಂದಲೂ ಗಮನ ಸೆಳೆಯುತ್ತಾರೆ. ವಿಜಯ್‌ ಚೆಂಡೂರ, ಶ್ರೀಧರ್‌, ಬಿ.ಸಿ. ಪಾಟೀಲ, ಯುಮುನಾ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ.

ಒಟ್ಟಾರೆ ಈ ‘ರಾಜಹಂಸ’ದ ಸವಾರಿಯಲ್ಲಿ ಆರಂಭದಲ್ಲಿ ಎದುರಾಗುವ ತುಸು ಪ್ರಯಾಸದ ಹಾದಿಯನ್ನು ತಾಳ್ಮೆಯಿಂದ ದಾಟಿಕೊಂಡು ಬಿಟ್ಟರೆ ಮುಂದಿನ ಪ್ರಯಾಣ ಸುಖಕರ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT