ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳೋ? ಸಾವಿನ ಮನೆಗಳೋ? ಅಪಘಾತ ನಿಯಂತ್ರಣ ಎಲ್ಲರ ಹೊಣೆ

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಸಂಭವಿಸುವ ಅಸಹಜ ಸಾವುಗಳಲ್ಲಿ ರಸ್ತೆ ಅಪಘಾತಕ್ಕೆ ಮೊದಲನೇ ಸ್ಥಾನ. ಕೇಂದ್ರ ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ 2016ರಲ್ಲಿ 4.8 ಲಕ್ಷ ರಸ್ತೆ ಅಪಘಾತಗಳು ನಡೆದಿದ್ದು 1,50,785 ಜನ ಅಸುನೀಗಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 400 ಮಂದಿಯನ್ನು ನಮ್ಮ ರಸ್ತೆಗಳು ಬಲಿ ತೆಗೆದುಕೊಳ್ಳುತ್ತಿವೆ. ಈ 400ರಲ್ಲಿ 16 ಮಕ್ಕಳು ಮತ್ತು ಅರ್ಧದಷ್ಟು ಜನ 18 ರಿಂದ 35ರ ವಯೋಮಾನದವರು. ಸಾವು ಎನ್ನುವುದು ಬರೀ ಸಂಖ್ಯೆ ಅಲ್ಲ. ಅದು ಒಂದು ಕುಟುಂಬವನ್ನೇ ಬೀದಿಪಾಲು ಮಾಡಬಲ್ಲದು; ದುಡಿಯುವ ವಯೋಮಾನದವರಾದರೆ ಆರ್ಥಿಕತೆ ಮೇಲೆ ಪರಿಣಾಮ ಬೀರಬಲ್ಲದು.

ವಾಹನ ಚಾಲನೆ ಮಾಡುವವರಷ್ಟೇ ಅಲ್ಲ; ಪ್ರಯಾಣಿಕರು, ರಸ್ತೆಯಲ್ಲಿ ಹೋಗುವ ಅಮಾಯಕರು ಕೂಡ ಅಪಘಾತದ ಬಲಿಪಶುಗಳಾಗುತ್ತಿದ್ದಾರೆ. ಅಜಾಗರೂಕತೆಯಿಂದ ವಾಹನ ಓಡಿಸುವುದೇ ಬಹುತೇಕ ಸಂದರ್ಭಗಳಲ್ಲಿ ಅಪಾಯದ ಮೂಲ. ಅದರಲ್ಲಿಯೂ ಮೊಬೈಲ್‌ ಫೋನ್‌ ಬಳಕೆ ವ್ಯಾಪಕವಾದ ನಂತರ ಬೇಜವಾಬ್ದಾರಿತನವೂ ಹೆಚ್ಚಾಗಿದೆ. ವಾಹನ ಓಡಿಸುವಾಗ ಮೊಬೈಲ್‌ ಬಳಸುವವರು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡುವುದು ಮಾತ್ರವಲ್ಲದೆ ಹಾದಿಯಲ್ಲಿ ಹೋಗುವವರ ಪಾಲಿಗೂ ಯಮಸ್ವರೂಪಿ ಆಗುತ್ತಿದ್ದಾರೆ. ವಾಹನ ಚಾಲನೆ ಎನ್ನುವುದು ಸಂಪೂರ್ಣವಾಗಿ ಅದರಲ್ಲಿಯೇ ತೊಡಗಿಸಿಕೊಂಡು, ಪೂರ್ಣ ಲಕ್ಷ್ಯಕೊಟ್ಟು ನಡೆಸಬೇಕಾದ ಕ್ರಿಯೆ ಎನ್ನುವುದನ್ನೇ ಮರೆತಿದ್ದಾರೆ.

ಕಣ್ಣು, ಕಿವಿ, ಮನಸ್ಸು, ಮಿದುಳು, ಕೈ, ಕಾಲು ಹೀಗೆ ವಿವಿಧ ಅಂಗಗಳ ಹೊಂದಾಣಿಕೆಯನ್ನು ಬೇಡುತ್ತದೆ ವಾಹನ ಚಾಲನೆ. ಅದನ್ನು ಮರೆತು, ಒಂದು ಕೈಯಲ್ಲಿ ಮೊಬೈಲ್‌ ಹಿಡಿದು ಮಾತನಾಡುತ್ತ ಇನ್ನೊಂದು ಕೈಯಲ್ಲಿ ಸ್ಟೀರಿಂಗ್‌ ಹಿಡಿದು ಓಡಿಸಿದರೆ ರಸ್ತೆ ಮೇಲೆ ಪೂರ್ಣ ಗಮನ ಕೊಡಲು ಹೇಗೆ ಸಾಧ್ಯ? ಆದರೂ ಹೀಗೆ ವಾಹನ ಓಡಿಸುವುದೇ ಅನೇಕರ ಪಾಲಿಗೆ ಫ್ಯಾಷನ್‌. ಕಿವಿಗೆ ಮೊಬೈಲ್‌ ಇಟ್ಟುಕೊಂಡು ಸರ್ಕಸ್‌ ಮಾಡುತ್ತ ದ್ವಿಚಕ್ರ ವಾಹನ ಓಡಿಸುವವರಲ್ಲಿ ಹೆಚ್ಚಿನವರು ಯುವಜನರು. ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದು ದಂಡನಾರ್ಹ ಅಪರಾಧ. ಆದರೆ ಅದು ಬಹುಪಾಲು ಕಾಗದದ ಮೇಲಷ್ಟೇ ಇದೆ. ಸೀಟ್‌ ಬೆಲ್ಟ್‌ನದೂ ಇದೇ ಕತೆ. ಈಗಿನ ವಾಹನಗಳಿಗೆ ವೇಗ ಜಾಸ್ತಿ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಸೀಟ್‌ ಬೆಲ್ಟ್‌ ಧರಿಸುವುದು ಕಡ್ಡಾಯ. ಆದರೆ ಕಾನೂನು ಜಾರಿಗೊಳಿಸಬೇಕಾದ ಪೊಲೀಸರೇ ಎಷ್ಟೋ ಸಲ ಸೀಟ್‌ ಬೆಲ್ಟ್‌ ಧರಿಸದೆ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದನ್ನು ನೋಡಿ ಪ್ರೇರಿತರಾಗುವ ಜನಸಾಮಾನ್ಯರೂ ಕಾನೂನು ಉಲ್ಲಂಘಿಸುವ ಧೈರ್ಯ ಮಾಡುತ್ತಾರೆ. ಅದೇ ರೀತಿ ಗುಣಮಟ್ಟ ಇಲ್ಲದ ಕೆಟ್ಟ ರಸ್ತೆಗಳು, ಸಮರ್ಪಕ ನಿರ್ವಹಣೆ ಇಲ್ಲದ ವಾಹನಗಳು, ಸುರಕ್ಷಿತವಾದ ಮತ್ತು ಸರಿಯಾದ ಚಾಲನಾ ಪದ್ಧತಿ ಅಳವಡಿಸಿಕೊಳ್ಳದ ಚಾಲಕರು, ಚಾಲನಾ ಪರವಾನಗಿ ನೀಡಿಕೆಯಲ್ಲಿ ಲಂಚಗುಳಿತನ ಮತ್ತು ವಶೀಲಿಬಾಜಿ ಕಾಟ, ಶಿಕ್ಷೆಯ ಭಯ ಇಲ್ಲದೇ ಇರುವುದು... ಇವೆಲ್ಲ ಒಟ್ಟುಗೂಡಿ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿವೆ.

2015ಕ್ಕೆ ಹೋಲಿಸಿದರೆ 2016ರಲ್ಲಿ ಅಪಘಾತಗಳ ಸಂಖ್ಯೆ ಶೇ 4.1ರಷ್ಟು ಕಡಿಮೆಯಾಗಿದ್ದರೂ ಸಾವಿನ ಪ್ರಮಾಣ ಶೇ 3.2ರಷ್ಟು ಹೆಚ್ಚಾಗಿದೆ. ಇದು ಆತಂಕದ ಸಂಗತಿ. ಅಮಾಯಕ ಜನ ರಸ್ತೆಯಲ್ಲಿ ಸಾವು– ನೋವಿಗೆ ತುತ್ತಾಗುವುದನ್ನು ಕೆಲಮಟ್ಟಿಗಾದರೂ ತಡೆಯಲು ಸಾಧ್ಯವಿದೆ. ಆದರೆ ಅದು ಯಾರೋ ಒಬ್ಬರಿಂದ ಅಥವಾ ಒಂದು ಸರ್ಕಾರದಿಂದ ಮಾತ್ರ ಆಗುವ ಕೆಲಸ ಅಲ್ಲ. ಅದಕ್ಕೆ ಸಾಮೂಹಿಕ ಪ್ರಯತ್ನ ಬೇಕು. ರಾಷ್ಟ್ರೀಯ ಹೆದ್ದಾರಿಗಳಷ್ಟೇ ಅಲ್ಲದೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳಲ್ಲಿಯೂ ಅಪಘಾತ ಕಡಿಮೆ ಮಾಡಲು ಕೇಂದ್ರ ಸರ್ಕಾರ ಗಮನ ಹರಿಸಿದೆ. ಪದೇ ಪದೇ ಅಪಘಾತಗಳು ನಡೆಯುವ 786 ಸ್ಥಳಗಳನ್ನು ಗುರುತಿಸಿದೆ. ಅಲ್ಲಿ ಅಪಘಾತ ತಪ್ಪಿಸಲು ಬೇಕಾದ ಮಾರ್ಪಾಟುಗಳಿಗೆ ಕೇಂದ್ರ ರಸ್ತೆ ನಿಧಿಯ ಶೇ 10ರಷ್ಟನ್ನು ಬಳಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಈ ಮೊತ್ತವೇ ಸುಮಾರು ₹ 12 ಸಾವಿರ ಕೋಟಿ. ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆಯನ್ನು ಇನ್ನೆರಡು ವರ್ಷಗಳಲ್ಲಿ ಅರ್ಧದಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದೆ. ಈ ಎಲ್ಲ ಕಾರ್ಯಗಳು ಪರಿಣಾಮ
ಕಾರಿಯಾಗಿ ನಡೆಯಬೇಕು. ಚಾಲಕರು ಕೂಡ ಸ್ವಯಂಶಿಸ್ತು ಬೆಳೆಸಿಕೊಳ್ಳಬೇಕು. ಅಪಘಾತರಹಿತ ಚಾಲನೆ ನಮ್ಮ ಜೀವನಶೈಲಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT