ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ದೇವಸ್ಥಾನಕ್ಕಾಗಿ ತ್ರಿಶೂಲ ಹಿಡಿದು ಮಹಿಳೆ ಪ್ರತಿಭಟನೆ!

Last Updated 9 ಸೆಪ್ಟೆಂಬರ್ 2017, 8:28 IST
ಅಕ್ಷರ ಗಾತ್ರ

ಕುಶಾಲನಗರ: ಖಾಸಗಿ ಕಟ್ಟಡವೊಂದರ ಭೂಮಿಯ ಒಳಗಿರುವ ಕಾಳಿ ವಿಗ್ರಹವನ್ನು ಹೊರ ತೆಗೆದು ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಮಹಿಳೆಯೊಬ್ಬರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದ್ದು, ಅದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇಲ್ಲಿನ ಬ್ರಿಲಿಯಂಟ್ ಬ್ಲೂಮ್ ಶಾಲೆಯ ವ್ಯವಸ್ಥಾಪಕಿ ಮುಬೀನಾ ತಾಜ್  ಕಾಳಿ ವಿಗ್ರಹಕ್ಕಾಗಿ ಪ್ರತಿಭಟನೆ ನಡೆಸಿದವರು.

‘ನಾನು ನಡೆಸುತ್ತಿರುವ ಶಾಲೆ ಕೊಠಡಿಯಲ್ಲಿ 20 ಅಡಿ ಆಳದಲ್ಲಿ ಕಾಳಿ ಮಾತೆ ವಿಗ್ರಹವಿದ್ದು, ಅದನ್ನು ತೆಗೆದು ದೇವಸ್ಥಾನ ನಿರ್ಮಿಸಬೇಕು’ ಎಂದು ಏಕಾಂಗಿಯಾಗಿ ತ್ರಿಶೂಲ ಹಿಡಿದು ವಿಚಿತ್ರವಾಗಿ ಪ್ರತಿಭಟನೆ ನಡೆಸಿದ್ದರು.

ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಶ್ರೀಧರ್ ಮತ್ತು ಕಂದಾಯ ಅಧಿಕಾರಿ ನಂದಕುಮಾರ್ ಪ್ರತಿಭಟನೆ ಕೈಬಿಡುವಂತೆ ಹೇಳಿದರು. ಆದರೆ, ಆಕೆ ಕೇಳದೆ ಪ್ರತಿಭಟನೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಮಹಿಳಾ ಎಎಸ್ಐ ಖತೀಜ ನೇತೃತ್ವದಲ್ಲಿ ಆಗಮಿಸಿದ ಮಹಿಳಾ ಪೊಲೀಸರು ಮುಬೀನಾಳನ್ನು ಎತ್ತಿಕೊಂಡು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಬಾಡಿಗೆ ಹಣ ನೀಡದೇ ನಾಟಕ: ‘ಕಳೆದ ಏಳು ವರ್ಷಗಳ ಹಿಂದೆ ಮುಬೀನಾ ತಾಜ್‌ಗೆ ಶಾಲೆ ನಡೆಸಲು ಹಳೇಯ ಸತ್ಯಸಾಯಿ ಕಾಲೇಜು ಕಟ್ಟಡದಲ್ಲಿ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಬ್ರಿಲಿಯೆಂಟ್ ಬ್ಲೂಮ್ ಶಾಲೆ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದೆ.

ಮೂರು ವರ್ಷಗಳಿಂದಲೂ ಮುಬೀನಾ ಬಾಡಿಗೆ ಹಣ ನೀಡಿಲ್ಲ. ಹಣ ಕೇಳಿ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇಲ್ಲಿ ಕಾಳಿ ದೇವಸ್ಥಾನವಿದೆ ಎಂದು ನಾಟಕವಾಡುತ್ತಿದ್ದಾಳೆ’ ಎಂದು ಕಟ್ಟಡದ ಮಾಲೀಕರಾದ ನಳಿನಿ ತಿಳಿಸಿದ್ದಾರೆ.

‘ಮುಬೀನಾ ತಾಜ್ ನಡೆಸುತ್ತಿದ್ದ ಶಾಲೆಯ ಪಕ್ಕದಲ್ಲಿಯೇ ಶಿಕ್ಷಣ ಇಲಾಖೆ ಮತ್ತೊಂದು ಶಾಲೆ ತೆರೆಯಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಇವರ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆ ಆಗಿತ್ತು. ಮುಚ್ಚುವ ಸ್ಥಿತಿಗೆ ಬಂದಿದೆ. ತಮ್ಮ ನೆಲೆಗೆ ಸಂಚಕಾರ ಬಂದಿರುವ ಹಿನ್ನೆಲೆಯಲ್ಲಿ ಮುಬೀನಾ ಈ ರೀತಿ ವರ್ತಿಸುತ್ತಿದ್ದು, ಇದಕ್ಕೆ ಶಿಕ್ಷಣಾಧಿಕಾರಿಗಳೇ ಕಾರಣ’ ಎಂದು ಕರ್ನಾಟಕ ಕಾವಲು ಪಡೆ ಜಿಲ್ಲಾ ಅಧ್ಯಕ್ಷ ಎಂ.ಕೃಷ್ಣ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT