ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಹೆಚ್ಚಿದ ರೈತರ ನಿರೀಕ್ಷೆ

Last Updated 9 ಸೆಪ್ಟೆಂಬರ್ 2017, 9:05 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನಾದ್ಯಂತ ಸಮಾಧಾನಕರವಾದ ಮಳೆಯಾಗಿದ್ದು, ರೈತಾಪಿ ವರ್ಗ ಸ್ವಲ್ಪ ತೃಪ್ತಿಯಿಂದ ನಿಟ್ಟುಸಿರು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಸುರಿಯಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸತತ 4 ವರ್ಷಗಳ ಬರದಿಂದ ತಾಲ್ಲೂಕಿನ ಶೇ80 ರಷ್ಟು ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು, ಧಾನ್ಯಗಳ ಬಿತ್ತನೆಯಂತೂ ತೀರಾ ಕುಂಠಿತವಾಗಿತ್ತು. ಗ್ರಾಮೀಣರ ಜೀವನಾವಶ್ಯಕವಾದ ರಾಗಿ ಬಿತ್ತನೆ ಬಹಳ ಕಡಿಮೆಯಾಗಿತ್ತು. ಮುಂಗಾರು ಮಳೆ ಸಂಪೂರ್ಣ ವಿಫಲವಾಗಿ ಬೆಳೆ ಬಿತ್ತನೆ ಭಾಗಶ: ನಡೆಯಲೇ ಇಲ್ಲ.

35 ಸಾವಿರ ಹೆಕ್ಟೇರ್ ಗುರಿಯಿದ್ದ ರಾಗಿ ಬಿತ್ತನೆ ಪ್ರಮಾಣ ಸುಮಾರು 22 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿತ್ತು. ಪುಬ್ಬೆ ಮಳೆ ಬಂದರೆ ಗುಬ್ಬಿ ಪುಕ್ಕ ನೆನೆಯೋಲ್ಲ ಎಂಬುದು ಗ್ರಾಮೀಣ ನಾಣ್ಣುಡಿ. ಆದರೆ ಮಂಗಳವಾರ ರಾತ್ರಿ ಮಳೆ ತೃಪ್ತಿಕರವಾಗಿ ಬಂದಿದ್ದರಿಂದ ಬತ್ತಿ ಹೋಗಿದ್ದ ರಾಗಿ ಬೆಳೆ ಚೇತರಿಸಿಕೊಂಡಿದೆ.

ಸಖರಾಯಪಟ್ಟಣ, ಕಸಬಾ, ಹಿರೇನಲ್ಲೂರು ಹೋಬಳಿಗಳ ಕೆಲವೆಡೆ ರಾಗಿ ಬಿತ್ತನೆ ನಡೆದಿತ್ತು. ಇನ್ನು ಒಂದೆರಡು ಬಾರಿ ಮಳೆ ಬಂದರೂ ರಾಗಿ ಪೈರು ಬರುವುದು ಖಚಿತ. ಬಹುಮುಖ್ಯವಾಗಿ ಜಾನುವಾರುಗಳಿಗೆ ಬೇಕಾದ ಹುಲ್ಲಿನ ಕೊರತೆ ಒಂದಿಷ್ಟು, ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ ಅಂಶ.

ಇನ್ನೂ ಭತ್ತದ ಬೆಳೆ ಇಲ್ಲವೇ ಇಲ್ಲ. ಕೆಲವರು ಅತ್ಯಲ್ಪ ಪ್ರಮಾಣದಲ್ಲಿ ಸಿರಿಧಾನ್ಯ, ತೃಣದಾನ್ಯಗಳನ್ನು ಬೆಳೆದಿದ್ದಾರೆ. ಅವೂ ನೀರಿಲ್ಲದೆ ಬೆಳವಣಿಗೆ ಕುಂಠಿತವಾಗಿವೆ. ಈಗ ಮಳೆ ಬಂದ ಕಾರಣ ಕೆಲ ರೈತರು ಮರಳು ಜಮೀನಿನಲ್ಲಿ ಬೆಳೆಯುವ ಮೂರು ತಿಂಗಳ ರಾಗಿ ಎಂಬ ಸ್ಥಳೀಯ ತಳಿಯ ಬಿತ್ತನೆಗೆ ಮುಂದಾಗಿದ್ದಾರೆ.

ತಾಲ್ಲೂಕಿನ ಹಿರೇನಲ್ಲೂರು, ಕಸಬಾ ಹೋಬಳಿಗಳಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯುತ್ತಿದ್ದ ರೈತರು ಈ ಬರಿ ಅತ್ಯಲ್ಪ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಅನೇಕ ರೈತರು ಈರುಳ್ಳಿ ಬಿತ್ತನೆ ಮಾಡಿ ಕೈಸುಟ್ಟುಕೊಂಡದ್ದೂ ಆಯಿತು. ಕೆಲವು ಕೊಳವೆ ಬಾವಿ ಉಳ್ಳವರು ಈರುಳ್ಳಿ ಬೆಳೆ ಉಳಿಸಿಕೊಂಡರು. ಒಟ್ಟಾರೆ ತಾಲ್ಲೂಕಿನಲ್ಲಿ ಸುಮಾರು 180 ಹೆಕ್ಟೇರ್ ಈರುಳ್ಳಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 1500 ಹೆಕ್ಟೇರ್ ದಾಟಿತ್ತು.

ತೆಂಗು ಮತ್ತು ಅಡಿಕೆ ತೋಟಗಳು ಹಾಳಾಗಿ ಹೋಗಿದ್ದರೂ ಕೆಲವೆಡೆ ಕೊಳವೆ ಬಾವಿಯಿದ್ದವರು ಅಲ್ಪ ಸ್ವಲ್ಪ ತೋಟಗಳನ್ನು ಉಳಿಸಿಕೊಂಡಿದ್ದರು. ಆದರೆ ಇನ್ನೆರಡು ವರ್ಷ ಫಸಲು ನಿರೀಕ್ಷಿಸುವಂತಿರಲಿಲ್ಲ.

ಇತ್ತ ಮಳೆ ಸಂಪೂರ್ಣ ಕೈಕೊಟ್ಟು ಸ್ವಲ್ಪ ನೀರು ಕೊಡುತ್ತಿದ್ದ ಕೊಳವೆ ಬಾವಿಗಳು ಸಂಪೂರ್ಣ ನೀರು ನಿಲ್ಲಿಸಿದಾಗ ಅಳಿದುಳಿದ ತೋಟಗಳೂ ಅವನತಿಯತ್ತ ಸಾಗುತ್ತಿದ್ದ ಹೊತ್ತಿನಲ್ಲಿ ಪುಬ್ಬಾ ಮಳೆ ಬಂದಿರುವುದು ರೈತರಲ್ಲಿ ಆಸೆ ಚಿಗುರಿಸಿದೆ. ಬಹುತೇಕ ರೈತರು ನಿರಂತರವಾಗಿ ಮಳೆ ಸುರಿದು ಕೆರೆ ಕಟ್ಟೆಗಳು ಸ್ವಲ್ಪವಾದರೂ ತುಂಬಲಿ, ಹಳ್ಳಗಳಲ್ಲಿ ಸ್ವಲ್ಪ ನೀರು ಹರಿಯಲಿ ಎಂಬುದು ರೈತರ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT