ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತಿಯ ಕ್ರಾಸಿಂಗ್

Last Updated 9 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಿಮಗೆ ಇದನ್ನು ನಂಬಲು ತುಸು ಕಷ್ಟವೆನಿಸಬಹುದು. ಜಪಾನ್ ದೇಶದಲ್ಲಿನ ಟೋಕಿಯೋದಂತಹ ಮಹಾನಗರದಲ್ಲಿ ಅತ್ಯಾಕರ್ಷಣೀಯ ಸ್ಥಳವೆಂದರೆ ಗೋಪುರ, ವಿಗ್ರಹ, ಮ್ಯೂಸಿಯಂ ಅಥವಾ ಪಾರ್ಕ್ ಅಂತ ನೀವು ಅಂದುಕೊಂಡಿರಬಹುದು. ಆದರೆ ಅದ್ಯಾವುದೂ ಅಲ್ಲವೇ ಅಲ್ಲ. ಬದಲಾಗಿ ಶಿಬುಯಾ ಸ್ಟೇಷನ್‌ನ ಹ್ಯಾಚಿಕೊ ನಿರ್ಗಮನ ದ್ವಾರದಲ್ಲಿರುವ ಪಾದಚಾರಿ ಕ್ರಾಸಿಂಗ್. ಹತ್ತು ಲೇನ್‌ಗಳು, ದೊಡ್ಡ ದೊಡ್ಡ ಜಾಹೀರಾತು ಫಲಕಗಳು, ನಿಯಾನ್ ದೀಪಗಳಿಂದ ಆವೃತವಾದ ಈ ಟ್ರಾಫಿಕ್ ಛೇದಕ(ಇಂಟರ್ ಸೆಕ್ಷನ್)ದ ನೋಟವೇನೂ ರಮಣೀಯವಾದದ್ದೇನಲ್ಲ. ಆದರೆ ಒಂದು ಸಲ ಟ್ರಾಫಿಕ್ ದೀಪ ಕೆಂಪು ಬಣ್ಣಕ್ಕೆ ತಿರುಗಿದಾಗ ಅಲ್ಲಿನ ಸನ್ನಿವೇಶ, ಚಿತ್ರಣವೇ ಬದಲಾಗುತ್ತದೆ. ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಲೇಬೇಕಾದ ದೃಶ್ಯವಿದು.

ಅಲ್ಲಿದ್ದ ಪ್ರತಿಯೊಬ್ಬರೂ ಕಾಯುತ್ತಿರುತ್ತಾರೆ, ಕ್ಷಣ ಕ್ಷಣಕ್ಕೂ ಒತ್ತದ ಜಾಸ್ತಿಯಾಗುತ್ತಾ ಹೋಗುತ್ತದೆ, ಸಂಭವನೀಯ ಶಕ್ತಿಯು ಚಲನ ಶಕ್ತಿಯಾಗಲು ತಯಾರಾಗುತ್ತದೆ. ತಕ್ಷಣ ಟ್ರಾಫಿಕ್ ದೀಪದ ಬಣ್ಣ ಬದಲಾಗುತ್ತದೆ. ಶಿಬುಯಾ ಜಿಲ್ಲೆಯಲ್ಲಿನ ಈ ದೊಡ್ಡ ಛೇದಕ(ಇಂಟರ್ ಸೆಕ್ಷನ್)ದಲ್ಲಿ ಏನೇನೂ ಇರುವುದಿಲ್ಲ. ಒಂದೇ ಒಂದು ನರಪಿಳ್ಳೆ ಕೂಡ. ನಂತರ ಒಂದು ಕುರುಹು, ಪ್ರತಿಯೊಂದು ಮೂಲೆಯಿಂದಲೂ ಪಾದಚಾರಿಗಳ ಗುಂಪೊಂದು ಮುನ್ನುಗ್ಗುತ್ತದೆ. ಎತ್ತರವಾದ ಸ್ಥಳದಿಂದ ವೀಕ್ಷಿಸಿದರೆ ಬೃಹತ್ ಸೈನ್ಯವೊಂದು ರಣರಂಗಕ್ಕೆ ನುಗ್ಗುವ ಹಾಗೆ. ಅಲ್ಲಿರುವ ಪ್ರತಿಯೊಬ್ಬರಲ್ಲೂ ತಮ್ಮ ತಮ್ಮ ಸಂಪರ್ಕದ ಪಾಯಿಂಟ್ ಅನ್ನು ತಲುಪಬೇಕು ಎಂಬ ನಿರ್ಧಾರವಿರುತ್ತದೆ. ಸಾಕಷ್ಟು ಜನಸಂದಣಿಯಿದ್ದರೂ ಯಾರೂ ಯಾರಿಗೂ ಡಿಕ್ಕಿ ಹೊಡೆಯುವುದಿಲ್ಲ. ಮಧ್ಯ ಭಾಗದಲ್ಲಿ ಅವರು ಸರಾಗವಾಗಿ ನೀರು ಹರಿದು ಬರುವ ರೀತಿಯಲ್ಲಿ ಜೊತೆಯಾಗುತ್ತಾರೆ. ನಂತರ ಲಾಸ್‌ವೇಗಾಸ್‌ನ ನುರಿತ ಇಸ್ಪೀಟ್ ಆಟಗಾರನೊಬ್ಬ ಎಲೆಗಳನ್ನು ಹಾಕುವ ರೀತಿಯಲ್ಲಿ, ಮನ ಬಂದ ಕಡೆಗೆ ಚದುರಿ ಹೋಗುತ್ತಾರೆ. ಪಾದಚಾರಿಗಳಿಗಾಗಿ ಈ ಛೇದಕವು ಸರಿ ಸುಮಾರು ಒಂದು ನಿಮಿಷ ತೆರೆದಿರುತ್ತದೆ. ಈ ಒಂದು ನಿಮಿಷದ ಕಾಲದಲ್ಲಿ ಛೇದಕವು ಮಾನವೀಯತೆಯೇ ಮೂರ್ತಿವೆತ್ತಿರುವ ಸಾಗರದಂತಿರುತ್ತದೆ. ಇಲ್ಲಿ ಕಾಣಬರುವ ಅಪರಿಚಿತ ಸೌಜನ್ಯ, ಶಿಷ್ಟಾಚಾರ, ಗಡಿಬಿಡಿ, ಆಯೋಜನೆ ಆತ ಜಪಾನಿಗ ಅಲ್ಲದಿದ್ದರೂ ಎಲ್ಲರನ್ನೂ ಮೋಡಿಮಾಡುತ್ತದೆ. ಲೇಖಕ ಆರಾನ್ ಗಿಲ್ಬೆರ್ಥ್‌ ‘ಈ ನೂಕು ನುಗ್ಗಾಟದ ತುಣುಕನ್ನು ನೋಡುತ್ತಿದ್ದಾಗ ನೀವೇನೂ ಸಹಾಯ ಮಾಡಲಾಗುವುದಿಲ್ಲ ಆದರೆ ಈ ವ್ಯವಸ್ಠೆಯನ್ನು ಜೊತೆಯಾಗಿ ಹಿಡಿದಿಟ್ಟುಕೊಂಡಿರುವ ಕುತೂಹಲವಾದರೂ ಏನು? ಹೇಗೆ ಜನರು ಇಷ್ಟು ಚೆನ್ನಾಗಿ ವರ್ತಿಸುತ್ತಾರೆ?’ ಎಂದು ಅಚ್ಚರಿಪಡುತ್ತಾನೆ.

ನಿಧಾನವಾಗಿ ಕಿಕ್ಕಿರಿದ ಜನಸಂದಣಿ ಕರಗುತ್ತಾ ಹೋಗುತ್ತದೆ. ಮತ್ತು ಆ ಜಾಗ ಬಹುತೇಕ ಬರಿದಾಗುತ್ತದೆ. ಕೆಲವೇ ಕೆಲವರು ಆ ದೀಪವನ್ನು ಹಿಂದಿಕ್ಕಲು ಹೆಣಗಾಡುತ್ತಾ ಓಡುತ್ತಿರುತ್ತಾರೆ. ನಂತರ ಟ್ರಾಫಿಕ್ ದೀಪ ಬದಲಾಗುತ್ತದೆ. ವಾಹನಗಳ ಸಂಚಾರ ಜೋರಾಗಿ ಮಿಡಿಯುತ್ತದೆ. ವಾಹನ ಸಂಚರಿಸುತ್ತಿರುವಾಗ ಪ್ರತಿಯೊಂದು ಮೂಲೆಯಲ್ಲೂ ಕ್ರಮೇಣವಾಗಿ ಜನರ ಜಮಾವಣೆಯಾಗತೊಡಗುತ್ತದೆ. ಅಂಗಡಿಯವರು, ಪ್ರಯಾಣಿಕರು, ಶಾಲಾ ಬಾಲಕಿಯರು, ಹದಿಹರೆಯದವರು, ಕೂದಲಿಗೆ ನೀಲಿ ಬಣ್ಣ ಬಳಿದುಕೊಂಡಿರುವ ಪೋಕರಿಗಳು ಹೀಗೆ ಪ್ರತಿಯೊಬ್ಬರೂ ತಮ್ಮ ಸರದಿಗಾಗಿ ಕಾಯುತ್ತಿರುತ್ತಾರೆ. ಯಾವಾಗ ಕ್ರಾಸ್ ವಾಕಿಂಗ್‌ನ ದೀಪ ಹಸಿರಾಗುತ್ತದೆಯೋ ಮತ್ತೆ ಶಿಬುಯಾದ ಟ್ರಾಫಿಕ್ ಚಕ್ರದ ಏಕಕಾಲೀಕತೆ ಪೂರ್ಣಗೊಳ್ಳುತ್ತದೆ.

ಮತ್ತೆಲ್ಲೂ ಕಾಣಸಿಗದಂತಹ ಅಸಮಾನ್ಯವಾಗಿರುವ ಶಿಬುಯಾದ ಕ್ರಾಸಿಂಗ್ ಅನ್ನು ಇಡೀ ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ಛೇದಕ ಎಂದು ಹೇಳಲಾಗುತ್ತದೆ. ಪೀಕ್ ಅವಧಿಯಲ್ಲಿ ಒಂದು ಟ್ರಾಫಿಕ್ ದೀಪ ಬದಲಾದಾಗ 2,500 ಜನರು ಹಾಗೂ ದಿನವೊಂದಕ್ಕೆ 2 ಮಿಲಿಯನ್ ಜನರು ಈ ಛೇದಕವನ್ನು ಕ್ರಾಸ್ ಮಾಡುತ್ತಾರೆ. 1940ರ ಕಾಲದಲ್ಲಿ ಇದನ್ನು ಜನಪ್ರಿಯಗೊಳಿಸಿದ ಕೀರ್ತಿ, ಡೆನ್ವರ್‌ನ ಸ್ಟ್ರೀಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಹೆನ್ರಿ ಬಾರ್ನೆಸ್ ಎಂಬ ಟ್ರಾಫಿಕ್ ಎಂಜಿನಿಯರ್‌ಗೆ ಸಲ್ಲುತ್ತದೆ. ಅದಕ್ಕಾಗಿ ಈ ಕ್ರಾಸಿಂಗ್ ಅನ್ನು ಬಾರ್ನೆಸ್ ನೃತ್ಯ(ಬಾರ್ನೆಸ್ ಡ್ಯಾನ್ಸ್ ) ಎಂದೂ ಕರೆಯುತ್ತಾರೆ. ಈ ಕ್ರಾಸಿಂಗ್ ಜನರಿಗೆ ತುಂಬಾ ಖುಷಿ ಕೊಡುತ್ತದೆ. ಅವರು ತಮ್ಮ ರಸ್ತೆಗಳನ್ನು ಡಾನ್ಸ್ ಮಾಡುತ್ತಲೇ ದಾಟುತ್ತಾರೆ ಎಂದು ವರದಿಗಾರನೊಬ್ಬ ಬರೆದಿದ್ದರಿಂದ ಡಾನ್ಸ್ ಎಂಬುದು ಬಾರ್ನೆಸ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.

ಜಪಾನ್ ದೇಶದಲ್ಲಿ ಸ್ಕ್ರ್ಯಾಂಬಲ್ ಇಂಟರ್ ಸೆಕ್ಷನ್(ನೂಕು ನುಗ್ಗಲಿನ ಛೇದಕ) ಬಂದಿದ್ದು 1969ರಲ್ಲಿ. ಇಂದು ನಾಡಿನಾದ್ಯಂತ 300ಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೂಕುನುಗ್ಗಲಿನ ಕ್ರಾಸಿಂಗ್‌ಗಳಿವೆ.

ಈ ಕ್ರಾಸಿಂಗ್‌ನ ಅನುಭವ ಪಡೆಯದೇ ಹೋದರೆ ಟೋಕಿಯೋ ಪ್ರವಾಸ ಅಪೂರ್ಣ ಎಂದೇ ಹೇಳಲಾಗುತ್ತದೆ.

ಜನನಿಬಿಡ ಛೇದಕದ ಮಧ್ಯೆ ನುಗ್ಗುತ್ತಾ ದಾರಿಯನ್ನು ನೀವು ಕ್ರಾಸ್ ಮಾಡಬಹುದು. ಅಥವಾ ದೂರದಿಂದಲೂ ನೀವು ಇದನ್ನು ಗಮನಿಸಬಹುದು. ಕ್ರಾಸಿಂಗ್‌ನ ಉತ್ತರ ಭಾಗದಲ್ಲಿರುವ ಬಹುಮಹಡಿ ಕಟ್ಟಡಗಳ ಎರಡನೇ ಅಂತಸ್ತಿನ ಕಿಟಕಿಯಿಂದ ಇಣುಕುತ್ತಾ, ಸಮ್ಮೋಹನಗೊಳಿಸುವ ಈ ನೋಟವನ್ನು ಇನ್ನೂ ಚೆನ್ನಾಗಿ ಆಸ್ವಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT