ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘108 ಮಠಗಳ ಖ್ಯಾತಿಯ ಹುಮನಾಬಾದ್‌’

Last Updated 10 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ಹುಮನಾಬಾದ್: ಮಠಗಳು ಕೇವಲ ಧಾರ್ಮಿಕ ಚಟುವಟಿಕೆಗಳ ತಾಣಗಳಾಗಿರದೆ ಸಾಹಿತ್ಯ, ಸಂಸ್ಕೃತಿ ಜತೆಗೆ ಮಾನವೀಯ ಮೌಲ್ಯಗಳ ಪ್ರಸಾರ ಕೇಂದ್ರಗಳು ಹೌದು. ಅಂಥ ಮಹತ್ವದ ಕೆಲಸ ಮಾಡುವ 108 ಮಠಗಳ ಖ್ಯಾತಿ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕು ಕೇಂದ್ರಕ್ಕೆ ಇರುವುದು ವಿಶೇಷ.

ಬೇರೆ ಪ್ರದೇಶಗಳಿಂದ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುವ ಜನರಿಗೆ ವಿಶ್ರಾಂತಿ ಜೊತೆ ಊಟ ಉಪಚಾರ ಮಾಡುವ ಕೆಲಸವನ್ನು ಅಂದಿನ ಮಠಗಳು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದ್ದವು.  ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠ, ಹುಲಸೂರು ಮಠ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಮಠ, ಹಿರೇಮಠ ಇನ್ನೂ ಹಲವು ಮಠಗಳು ಸಮಾಜೋಪಯೋಗಿ ಕೆಲಸದಲ್ಲಿ ತೊಡಗಿಸಿಕೊಂಡಿವೆ.

ಇಷ್ಟು ಮಠ ಇಲ್ಲಿರಲು ಕಾರಣವೇನು: ರಾಜಾ ಜಯಸಿಂಹನ ಅವಧಿಯಲ್ಲಿ ನಿರ್ಮಾಣಗೊಂಡ ಜಯಸಿಂಹ ನಗರ ಈಗಿನ ಹುಮನಾಬಾದ್. ನಗರ ಸಕಲ ಸಮೃದ್ಧಿಯಿಂದ ಕೂಡಿರಬೇಂಬ ಉದ್ದೇಶದಿಂದ ಈಗ ಅಸ್ತಿತ್ವದಲ್ಲಿ ಇರುವ ಹಿರೇಮಠದ ಅಧೀನದಲ್ಲಿ 108 ಮಠಗಳನ್ನು ಸ್ತಾಪಿಸಲಾಗಿತ್ತು.

ವೀರಶೈವ ಧರ್ಮದಲ್ಲಿ 108ಕ್ಕೆ ಹೆಚ್ಚು ಮಾನ್ಯತೆ ಇರುವ ಕಾರಣ ಇಷ್ಟೊಂದು ಮಠಗಳ ಸ್ಥಾಪನೆ ಆಗಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಂಶೋಧಕ ಎಚ್‌.ಕಾಶಿನಾಥರೆಡ್ಡಿ. 108ಮಠಗಳ ನಿರ್ವಹಣೆಗಾಗಿ ತೋಟ ಇತ್ಯಾದಿಗೋಸ್ಕರ ಜಮೀನು ನೀಡಲಾಗಿತ್ತು. ಅವುಗಳನ್ನು ಈಗ ಚೌಕಿ ಹೆಸರಿನಿಂದ ಕರೆಯುತ್ತಾರೆ. ಅಂದರೆ 108ಮಠಾಧೀಶರಿಗೆ ಅಷ್ಟೇ ಸಂಖ್ಯೆಯ ಚೌಕಿಗಳು ಇದ್ದವು. ಆ ಪೈಕಿ ಬೆರಳೆಣಿಕೆ ಚೌಕಿಗಳು ಮಾತ್ರ ಈಗ ಇವೆ. ಕೆಲವು ಕಡೆ ಪೂಜೆ ಇತ್ಯಾದಿ ನಡೆದರೇ ಇನ್ನೂ ಕೆಲವು ಚೌಕಿಗಳು ತಿಪ್ಪೆ ಗುಂಡಿಗಳಾಗಿ ಪರಿವರ್ತನೆಗೊಂಡಿವೆ.

 ಮಠಗಳ ವಿವರ: ಮುರಘಾಮಠ, ಕೆಂಪಯ್ಯನ ಮಠ, ಕುಪಗೀರ್‌ ಮಠ್‌, ಆಂದೇನ ಮಠ್‌, ಸೋಂತ ಮಠ, ಕಾಶಿ ಮಠ, ಗವಿ ಮಠ, ಶಿವಪೂಜಿ ಮಠ, ಕುಂಬಾರ ಮಠ, ಕಂಬಳಿ ಮಠ, ಗುಂಡದ ಮಠ, ಜಡಿ ಅಯ್ಯನ ಮಠ, ಫಲಹಾರ ಮಠ, ಬಸವತೀರ್ಥ ಮಠ, ಗೋಸಾಯಿ ಮಠ, ವೈರಾಗಿ ಮಠ, ನಿರಂಜನಸ್ವಾಮಿ ಮಠ, ಭ್ರಂಗೀ ಮಠ, ಅಂಬಾಜೋಗಾಯಿ ಮಠ, ಕೋಣಿನವರ ಮಠ, ಶಾಂತವೀರ ಮಠ, ಹಟಗಾರ್‌ ಮಠ, ಗಾಣಿಗೇರ ಮಠ, ಮಾಗಾವಿ ಮಠ, ಬಸವಣ್ಣನ ಮಠ ಹಾಗೂ ಹಿರೇಮಠ ಸೇರಿ 28ಮಠಗಳ ಹೆಸರು ಮಾತ್ರ ಚರ್ಚೆಯಲ್ಲಿವೆ.

ಆ ಪೈಕಿ ಮುರಘಾ ಮಠ, ಕರಿ ಅಯ್ಯನ ಮಠ, ಕುಪಗೀರ್‌ ಮಠ, ಕೆಂಪಯ್ಯನ ಮಠ, ಜಡಿ ಅಯ್ಯುನ ಮಠ, ಬಸವತೀರ್ಥ ಮಠ ಮಠಗಳ ಕಟ್ಠಡ ಈಗಲೂ ಇವೆ. ಮುರಘಾಮಠ ಮತ್ತು ಕೆಂಪಯ್ಯನ ಮಠದಲ್ಲಿ ಎರಡೂವರೆ ದಶಕದ ಹಿಂದೆ ಮಠಾಧೀಶರು ಇದ್ದರು. ಅವರ ಮರಣಾನಂತರ ಯಾರೊಬ್ಬರೂ ಬಾರದೇ ಇರುವ ಕಾರಣ ಭಕ್ತರೇ ನಿರ್ವಹಣೆ ಮಾಡುತ್ತಿದ್ದಾರೆ.

ಐದು ದಶಕ ಹಿಂದೆ ನಗರದ ಹಿರೇಮಠದ ಪೀಠಾಧಿಪತಿಗಳಾಗಿದ್ದ ಶಿವಯೋಗೀಶ್ವರ ಸ್ವಾಮೀಜಿ ಅವರ ಅವಧಿಯಲ್ಲಿ ಗುರು–ಶಿಷ್ಯರ ಪರಂಪರೆ ಅರ್ಥಪೂರ್ಣ ರೀತಿಯಲ್ಲಿತ್ತು. ಉದ್ದೇಶಿತ ಕೆಲಸಗಳು ಚಾಚೂ ತಪ್ಪದೇ ನಡೆಯುತ್ತಿದ್ದವು. ಅವರ ನಂತರ ಯಾರೊಬ್ಬರೂ ಜವಾಬ್ದಾರಿ ವಹಿಸದೇ  ಖಾಲಿ ಉಳಿದಿದ್ದ ಮಠಕ್ಕೆ 2012ರಲ್ಲಿ ಯುವಕ, ಪದವಿಧರ ಹಾಗೂ ಕ್ರೀಯಾಶೀಲರಾದ ರೇಣುಕ ಗಂಗಾಧರ ಸ್ವಾಮೀಜಿ ಅವರು ಪಟ್ಟಾಧ್ಯಕ್ಷರಾದರು.

ನಂತರದಿಂದ ಹಿರೇಮಠಕ್ಕೆ ವಿಶೇಷ ಕಳೆ ಬಂದಿದೆ. ಧರ್ಮ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಕೇದ್ರವಾಗಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿತ್ತಿದೆ. ಶಿಕ್ಷಣ ಸಂಸ್ಥೆಯೊಂದನ್ನು ತೆರೆಯುವ ಮೂಲಕ ಅಕ್ಷರ ಜ್ಞಾನ ನೀಡುವ ಮಹತ್ವದ ಕೆಲಸ ಶ್ರೀಮಠದಿಂದ ನಡೆಯುತ್ತಿದೆ.

ಉಳಿದ ಮಠಗಳ ಜೀರ್ಣೋದ್ಧಾರ ಆಗಲಿ:  108ಮಠಗಳ ಇತಿಹಾಸ ಉಳ್ಳ ಹುಮನಾಬಾದ್‌ನಲ್ಲಿ ಈಗ ಬೆರಳೆಣಿಕೆ ಮಠಗಳ ಕಟ್ಟಡ ನೋಡಲು ಸಿಗುತ್ತವೆ. ಇನ್ನುಳಿದ ಮಠಗಳ ಅವಶೇಷಗಳೂ ಇಲ್ಲ. ಇರುವ ಮಠಗಳಿಗೆ ಯೋಗ್ಯ ಮಠಾಧೀಶರನ್ನು ನಿಯೋಜಿಸುವ ಮೂಲಕ ಹಾಳಾಗುವುದಕ್ಕೂ ಮುನ್ನ ಕಟ್ಟಡ ಇರುವ ಮಠಗಳ ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT