ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ, ತಿಪಟೂರಿನಲ್ಲಿ ಜೋರು ಮಳೆ

Last Updated 10 ಸೆಪ್ಟೆಂಬರ್ 2017, 7:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಶನಿವಾರ ಮಧ್ಯಾಹ್ನ ರಭಸದಿಂದ ಮಳೆ ಸುರಿಯಿತು. ಮಳೆಗಾಲ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಇಂಥ ಜೋರು ಮಳೆ ನೋಡಿದ ಜನರು ಸಂತಸ ಪಟ್ಟರು.ಮಧ್ಯಾಹ್ನದ ನಂತರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡಮುಚ್ಚಿದ ವಾತಾವರಣ ಇತ್ತು.

ತುಮಕೂರು ನಗರ ಸೇರಿದಂತೆ ಕೊಡಿಗೇನಹಳ್ಳಿಯಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆ ಕಾಲ ಮಳೆ ಸುರಿಯಿತು. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿತು.
ತಿಪಟೂರು ನಗರ ಸೇರಿ ತಾಲ್ಲೂಕಿನ ಹಲವಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಮಧ್ಯಾಹ್ನ ವ್ಯಾಪಕವಾಗಿ ಮಳೆಯಾಯಿತು. ಸುಮಾರು ಐದಾರು ವರ್ಷಗಳ ನಂತರ ಉತ್ತಮ ಮಳೆ ಕಂಡಂತಾಗಿದೆ.

ಕಸಬಾ, ನೊಣವಿನಕೆರೆ, ಹೊನ್ನವಳ್ಳಿ, ಕಿಬ್ಬನಹಳ್ಳಿ ಹೋಬಳಿಯ ವಿವಿಧೆಡೆ ಶನಿವಾರ ಭಾರಿ ಮಳೆ ಸುರಿದಿದ್ದು,  ಹಳ್ಳಗಳು ತುಂಬಿ ಹರಿದಿವೆ. ಒಣಗಿ ಹೋಗಿದ್ದ ಕೆರೆ, ಕಟ್ಟೆಗಳಿಗೆ ನೀರು ಬಂದಿದೆ. ಮಳೆ ನಿಂತ ನಂತರ ಎಲ್ಲೆಡೆ ತುಂಬಿ ಹರಿಯುತ್ತಿದ್ದ ನೀರು ನೋಡಲು ಜನರು ತಂಡೋಪ ತಂಡವಾಗಿ ನೆರೆದಿದ್ದರು. ಹಳ್ಳಿಗಳಲ್ಲಿ ಕೆರೆ, ಕಟ್ಟೆಗಳಿಗೆ ಬರುತ್ತಿರುವ ನೀರು, ಹಳ್ಳದಲ್ಲಿ ಹರಿಯುತ್ತಿರುವ ನೀರು ನೋಡಿ ಮಕ್ಕಳು ದೊಡ್ಡವರು ಸಂಭ್ರಮಿಸಿದರು.

ಅನಿರೀಕ್ಷಿತವಾಗಿ ಸುರಿದ ಈ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಸಾಧಾರಣವಾಗಿ ಉಬ್ಬೆ ಮಳೆ ಸೋನೆಯಲ್ಲಿ ಕಳೆದು ಹೋಗುತ್ತಿತ್ತು. ಅಪರೂಪಕ್ಕೆ ಬಿರುಸಾಗಿ ಸುರಿದು ಹುಬ್ಬೇರಿಸುವಂತೆ ಮಾಡಿತು. ಕುಸಿದು ಹೋಗಿದ್ದ ಅಂತರ್ಜಲ ಸುಧಾರಿಸುವ ಭರವಸೆ ಮೂಡಿದೆ ಎಂದು ರೈತರು ಹೇಳಿದರು.

ಶನಿವಾರದ ಮಳೆ ಸರಾಸರಿ 6 ಸೆಂಮೀಗಿಂತ ಹೆಚ್ಚು ಸುರಿದಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ ತಿಪಟೂರು 69, ಕಿಬ್ಬನಹಳ್ಳಿ 15, ನೊಣವಿನಕೆರೆ 54 ಮತ್ತು ಹೊನ್ನವಳ್ಳಿಯಲ್ಲಿ 7 ಮಿ.ಮೀ. ಮಳೆಯಾಗಿದೆ.

ಶಿರಾ ವರದಿ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿದು ಬರುವ ಹಳ್ಳದ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಉತ್ತಮ ಮಳೆಯಾಗಿದೆ. .
ತಾಲ್ಲೂಕಿನ ಅಮಲಗೊಂದಿ, ಯಲದಬಾಗಿ, ಶೀಬಿ ಅಗ್ರಹಾರ, ಹುಂಜನಾಳ್, ಮಲ್ಲಶೆಟ್ಟಿಹಳ್ಳಿ, ಉಮಾಪತಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಅಮಲಗೊಂದಿ ಮತ್ತು ಉಮಾಪತಿಹಳ್ಳಿಗಳ ಬಳಿ ನಿರ್ಮಿಸಿದ್ದ ಬ್ಯಾರೇಜುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗಳಿಗೆ ಈ ಬಾರಿ ಹೇಮಾವತಿ ನೀರು ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನದಲ್ಲಿದ್ದ ರೈತರಿಗೆ ಈ ಮಳೆ ಸಂತಸ ಮೂಡಿಸಿದೆ. ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿದು ಬರುವ ಹಳ್ಳದಲ್ಲಿ ಮಳೆ ನೀರು ತುಂಬಿಕೊಂಡು ಹರಿಯುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಕಳ್ಳಂಬೆಳ್ಳ ಕೆರೆಗೆ ನೀರು ಹರಿದು ಬರುವ ಸಾಧ್ಯತೆಯಿದೆ.

ಶನಿವಾರದಿಂದ ಹೇಮಾವತಿ ನೀರು ಹರಿಸುವುದಾಗಿ ಸಚಿವ ಟಿ.ಬಿ.ಜಯಚಂದ್ರ ಹೇಳಿರುವುದರಿಂದ ಮಳೆಯ ನೀರಿನ ಜತೆಗೆ ಹೇಮಾವತಿ ನೀರು ಸಹ ಸೇರಿದರೆ ಕೆರೆ
ಬಹಳ ಬೇಗ ತುಂಬಲಿದೆ ಎಂದು ರೈತರು ನಿರೀಕ್ಷೆ ಇಟ್ಟಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT