ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಾಳಜಿ ಮೆರೆದ ಆಟೊ ಚಾಲಕ

Last Updated 10 ಸೆಪ್ಟೆಂಬರ್ 2017, 7:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಪರಿಸರ ಪ್ರೇಮಿ, ಆಟೊ ಚಾಲಕ ಸುಭಾನ್‌ ಅವರು ಶನಿವಾರ ತಾಲ್ಲೂಕಿನ ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 50 ಊಟದ ತಟ್ಟೆಗಳು, 50 ಲೋಟಗಳನ್ನು ದೇಣಿಗೆ ನೀಡುವ ಜತೆಗೆ ಶಾಲೆ ಆವರಣದಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಲ್ಲಿ ಸಾಮಾಜಿಕ ಮತ್ತು ಪರಿಸರ ಕಾಳಜಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಭಾನ್‌, ‘ಇವತ್ತು ಪ್ರತಿಯೊಬ್ಬರಲ್ಲೂ ನಾನು, ನನ್ನದು ಎಂಬ ಸ್ವಾರ್ಥ ಭಾವನೆಯನೇ ತುಂಬಿ ತುಳುಕುತ್ತಿದೆ. ದೇಶ, ಊರು, ಸಮಾಜದ ಕಾಳಜಿ ಮನೋಭಾವ ಜನರಲ್ಲಿ ಕಡಿಮೆಯಾಗುತ್ತಿದೆ. ಇದು ಬದಲಾಗಬೇಕು. ದೇಶಾಭಿಮಾನ ಮೂಡಬೇಕಿದೆ. ಪರಸ್ಪರ ಮಿಡಿಯುವ ಮನಸ್ಸುಗಳು ಹೆಚ್ಚಬೇಕಿದೆ’ ಎಂದು ಹೇಳಿದರು.

‘ನಾವು ಸಮಾಜದಿಂದ ಸಾಕಷ್ಟು ಪಡೆದುಕೊಳ್ಳುತ್ತೇವೆ. ಆದರೆ ಅದಕ್ಕೆ ಪ್ರತಿಯಾಗಿ ನೀಡುವ ವಿಚಾರದಲ್ಲಿ ಜಿಪುಣತನ ತೋರುತ್ತೇವೆ. ಮುಂದಿನ ಪೀಳಿಗೆಯ ದೃಷ್ಟಿಯಿಂದಲಾದರೂ ನಾವು ಉದಾರಿಗಳಾಗುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ನಮ್ಮ ವ್ಯಾಪ್ತಿಯಲ್ಲಿ ಸಮಾಜಿಕ ಕೆಲಸಕ್ಕೆ ಕೈಲಾದ ಸಹಾಯ ಮಾಡಿದರೆ ಸ್ವಸ್ಥ, ಸದೃಢ ಸಮಾಜ ಕಟ್ಟಬಹುದು’ ಎಂದರು.

‘ಇವತ್ತು ಜನರು ಬದಲಾದ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳನ್ನು ಆಹ್ವಾನಿಸಿಕೊಂಡಿದ್ದಾರೆ. ಯಾವ ಆಸ್ಪತ್ರೆಗಳಿಗೆ ಹೋದರೂ ರೋಗಿಗಳು ತುಂಬಿ ತುಳುಕುತ್ತಾರೆ. ಪೀಳಿಗೆಗಳ ಸುಖಕ್ಕಾಗಿ ಸಂಪಾದನೆ ಹಿಂದೆ ಬಿದ್ದಿರುವ ಜನರು ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ. ನಾವು ಪರಿಸರವನ್ನು ಬೆಳೆಸುವ ಜತೆಗೆ ಉತ್ತಮ ವಾತಾವರಣ ನಿರ್ಮಿಸಿಕೊಂಡರೆ ಆರೋಗ್ಯ ತಾನಾಗಿಯೇ ಬರುತ್ತದೆ’ ಎಂದು ಅವರು ತಿಳಿಸಿದರು.

ಸುಭಾನ್‌ ಅವರ ಈ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕೇಂದ್ರದ ಸಹಾಯಕ ಅಧಿಕಾರಿ ಸುನೀಲ್‌ ಅವರು ಕೂಡ ಸಹಾಯ ಮಾಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶರ್, ಮುಖ್ಯ ಶಿಕ್ಷಕ ಟಿ.ಸಿ.ಗೋವಿಂದರಾಜ್ ಯಾದವ್‌, ಶಿಕ್ಷಕ ಗಾ.ನ.ಅಶ್ವತ್ಥ್, ಸಾಮಾಜಿಕ ಕಾರ್ಯಕರ್ತ ರವಿಕುಮಾರ್, ಮುಖಂಡರಾದ ಟಿ.ಮುನಿಯಪ್ಪ, ಅಂಬರೀಷ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT